ಇಳಿವಯಸಿನಲಿ ತಾಯಿ

                   ಚಿತ್ರ : ವೈಷ್ಣವಿ ಕೆ.



ನೀನರಿಯದ ವ್ಯಥೆ ನೂರಾರಿದೆ

ಬತ್ತಿದ ಕಣ್ಣೀರು ಕಥೆ ಹೇಳಿದೆ

ಇಳಿವಯಸಿನ ಏಕಾಂತಕೆ ಮನ ಬೆಂದಿದೆ

ವಿಧಿಯಾಟಕೆ ನಗುವಲ್ಲದ ನಗು ಮೂಡಿದೆ


ಬಸಿರಲ್ಲಿ ನಿನ್ನ ಕಾಪಾಡಿದೆ

ಮಡಿಲಲ್ಲಿ ಸಲಹುತ್ತ ಹೆಣಗಾಡಿದೆ

ಮಮತೆಯ ತೊಟ್ಟಿಲಲ್ಲಿ ತೂಗಾಡಿದೆ

ಪ್ರೀತಿಯ ನಿನಗೆ ಮುಡಿಪಾಗಿಸಿದೆ..


ನಿನ್ನ ನಗುವಿಗಾಗಿ ನೆತ್ತರು ಬಸಿದೆ

ನೀ ಅತ್ತಾಗ ಸಾವನ್ನು ನಾ ಬಯಸಿದೆ

ನಿನ್ನಾಸೆಗಳ ನಿದ್ರಿಸದೆ ಪೂರೈಸಿದೆ

ನಿನ್ನ ಬದುಕಿಗಾಗಿ ನನ್ನನ್ನೇ ಅಡವಿಟ್ಟಿಹೆ..


ಕರುಳಬಳ್ಳಿ ಕಡಿದು ದೂರಾದೆ

ಈ ಸಂಬಂಧ ಮುರಿದು ಹೋದೆ

ನನ್ನಾಂತರ್ಯವನ್ನೇ ಬಲಿ ನೀಡಿದೆ

ಏಕೆ ಜೀವಂತ ಶವವಾಗಿಸಿದೆ..


ತುತ್ತನ್ನ ನೀಡಿದಾಕೆ ಕಸವಾದಳೇ..

ತಾಯಿ ಮಡಿಲೀಗ ಜೋಪಡಿಯೇ..

ಈ ಜಗವ ನೀನು ಅರಿತಾಯಿತೇ..

ಅಂತಸ್ತಿನ ಕಲ್ಲರಮನೆ ಹೆಚ್ಚಾಯಿತೇ..


ಈ ಮುಪ್ಪಲ್ಲು ನಿನ್ನ ಉಪಚರಿಸುವೆ

ನಿನ್ನರಮನೆಯ ಮೂಲೆಯಲಿ ನಿದ್ರಿಸುವೆ..

ವೃದ್ಧಾಶ್ರಮವಾಸ ಬೇಡ ಕೂಸೆ..

ಬೇಗನೆ ಮಣ್ಣಲ್ಲಿ ಮಣ್ಣಾಗುವೆ..

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..