ಊರೆಲ್ಲಾ ದೀಪಾವಳಿ- ಆದರೆ!
"ಓಹ್ ಭಟ್ರೇ, ದೀಪಾವಳಿ ಈ ಸಲ ಜೋರಾ?" ಗೋಪಾಲ ಭಟ್ಟರನ್ನ ಶೇಖರ ಕೂಗಿದ. "ಇಲ್ಲ ಮಾರಾಯ" ಎಂದು ಅವರು ಮುನ್ನಡೆದರು. ಅಲ್ಲೇ ಇದ್ದ ಶೇಖರನ ಅಪ್ಪ ರಾಮ "ನಿಂಗೇನು ಮಂಡೆಪೆಟ್ಟನಾ, ಅವ್ರ ಮನೇಲಿ ಇನ್ನೆಲ್ಲಿ ದೀಪಾವಳಿ! ಹೋದ ವರ್ಷ ಆಗಿದ್ದೆಲ್ಲಾ ನೆನಪಿದೆ ಅಲ್ವಾ" ಎಂದರು. "ಅಯ್ಯೋ, ಹೌದಲ್ಲ ಅಪ್ಪ. ಅವರಿಗೆ ಸುಮ್ಮನೆ ನೋವು ಮಾಡಿದ ಹಾಗಾಯ್ತು ನೆನಪಿಸಿ" ಎಂದ. ಸಂಜೆಯ ಹೊತ್ತಿಗೆ ರಾಮ ಗೋಪಾಲಯ್ಯರ ಮನೆಗೆ ಹೋದ. "ಹೋ! ಬಾ ರಾಮ. ಒಟ್ಟಿಗೆ ಚಹಾ ಕುಡಿಯುವ" ಎಂದರು ಗೋಪಾಲಯ್ಯ. " ಬೇಡ ಅಂದ್ರೆ ನೀವು ಬಿಡಬೇಕಲ್ಲ" ಎಂದ ರಾಮ. ಇಬ್ಬರೂ ಚಹಾ ಕುಡಿಯುತ್ತಾ ಲೋಕಾರೂಢಿಯ ಎಲ್ಲಾ ಮಾತುಗಳನ್ನೂ ಮುಗಿಸಿ ಕೊನೆಗೆ ಭಟ್ಟರು, "ಅವನಿದ್ದಿದ್ದರೆ ನಮಗೂ ದೀಪಾವಳಿ ಇರುತ್ತಿತ್ತು. ಈಗೆಲ್ಲಿಯ ದೀಪಾವಳಿ ಅವನೇ ಹೋದ ಮೇಲೆ. ಹಣೇಲಿ ಬರೆದಿರಬೇಕು ಪಡೆದದ್ದನ್ನು ಉಳಿಸಿಕೊಳ್ಳಲು" ಎಂದರು. "ಏನು ಮಾಡುವುದು. ದೇವ್ರಿಗೆ ರಂಗಯ್ಯ ಎಂದರೆ ಬಹಳ ಪ್ರೀತಿ ಇರಬೇಕು, ಈಗ ಮತ್ತೇಕೆ ಮನಸಿಗೆ ನೋವು ಮಾಡಿಕೊಳ್ತೀರ ಬಿಡಿ" ಎಂದ ರಾಮ. ಹಿಂದಿನ ವರ್ಷ, ಗೋಪಾಲ ಭಟ್ಟರ ಮನೆಯಲ್ಲಿ ದೀಪಾವಳಿ ಆಚರಿಸಲು ಸಿದ್ಧತೆ ಭರದಿಂದಲೇ ಸಾಗಿತ್ತು. ಅವರ ಒಬ್ಬನೇ ಮಗ ರಂಗನಾಥ ಪೌರೋಹಿತ್ಯ ವೃತ್ತಿಯಲ್ಲಿ ಇದ್ದರು. ಮದುವೆಯ ವಯಸ್ಸಿನ ಸುಂದರ ಯುವಕ. ದೀಪಾವಳಿಯ ದಿನವೂ ಬೆಳಿಗ್ಗೆ ರಂಗನಾಥ ಭಟ್ಟರು ಒಂದು ಮನೆಗೆ...