ಇಂಟರ್ನೆಟ್ ಎಂಬ ಮಾಯಾಲೋಕ



ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು।

ಹೊಸ ಯುಕ್ತಿ ಹಳೆ ತತ್ವ ಕೂಡಿರಲು ಧರ್ಮ ॥

ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳೈಸೆ।

ಜಸವು ಜನ ಜೀವನಕೆ ಮಂಕುತಿಮ್ಮ ॥


ಹೌದು, ವಿಜ್ಞಾನದಲ್ಲಿ ದಿನಕ್ಕೊಂದು ಆವಿಷ್ಕಾರವಾಗುತ್ತಲೇ ಇದೆ. ಇಂದು ವಿಜ್ಞಾನ ಎಷ್ಟು ಮುಂದುವರಿದಿದೆ ಎಂದರೆ, ವಿವರಿಸಲು ಪುಸ್ತಕಗಳೇ ಸಾಲದು. ನಾವಿಂದು ಆಧುನಿಕ ಜಗತ್ತಿನಲ್ಲಿದ್ದೇವೆ. ಪ್ರತಿಯೊಂದಕ್ಕೂ ಯಂತ್ರಗಳನ್ನು ಅವಲಂಬಿಸಿ, ಒಟ್ಟಾರೆ ಯಾಂತ್ರೀಕೃತ ಬದುಕನ್ನು ಸಾಗಿಸುತ್ತಿದ್ದೇವೆ. ಆದರೆ ಇದರ ಸಾಧಕ-ಬಾಧಕಗಳೆಷ್ಟು? ನಮ್ಮ ಜೀವನ ಇಂದು ಎತ್ತಕಡೆಗೆ ಸಾಗಿದೆ? ಒಂದು ಬಾರಿ ಯೋಚಿಸಿದರೆ, ಅಯ್ಯೋ! ನಾವು ಹೀಗಿದ್ದೇವೆಯೇ? ಎಂದೆನಿಸುತ್ತದೆ. ಇಂದು ಪ್ರತಿಯೊಬ್ಬರ ಬಳಿಯೂ ಸರ್ವೇಸಾಮಾನ್ಯವಾಗಿ ಇರುತ್ತದೆ- ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ನಂತಹ ಸಾಧನಗಳು.

ಹಿಂದೆ ಕರೆ ಮಾಡಲು ಮಾತ್ರ ಉಪಯೋಗಿಸುತ್ತಿದ್ದ ಮೊಬೈಲ್ನ ದುಷ್ಪರಿಣಾಮ ಇಂದು ಎಷ್ಟು? ತಂತ್ರಜ್ಞಾನ ಮತ್ತಷ್ಟು ಮುಂದುವರಿಯಲು ಕಾರಣವಾದ ಕಂಪ್ಯೂಟರ್ನಂತಹ ಸಾಧನಗಳು ಇಂದು ನಮ್ಮನ್ನು ಯಾವ ಕೂಪಕ್ಕೆ ತಳ್ಳಿವೆ? ದಿನೇದಿನೇ ಹೆಚ್ಚುತ್ತಿರುವ ಅತ್ಯಾಚಾರಗಳಂತಹ ಅಮಾನುಷ ಕೃತ್ಯಗಳಿಗೆ ಕಾರಣ ಯಾವುದು? ಉತ್ತರ ಎಲ್ಲಿದೆ?..... ಹೌದು, ಒಮ್ಮೆಯಾದರೂ ಚಿಂತಿಸಬೇಕು. ಚಿಂತಿಸಿದರೆ ಸಾಲದು, ಪರಿಹಾರ ಹುಡುಕಬೇಕು. ಯಾವುದೇ ವಿಷಯವನ್ನು ಕ್ಷಣ ಮಾತ್ರದಲ್ಲಿ ತಿಳಿಸುವ ಇಂಟರ್ನೆಟ್ ಎಷ್ಟೋ ಅನಾಹುತಗಳಿಗೆ ರಹದಾರಿಯಾಗಿದೆ. ಎಷ್ಟೋ ಜನರ ಜೀವನವನ್ನು ನಾಶ ಮಾಡಿದೆ.

ಒಪ್ಪಿಕೊಳ್ಳೋಣ... ಗೊತ್ತಿರದ ವಿಷಯಗಳನ್ನು ತಿಳಿಯಲು ಸಹಾಯಕ. ಕಷ್ಟದ ಸಮಯದಲ್ಲಿ ಆಪತ್ಬಾಂಧವ ಅಥವಾ ಯಾರೋ ಸ್ನೇಹಿತರನ್ನು ಹುಡುಕಿಕೊಡುವ ಇಂದ್ರಜಾಲ. ಎಲ್ಲಿಂದ ಎಲ್ಲಿಗೋ ತತ್ಕ್ಷಣದಲ್ಲಿ ಸಂಪರ್ಕ ಕಲ್ಪಿಸುವ ಅಗೋಚರ. ಬ್ಯಾಂಕ್, ಕಛೇರಿ, ಆಸ್ಪತ್ರೆ, ಶಾಲೆ, ಕಾಲೇಜು, ಐಟಿಬಿಟಿ ಕಂಪೆನಿಗಳು......... ಅಬ್ಬಬ್ಬಾ! ಎಲ್ಲೆಂದರಲ್ಲಿ ಉಪಯೋಗಿಸುವ ಆತ್ಮೀಯ ಗೆಳೆಯ. ಎಲ್ಲವೂ ಸರಿಯಾಗಿದ್ದರೆ .., ಹೌದು.., ಇಂಟರ್ನೆಟ್ ಆಪತ್ಬಾಂಧವ, ಆತ್ಮೀಯ. ಆದರೆ ಇಂದು ಇಂಟರ್ನೆಟ್ ಆತ್ಮೀಯ ಗೆಳೆಯನಲ್ಲ, ಕೊಲೆಗಾರ. ಯುವಜನತೆ ಇಂದು ಈ ಜಾಲದಲ್ಲಿ ಉತ್ತಮ ವಿಷಯಗಳ ಬಗೆಗೆ ಜಾಲಾಡಬೇಕಾದರೆ, ಯಾವುದೋ ಬೇಡವಾದ, ಮನಸ್ಸನ್ನು ಚಂಚಲಗೊಳಿಸುವ ಕೆಟ್ಟ ವಿಷಯಗಳನ್ನು ಹುಡುಕುವಲ್ಲಿ ತಮ್ಮ ಜೀವನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಗೆಳೆಯ/ಗೆಳತಿಯರನ್ನು ಹುಡುಕುವಲ್ಲಿ, ಅವರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಲ್ಲಿ ಸಮಯವನ್ನು ಕಳೆಯುತ್ತಿದ್ದಾರೆ. ಎಷ್ಟೋ ಸಮಯದ ನಂತರ ತಾವು ಹಳ್ಳಕ್ಕೆ ಬಿದ್ದಾಗಲೇ ಅರಿವಾಗುವುದು. ಆದರೆ ಅರಿವಾಗುವುದರೊಳಗೆ ತಮ್ಮ ಉತ್ತಮ ಜೀವನವನ್ನು ತಮ್ಮ ಕೈಯಾರೆ ನಾಶಮಾಡಿಕೊಂಡಿರುತ್ತಾರೆ. ಅತ್ಯಾಚಾರಗಳಂತಹ ಅಮಾನುಷ ಕೃತ್ಯಗಳಿಗೆ ಬಲಿಪಶುಗಳಾಗಿರುತ್ತಾರೆ. ಇನ್ನು ಹಲವರು ಇಂಟರ್ನೆಟ್ ಎಂಬುದನ್ನು ಬ್ಲ್ಯಾಕ್ ಮೇಲ್ ಮಾಡುವ ಹಾದಿ ಎನ್ನುವುದಾಗಿ ತಿಳಿದು ಯಾರ್ಯಾರದ್ದೋ ಫೋಟೋ, ವಿಡಿಯೋ ತೆಗೆದು ಅದನ್ನು ಇಂಟರ್ನೆಟ್ಗೆ ಅಪ್ಲೋಡ್ ಮಾಡಿ ವಂಚಿಸಿ, ಅವರಿಗೆ ಮಾನಸಿಕ ಹಿಂಸೆ ನೀಡಿ, ತಮ್ಮ ಕೋರಿಕೆಗಳನ್ನು ಈಡೇರಿಸಿಕೊಂಡು, ಕೊನೆಗೂ ಅವರ ಜೀವ ತೆಗೆಯದೇ ಬಿಡದ ರಾಕ್ಷಸರು. 

ಪತ್ರಿಕೆ, ದೂರದರ್ಶನ ಎಲ್ಲದರಲ್ಲಿಯೂ ಬರೀ ಕಾಮುಕರದೇ ವಿಷಯ, ಅಂತರ್ಜಾಲದ ದುರುಪಯೋಗದಿಂದ ಉಂಟಾಗುವ ಅಮಾನವೀಯ ಪ್ರಕರಣಗಳು. ವಿದ್ಯೆ ಕಲಿಯಬೇಕಾದ ವಯಸ್ಸಿನಲ್ಲಿ, ಕಾಮುಕತೆಯನ್ನು ಮನಸ್ಸಿನಲ್ಲಿ ತುಂಬಿಕೊಂಡು ಅತ್ಯಾಚಾರಗಳಂತಹ ರಾಕ್ಷಸೀ ಕೃತ್ಯಗಳಲ್ಲಿ ತೊಡಗಿಕೊಳ್ಳುವುದರ ಮೂಲಕ ಬೇರೆಯವರ ಜೀವನದೊಂದಿಗೆ ತಮ್ಮ ಜೀವನವನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ ಇಂದಿನ ವಿದ್ಯಾರ್ಥಿಗಳು. ಇದಕ್ಕೆಲ್ಲ ಕೊನೆ ಎಲ್ಲಿ ? ಹೇಗೆ ?

"ಬಿಟ್ಟೆನೆಂದರೂ ಬಿಡದೀ ಮಾಯೆ" ಎಂಬ ನಾಣ್ಣುಡಿಯಂತೆ ಈ ಇಂಟರ್ನೆಟ್ನ ಮಾಯೆ ವಯಸ್ಸಿನ ಹಂಗಿಲ್ಲದೆ ಪ್ರತಿಯೊಬ್ಬರನ್ನೂ ತನ್ನತ್ತ ಆಕರ್ಷಿಸುವುದರ ಜೊತೆಗೆ ಅವರ ಜೀವನವನ್ನೇ ಸರ್ವನಾಶ ಮಾಡುತ್ತಿದೆ. ನೂರು ಅನುಕೂಲಗಳ ಜೊತೆಗೆ ಸಾವಿರ ತೊಂದರೆಗಳ ಸರದಾರನಾಗಿರುವ ಈ ಇಂಟರ್ನೆಟ್  ಬಗೆಗೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸಿ, ಅದರ ಉಪಯೋಗಗಳನ್ನು ಮಾತ್ರ ಪಡೆಯುವಂತೆ ಮಾಡಬೇಕು. ಅಂತರ್ಜಾಲದ ದುರುಪಯೋಗಕ್ಕೆ ಪೂರ್ಣವಿರಾಮ ಇಡಲೇಬೇಕು. "ಏನಾದರೂ ಆಗು , ಮೊದಲು ಮಾನವನಾಗು" ಎನ್ನುವಂತೆ ದಾನವತೆಯೆಡೆಯಿಂದ ಜಗತ್ತನ್ನು ಮಾನವತೆಯೆಡೆಗೆ ತರಲು ಒಗ್ಗಟ್ಟಿನಿಂದ, ಒಕ್ಕೊರಳಿನಿಂದ ಯುವಜನತೆ ಎದ್ದು ನಿಲ್ಲಬೇಕು.

ಕಾಮೆಂಟ್‌ಗಳು

  1. ತುಂಬಾ ಸುಂದರವಾದ ಬರಹ. ಪ್ರಸ್ತುತ ದಿನದ ನೈಜತೆಯನ್ನು ತಿಳಿಸಿದ್ದೀರಿ . ಹೀಗೆ ಸದಾ ಬರೆಯುತ್ತಿರಿ ಅಕ್ಕಾ... 👌👌🙏

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..