ಪೋಸ್ಟ್‌ಗಳು

ನೀನೊಂಥರಾ......

ಇಮೇಜ್
  ನೀನೊಂಥರಾ... ಬೆಚ್ಚನೆಯ ಗೂಡು; ಬಿರು ಬೇಗೆಯಲಿ ಬೆಂದ, ವರ್ಷಧಾರೆಯಲಿ ತೊಯ್ದ, ಮಂಜಿನಲಿ ಮುಸುಕಿದ, ಮನಸ್ಸಿಗೆ; ಹಿತ ನೀಡುವ ಬೀಡು.. ನೀನೊಂಥರಾ... ಬೆಚ್ಚನೆಯ ಗೂಡು;

ಮನಸು ಹೇಳಿದ್ದೆಲ್ಲ ಗೀಚಿದ್ದರೆ....

ಇಮೇಜ್
ಮನಸು ಹೇಳಿದ್ದೆಲ್ಲ ಗೀಚಿದ್ದರೆ.... ಇಂದೋ, ಮುಂದೋ, ಎಂದೋ.. ನಗುವಿಗೆ ಸಂತೆಯೊಂದು ಸಿಗುತ್ತಿತ್ತೋ ಏನೋ.. ಅಳುವಿಗೆ ಕಾರಣಗಳ ಕಂತೆ ಸಿಗುತ್ತಿತ್ತೋ ಏನೋ.. ಅರ್ಥವಿಲ್ಲದ ಪದಪುಂಜಗಳ ರಾಶಿ ಇರುತ್ತಿತ್ತೋ ಏನೋ.. ಕೋಪಿಸಲು ವಿಷಯಗಳು ಎಷ್ಟಿರುತ್ತಿತ್ತೋ ಏನೋ.. ಹೃದಯ ಕರಗುತ್ತಿತ್ತೋ ಏನೋ.. ಅಥವಾ ಕಲ್ಲಾಗುತ್ತಿತ್ತೋ ಏನೋ.. ಭಯಬೀಳಿಸಿದ ಘಟನೆಗಳು  ಕಾಡುತ್ತಿತ್ತೋ ಏನೋ.. ಧೃತಿಗೆಡದ ನಡೆ ಚಕಿತಗೊಳಿಸುತ್ತಿತ್ತೋ ಏನೋ.. ಮನಸು ಹೇಳಿದ್ದೆಲ್ಲ ಗೀಚಿದ್ದರೆ........ ಮರೆವೆಂಬ ವರವೇ ಶಾಪವಾಗುತ್ತಿತ್ತೋ ಏನೋ...

ಊರ ಹಬ್ಬ

ಇಮೇಜ್
ಊರ‌ ಹಬ್ಬ  "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ" ಅನ್ನೋ ಮಾತೇ ಇದೆ.. ಎಲ್ಲರಿಗೂ ಅವರವರ ಊರು ಅಂದ್ರೆ ಪ್ರೀತಿ ಜಾಸ್ತಿನೇ. ಹಾಗೇ ನನಗೂ ಕೂಡ. ನನ್ನೂರು ಸಾಲಿಗ್ರಾಮ. ನನಗೆ ಜನವರಿ ತಿಂಗಳೆಂದರೆ ನೆನಪಾಗುವುದು ಊರ ಹಬ್ಬ. ಒಂದು ತಿಂಗಳ ಮುಂಚೆಯಿಂದಲೇ ಕಾತರ, ಸಂಭ್ರಮ, ಜೊತೆಗೊಂದಿಷ್ಟು ತಯಾರಿ ಶುರುವಾಗತ್ತೆ.  ನಮ್ಮೂರ ಹಬ್ಬವನ್ನು ನಾನು ಯಾವ ವರ್ಷವೂ ಮಿಸ್ ಮಾಡಿದ್ದೇ ಇಲ್ಲ. ಆದ್ರೆ ಕಳೆದ ವರ್ಷ, ಇಂಟರ್ನಲ್ ಎಕ್ಸಾಮ್ನ ಟೈಮ್ ಟೇಬಲ್ ಬಂತು. ನೋಡಿದ್ರೆ ಹಬ್ಬದ ದಿನವೇ ಪರೀಕ್ಷೆ! ಇಂಟರ್ನಲ್ ಎಕ್ಸಾಂ ಆದ್ರೂ ಮಿಸ್ ಮಾಡೋ ಹಾಗಿಲ್ಲ. ವರ್ಷಕ್ಕೊಮ್ಮೆ ಬರೋ ಹಬ್ಬವನ್ನೂ ಮಿಸ್ ಮಾಡೋಕಾಗಲ್ಲ, ಏನಪ್ಪಾ ಮಾಡೋದು ಅಂತ ಯೋಚಿಸ್ತಾ ಇದ್ದೆ. ಎರಡನೇ ಶನಿವಾರ, ಸಂಕ್ರಾಂತಿ ಎಲ್ಲ ಒಟ್ಟಾಗಿ ಬಂದಿರೋದ್ರಿಂದ ಊರಿಗೆ ಹೋಗೋ ಪ್ಲಾನ್ ಹಾಕಿದ್ರು ನಮ್ಮ ಕ್ಲಾಸ್ ಅಲ್ಲಿ ಕೆಲವರು. ಇದೇ ಒಳ್ಳೆ ಸಮಯ ಅಂತ ಕ್ಲಾಸ್ ಲೀಡರ್ ಜೊತೆ ಸೀದಾ ಚೇರ್ ಪರ್ಸನ್ ಚೇಂಬರ್ಗೆ ಹೋದೆ. ಕ್ಲಾಸ್ ಲೀಡರ್ ಕೂರ್ಗ್ ಅವಳಾಗಿದ್ರಿಂದ, ಅವಳು ಮನೆಗೆ ಹೋಗದೆ ತುಂಬಾ ಟೈಮ್ ಆಯ್ತು, ರಜೆ ಇದೆ, ಸಂಕ್ರಾಂತಿ ಅಂತೆಲ್ಲಾ ಹೇಳಿದ್ರೂ , ಮೇಡಂ ಅವರದೇ ಕಾರಣ ಕೊಡ್ತಾ ಇದ್ರು. ಕೊನೆಗೆ ನಾನೂ ಕೂರ್ಗ್ನವಳು, ಮನೆಗೆ ಹೋಗದೆ ತುಂಬಾ ಟೈಮ್ ಆಯ್ತು(ಪ್ರತಿ ವಾರ ಮನೆಗೆ ಬರ್ತಾ ಇದ್ರೂ..😛)ಅಂತೆಲ್ಲಾ ಸುಳ್ಳು ಕಥೆ ಹೇಳಿ, ಅಲ್ಲಿರೋರ್ಗೆಲ್ಲಾ ದಮ್ಮಯ್ಯ ಹಾಕಿ, ಎಲ್ಲಾ ಪ್ರೊಫೆಸರ್ಸ್ ಗಳನ್ನು ಒಪ್ಪಿ...

ನಾ ನಿನಗೆ,,,...

ಇಮೇಜ್
ನಾ ನಿನಗೆ,, ಮುಂಜಾನೆಯ ಹಕ್ಕಿಗಳ  ಕಲರವದ ನಡುವಲೂ ಕಾಡುವ ಹಾಡಾಗಬೇಕು ಹಳ್ಳಿಯ ಸೊಗಡಿನ ಲಾಲಿಯಾಗಬೇಕು ಚಿಂತೆಯ ಶಿರಬೇನೆಗೆ ನೀ ಹಪಹಪಿಸುವ ಮಡಿಲಾಗಬೇಕು ಒತ್ತಡದ ಒಣಬೇಗೆಗೆ ನಿಶೆಯ ತಂಗಾಳಿಯಾಗಬೇಕು ಕಣ್ಮುಚ್ಚಿ ಕುಳಿತಾಗ ಜಗವ ಮರೆಸುವ ಧ್ಯಾನವಾಗಬೇಕು ನಿನ್ನ ಕೋರಿಕೆಗಳಲಿ ಮೊದಲಾಗಬೇಕು ಕಪ್ಪೆಚಿಪ್ಪನರಸುತ  ತೀರದಲಿ ಕೈಹಿಡಿದು ನಡೆವಂತ  ಆಸೆಯ ಕನಸಾಗಬೇಕು  ಎಚ್ಚೆತ್ತರೂ ಆಲಂಗಿಸುವ ನಿದಿರಾಗಬೇಕು ನಟ್ಟಿರುಳಲಿ ನೀ ಬರೆವ ಉನ್ಮತ್ತ ಭಾವನೆಗಳ  ಕವಿತೆಯಾಗಬೇಕು ಮನದಲಿ ಅಚ್ಚೊತ್ತಿದ  ಕಾವ್ಯವಸ್ತುವಾಗಬೇಕು

ಈಗೊಂದು ಸೋನೆ ಮಳೆ

ತಲ್ಲಣ ಒಂದೆಡೆ, ಜ್ವಾಲಾಗ್ನಿ ಒಂದೆಡೆ, ಹೊತ್ತಿ ಉರಿಯುತಿತ್ತು ಹೃದಯ... ಹೊರಗೊಂದು ನಗು, ಒಳಗೆ ಖಾಲಿ ಚಿಂತೆ ಉತ್ತರವಿರದ ಪ್ರಶ್ನೆಗಳು, ಬೆವರಿಳಿಸುವ ಕಲ್ಪನೆ ಮಾತು ಮಾತಿಗೂ ಮೌನ ಮೌನದೊಳಗೆ ಆಕ್ರಂದನ ಮತ್ತೆ ಕಣ್ಣೀರು.. ಆದರೆ ಈಗೊಂದು, ಸೋನೆ ಮಳೆ, ಹೃದಯದಲಿ ಬಯಸಿದ್ದೂ ಅಲ್ಲ, ಎಣಿಸಿದ್ದೂ ಇಲ್ಲ, ಅದೆಲ್ಲಿಂದ ಬಂತೋ, ತಂಪು ತಂತು ಕಾದ ಹೃದಯಕೆ,  ಕಾಯದೇ... ಕರೆಯದೇ...

ಶ್ರೀರಾಮ

ಇಮೇಜ್
ಶ್ರೀರಾಮ ರಾಮ ನಾನು ಕಾಯುತಿಹೆನು ನಿನ್ನ ರೂಪು ನೋಡಲು  ನೋಡಿ ಮನದುಂಬಿಕೊಂಡು  ಬದುಕ ಸಫಲಗೊಳಿಸಲು ಚಂಚಲತೆಯ ಮನಕೆ ನೀನು  ಸ್ಥಿರತೆಯನ್ನು ನೀಡೆಯಾ ಸೋತು ಹೋದ‌ಜೀವಕೆ ಸಹಾನುಭೂತಿ ತೋರೆಯಾ ನಿನ್ನ ಧ್ಯಾನ-ಭಕ್ತಿಯಲ್ಲಿ ನನ್ನ ಮನವು ತುಂಬಲಿ ಪ್ರತಿ ನಾಡಿ ಮಿಡಿತದಲ್ಲಿ ನಿನ್ನ ನಾಮವೊಂದೇ ಕೇಳಲಿ ದುರ್ವಿಚಾರ ದೂರವಾಗಿ ಮನವು ಹಿಗ್ಗಿ ಕುಣಿಯಲಿ ನಿನ್ನ ಮಮತೆಯೊಂದೇ ಎನ್ನ ಪೊರೆವ ಶಕ್ತಿಯಾಗಲಿ ತಾಯಿ ಆಸೆಯಿಂದ ಕಾಯ್ವ ಮಗುವಿನಂತೆ ಕಾಯುವೆ ನಿನ್ನ ನಾಮ ಸ್ಮರಣೆಯಲ್ಲೇ ಎನ್ನ ಬದುಕ ಸವೆಸುವೆ ರಾಮ ನಾನು ಕಾಯುತಿಹೆನು....

ಹಗ್ಗದ ಮೇಲಿನ ನಡಿಗೆ

ಇಮೇಜ್
ಆಕೆಯದು, ಹೊಟ್ಟೆಪಾಡಿಗಾಗಿ ಹಗ್ಗದ ಮೇಲಿನ ನಡಿಗೆ ಹಗ್ಗದ ಮೇಲವಳ ಗಮನವೋ, ಕೋಲಿನ ಮೇಲೋ.. ಉಹೂಂ, ಎರಡರ ಮೇಲೂ ಇದ್ದಂತಿಲ್ಲ.. ಅವಳು ಕಲಿತ ವಿದ್ಯೆಯದು, ಅಭ್ಯಾಸವಾಗಿಬಿಟ್ಟಿದೆ.. ಬಿದ್ದೆನೆಂಬ ಭಯವಿಲ್ಲ,  ವಿಶ್ವಾಸವುಂಟು, ಅವಳ ಮೇಲವಳಿಗೇ...  ನಾಳೆ ಇನ್ನೆಲ್ಲೋ, ಹೊಟ್ಟೆಪಾಡೆಂತೋ ಯಾವ ಚಿಂತೆಯಿಲ್ಲ,  ಏನರಿಯದ ಮೊಗದಲ್ಲಿ  ಮುಗ್ಧತೆಯಷ್ಟೇ...  ನನ್ನದು,, ನನ್ನದೂ ಕಾಣದ ಹಗ್ಗದ ಮೇಲಿನ ನಡಿಗೆಯೇ...  ಗಮನ ಹೆಜ್ಜೆಯ ಮೇಲೋ, ದಾರಿಯ ಕಡೆಗೋ.. ಬದುಕು ಬಂದಂತೆಲ್ಲಾ ನಡೆದುಬಿಡಬೇಕು, ಅಪ್ಪಿಯೋ ಒಪ್ಪಿಯೋ  ಸಾಗಿಬಿಡಬೇಕು ಬಿದ್ದೆನೆಂಬ ಭಯವಿಲ್ಲ, ನಂಬಿಕೆಯುಂಟು, ದೇವನೊಬ್ಬನ ಮೇಲೆ...  ನಾಳೆಯೆಂತೋ, ನನ್ನ ಒಯ್ಯುವುದೆಲ್ಲಿಗೋ.. ಚಿಂತೆಯೇತಕೆ, ಹುಟ್ಟಿಸಿದವ ಹುಲ್ಲುಮೇಯಿಸದಿರಲು, ನಗುಮೊಗವಷ್ಟೇ..

#ನೀನು

ಇಮೇಜ್
  ದೂರದಲಿದ್ದು ನಿನ್ನಂದ ನೋಡಿದ ಆ ಜನುಮ ಸಾಕಾಯ್ತು ಎನಗೆ.. ಸನಿಹದ ಸುಖವನನುಭವಿಸಲೆಂದೇ ನಿನ್ನೊಡನೆಯೇ ಹುಟ್ಟಿ ಬಂದಿರುವೆ! !  

ಕನ್ನಡ

ಇಮೇಜ್
  ಕನ್ನಡ   ಅಮ್ಮಾ ಎನ್ನುವುದು ಹುಟ್ಟಿದಾ ಕಂದ ಅದನ್ನು ಕೇಳಲೆಷ್ಟು ಚೆಂದ ಕನ್ನಡ ನಾಡೇ ಬಲು ಅಂದ ಕನ್ನಡ ನುಡಿಯು ಬಹು ಚೆಂದ ಆಂಗ್ಲಭಾಷೆ ಕಲಿಯಬೇಕು ಮಾತೃಭಾಷೆ ಬೆಳೆಯಬೇಕು ಕನ್ನಡ ಮಾಧ್ಯಮವ ಉಳಿಸಬೇಕು ಕನ್ನಡ ಸಂಸ್ಕೃತಿಯ ರೂಢಿಸಬೇಕು ಕನ್ನಡಾಂಬೆಯ ಮಕ್ಕಳು ನಾವು ನಮ್ಮಿಂದಾಗುತಿದೆ ಅವಳಿಗೆ ನೋವು ಕನ್ನಡ ಉಳಿಸಿ, ಅವಳನು ರಕ್ಷಿಸಿ ಬದುಕನು ಸಾರ್ಥಕವಾಗಿಸಿ..

ನಾನೊಂದು ಚಿಟ್ಟೆಯಾಗಿದ್ದರೆ.....

ಇಮೇಜ್
ನಾನೊಂದು ಚಿಟ್ಟೆಯಾಗಿದ್ದರೆ..... ಬಾನಂಗಳದಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದೆ ಹೂವಿಂದ ಹೂವಿಗೆ ಪುಟಿಯುತ್ತಿದ್ದೆ ಪುಷ್ಪರಸವ ಹೀರಿ ಸವಿಯುತ್ತಿದ್ದೆ ಸರ್ವರ ಕಣ್ಮಣಿಯಾಗಿರುತ್ತಿದ್ದೆ ಕ್ಷಣಕ್ಷಣಕ್ಕೂ ನೋಡುಗರಿಂದ ಮರೆಯಾಗುತ್ತಿದ್ದೆ ಅರಸುವ ಕಣ್ಗಳಿಗೆ ಆಟವಾಗುತ್ತಿದ್ದೆ ಎಲ್ಲರ ಮನಸ್ಸನ್ನು ಸೆರೆ ಹಿಡಿಯುತ್ತಿದ್ದೆ  ನಾನೊಂದು ಚಿಟ್ಟೆಯಾಗಿದ್ದರೆ.....