ಗುಪ್ತಚರ



ಹೆತ್ತು ಹೊತ್ತು, ಸಾಕಿದ ಮಗನನ್ನು ಸಮಾಜ ಹಾಡಿಹೊಗಳುವಂತೆ  ಬೆಳೆಸಬೇಕು ಎಂದುಕೊಂಡಿದ್ದ ತಂದೆಗೆ, ಮಗ ಭಾರತೀಯ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ ಸೇರಬೇಕು ಎಂದುಕೊಂಡ‌ ವಿಷಯ ಮೈಬೆವರಿಳಿಸಿತು. ಮುಂದೊಂದು ದಿನ ಇಡೀ ವಿಶ್ವವೇ ಹಾಡಿಹೊಗಳಬಹುದೇನೋ! ಆದರೆ ಅಲ್ಲಿಯವರೆಗೆ ಭಯದ ಕರಿನೆರಳಲ್ಲೇ ಬದುಕಬೇಕು. ಮಗ ನಿರ್ಧರಿಸಿಯಾಗಿತ್ತು. ಏನು ಮಾಡಲಾದೀತು! ಅಲ್ಲದೇ, ಭಾರತಮಾತೆಯ ಸೇವೆಯನ್ನು ಯಾರಾದರೂ ನಿರಾಕರಿಸಲಾದೀತೇ!


ಗೂಢಚಾರಿಕೆ ಸುಲಭದ ಮಾತಲ್ಲ. ಅದಕ್ಕೆ ತಮ್ಮ ಅಸ್ತಿತ್ವವನ್ನೇ ಮರೆತ, ಕ್ರಿಯಾಶೀಲ, ಸೂಕ್ಷ್ಮ ಮನಸ್ಥಿತಿಯ, ಬುದ್ಧಿವಂತರ ಅಗತ್ಯವಿರುತ್ತದೆ. ಎಲ್ಲವನ್ನೂ ಅರಿತಿದ್ದ ಮಗ ಸುಹಾಸ್ ದೊಡ್ಡದೊಂದು ನಿರ್ಧಾರಕ್ಕೆ ಬಂದಿದ್ದ. ಹೆತ್ತವರ ಬಳಿ, ತಾನು ಭಾರತೀಯ ಗೂಢಚಾರ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ವಿಷಯ ಯಾರಿಗೂ ತಿಳಿಯಬಾರದು , ಅದರಿಂದ ನಿಮಗೂ ತೊಂದರೆ, ನನ್ನ ಕೆಲಸಕ್ಕೂ ತೊಂದರೆ. ಆದ್ದರಿಂದ ನಾನು ಸತ್ತಿದ್ದೇನೆಂದು ಎಲ್ಲರಿಗೂ ತಿಳಿಸಿ ಎಂದ. ಹೆತ್ತವರಿಗೆ ಸಿಡಿಲೇ ಬಡಿದಂತಾಗಿತ್ತು. ತಾಯಿಯ ಕಣ್ಣೀರಿಗೆ ಕೊನೆಯೇ ಇರಲಿಲ್ಲ. ಆದರೆ ಮಗನ ದೇಶಸೇವೆಗೆ ಅಡ್ಡಿ ಮಾಡಬಾರದು ಎಂದು ಮಗ ಹೇಳಿದಂತೆಯೇ ಅವನು ಅಪಘಾತದಲ್ಲಿ ಸತ್ತನೆಂದು ತಿಳಿಸಿ, ನಾಲ್ಕೈದು ದಿನಗಳು ಪರ ಊರಿಗೆ ಹೋಗಿ ಬಂದರು.


ಕುಟುಂಬದವರು, ಸುತ್ತಮುತ್ತಲಿನವರು ಸಮಾಧಾನ ಮಾಡಲೋಸುಗ ಮನೆಗೆ ಬರಲಾರಂಭಿಸಿದರು. ಒಬ್ಬೊಬ್ಬರ ಸಮಾಧಾನ ಮಾಡುವಂತ, ದುಃಖವನ್ನು ಇಮ್ಮಡಿಗೊಳಿಸುವ ಮಾತುಗಳು ಹೆತ್ತವರನ್ನು ದಿಗ್ಭ್ರಮೆಗೊಳಿಸಿತು. ಈ ಒಂದು ಸುಳ್ಳು , ಸತ್ಯವಾಗಿದ್ದರೆ ಎಂಬ ಯೋಚನೆಯೇ ಇಬ್ಬರನ್ನೂ ಮೂಕಸ್ತಬ್ಧರನ್ನಾಗಿಸಿತು. ಎಲ್ಲದರ ನಡುವೆ ಮಗನಿನ್ನೂ ಸುರಕ್ಷಿತನಾಗಿರುವ ಸತ್ಯ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತು. ಮಗನಿಂದ ಅಪರೂಪಕ್ಕೆ ಬರುತ್ತಿದ್ದ ಕಾಗದ ಪತ್ರಗಳು ಬೂದಿ ಮುಚ್ಚಿದ ಕೆಂಡವಾಗಿತ್ತು.


ಇದಾಗಿ ಎರಡು ವರ್ಷಗಳ ನಂತರ ಒಂದು ವಿಷಯ ಭಾರತೀಯರ ನಿದ್ದೆಗೆಡಿಸಿತ್ತು. ಭಯೋತ್ಪಾದಕರು ಭಾರತದ ಮೇಲೆ ದೊಡ್ಡಮಟ್ಟದಲ್ಲಿ ದಾಳಿ ಮಾಡಬೇಕೆಂದುಕೊಂಡಿದ್ದ ವಿಷಯ ಭಾರತೀಯ ಗುಪ್ತಚರ ಸಂಸ್ಥೆಯಿಂದ ತಿಳಿದು, ಸಂಪೂರ್ಣ ಭದ್ರತೆಯಿಂದ ಭಯೋತ್ಪಾದಕರನ್ನು ಹಿಡಿದು, ಹೆಡೆಮುರಿಕಟ್ಟಿದ್ದರಿಂದ ಎಷ್ಟೋ ಅಮಾಯಕರ ಪ್ರಾಣ ಉಳಿದು, ಭಯೋತ್ಪಾದಕರ ಯೋಜನೆ ಮಣ್ಣು ಪಾಲಾಗಿತ್ತು.


ಸುಹಾಸ್ ಹೆತ್ತವರಿಗೆ ಮಗ ಈ ಅತ್ಯುತ್ತಮ ಕಾರ್ಯದಲ್ಲಿ ಕೈಜೋಡಿಸಿದ್ದಿರಬಹುದೆಂಬ ಯೋಚನೆಯೇ ಮಹದಾನಂದ ನೀಡಿತು.ಭಯೋತ್ಪಾದಕರಿಂದ ಮಗನಿಗೆ ಅಪಾಯವಾದರೆ ಎಂಬ ಚಿಕ್ಕ ಆತಂಕವೂ ಮನದೊಳಗೆ ಸುಳಿಯಿತು. ಅಷ್ಟರಲ್ಲೇ  ದೂರವಾಣಿ ರಿಂಗಣಿಸಿತು. ಪಟ್ಟಣಕ್ಕೆ ಬರಲು ಮಗ ತಿಳಿಸಿದ.


ಸುಹಾಸ್ ಮತ್ತು ಆತನ ತಂಡದವರು ಮಾಡಿದ ಕೆಲಸದ ಕತೆ ಹೆತ್ತವರ ಮೈರೋಮಾಂಚನಗೊಳಿಸಿತು. ಕಣ್ಣಲ್ಲಿ ಆನಂದ ಭಾಷ್ಪವಿತ್ತು. ಸುಹಾಸ್ ನಂತಹ ಮಗನನ್ನು ಪಡೆದ ನಾವೇ ಧನ್ಯರೆಂದು ಬೀಗಿದರು. ಇನ್ನೆಂದು ಮಗನನ್ನು ನೋಡುವುದೋ ಎಂದು ಸುಹಾಸನನ್ನು ಬಿಗಿದಪ್ಪಿ ಮುದ್ದಾಡಿದರು. ಮಗನ ಸಂಪೂರ್ಣ ರಕ್ಷಣೆಯನ್ನು ದೇವರಿಗೆ ನೀಡಿದರು.


ಸುಹಾಸ್ ಒಂದು ವಾರ ತಂದೆತಾಯಿಯ ಜೊತೆಯಿದ್ದು , ಭಾರತಾಂಬೆಯ ಸೇವೆಗೆ, ತನ್ನ ಮುಂದಿನ ಗೂಢಚಾರಿಕೆಗೆ, ಮತ್ತೆ ಕಣ್ಮರೆಯಾದ. 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..