ಊರ ಹಬ್ಬ

ಊರ‌ ಹಬ್ಬ


 "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ" ಅನ್ನೋ ಮಾತೇ ಇದೆ.. ಎಲ್ಲರಿಗೂ ಅವರವರ ಊರು ಅಂದ್ರೆ ಪ್ರೀತಿ ಜಾಸ್ತಿನೇ. ಹಾಗೇ ನನಗೂ ಕೂಡ. ನನ್ನೂರು ಸಾಲಿಗ್ರಾಮ. ನನಗೆ ಜನವರಿ ತಿಂಗಳೆಂದರೆ ನೆನಪಾಗುವುದು ಊರ ಹಬ್ಬ. ಒಂದು ತಿಂಗಳ ಮುಂಚೆಯಿಂದಲೇ ಕಾತರ, ಸಂಭ್ರಮ, ಜೊತೆಗೊಂದಿಷ್ಟು ತಯಾರಿ ಶುರುವಾಗತ್ತೆ. 

ನಮ್ಮೂರ ಹಬ್ಬವನ್ನು ನಾನು ಯಾವ ವರ್ಷವೂ ಮಿಸ್ ಮಾಡಿದ್ದೇ ಇಲ್ಲ. ಆದ್ರೆ ಕಳೆದ ವರ್ಷ, ಇಂಟರ್ನಲ್ ಎಕ್ಸಾಮ್ನ ಟೈಮ್ ಟೇಬಲ್ ಬಂತು. ನೋಡಿದ್ರೆ ಹಬ್ಬದ ದಿನವೇ ಪರೀಕ್ಷೆ! ಇಂಟರ್ನಲ್ ಎಕ್ಸಾಂ ಆದ್ರೂ ಮಿಸ್ ಮಾಡೋ ಹಾಗಿಲ್ಲ. ವರ್ಷಕ್ಕೊಮ್ಮೆ ಬರೋ ಹಬ್ಬವನ್ನೂ ಮಿಸ್ ಮಾಡೋಕಾಗಲ್ಲ, ಏನಪ್ಪಾ ಮಾಡೋದು ಅಂತ ಯೋಚಿಸ್ತಾ ಇದ್ದೆ. ಎರಡನೇ ಶನಿವಾರ, ಸಂಕ್ರಾಂತಿ ಎಲ್ಲ ಒಟ್ಟಾಗಿ ಬಂದಿರೋದ್ರಿಂದ ಊರಿಗೆ ಹೋಗೋ ಪ್ಲಾನ್ ಹಾಕಿದ್ರು ನಮ್ಮ ಕ್ಲಾಸ್ ಅಲ್ಲಿ ಕೆಲವರು. ಇದೇ ಒಳ್ಳೆ ಸಮಯ ಅಂತ ಕ್ಲಾಸ್ ಲೀಡರ್ ಜೊತೆ ಸೀದಾ ಚೇರ್ ಪರ್ಸನ್ ಚೇಂಬರ್ಗೆ ಹೋದೆ. ಕ್ಲಾಸ್ ಲೀಡರ್ ಕೂರ್ಗ್ ಅವಳಾಗಿದ್ರಿಂದ, ಅವಳು ಮನೆಗೆ ಹೋಗದೆ ತುಂಬಾ ಟೈಮ್ ಆಯ್ತು, ರಜೆ ಇದೆ, ಸಂಕ್ರಾಂತಿ ಅಂತೆಲ್ಲಾ ಹೇಳಿದ್ರೂ , ಮೇಡಂ ಅವರದೇ ಕಾರಣ ಕೊಡ್ತಾ ಇದ್ರು. ಕೊನೆಗೆ ನಾನೂ ಕೂರ್ಗ್ನವಳು, ಮನೆಗೆ ಹೋಗದೆ ತುಂಬಾ ಟೈಮ್ ಆಯ್ತು(ಪ್ರತಿ ವಾರ ಮನೆಗೆ ಬರ್ತಾ ಇದ್ರೂ..😛)ಅಂತೆಲ್ಲಾ ಸುಳ್ಳು ಕಥೆ ಹೇಳಿ, ಅಲ್ಲಿರೋರ್ಗೆಲ್ಲಾ ದಮ್ಮಯ್ಯ ಹಾಕಿ, ಎಲ್ಲಾ ಪ್ರೊಫೆಸರ್ಸ್ ಗಳನ್ನು ಒಪ್ಪಿಸಿ, ಪರೀಕ್ಷೆಗಳನ್ನು ೧ ವಾರ ಮುಂಚೆ ಹಾಕಿಸಿ ಬಂದೆವು. ನಾವು ಸೋ ಕಾಲ್ಡ್ 'ಸೀನಿಯರ್ಸ್' ಆಗಿದ್ದರಿಂದ ಇದೇನೋ ವರ್ಕ್ ಆಯ್ತು. ಆದ್ರೆ ನಮ್ಮ ಡಿಪಾರ್ಟ್ಮೆಂಟ್ ಅಲ್ಲಿ ೫ ಕೋರ್ಸ್ಗಳಿರೋದ್ರಿಂದ ಎಲ್ಲರಿಗೂ ಒಂದೇ ನಿಯಮವಿತ್ತು. ಎಕ್ಸಾಂ ಪ್ರಿಪೋನ್ ಆದ ಸುದ್ದಿ ಕೇಳಿ ಎಲ್ಲರೂ ಬೈದುಕೊಂಡರು. ನಮ್ಮ ಆತ್ಮೀಯ ಸ್ನೇಹಿತರಿಗಂತೂ ನಾವೇ ಮಾಡ್ಸಿದ್ದು ಅಂತ ಗೊತ್ತಾಗಿ ಸ್ವಲ್ಪ ಕೋಪವೂ ಬಂದಿತ್ತು. ಇನ್ನು ಕೆಲವರು ನಮ್ಮ ಬಳಿಯೇ ಪ್ರಿಪೋನ್ ಆಗಿದ್ದಕ್ಕೆ ಬೈತಿರೋವಾಗ, ನಮ್ಗೇನು ಗೊತ್ತೇ ಇಲ್ಲ ಅನ್ನೋ ತರ ನಾವು ಬಿಲ್ಡ್ ಅಪ್ ಕೊಟ್ಟಿದ್ದೂ ಆಯ್ತು. ಈ ಗೋಳಾಟದಲ್ಲಿ ಪರೀಕ್ಷೆ ಮುಗೀತು. ಮೊದಲು ಬೈದವರೇ ಹೇಗಾದ್ರೂ ಆಗಿರಲಿ ಪರೀಕ್ಷೆ ಮುಗೀತಲ್ಲ ಅಂತ ಆಮೇಲೆ ಖುಷಿ ಪಟ್ಟರು. ಇನ್ನು ನನ್ನ ಖುಷಿ ಬಗ್ಗೆ ಕೇಳ್ಬೇಕಾ! ಪರೀಕ್ಷೆ ಮುಗಿದ ಖುಷಿಯಲ್ಲಿ, ರಜೆ ಹಾಕಿ, ಒಂದು ವಾರ ಹಬ್ಬ ಸುತ್ತಿ, ಸಂತಸದಲ್ಲಿ ತೇಲಾಡಿದ್ದೆ.



ಹಬ್ಬ ಅಂದ್ರೇನೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು. ನನಗೆ ಧಾರ್ಮಿಕ ಕಾರ್ಯಕ್ರಮಗಳತ್ತ ಒಲವು ಸ್ವಲ್ಪ ಜಾಸ್ತಿನೇ. ಧ್ವಜಾರೋಹಣ, ಬಲಿ, ಸುತ್ತು ಸೇವೆ, ರಥಾರೋಹಣ, ರಥಾವರೋಹಣ ಇದೆಲ್ಲಾ ಇಷ್ಟದ ಆಚರಣೆಗಳು. ಇದರೊಡನೆ ಚಂಡೆ‌ ಹಾಗೂ ಇತರ ವಾದ್ಯಗಳು ಹಬ್ಬಕ್ಕೆ ಮೆರುಗನ್ನು ನೀಡುತ್ತವೆ. ವಿವಿಧ ಬಗೆಯ ಹೂವುಗಳಿಂದ, ವಿದ್ಯುದಲಂಕಾರಗಳಿಂದ ದೇವಸ್ಥಾನ, ರಥ ಹಾಗೂ ರಥಬೀದಿ ಶೋಭಿಸುತ್ತಿರುತ್ತವೆ. ನಾನಾ ರೀತಿಯ ಆಟಗಳು, ಎಲ್ಲಾ ಬಗೆಯ ಅಂಗಡಿಗಳು, ಇವುಗಳ ಮಧ್ಯೆ ಜನರಿಂದ ಇಡೀ ಊರೇ ವಿಜೃಂಭಿಸುತ್ತಿರುತ್ತದೆ. ರಥಬೀದಿಯಲ್ಲಿ ತಿರುಗುವಾಗ ಎದುರಾಗುವ ಅದೆಷ್ಟೋ ಅಪರಿಚಿತ ಮುಖಗಳು, ಮಧ್ಯೆ ಮಧ್ಯೆ ಕಾಣಸಿಗುವ ಪರಿಚಿತ ಮುಖಗಳು! ಆಗಾಗ್ಗೆ ಸಿಗುವವರು ಕೆಲವರಾದರೆ, ಅಪರೂಪಕ್ಕೆ ಸಿಗುವವರು ಹಲವರು. ಪರಿಚಿತರೊಡನೆ ನಗು-ಮಾತು, ಆಪ್ತರೊಡನೆ ಹರಟೆ. ಒಟ್ಟಿನಲ್ಲಿ ಹಬ್ಬವೆಂದರೆ ವಿವಿಧ ಮನಸ್ಸುಗಳ, ಮುಖಗಳ ಸಮ್ಮಿಲನ..

ಇದು ಹಬ್ಬದ ಒಂದು ಮುಖವಾದರೆ ಇನ್ನೊಂದು, ಬೇರೆ ಬೇರೆ ಊರು, ಜಿಲ್ಲೆ, ರಾಜ್ಯಗಳಿಂದ ಬರುವ ವ್ಯಾಪಾರಿಗಳು. ಒಬ್ಬೊಬ್ಬರ ವ್ಯವಹಾರ ಒಂದೊಂದು ತೆರನಾದರೂ ಕಾರಣ ಒಂದೇ, ಹೊಟ್ಟೆಪಾಡು! ಜಾಗದ ಸಂಬಂಧಿತರಿಗೆ ಬಾಡಿಗೆ ಹಣ ನೀಡಿ, ಲಾಭವೋ ನಷ್ಟವೋ, ಕಷ್ಟವೋ ಸುಖವೋ, ಕೆಲವು ದಿನಗಳ ಕಾಲ ಅಲ್ಲಿ ಜೀವನ ನಡೆಸುತ್ತಾರೆ. ವಿವಿಧ ಆಟಿಕೆಯಂಥ ಸಾಮಾನುಗಳು, ಪಾತ್ರೆಗಳ ಮಾರಾಟಗಾರರು ಅದನ್ನು ಮಾರುವ ಚಾಕಚಕ್ಯತೆಗೆ ನಿಜಕ್ಕೂ ಬೆರಗಾಗುತ್ತದೆ. ಪುಗ್ಗ ಮಾರುವ ತಾಯಿಯ ಜೋಲಿಯಲ್ಲಿ ಕಿಲಕಿಲ ನಗುತ್ತಿರುವ ಕಂದಮ್ಮ, ಹೂ ಮಾರುವವಳ ಮಡಿಲಲ್ಲಿ ನಿದ್ರಿಸುತ್ತಿರುವ ಕೂಸನ್ನು ನೋಡಿದರೆ, ಬದುಕಿನ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ. ಎತ್ತರದಲ್ಲಿ ಹಗ್ಗದ ಮೇಲೆ ಸಮತೋಲನ ಕಾಯ್ದುಕೊಂಡು ನಡೆಯುವ ಪುಟ್ಟ ಹುಡುಗಿಗೆ ಚಿಕ್ಕ ವಯಸ್ಸಿನಲ್ಲೇ ಅಷ್ಟು ದೊಡ್ಡ ಜವಾಬ್ದಾರಿ ತೆಗೆದುಕೊಳ್ಳುವ ಅನಿವಾರ್ಯತೆ! ಇವುಗಳನ್ನೆಲ್ಲಾ ನೋಡುವಾಗ, ನಾನಂದುಕೊಂಡ ಬದುಕಿನ ಅರ್ಥವೇ ಬದಲಾದಂತೆ ಅನ್ನಿಸುತ್ತದೆ. ಹಬ್ಬವೆಂಬುದು ಬದುಕಿನ ವಿವಿಧ ಮಜಲುಗಳನ್ನು ತೆರೆದಿಡುವ ತಾಣವೂ ಹೌದು. ಆ ಮಜಲುಗಳನ್ನು ನೋಡುವ, ಅರ್ಥೈಸಿಕೊಳ್ಳುವ, ಸ್ಪಂದಿಸುವ ಮನಸ್ಸುಗಳು ಹೆಚ್ಚಾಗಬೇಕಷ್ಟೇ.

  

ಇವೆಲ್ಲವುಗಳ ನಡುವೆ ಗಟ್ಟಿಯಾಗಿ ಕೇಳುವ ಪೀಪಿಯ ಸದ್ದು, ಎದುರು ಹೋಗುತ್ತಿದ್ದರೆ ಕರೆಯುವ ಅಂಗಡಿ ವ್ಯಾಪಾರಿಗಳು..ಈ ಗೌಜು-ಗದ್ದಲಗಳೆಲ್ಲಾ ಒಮ್ಮೆ ಕಿರಿಕಿರಿಯೆನಿಸಿದರೂ ಒಂಥರಾ ಮುದವೇ.! ಈ ಹಬ್ಬವೆಂಬ ಸಂಭ್ರಮ ಮುಗಿಯುವಾಗ ಏನೋ ಕಳೆದುಕೊಳ್ಳುವ ಭಾವ. ತಿಂಗಳ ತವಕ, ಸಂತಸ, ಮೋಜು-ಮಸ್ತಿಯೆಲ್ಲವೂ ಇಷ್ಟು ಬೇಗ ಮುಗಿಯಿತಾ ಎನ್ನುವ ಬೇಸರ.‌ ಅಂದಿನಿಂದ ಮತ್ತೆ ಕಾಯುವುದು ಮುಂದಿನ ವರ್ಷದ ಹಬ್ಬಕ್ಕೆ...ಅಷ್ಟೇ ಉತ್ಸಾಹದೊಂದಿಗೆ...!!


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..