ಅನುರಾಗ (ಭಾಗ-೨)
.. ಕಥೆಯನ್ನು ಮುಂದುವರಿಸುತ್ತಾ ಒಂದಲ್ಲ ಎರಡಲ್ಲ, ಎಂಬತ್ತೊಂಭತ್ತು ದಿನಗಳು, ಋತ್ವಿಕ್ ಇಹಲೋಕದ ಅರಿವಿಲ್ಲದೆ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದ. ಅಷ್ಟರಲ್ಲಾಗಲೇ ಪ್ರತಾಪ್ ಮತ್ತು ಮೀನಾಕ್ಷಿ ದಂಪತಿಗಳು ತಮ್ಮ ಮಗ ಮತ್ತೆ ಮೊದಲಿನಂತಾಗುವನೆಂಬ ಆಸೆಯನ್ನೇ ಅರ್ಧ ತ್ಯಜಿಸಿದರು. ಅದ್ಯಾವ ಜನ್ಮದ ಪುಣ್ಯವೋ, ಅದ್ಯಾವ ದೇವರು ಹರಕೆಗೆ ಒಲಿದನೋ! ವೈದ್ಯರು ತೊಂಬತ್ತನೇ ದಿನ "ನಿಮ್ಮ ಮಗನಿಗೆ ಪ್ರಜ್ಞೆ ಬಂದಿದ್ದು, ಕೋಮಾದಿಂದ ಹೊರಬಂದಿದ್ದಾರೆ. ಅವರಿಗೆ ಮರುಜನ್ಮ ದೊರಕಿದೆ. ದೇವರು ನಿಮ್ಮ ಕೈಬಿಡಲಿಲ್ಲ ಎಂದರು". ಪ್ರತಾಪ್ ವೈದ್ಯೋ ನಾರಾಯಣೋ ಹರಿಃ ಎಂಬುದನ್ನು ನೆನೆದು ವೈದ್ಯರಿಗೆ ತಲೆಬಾಗಿ ನಮಿಸಿದರು. ಮಗನನ್ನು ನೋಡುವ ತವಕದಲ್ಲಿ ಋತ್ವಿಕ್ ಬಳಿ ಓಡೋಡಿ ಹೋದ ದಂಪತಿಗಳಿಗೆ ಮತ್ತೊಂದು ಆಘಾತ ಕಾದಿತ್ತು. ಮಗ ಅಪ್ಪ-ಅಮ್ಮನನ್ನೇ ಗುರುತು ಹಿಡಿಯದೇ ಚೀರಾಡಿದ. ಮತ್ತೆ ದುಃಖದಿಂದ ವೈದ್ಯರ ಬಳಿ ಓಡಿ "ಏನಾಗಿದೆ ಋತ್ವಿಕ್ ಗೆ " ಎಂದು ಕೇಳಿದಾಗ, ವೈದ್ಯರು "ನಿಮ್ಮ ಮಗನಿಗೆ ಮೆದುಳಿಗೆ ಅಪಘಾತದಲ್ಲಿ ಗಂಭೀರವಾಗಿ ಪೆಟ್ಟಾಗಿದೆ. ಇದನ್ನು ಟಿಬಿಐ (ಟ್ರಾಮ್ಯಾಟಿಕ್ ಬ್ರೈನ್ ಇಂಜುರಿ) ಎನ್ನುತ್ತೇವೆ. ಅಂದರೆ ಮೆದುಳಿಗಾದ ತೀವ್ರ ಗಾಯ ಎನ್ನಬಹುದು. ಇದರಿಂದಲೇ ಋತ್ವಿಕ್ ಸುಮಾರು ಮೂರು ತಿಂಗಳುಗಳ ಕಾಲ ಕೋಮಾಗೆ ಜಾರಿದ್ದು. ಎರಡನೇ ಹಂತದ ಟಿಬಿಐಯಿಂದ ವ್ಯಕ್ತಿಯ ಮಾನಸಿಕ ಆರೋಗ್ಯ ತುಂಬಾ ಹದ...