ಚಿತ್ರ: ವೈಷ್ಣವಿ ಕೆ "ಜಯ್, ನಿನಗೆ ಇಟ್ಟ ಹೆಸರಿಗೆ ತಕ್ಕಂತೆ ಜೀವನದಲ್ಲಿ ಜಯಶಾಲಿಯಾಗು ಮಗನೇ.. " ಎಂದು ಹುಟ್ಟಿದ ಹಬ್ಬದಂದು ನಮಸ್ಕರಿಸಲು ಬಂದ ಮಗನಿಗೆ ಆಶೀರ್ವದಿಸಿದರು ಆಕಾಶ್ ಮತ್ತು ಆಶಾ ದಂಪತಿಗಳು. "ನನ್ನ ಹೆಸರಿಗೆ, ನನ್ನ ಜಯಕ್ಕೆ ಕಾರಣ ನೀವಿಬ್ಬರೇ ಅಲ್ಲವೇ? ನೀವು ಅಂದು ಇಟ್ಟ ದಿಟ್ಟ ಹೆಜ್ಜೆಯಿಂದಲೇ ಇಂದು ಹೀಗಿದ್ದೇನೆ ನಾನು" ಎಂದ ಜಯ್. ಆಗ, ಆಕಾಶ್ ಮತ್ತು ಆಶಾ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡರು. ಜಯ್ ತರಗತಿಯಲ್ಲಿ ಅತಿ ಬುದ್ಧಿವಂತನಲ್ಲದಿದ್ದರೂ ಹೆಡ್ಡರ ಸಾಲಿನಲ್ಲಿರಲಿಲ್ಲ. ಓದುವುದು ಅವನಿಗೆ ಇಷ್ಟದ ಕೆಲಸವಾದರೂ ಪಠ್ಯ ವಿಷಯ ಓದುವುದು ಆಗದ ಕೆಲಸವೇ. ಹಾಡುವುದು, ತನಗನಿಸಿದ್ದನ್ನು ಬರೆಯುವುದು ಅವನ ಹವ್ಯಾಸವಾಗಿತ್ತು. ಆದರೆ ಅದು ಅವನ ಹೆತ್ತವರಿಗೆ ಇಷ್ಟವಿರಲಿಲ್ಲ. ಹೆಚ್ಚು ಅಂಕಗಳಿಸಬೇಕು, ಅದಕ್ಕಾಗಿ ಸದಾ ಪಠ್ಯ ಪುಸ್ತಕಗಳನ್ನು ಓದಬೇಕು ಎನ್ನುವ ಒತ್ತಡ ಹೇರುತ್ತಿದ್ದರು. ಪಿಯುಸಿಯಲ್ಲಿ ಪೋಷಕರ ಬಲವಂತದ ಮೇರೆಗೆ ವಿಜ್ಞಾನ ವಿಭಾಗ ಆಯ್ಕೆ ಮಾಡಿದ್ದ. ಪಕ್ಕದ ಮನೆಯವರ ಮಕ್ಕಳೊಡನೆ, ಸಂಬಂಧಿಕರ ಮಕ್ಕಳೊಡನೆ ತನ್ನನ್ನು ಹೋಲಿಕೆ ಮಾಡಿ ತನ್ನ ಅಮ್ಮ ಮಾತನಾಡುವುದನ್ನು ಮಾತ್ರ ಜಯ್ ಸಹಿಸುತ್ತಿರಲಿಲ್ಲ. ಪಿಯುಸಿ ಮುಗಿದ ನಂತರ ಡೋನೇಶನ್ ಕೊಟ್ಟು ಇಂಜಿನಿಯರಿಂಗ್ ಸೇರಿಸಿದರು. ಅವನಿಗೆ ಅದರಲ್ಲಿ ಆಸಕ್ತಿಯೇ ಇರಲಿಲ್ಲ. ಪರೀಕ್ಷೆಗಳಲ್ಲಿ ಅನುತ್ತೀರ್ಣನಾಗುತ್ತಿದ್ದ. ಇಂಜಿನಿಯರಿಂಗ್ ಮುಗಿಸುವುದೇ ಕಷ್ಟವಾಗಿ ...