ದಿಟ್ಟ ಹೆಜ್ಜೆ...!
ಚಿತ್ರ: ವೈಷ್ಣವಿ ಕೆ |
"ಜಯ್, ನಿನಗೆ ಇಟ್ಟ ಹೆಸರಿಗೆ ತಕ್ಕಂತೆ ಜೀವನದಲ್ಲಿ ಜಯಶಾಲಿಯಾಗು ಮಗನೇ.. " ಎಂದು ಹುಟ್ಟಿದ ಹಬ್ಬದಂದು ನಮಸ್ಕರಿಸಲು ಬಂದ ಮಗನಿಗೆ ಆಶೀರ್ವದಿಸಿದರು ಆಕಾಶ್ ಮತ್ತು ಆಶಾ ದಂಪತಿಗಳು. "ನನ್ನ ಹೆಸರಿಗೆ, ನನ್ನ ಜಯಕ್ಕೆ ಕಾರಣ ನೀವಿಬ್ಬರೇ ಅಲ್ಲವೇ? ನೀವು ಅಂದು ಇಟ್ಟ ದಿಟ್ಟ ಹೆಜ್ಜೆಯಿಂದಲೇ ಇಂದು ಹೀಗಿದ್ದೇನೆ ನಾನು" ಎಂದ ಜಯ್. ಆಗ, ಆಕಾಶ್ ಮತ್ತು ಆಶಾ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡರು.
ಜಯ್ ತರಗತಿಯಲ್ಲಿ ಅತಿ ಬುದ್ಧಿವಂತನಲ್ಲದಿದ್ದರೂ ಹೆಡ್ಡರ ಸಾಲಿನಲ್ಲಿರಲಿಲ್ಲ. ಓದುವುದು ಅವನಿಗೆ ಇಷ್ಟದ ಕೆಲಸವಾದರೂ ಪಠ್ಯ ವಿಷಯ ಓದುವುದು ಆಗದ ಕೆಲಸವೇ. ಹಾಡುವುದು, ತನಗನಿಸಿದ್ದನ್ನು ಬರೆಯುವುದು ಅವನ ಹವ್ಯಾಸವಾಗಿತ್ತು. ಆದರೆ ಅದು ಅವನ ಹೆತ್ತವರಿಗೆ ಇಷ್ಟವಿರಲಿಲ್ಲ. ಹೆಚ್ಚು ಅಂಕಗಳಿಸಬೇಕು, ಅದಕ್ಕಾಗಿ ಸದಾ ಪಠ್ಯ ಪುಸ್ತಕಗಳನ್ನು ಓದಬೇಕು ಎನ್ನುವ ಒತ್ತಡ ಹೇರುತ್ತಿದ್ದರು. ಪಿಯುಸಿಯಲ್ಲಿ ಪೋಷಕರ ಬಲವಂತದ ಮೇರೆಗೆ ವಿಜ್ಞಾನ ವಿಭಾಗ ಆಯ್ಕೆ ಮಾಡಿದ್ದ. ಪಕ್ಕದ ಮನೆಯವರ ಮಕ್ಕಳೊಡನೆ, ಸಂಬಂಧಿಕರ ಮಕ್ಕಳೊಡನೆ ತನ್ನನ್ನು ಹೋಲಿಕೆ ಮಾಡಿ ತನ್ನ ಅಮ್ಮ ಮಾತನಾಡುವುದನ್ನು ಮಾತ್ರ ಜಯ್ ಸಹಿಸುತ್ತಿರಲಿಲ್ಲ. ಪಿಯುಸಿ ಮುಗಿದ ನಂತರ ಡೋನೇಶನ್ ಕೊಟ್ಟು ಇಂಜಿನಿಯರಿಂಗ್ ಸೇರಿಸಿದರು. ಅವನಿಗೆ ಅದರಲ್ಲಿ ಆಸಕ್ತಿಯೇ ಇರಲಿಲ್ಲ. ಪರೀಕ್ಷೆಗಳಲ್ಲಿ ಅನುತ್ತೀರ್ಣನಾಗುತ್ತಿದ್ದ. ಇಂಜಿನಿಯರಿಂಗ್ ಮುಗಿಸುವುದೇ ಕಷ್ಟವಾಗಿ ಹೋಗಿತ್ತು. ಆಕಾಶ್ ಮತ್ತು ಆಶಾ ಅತಿ ಹೆಚ್ಚು ಜಾತಕದಲ್ಲಿ ನಂಬಿಕೆಯುಳ್ಳವರಾದ್ದರಿಂದ, ಸಿಕ್ಕ ಸಿಕ್ಕ ಕಡೆ ಮಗನ ಜಾತಕ ತೋರಿಸಲಾರಂಭಿಸಿದರು. ಒಬ್ಬರು ಹೇಳಿದ ಪರಿಹಾರ ಮಾಡಿ ಮುಗಿದೊಡನೆ, ಅದರಲ್ಲಿ ತೃಪ್ತಿಯಾಗದೆ ಇನ್ನೊಬ್ಬರ ಬಳಿ ಹೋಗುವುದು. ಇದು ಅವರ ಅಭ್ಯಾಸವಾಗಿಬಿಟ್ಟಿತು. ನಿಮ್ಮ ಮಗನಿಗೆ ಆ ದೋಷವಿದೆ, ಈ ದೋಷವಿದೆ, ಅದಕ್ಕೆ ಅವನಿಗೆ ಓದಲಾಗುತ್ತಿಲ್ಲ ಎಂಬಿತ್ಯಾದಿ ಜ್ಯೋತಿಷಿಗಳ ಮಾತುಗಳು, ಜಯ್ ಇನ್ನೂ ಉದಾಸೀನನಾಗಲು ಕಾರಣವಾಯ್ತು. ಅವನ ಮನಸ್ಸಿನಲ್ಲಿ ಓದದಿದ್ದರೆ ನಡೆಯುತ್ತದೆ ಎಂಬ ಔದಾಸೀನ್ಯ ಭಾವ ಗಟ್ಟಿಯಾಗಿ ಬೇರೂರಿತ್ತು. ಅತ್ತ ಇಂಜಿನಿಯರಿಂಗ್ ಮುಗಿಸದೆ, ಇತ್ತ ತನ್ನ ಹವ್ಯಾಸವನ್ನೂ ಮುಂದುವರಿಸದೆ, ಮಂಕಾಗಿ ಹೋಗಿದ್ದ ಜಯ್. ಒಳ್ಳೆಯ ಜೀವನವನ್ನು ಹೊಂದಬೇಕಾಗಿದ್ದ ಮಗ ಈ ರೀತಿ ಇರುವುದು ಆಕಾಶ್ ಮತ್ತು ಆಶಾರಿಗೆ ನುಂಗಲಾಗದ ತುತ್ತಾಗಿತ್ತು. ಪರಿಹಾರಗಳಿಗೆಂದೇ ಸಾಕಷ್ಟು ಖರ್ಚು ಮಾಡಿ ಸುಸ್ತಾಗಿದ್ದರು. ಅವರಿಬ್ಬರ ಒಬ್ಬನೇ ಮಗ ಜಯ್, ತುಂಬಾ ಮುದ್ದಿನಿಂದ ಸಾಕಿದ್ದರು. ಅವನನ್ನು ಈ ರೀತಿ ನೋಡಲಾಗದೆ ಸೋತು ಸುಣ್ಣವಾಗಿದ್ದರು.
ಹೀಗಿರಲು ಒಮ್ಮೆ ಯಾರದೋ ಸಲಹೆಯಂತೆ ಮನಃಶಾಸ್ತ್ರಜ್ಞರ ಬಳಿ ಅವನನ್ನು ಕರೆದೊಯ್ದರು. ಎಲ್ಲಾ ರೀತಿಯ ಕೌನ್ಸಿಲಿಂಗ್ ಬಳಿಕ ತಿಳಿಯಿತು, ಆತನಿಗೆ ಆಸಕ್ತಿಯಿರುವುದು ತೋಚಿದ್ದನ್ನು ಬರೆಯುವುದರಲ್ಲಿ ಹಾಗೂ ಹಾಡುವುದರಲ್ಲಿ , ಪಠ್ಯವನ್ನೋದುವುದರಲ್ಲಿ ಅಲ್ಲ ಎಂದು. "ಮೂಢನಂಬಿಕೆಗಳನ್ನು ಅತಿಯಾಗಿ ನಂಬಿ, ಈಗಾಗಲೇ ಸಾಕಷ್ಟು ಖರ್ಚು ಮಾಡಿದ್ದೀರಿ. ಇನ್ನಾದರೂ ಅದರಿಂದ ಹೊರಬನ್ನಿ. ಬದುಕಿನಲ್ಲಿ ಮುಖ್ಯವಾಗಿ ಬೇಕಾಗಿರುವುದು ಮಾನಸಿಕ ಶಾಂತಿ. ಎಲ್ಲವೂ ಇದ್ದು ಮನಸ್ಸಿಗೆ ನೆಮ್ಮದಿಯಿಲ್ಲ ಎಂದರೆ ಮಂಕಾಗುವುದು ಸಹಜ. ಇದೇ ನಿಮ್ಮ ಮಗನಿಗೂ ಆಗಿರುವುದು. ಬಲವಂತದ ಹೇರಿಕೆಯಿಂದ, ಒತ್ತಡದಿಂದ ಆತ ಹೀಗಾಗಿದ್ದಾನಷ್ಟೇ. ಜಯ್ ಇಂಜಿನಿಯರಿಂಗನ್ನು ಬಿಟ್ಟು ಬಿಡಲಿ, ಆತ ತನ್ನ ಹವ್ಯಾಸವನ್ನು ಮುಂದುವರಿಸಲಿ. ಆತ ಹೀಗಾಗಲು ಒಂದೆಡೆಯಿಂದ ನೀವೇ ಕಾರಣರಾಗಿದ್ದೀರಿ. ಯಾರೊಡನೆಯೂ ಆತನನ್ನು ಹೋಲಿಕೆ ಮಾಡಬೇಡಿ. ಕೈಯಲ್ಲಿರುವ ಐದು ಬೆರಳುಗಳೇ ಒಂದರಂತೆ ಇನ್ನೊಂದಿಲ್ಲ ಎಂದ ಮೇಲೆ, ಮನುಷ್ಯರು ಹಾಗಿರಲು ಸಾಧ್ಯವೇ? ಸಮಾನವಾಗಿಲ್ಲ ಎಂದ ಮೇಲೆ ಹೋಲಿಕೆ ಮಾಡಲು ಸಾಧ್ಯವೇ? ಮಾಡಿದರೆ ಸರಿಯೇ? ನೀವೇ ಆತನನ್ನು ನಂಬದಿದ್ದರೆ, ನಿಮ್ಮ ಸಂಬಂಧಿಕರು, ಸಮಾಜ ನಂಬುತ್ತದೆಯೇ? ಇದನ್ನೊಮ್ಮೆ ಯೋಚಿಸಿ. ಇತರರ ಮಾತಿನ ಕುರಿತು ಚಿಂತಿಸಬೇಡಿ. ಅತಿ ಹೆಚ್ಚು ಅಂಕಗಳಿಸಿ, ಜೀವನದಲ್ಲಿ ಸೋತವರು ಅದೆಷ್ಟೋ ಮಂದಿಯಿದ್ದಾರೆ. ಗೆಲ್ಲಬೇಕಾಗಿರುವುದು ಜೀವನದ ಪರೀಕ್ಷೆಯಲ್ಲಿ! ಆದ್ದರಿಂದ ಆತನಿಗೆ ಅವನಿಚ್ಛೆಯಂತೆ ಮಾಡಲು ಬಿಡಿ. ಜೀವನದಲ್ಲಿ ಆತ ಖಂಡಿತವಾಗಿಯೂ ಜಯಶಾಲಿಯಾಗುತ್ತಾನೆ, ಆತನಿಗೆ ನೀವಿಟ್ಟ ಹೆಸರಿಗೆ ತಕ್ಕಂತೆ....!" ಎಂದರು ವೈದ್ಯರು. ಇದನ್ನರಗಿಸಿಕೊಳ್ಳಲು ಕಷ್ಟವಾದರೂ ತಮ್ಮ ಮಗ ಸರಿಯಾಗಲು ವೈದ್ಯರ ಸಲಹೆಯಂತೆಯೇ ಮಾಡಿದ್ದರು ಆಕಾಶ್ ಮತ್ತು ಆಶಾ. ಅಂದು ಆತ ಇಂಜಿನಿಯರಿಂಗ್ ಶಿಕ್ಷಣ ಅರ್ಧದಲ್ಲಿಯೇ ಬಿಟ್ಟು ತನ್ನ ಹವ್ಯಾಸದ ಕಡೆ ಗಮನ ಹರಿಸಿದ. ಇಂದು ಜಯ್ ಉತ್ತಮ ಸಾಹಿತಿಯೂ, ಗಾಯಕನೂ ಆಗಿ ಮಿಂಚುತ್ತಿದ್ದಾನೆ. ಆಸಕ್ತಿಯಿಂದ, ಇಷ್ಟ ಪಟ್ಟು, ಸಾಕಷ್ಟು ಅಭ್ಯಾಸ ಮಾಡಿ, ಪರಿಶ್ರಮ ಹಾಕಿ ಮಾಡಿದ ಕೆಲಸಗಳು ಖಂಡಿತ ವ್ಯರ್ಥವಾಗಲಾರದು. ತಾನು ರಚಿಸಿದ ಹಾಡಿಗೆ, ರಾಗ ಹಾಕಿ ಹಾಡಬಲ್ಲ. ವಿವಿಧ ರೀತಿಯ ಲೇಖನ, ಕವನ, ಕಥೆ, ಕೃತಿಗಳಿಗೆ ಹಲವು ಗೌರವ, ಪ್ರಶಸ್ತಿಗಳು ಸಂದಿದ್ದು, ತನ್ನ ಜಯದ ಪತಾಕೆಯನ್ನು ಎತ್ತರಕ್ಕೆ ಹಾರಿಸುತ್ತಿದ್ದಾನೆ.
ಆತ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಸೋತಿರಬಹುದು. ಆದರೆ ಜೀವನದ ಪರೀಕ್ಷೆಯಲ್ಲಿ ಗೆದ್ದಿದ್ದಾನೆ. ಅಂದು ಮೂಗು ಮುರಿದ ಸಮಾಜ, ಸಂಬಂಧಿಕರು ಈಗ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. 'ನಿನ್ನಿಂದ ಇದು ಸಾಧ್ಯವಿಲ್ಲ' ಎಂದು ನುಡಿದವರೇ ಈಗ ಶಹಬ್ಬಾಸ್! ಎನ್ನುತ್ತಿದ್ದಾರೆ. ಇಂಜಿನಿಯರಿಂಗ್ ಮುಗಿಸದಿರುವುದನ್ನು ಕಡೆಗಣಿಸಿದವರು, ಬೊಟ್ಟು ಮಾಡಿ ತಮಾಷೆ ಮಾಡಿಕೊಂಡವರು, ಇಂದು ಅದೇ ಕೈಗಳಿಂದ ಚಪ್ಪಾಳೆ ಹೊಡೆಯುತ್ತಿದ್ದಾರೆ. ಗೌರವಿಸುತ್ತಿದ್ದಾರೆ. ಇದಲ್ಲವೇ ನಿಜವಾದ ಸಾಧನೆ!
ಬದುಕಿನ ಜಯಕ್ಕಾಗಿ ದಿಟ್ಟ ಹೆಜ್ಜೆಯಿಟ್ಟು, ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಅಂದು ಸಮಾಜಕ್ಕೆ ಹೆದರಿ, ವೈದ್ಯರ ಸಲಹೆಯನ್ನು ಸ್ವೀಕರಿಸದಿದ್ದರೆ, ಖಂಡಿತ ಜಯ್ ಈ ಸ್ಥಾನಕ್ಕೇರಲು ಸಾಧ್ಯವಾಗುತ್ತಿರಲಿಲ್ಲ ಎಂದು ಮನಸ್ಸಿನಲ್ಲೇ ಸಂತಸಪಟ್ಟರು ಆಕಾಶ್ ಮತ್ತು ಆಶಾ.
ಚಿತ್ರ: ವೈಷ್ಣವಿ ಕೆ |
👏🏻👏🏻👏🏻
ಪ್ರತ್ಯುತ್ತರಅಳಿಸಿ😊😊
ಅಳಿಸಿಚೆನ್ನಾಗಿದೆ
ಪ್ರತ್ಯುತ್ತರಅಳಿಸಿಧನ್ಯವಾದ🙏😊
ಅಳಿಸಿಸೂಪರ್, ಇದೇ ರೀತಿ ಹಲವಾರು ಮಕ್ಕಳು ತಮ್ಮ ಪ್ರತಿಭೆ ಯನ್ನು ಹೊರತರಲಾಗಿದೆ,ಚಿಗುರಲ್ಲೆಬಾಡಿದ ಗಿಡಗಳಂತೆ ಆಗಿದ್ದಾರೆ.
ಪ್ರತ್ಯುತ್ತರಅಳಿಸಿಹೌದು..
ಅಳಿಸಿಧನ್ಯವಾದ ನಿಮ್ಮ ಅಭಿಪ್ರಾಯಕ್ಕೆ...🙏
ತಾವು ರಚಿಸಿದ ಕಥೆಯು ತುಂಬಾ ಚೆನ್ನಾಗಿದೆ. ನೀವು ಒಳ್ಳೆಯ ಕಥೆಗಾರರಾಗಿದ್ದೀರಿ. ವಂದನೆಗಳು
ಪ್ರತ್ಯುತ್ತರಅಳಿಸಿದೊಡ್ಡ ಮಾತು 😇🙏... ಕಥಾ ಬರವಣಿಗೆಯಲ್ಲಿ ಅಂಬೆಗಾಲಿಡುತ್ತಿದ್ದೇನೆ ಅಷ್ಟೇ 😇.. ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ 🙏😇...
ಅಳಿಸಿ