ರಂಗೋಲಿ
ಚುಕ್ಕಿ ಚುಕ್ಕಿ ಚಿತ್ತಾರ
ರೇಖೆಗಳಲಿ ಮೂಡೋ ಆಕಾರ
ಬಣ್ಣದಲೂ ಚೆಂದ
ಬಿಳಿಯಲೂ ಅಂದ
ರಂಗೋಲಿಯ ಚಮತ್ಕಾರ ||
ಭಾರತದ ಸಂಸ್ಕೃತಿ ಕಲಿಸುವ ವಿದ್ಯೆ, ಸಂಸ್ಕಾರ ಒಂದಲ್ಲ, ಎರಡಲ್ಲ. ಪ್ರತಿಯೊಬ್ಬರಲ್ಲೂ ರಕ್ತಗತವಾಗಿದೆ ಅನೇಕಾನೇಕ ರತ್ನದಂತಹ ಕಲೆಗಳು. ಇದರಲ್ಲಿ ರಂಗೋಲಿಯೂ ಒಂದು. ಈ ರಂಗೋಲಿ ಕಲೆಯೂ, ವಿದ್ಯೆಯೂ, ತಪಸ್ಸೂ ಹೌದು. ರಂಗೋಲಿ ಪುಡಿಯಲ್ಲಿ ರೇಖೆಗಳನ್ನೆಳೆಯುವುದು ಸುಲಭದ ಮಾತೇನಲ್ಲ. "ರಂಗೋಲಿ ಹಾಕಲು ತಿಳಿಯದಿದ್ದರೂ, ಹೊಂಗರಿಕನ ಕೆತ್ತೆ ತೆಗೆಯಲಿಕ್ಕೆ ತಿಳಿಯದೇ?" ಎಂಬ ಮಾತೇ ಇದೆ. ಆದರೆ, ಮೂಡುವ ಚಿತ್ತಾರವ ನೋಡುವುದರಲ್ಲಿ ಕಳೆದುಹೋಗುವುದು ಸುಳ್ಳಲ್ಲ.
ರಂಗೋಲಿ ಎಂದರೆ ಬಣ್ಣಗಳಿಂದ ಭಾವನೆಗಳನ್ನು ವ್ಯಕ್ತಪಡಿಸುವುದು. ಇದನ್ನು ಕರ್ನಾಟಕದಲ್ಲಿ ರಂಗವಲ್ಲಿ, ರಂಗಾಲಿ, ಚಿತ್ತಾರ ಎಂದೂ ಕರೆಯುತ್ತಾರೆ. ರಂಗೋಲಿಯನ್ನು ಆಂಧ್ರದ ಕೆಲವು ಭಾಗಗಳಲ್ಲಿ ಮುಗ್ಗು ಎಂದೂ, ತಮಿಳುನಾಡಿನಲ್ಲಿ ಕೋಲಮ್ ಎಂದೂ, ರಾಜಸ್ಥಾನದಲ್ಲಿ ಮಾಂಡನಾ, ಛತ್ತೀಸಗಢದಲ್ಲಿ ಛೋವಕಪುರಾಣ, ಪಶ್ಚಿಮ ಬಂಗಾಳದಲ್ಲಿ ಅಲ್ಪನಾ, ಒಡಿಸ್ಸಾದಲ್ಲಿ ಮೂರ್ಝಾ ಅಥವಾ ಝೋಟೀ, ಬಿಹಾರದಲ್ಲಿ ಆರಿಪನಾ, ಉತ್ತರಪ್ರದೇಶದಲ್ಲಿ ಚೌಕಪೂಜನಾ ಎಂದೂ, ಪೂಕಳಮ್ ಎಂದು ಕೇರಳದಲ್ಲೂ, ಭಾರ್ತಿ ಎಂದು ಮಹಾರಾಷ್ಟ್ರದಲ್ಲೂ, ಗಹುಲಿ ಎಂದು ಗುಜರಾತಿನಲ್ಲೂ, ಏಪಣ್ ಎಂದು ಉತ್ತರಾಖಂಡದಲ್ಲೂ ಕರೆಯುತ್ತಾರೆ.
ರಂಗೋಲಿಯನ್ನು ಮನೆಯ ಎದುರು ಹಾಕುವುದರಿಂದ ಅದು ಕೆಟ್ಟದ್ದನ್ನು ತನ್ನೊಳಗೆ ಸೆಳೆದು, ಮನೆಯೊಳಗೆ ಹೋಗುವುದನ್ನು ತಡೆಯುತ್ತದೆ ಹಾಗೂ ಮನೆ, ಮನಸ್ಸುಗಳಲ್ಲಿ ಚೈತನ್ಯ , ಧನಾತ್ಮಕ ಚಿಂತನೆಯನ್ನು ತುಂಬುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದಲೇ ಹಿಂದೆಲ್ಲಾ ಪ್ರತಿದಿನವೂ ಮನೆಯಂಗಳವನು, ಗುಡಿಸಿ, ಸಾರಿಸಿ ಹೆಣ್ಣುಮಕ್ಕಳು ರಂಗೋಲಿ ಇಡುತ್ತಿದ್ದರು. ಈ ಸಂಪ್ರದಾಯ ಈಗ ಕೆಲವೇ ಮನೆಗಳಲ್ಲಿ ಉಳಿದಿದೆ. ಇತ್ತೀಚಿನ ದಿನಗಳಲ್ಲಿ ಹಬ್ಬ-ಹರಿದಿನಗಳಂದು ರಂಗೋಲಿಗೆ ಪ್ರಾಮುಖ್ಯತೆ ಸಿಕ್ಕಿದೆ.
ಹಿಂದಿನ ಕಾಲದಲ್ಲಿ ಅಕ್ಕಿಹಿಟ್ಟು, ಅರಶಿನ, ಕುಂಕುಮ, ಕೆಲವು ಮರಗಳ ಕೆತ್ತೆಪುಡಿ, ಒಣಗಿದ ಎಲೆಗಳ ಪುಡಿಯಿಂದ ರಂಗೋಲಿ ಹಾಕುತ್ತಿದ್ದರು. ರಂಗೋಲಿಯ ಮೂಲಕ ಅಕ್ಕಿಹಿಟ್ಟು ಪಕ್ಷಿಗಳಿಗೆ, ಇರುವೆ, ಹುಳ ಹಪ್ಪಟೆಗಳಿಗೆ ಆಹಾರವೂ ಆಗುತ್ತಿತ್ತು. ಈಗ ಅಂಗಡಿಗಳಲ್ಲಿ ಹಲವಾರು ಬಣ್ಣದ ರಂಗೋಲಿ ಪುಡಿಗಳು ಲಭ್ಯವಿದೆ. ರಂಗೋಲಿ ಬಿಡಿಸಲು ಹಲವು ಸಲಕರಣೆಗಳು ಲಭ್ಯವಿದೆ. ಪೂಜೆ ಪುನಸ್ಕಾರ, ನಾಗಮಂಡಲ ಮುಂತಾದ ಸಂದರ್ಭಗಳಲ್ಲೂ ರಂಗೋಲಿ ಬಿಡಿಸುತ್ತಾರೆ. ವಿವಿಧ ದೇವರ ಚಿತ್ರಗಳು, ಮಂಡಲಗಳಿಗೆ ಪೂಜೆಯನ್ನೂ ಮಾಡಲಾಗುತ್ತದೆ.
ಇಂತಹ ರಂಗೋಲಿ ನಿಮ್ಮ ಮನೆಗಳಲ್ಲಿ ಮೂಡಿಬರಲಿ, ನಿಮ್ಮ ಮನಸ್ಸುಗಳನ್ನು ಬೆಳಗಲಿ ಎಂಬ ಆಶಯದೊಂದಿಗೆ.....
Super😘😘
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿ👌👌
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿ🙏😊
ಅಳಿಸಿ