ಸಮಯದ ಸದುಪಯೋಗ

ಕಾವ್ಯ ಶಾಸ್ತ್ರ ವಿನೋದೇನ 

ಕಾಲೋ ಗಚ್ಛತಿ ಧೀಮತಾಮ್ ।

ವ್ಯಸನೇನ ತು ಮೂರ್ಖಾಣಾಂ 

ನಿದ್ರಯಾ ಕಲಹೇನ ವಾ ॥

ಎಂಬ ಸಂಸ್ಕೃತ ಸುಭಾಷಿತದಂತೆ, ಬುದ್ಧಿವಂತರಾದವರು ಕಾವ್ಯ,ಶಾಸ್ತ್ರಗಳನ್ನು ಓದುವ ಮೂಲಕ ಸಂತಸಪಡುತ್ತಾ ಸಮಯವನ್ನು ಕಳೆದರೆ, ಮೂರ್ಖರಾದವರು ಜಗಳವಾಡುವುದರ ಮೂಲಕ, ದುಶ್ಚಟಗಳನ್ನು ಬೆಳೆಸಿಕೊಳ್ಳುವುದರ ಮೂಲಕ, ನಿದ್ರೆಯನ್ನು ಮಾಡುವುದರ ಮೂಲಕ ಸಮಯವನ್ನು ಕಳೆಯುತ್ತಾರೆ. ಯಾವುದು ಉತ್ತಮ? ನಾವು ಬುದ್ಧಿವಂತರೋ, ಮೂರ್ಖರೋ? ಯೋಚಿಸಿ, ಸ್ನೇಹಿತರೆ!

             ಸಮಯವು ಅತ್ಯಂತ ಮಹತ್ವಪೂರ್ಣವಾದದ್ದು, ಅಮೂಲ್ಯವಾದದ್ದು. ಒಮ್ಮೆ ಕಳೆದುಹೋದ ಸಮಯ ಏನು ಮಾಡಿದರೂ ಮರಳಿ ಬರುವುದಿಲ್ಲ. ಸಮಯ ಸಿಕ್ಕಾಗಲೆಲ್ಲ ಒಂದೇ ಸಮನೆ ಹರಟೆ ಹೊಡೆಯುವವರ ಸಮಯ ನಿರರ್ಥಕ. ಉಪಯುಕ್ತ ಮಾತುಕತೆಗಳಲ್ಲಿ ತೊಡಗುವವರ ಸಮಯ ಸಾರ್ಥಕ. ಸಮಯವು ಹಣಕ್ಕಿಂತಲೂ ಶ್ರೇಷ್ಠವಾದುದು ಎನ್ನುವವರಿದ್ದಾರೆ. ಆಲೋಚಿಸಿ ನೋಡಿದರೆ ಎರಡೂ ಶ್ರೇಷ್ಠ. ಸಮಯವನ್ನು ಸದುಪಯೋಗಪಡಿಸಿಕೊಂಡರೆ ಹಣ ಗಳಿಸಬಹುದು. ಹಣವನ್ನು ಸದುಪಯೋಗಪಡಿಸಿಕೊಂಡರೆ ಸಮಯ ಉಳಿಸಬಹುದು. ಆದರೆ ಎಲ್ಲಕ್ಕಿಂತ ಮೊದಲು ನಮ್ಮಲ್ಲಿ ಸದುಪಯೋಗಪಡಿಸಿಕೊಳ್ಳುವ ಬುದ್ಧಿ ಬೇಕು ಅಲ್ಲವೇ ಮಿತ್ರರೇ?
             ಒಬ್ಬ ವ್ಯಕ್ತಿಯ ಹಣ ಕಳೆದುಹೋದಾಗ ವ್ಯಥೆ ಪಡುವಷ್ಟು , ಅವರ ಸಮಯ ನಷ್ಟವಾಯಿತೆಂದು ದುಃಖಿಸುವವನು ಸಾವಿರಕ್ಕೊಬ್ಬನೂ ಇಲ್ಲ. ಮಾಡಿದ ಕೆಲಸವೊಂದು ಕೆಟ್ಟು ಹೋದಾಗ ತಲೆಗೆ ಕೈಕೊಟ್ಟು ಚಿಂತಿಸುತ್ತಾ ಕುಳಿತುಕೊಳ್ಳುವುದರ ಬದಲು ಅದನ್ನು ಸರಿಪಡಿಸುವುದರ ಬಗ್ಗೆ ಆಲೋಚಿಸುವುದು ಅಥವಾ ಮುಂದಿನ ಕಾರ್ಯಕ್ಕೆ ಗಮನ ಹರಿಸುವುದು ಲಾಭದಾಯಕ. ನಾವು ಮಾಡುವ ಯಾವುದೇ ಕೆಲಸದ ಸ್ಪಷ್ಟ ಕಲ್ಪನೆಯಿರದೆ, ಉತ್ಸಾಹದಿಂದ, ಎಚ್ಚರಿಕೆಯಿಂದ ಮಾಡದಿದ್ದಲ್ಲಿ ಸಮಯವು ನಷ್ಟವಾಗುವುದು ಖಂಡಿತ.
ಸಮಯ ಬೇಕೆನ್ನುವವರು ತಾವು ಮಾಡುವ ಪ್ರತಿಯೊಂದು ಕೆಲಸವನ್ನೂ ಸ್ವಲ್ಪ ಬೇಗ ಮಾಡಿ ಮುಗಿಸಲೆತ್ನಿಸಿ ಸಮಯ ಮಿಗಿಸಬೇಕು. ಎಂಟು ಗಂಟೆಯ ನಿದ್ರೆಯ ಬದಲು ಏಳು ಗಂಟೆ ಮಾಡಿದರೆ, ಇಪ್ಪತ್ತು ನಿಮಿಷಗಳ ಊಟ, ಸ್ನಾನದ ಬದಲು ಹತ್ತು ನಿಮಿಷಗಳಲ್ಲಿ ಮುಗಿಸಿದರೆ, ಸಮಯವನ್ನು ಉಳಿಸಬಹುದು. ಆದರೆ ಸ್ನೇಹಿತರೇ, ಮಿಗಿಸಿದ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ದಾರಿ ತಿಳಿದಿರಬೇಕು. ಟಿ.ವಿ., ಕಂಪ್ಯೂಟರ್, ಮೊಬೈಲ್ ಎಂದು ಇಂದಿನ ಯುವಜನರು ಸಮಯವನ್ನು ಹಾಳುಮಾಡಿಕೊಳ್ಳುತ್ತಾರೆ. ಆದರೆ ಮುಂದೊಂದು ದಿನ ತಮ್ಮ ತಪ್ಪು ತಿಳಿದಾಗ ಪಶ್ಚಾತ್ತಾಪ ಪಡುತ್ತಾರೆ. ಆಗ ಏನು ಮಾಡಲೂ ಆಗುವುದಿಲ್ಲ. ದುಃಖಿಸುವುದು, ಕೊರಗುವುದು ಒಂದೇ ದಾರಿ. ಆದ್ದರಿಂದ ನಾವು ಏನು ಮಾಡುತ್ತೇವೆ ಎಂಬ ಅರಿವು ನಮಗಿರಬೇಕು. ಅದು ಸರಿಯೋ, ತಪ್ಪೋ ಎಂದು ಯೋಚಿಸಬೇಕು. ಹಿರಿಯರ ಮಾತನ್ನು ನಿರಾಕರಿಸಬಾರದು. ಏಕೆಂದರೆ, ಅವರ ಅನುಭವದಿಂದ ಸಮಯದ ಬಗ್ಗೆ ತಿಳಿಸುತ್ತಾರೆ. ಆದರೆ ಕೇಳುವ ತಾಳ್ಮೆ ಯಾರಲ್ಲಿಯೂ ಇರುವುದಿಲ್ಲ.
            ಇನ್ನು, ಸಮಯವನ್ನು ನಷ್ಟಗೊಳಿಸುವುದರಲ್ಲಿ ಮರೆವು ವಹಿಸುವ ಪಾತ್ರ ದೊಡ್ಡದು. ಆದ್ದರಿಂದ ಯಾವುದೇ ಕೆಲಸ ಮಾಡುವಾಗಲೂ ಯಾವುದೋ ಲೋಕದಲ್ಲಿ ಮುಳುಗಿರದೆ ಎಚ್ಚರಿಕೆಯಿಂದಿರಬೇಕು.
           ಸಮಯವು ಚಿನ್ನ, ಮುತ್ತು, ಮಾಣಿಕ್ಯಕ್ಕಿಂತಲೂ ಅಮೂಲ್ಯವಾದದ್ದು. ಸಮಯವನ್ನು ವ್ಯರ್ಥ ಮಾಡುವವರ ಜೊತೆ ಸೇರದೇ, ಉಪಯೋಗಪಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಕೊನೆಯದಾಗಿ..., "ಸಮಯೋಚಿತವಾಗಿ ಯೋಚಿಸಬಲ್ಲವನು ಮಾತ್ರ ಎಲ್ಲ ವಿಷಯಗಳಲ್ಲಿ ಜಯಶಾಲಿಯಾಗಬಲ್ಲನು" ಎನ್ನುತ್ತಾ ಪೂರ್ಣವಿರಾಮ ಇಡುತ್ತಿದ್ದೇನೆ.
 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..