ಹೆಣ್ಣು...ಅಬಲೆಯಲ್ಲ, ಸಬಲೆ!




              "ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ:" - ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ, ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಭಾವನೆಯನ್ನು ಪ್ರಾಚೀನ ಕಾಲದಿಂದಲೂ ಹೊಂದಿದ ನಾಡು ನಮ್ಮದು. "ಗೃಹಿಣೀ ಗೃಹಮುಚ್ಯತೇ" ಎಂಬಂತೆ ಕುಟುಂಬ, ಸಮಾಜ, ದೇಶ, ವಿಶ್ವ ಹೀಗೆ ಎಲ್ಲಾ ಕಡೆ ಸ್ತ್ರೀಗೆ ಉತ್ತಮ ಸ್ಥಾನಮಾನವಿತ್ತು. ಪ್ರಾಚೀನ ಭಾರತದಲ್ಲಿ ಗಾರ್ಗಿ, ಮೈತ್ರೇಯೀ ಮುಂತಾದ ಅನೇಕ ಸ್ತ್ರೀ ತತ್ವಜ್ಞಾನಿಗಳಿದ್ದರು. ಅಂದಿನ ಸಮಾಜವು ಸ್ತ್ರೀಯನ್ನು ತುಂಬಾ ಗೌರವದಿಂದ ಕಾಣುತ್ತಿದ್ದು, ಸ್ತ್ರೀ ಎಲ್ಲಾ ಸ್ವಾತಂತ್ರ್ಯವನ್ನು ಹೊಂದಿದ್ದಳು. ಇನ್ನು ಕುಟುಂಬ ವ್ಯವಸ್ಥೆಯಲ್ಲಿ, ಮಕ್ಕಳನ್ನು ಹಡೆಯುವ, ಪೋಷಿಸುವ, ಜ್ಞಾನ ನೀಡುವ, ಗೃಹಕೃತ್ಯಗಳಲ್ಲಿ ತೊಡಗುವ ಮಹತ್ವದ ಕಾರ್ಯ ಬಾಹುಳ್ಯವನ್ನು ಮಹಿಳೆ ಹೊಂದಿದ್ದಳು. "ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು"..ಈ ಜಾನಪದೀಯ ಹೇಳಿಕೆಯು ಮಹಿಳೆಯನ್ನು ಇನ್ನಷ್ಟು ಎತ್ತರಿಸುತ್ತದೆ.

ಪ್ರತಿಯೊಂದು ಘಟ್ಟದಲ್ಲೂ ಮಹಿಳೆ ತಾನು ಅಬಲೆಯಲ್ಲ, ಸಬಲೆ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. "ಹೇ ನಾರಿ, ನಿನಗ್ಯಾರೆ ಸಾಟಿ ಈ ಜಗದಲ್ಲಿ!" ಎನ್ನುವಂತೆ, ಎಂತಹ ಕೆಲಸವನ್ನೇ ಆಗಲಿ, ಪುರುಷನಷ್ಟೇ ಸಮರ್ಪಕವಾಗಿ ನಿಭಾಯಿಸುವ ಶಕ್ತಿ ಆಕೆಯದು. ಪ್ರಕೃತಿಯ ವಿಶೇಷ ಸೃಷ್ಟಿಯೇ ಮಹಿಳೆ. ಆಧುನಿಕ ಯುಗದಲ್ಲಿ ರಿಕ್ಷಾ ಚಾಲನೆಯಿಂದ ವಿಮಾನ ಚಾಲನೆಯ ತನಕ, ವಾಣಿಜ್ಯ, ವಿಜ್ಞಾನ, ಅಂತರಿಕ್ಷ ಎಲ್ಲದರಲ್ಲೂ ಮಹಿಳೆಯರದ್ದು ಎತ್ತಿದ ಕೈ. ಒಳಗಿನ, ಹೊರಗಿನ ಕೆಲಸಗಳೆರಡನ್ನೂ ಶ್ರೇಣೀಕರಿಸದೆ ಸಮಾನ ಆಸಕ್ತಿಯಿಂದ, ಸಮಾನ ಪ್ರೀತಿಯಲ್ಲಿ, ಸಮಾನ ದಕ್ಷತೆಯಿಂದ ನಿಭಾಯಿಸುವ ಈ ಗುಣವೇ ಸ್ತ್ರೀಯಲ್ಲಿರುವ ವಿಶಿಷ್ಟತೆ. "ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು", ಅಂತಹ ಮಕ್ಕಳು ದೊಡ್ಡವರಾಗುತ್ತಾ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡುವ ಜಾಣ್ಮೆ ಇರುವುದು ತಾಯಿಯಲ್ಲಿ.

ಭಾರತದಲ್ಲಿ ೧೯೭೦ನೇ ಇಸವಿಯಿಂದ ಸ್ತ್ರೀ ಸಮಾನತೆ, ಸ್ತ್ರೀವಾದವು ಶೀಘ್ರಗತಿಯಲ್ಲಿ ಮೊದಲಾಯಿತು. ಸ್ತ್ರೀವಾದಿಗಳು ಮಹಿಳೆಯರ ಕುರಿತು ಇರುವ ವಿವಾದಗಳಾದ ಹೆಣ್ಣು ಭ್ರೂಣಹತ್ಯೆ, ಹೆಣ್ಣು ಶಿಶುಹತ್ಯೆ, ಲಿಂಗಭೇದ, ಶೋಷಣೆ, ಮಹಿಳೆಯರ ಆರೋಗ್ಯ ಮತ್ತು ಸುರಕ್ಷತೆಗಾಗಿ ಒಗ್ಗಟ್ಟಾಗಿ ಕೆಲಸ ಮಾಡಿದರು. ಪುರುಷ ಮತ್ತು ಸ್ತ್ರೀಗೆ ಸಮಾನ ಶಿಕ್ಷಣ ನೀತಿ ವಿಶ್ವದಾದ್ಯಂತ ಜಾರಿಗೆ ಬಂದಿದೆ. ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ,  ವೈದ್ಯಕೀಯ ಹಾಗೂ ಉದ್ಯೋಗ, ರಾಜಕೀಯ ಕ್ಷೇತ್ರದಲ್ಲೂ ಮೀಸಲಾತಿ ಕಲ್ಪಿಸುವಲ್ಲಿ ಅಂದಂದಿನ ಸರ್ಕಾರಗಳು ಪ್ರಯತ್ನಿಸುತ್ತಿವೆ. ಆದರೂ ಅಲ್ಲಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ, ಅನಾಚಾರ, ಶೋಷಣೆ, ದೌರ್ಜನ್ಯಗಳು ನಡೆಯುವುದನ್ನು ನೋಡುತ್ತಿದ್ದೇವೆ. ಇಂದಿನ ಅತ್ಯಾಧುನಿಕ ಸಮಾಜದಲ್ಲಿಯೂ ಕೆಲವೆಡೆ ಬಾಲ್ಯವಿವಾಹ, ವರದಕ್ಷಿಣೆಗಳಂತಹ ದುಷ್ಟ ಪದ್ಧತಿಗಳಿಂದ ಹೆಣ್ಣು ಶೋಷಿತವಾಗುತ್ತಿದೆ. ಸರ್ಕಾರವೇನೋ ಈ ಅನಿಷ್ಟಗಳ ನಿವಾರಣೆಗೆ ಕಠಿಣ ಕಾನೂನಿನ ಮೂಲಕ ಶ್ರಮಿಸುತ್ತಿದೆ. ಬರೀ ಕಾನೂನಿನಿಂದ ಇವುಗಳ ನಿವಾರಣೆ ಕಷ್ಟ ಸಾಧ್ಯವೇನೋ! ಹಾಗಾಗಿ  ಪ್ರತಿಯೊಬ್ಬರ ಮನಸ್ಥಿತಿ ಬದಲಾಗಬೇಕು. "ನಾವೆಲ್ಲರೂ ಒಂದೇ" ಎನ್ನುವ  ಭಾವನೆ ಸರ್ವರಲ್ಲೂ ಮೂಡಲಿ ಎಂಬ ಆಶಯದೊಂದಿಗೆ............


ಚಿತ್ರ: ವೈಷ್ಣವಿ ‌ಕೆ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..