ಜೇನುಗೂಡಿನೊಳಹೊಕ್ಕು.....!



ಸಂಘಜೀವಿ ಎಂದೊಡನೆ ನೆನಪಾಗೋದು ಮನುಷ್ಯ. ಮಾನವನ ಹಾಗೆ ಕೆಲವು ಪ್ರಾಣಿ, ಪಕ್ಷಿ, ಕೀಟಗಳಲ್ಲೂ ಸಂಘಜೀವನವನ್ನು ನೋಡಬಹುದು. ನಾನೀಗ ಹೇಳ್ಬೇಕು ಅನ್ಕೊಂಡಿರೋದು ಜೇನುಹುಳಗಳ ಬಗ್ಗೆ!.. ನೀವು ನೋಡಿರೋ ಹಾಗೆ, ಜೇನುಹುಳುಗಳು ಗುಂಪಿನಲ್ಲಿ ವಾಸ ಮಾಡುತ್ತವೆ. ಅವುಗಳಲ್ಲಿ ಹಲವು ತಳಿಗಳು, ಜೀವಿವರ್ಗಗಳಿವೆ. ಒಂದು ಗೂಡಿನಲ್ಲಿ ೧೦೦೦-೬೦೦೦೦ ಜೇನುಹುಳುಗಳು ಇರಬಹುದು. ಅವುಗಳಲ್ಲಿ ೩ ರೀತಿಯ ಜಾತಿಗಳಿವೆ. ಅಯ್ಯೋ, ಇದೇನಪ್ಪಾ ಜೇನುಹುಳಗಳಲ್ಲೂ ಜಾತಿ ವ್ಯವಸ್ಥೆ ಅಂದುಕೊಂಡ್ರಾ?! ಹಹ್ಹ .. ಅವುಗಳ ಕೆಲಸದ ಆಧಾರದ ಮೇಲಿರುವ ವರ್ಣ ವ್ಯವಸ್ಥೆ ಅದು. ಅವುಗಳು ಯಾವುವೆಂದರೆ, ರಾಣಿ(ಕ್ವೀನ್), ಗಂಡುಜೇನು(ಡ್ರೋನ್ಸ್) ಮತ್ತು ಕೆಲಸಗಾರರು(ವರ್ಕರ್ಸ್). ಇವು ಪ್ರತಿ ಗೂಡಿನಲ್ಲೂ ಕಂಡುಬರುತ್ತವೆ.
ಅಪಾರ ಅಂಡಾಶಯಗಳನ್ನೊಳಗೊಂಡ ಒಂದು ರಾಣಿಜೇನು ಸಾಮಾನ್ಯವಾಗಿ ಒಂದು ಗೂಡಿನಲ್ಲಿರುತ್ತೆ. ಇದನ್ನು "ಜೇನು ವಸಾಹತಿನ ತಾಯಿ" ಎಂದೂ ಹೇಳುತ್ತಾರೆ. ಉತ್ತಮ ಫಲಪಾಕವನ್ನು ಸೇವಿಸುವ ಇದರ ಮುಖ್ಯ ಕೆಲಸ ಜೀವನಪೂರ್ತಿ ಮೊಟ್ಟೆಗಳನ್ನಿಡೋದು (ದಿನಕ್ಕೆ ಸುಮಾರು ೧೦೦೦-೨೦೦೦ ಮೊಟ್ಟೆಗಳು)! ಸಾಮಾನ್ಯವಾಗಿ ರಾಣಿಜೇನು ೧೫-೨೦ಮಿಮೀ ಉದ್ದವಾಗಿ, ಚಿಕ್ಕ ಕಾಲುಗಳನ್ನು, ರೆಕ್ಕೆಗಳನ್ನು ಹೊಂದಿರುತ್ತದೆ. ಕುಟುಕಲು ಇರುವ ಅಂಗ ಮೊಟ್ಟೆಯಿಡುವ ಅಂಗವಾಗಿ ಮಾರ್ಪಾಡಾಗಿರುತ್ತದೆ. ಮಧ್ಯದಲ್ಲಿ ಉಬ್ಬಿದ್ದು, ಕಿರಿದಾಗುತ್ತಾ ಹೋಗಿ, ಕೊನೆಯಲ್ಲಿ ಚೂಪಾದ ಹೊಟ್ಟೆಯನ್ನು ಹೊಂದಿರುವುದು ಇದರ ವಿಶೇಷತೆ. ಇದು ಯಾವಾಗ ಮೊಟ್ಟೆಯಿಡುವ ಸಾಮರ್ಥ್ಯ ಕಳೆದುಕೊಳ್ಳುವುದೋ ಅಥವಾ ಸಾಯುವುದೋ ಆಗ ಕೆಲಸಗಾರ ಜೇನು, ಹೊಸ ಲಾರ್ವಾದ ಮೂಲಕ ರಾಣಿಜೇನನ್ನು ಸೃಷ್ಟಿಸುತ್ತದೆ. ತನ್ನ ಕುಟುಂಬದ ಇತರ ಸದಸ್ಯರನ್ನು ನಿಯಂತ್ರಿಸಲು ಹಾಗೂ ಕೆಲಸಗಾರ ಜೇನುಹುಳಗಳ ಸಂತಾನೋತ್ಪತ್ತಿಯ ಅಂಗಗಳನ್ನು ನಿಗ್ರಹಿಸಲು ಫೆರೋಮೋನ್ ಎನ್ನುವ ರಾಸಾಯನಿಕವನ್ನು ರಾಣಿಜೇನು ಸ್ರವಿಸುತ್ತದೆ. ಗಂಡುಜೇನು/ಡ್ರೋನ್, ರಾಣಿಜೇನಿನ ಫಲಿತವಲ್ಲದ ಮೊಟ್ಟೆಯಿಂದ ಹೊರಬಂದರೆ, ಹೆಣ್ಣುಜೇನುಗಳು(ರಾಣಿ & ಕೆಲಸಗಾರ ಜೇನು) ಫಲಿತಗೊಂಡ ಮೊಟ್ಟೆಗಳಿಂದ ಹೊರಬರುತ್ತವೆ.

ಡ್ರೋನ್ಸ್/ಗಂಡುಜೇನುಗಳನ್ನು 'ಗೂಡಿನ ರಾಜ' ಎಂದು ಕರೆಯುತ್ತಾರೆ. ಮೊಟ್ಟೆಯಿಂದ ಪ್ರೌಢ ಗಂಡುಜೇನಿನ ಹಂತ ತಲುಪಲು ೨೪ ದಿನಗಳು ಬೇಕಾಗುತ್ತವೆ. ಇವುಗಳ ತಲೆಯು ರಾಣಿ ಮತ್ತು ಕೆಲಸಗಾರ ಜೇನುಗಳಿಗಿಂತ ದೊಡ್ಡದಾಗಿರುತ್ತದೆ. ಸಂಕೀರ್ಣ ಕಣ್ಣುಗಳನ್ನು ಹೊಂದಿದ್ದು ಅವು ತಲೆಯ ಮೇಲ್ಭಾಗದಲ್ಲಿ ಒಂದನ್ನೊಂದು ಸಂಧಿಸುತ್ತವೆ. ಕುಟುಕುವ ಅಂಗವಾಗಲೀ, ಮೇಣಗ್ರಂಥಿಯಾಗಲೀ, ಪರಾಗಬುಟ್ಟಿಯಾಗಲೀ ಇವುಗಳಿಗಿರುವುದಿಲ್ಲ. ಆಹಾರಕ್ಕಾಗಿ ಕೆಲಸಗಾರ ಜೇನನ್ನು ಅವಲಂಬಿಸಿರುತ್ತವೆ. ಗಂಡುಜೇನು ಕೆಲಸಗಳ್ಳರು ಅವುಗಳಿರುವ ಹೆಸರಿಗೆ ತಕ್ಕಂತೆ! ಗಂಡುಜೇನಿನ ಮುಖ್ಯ ಕೆಲಸ ಪ್ರಾಯಕ್ಕೆ ಬಂದ ರಾಣಿಜೇನಿನೊಂದಿಗೆ ಸಂಯೋಗ ಹೊಂದಿ ಫಲಿತಗೊಳ್ಳುವಂತೆ ಮಾಡುವುದು. ಇನ್ನು, ಗೂಡಿನಲ್ಲಿ ಆಹಾರದ ಕೊರತೆಯಾದರೆ, ಗಂಡುಜೇನುಗಳು ಹೊರಹಾಕಲ್ಪಡುತ್ತವೆ. ಮೊದಲೇ ಆಹಾರದ ಕೊರತೆ, ಅದರಲ್ಲೂ ಇವುಗಳು ಮೈಗಳ್ಳರು. ಉಳಿದ ಜೇನುಹುಳುಗಳು ಇನ್ನೇನು ತಾನೇ ಮಾಡಬಲ್ಲವು! ಸೋಮಾರಿಗಳಿಗೆ ಇದೇ ಅಲ್ವಾ ತಕ್ಕುದಾದ ಶಿಕ್ಷೆ..?! ಆದ್ರೂ, ಅವುಗಳ ಸ್ವರೂಪ, ಕಾರ್ಯವೇ ಹಾಗಿರುವಾಗ ಗಂಡುಜೇನುಗಳಾದರೂ ಏನು ಮಾಡುವುದು! ಅಲ್ವಾ...?

ಗೂಡೊಳಗಿನ, ಹೊರಗಿನ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುವವುಗಳೇ ಕೆಲಸಗಾರಜೇನುಗಳು. ಇವುಗಳಲ್ಲಿ ಬಾಲ್ಯಾವಸ್ಥೆಯ ಹುಳು, ಗೂಡು ನಿರ್ಮಿಸುವವುಗಳು, ರಿಪೇರಿ ಮಾಡುವವುಗಳು, ಸ್ವಚ್ಛ ಮಾಡುವವುಗಳು, ರಕ್ಷಕ ಜೇನುಹುಳಗಳು ಹೀಗೆ ಹಲವು ವಿಧ. ತುಂಬಾ ಚಿಕ್ಕದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗೂಡಿನಲ್ಲಿರುತ್ತವೆ. ಮೊಟ್ಟೆಯಿಂದ ಪ್ರೌಢ ಕೆಲಸಗಾರಜೇನಾಗಲು ೨೧ ದಿನಗಳು ಬೇಕಾಗುತ್ತವೆ. ಇವುಗಳು ಲೈಂಗಿಕವಾಗಿ ಬೆಳವಣಿಗೆಯಾಗಿರುವುದಿಲ್ಲ ಮತ್ತು ಸಾಮಾನ್ಯ ಪರಿಸ್ಥಿತಿಯಲ್ಲಿ ಮೊಟ್ಟೆಯಿಡುವುದಿಲ್ಲ. ಬಲಿಷ್ಠ ರೆಕ್ಕೆಗಳು, ಮೇಣವನ್ನು ಸ್ರವಿಸುವ ಮೇಣಗ್ರಂಥಿ, ಪರಿಮಳ ಸ್ರವಿಸುವ ಗ್ರಂಥಿ, ಪರಾಗ ಬುಟ್ಟಿಗಳನ್ನು ಹೊಂದಿರುವುದು ಇವುಗಳ ವಿಶೇಷತೆ. ಆನೆಯ ಸೊಂಡಿಲಿನಂತಹ ಉದ್ದನೆಯ ಮೂತಿ ಇವುಗಳಿಗಿರುತ್ತವೆ, ಮಕರಂದವನ್ನು ಹೀರುವ ಸಲುವಾಗಿ. ದಾಳಿಯಿಂದ ಗೂಡನ್ನು ರಕ್ಷಿಸುವುದಕ್ಕಾಗಿ ಶಕ್ತಿಯುತ ಕುಟುಕುವ ಅಂಗವೂ ಕೂಡ ಕೆಲಸಗಾರ ಜೇನುಗಳಿವೆ. ನೀವು ಜೇನುಗೂಡಿಗೆ ಕಲ್ಲು ಹೊಡೆದರೆ ನಿಮ್ಮನ್ನು ಕಚ್ಚಲೋಸುಗ ಅಟ್ಟಿಸಿಕೊಂಡು ಬರುವುದು ಇವುಗಳೇ! (ಎಲ್ಲಾದರೂ ಇಂತಹ ಕೆಲಸ ಮಾಡಿದರೆ, ಅವುಗಳನ್ನು ನೋಡುವುದರಲ್ಲೇ ಕಾಲ ಕಳೆದುಬಿಟ್ಟೀರಾ!! ಓಡುವುದನ್ನು ಮಾತ್ರ ಮರೆಯಬೇಡಿ... ಹ್ಹಹ್ಹ...)    ಹೆಣ್ಣಿನ ಶಕ್ತಿಯೆಂದರೆ ಇದೇ ಅಲ್ಲವೇ! ಈ ಕಾರ್ಯದಲ್ಲಿ ಸೈನಿಕನಂತೆ ತೋರಿದರೂ ಇವುಗಳು ಗೃಹಿಣಿಯಂತೆ! ಸಂಸಾರದ ತೇರು ಸಾಗುವಲ್ಲಿ ಇವುಗಳ ಕೊಡುಗೆಯೇ ಹೆಚ್ಚು! ಗೂಡಿನಲ್ಲಿರುವ ಪ್ರತಿ ಕೋಶವನ್ನು ಸ್ವಚ್ಛವಾಗಿಡುವುದು, ಹೊಳಪು ಮಾಡುವುದು, ರಾಣಿಜೇನಿನ ಆರೈಕೆ ಮಾಡುವುದು, ತನ್ನ ಕುಟುಂಬವನ್ನು ಪೋಷಿಸುವುದು, ಲಾರ್ವಾಗಳಿಗೆ ಆಹಾರ ನೀಡುವುದು, ಅವಶೇಷಗಳನ್ನು ತೆಗೆದು ಹಾಕುವುದು, ಜೇನುಮೇಣದ ಕೋಶವನ್ನು ಕಟ್ಟುವುದು, ಪ್ರವೇಶದ್ವಾರವನ್ನು ಕಾಯುವುದು, ಗೂಡಿನ ಹವಾ ನಿಯಂತ್ರಣ, ವಾತಾಯನ ವ್ಯವಸ್ಥೆಯನ್ನು ನೋಡಿಕೊಳ್ಳುವುದು ಪ್ರೌಢಜೇನುಗಳ ಆರಂಭಿಕ ಕೆಲವು ವಾರಗಳ ಕೆಲಸ. ನಂತರ ಅವು ಪರಾಗ, ಮಕರಂದ ಮತ್ತು ನೀರಿನ ಸಂಗ್ರಹಣಾಕಾರ್ಯದಲ್ಲಿ ತೊಡಗುತ್ತವೆ. 

ಕೆಲಸಗಾರ ಜೇನುಗಳ ಇನ್ನೊಂದು ವೈಶಿಷ್ಟ್ಯವೇ 'ಜೇನುಹುಳು ನೃತ್ಯ'. ಅರೇ..!! ಜೇನುಹುಳನೂ ಡಾನ್ಸ್ ಮಾಡುತ್ತಾ ಅಂತ ಆಶ್ಚರ್ಯ ಆಗಿರಬಹುದು. ಹೌದು, ಇದು ಜೇನುಗಳ ವಿಶೇಷವಾದ ಸಂವಹನ. ಎಲ್ಲಾ ಕೆಲಸಗಾರರು ಆಹಾರದ ಹುಡುಕಾಟಕ್ಕೆ ತೆರಳುವುದಿಲ್ಲ. ಅನ್ವೇಷಕ ಜೇನುಗಳು ಮಾತ್ರ ಆಹಾರ ಹುಡುಕಲು ಹೋಗುವುದು. ಇತರ ಕೆಲಸಗಾರ ಜೇನುಗಳಿಗೆ ಆಹಾರ ಸಿಕ್ಕಿದ ಮಾಹಿತಿ ದೊರೆತ ನಂತರವೇ ಅವುಗಳು ಅಲ್ಲಿಗೆ ತೆರಳುವುದು. ಈ ಮಾಹಿತಿಯನ್ನು ತಿಳಿಸುವುದು ಅನ್ವೇಷಕ ಜೇನುಗಳು. ಅದು ನೃತ್ಯದ ಮೂಲಕ! ಆಹಾರವಿರುವ ಯೋಗ್ಯ ಸ್ಥಳವನ್ನು ಅನ್ವೇಷಿಸಿ, ತಮ್ಮ ಗೂಡಿಗೆ ಮರಳಿ ನೃತ್ಯದ ಮೂಲಕ ಇತರ ಜೇನುಗಳಿಗೆ ತಿಳಿಸುತ್ತವೆ. ಇದರಲ್ಲಿ ೨ ರೀತಿಯ ನೃತ್ಯಗಳಿವೆ. ಒಂದು ಪ್ರದಕ್ಷಿಣಾ ನೃತ್ಯ/ರೌಂಡ್ ಡಾನ್ಸ್ , ಇನ್ನೊಂದು ಕುಡಗೋಲು ನೃತ್ಯ/ಸಿಕಲ್ ಡಾನ್ಸ್ /ಬಾಲ ಅಲ್ಲಾಡಿಸುವ ನೃತ್ಯ/ಟೇಲ್ ವ್ಯಾಗಿಂಗ್ ಡಾನ್ಸ್. ವೃತ್ತಾಕಾರದಲ್ಲಿ ಸುತ್ತುತ್ತಾ ನೃತ್ಯ ಮಾಡುವ ರೀತಿಯೇ ಪ್ರದಕ್ಷಿಣಾ ನೃತ್ಯ/ರೌಂಡ್ ಡಾನ್ಸ್. ನಾವು ಹೇಗೆ ಎಂಟು ಅಂಕೆಯನ್ನು (8) ಬರೀತೇವೋ ಹಾಗೆ ಅವು ನೃತ್ಯ ಮಾಡುವ ರೀತಿಗೆ ಟೇಲ್ ವ್ಯಾಗಿಂಗ್ ಡಾನ್ಸ್ ಎಂದು ಹೆಸರು. ಆಹಾರಮೂಲದ ಗುಣಮಟ್ಟ ಮತ್ತು ಪ್ರಮಾಣದ ಮೇಲೆ ನೃತ್ಯದ ಜೀವಂತಿಕೆ/ಉತ್ಸುಕತೆ ನಿರ್ಣಯವಾಗುತ್ತದೆ. ಜೇನುಗೂಡಿಗೆ ಆಹಾರದ ಮೂಲ ಹತ್ತಿರದಲ್ಲಿದ್ದರೆ ಅಂದರೆ ೨೫-೧೦೦ಮೀ. ಗೂಡಿನಿಂದ ದೂರದಲ್ಲಿದ್ದರೆ ಪ್ರದಕ್ಷಿಣಾ ನೃತ್ಯವನ್ನು ಪ್ರದರ್ಶಿಸುತ್ತವೆ. ಗೂಡಿನಿಂದ ತುಂಬಾ ದೂರದಲ್ಲಿ ಆಹಾರವಿದ್ದರೆ ಟೇಲ್ ವ್ಯಾಗಿಂಗ್ ಡಾನ್ಸ್ ಮಾಡುತ್ತವೆ. ರೌಂಡ್ ಡಾನ್ಸ್ ಆಹಾರದ ದಿಕ್ಕಿನ ಮಾಹಿತಿ ನೀಡುವುದಿಲ್ಲ. ಆದರೆ ಟೇಲ್ ವ್ಯಾಗಿಂಗ್ ಡಾನ್ಸ್, ಆಹಾರವಿರುವ ದಿಕ್ಕು, ಅಂತರ ಹಾಗೂ ಆಹಾರದ ಗುಣಮಟ್ಟವನ್ನು ತಿಳಿಸುತ್ತದೆ.

ಬೇಸಿಗೆಯ ಪೂರ್ವಭಾಗದಲ್ಲಿ, ಗೂಡಿನಲ್ಲಿ ಜೇನುದಟ್ಟಣೆಯನ್ನು ತಪ್ಪಿಸಲೋಸುಗ 'ಸ್ವಾರ್ಮಿಂಗ್' ಪ್ರಕ್ರಿಯೆ ನಡೆಯುತ್ತದೆ. ಅಂದರೆ ಎಲ್ಲಾ ಜೇನುಹುಳಗಳು ಹಳೆಯ ಗೂಡಿನಿಂದ ಹೊರಬಂದು, ಒಟ್ಟಾಗಿ ಹಾರುತ್ತಾ ಹೊಸಗೂಡನ್ನು ಕಟ್ಟಲು ಬೇಕಾದ ಯೋಗ್ಯ ಸ್ಥಳದ ಹುಡುಕಾಟದಲ್ಲಿರುವುದಾಗಿದೆ.
ಸಾಮಾನ್ಯವಾಗಿ ಗೂಡಿನಲ್ಲಿ ಇರುವ ಒಂದು ರಾಣಿಜೇನು, ಬೆಳವಣಿಗೆ ಹೊಂದಿ ಪ್ರಾಯಾವಸ್ಥೆಗೆ ಬಂದಾಗ ಗಂಡುಜೇನುಗಳು ಇದರೊಂದಿಗೆ ಮಿಲನ ಹೊಂದಲೆಂದು ಹಿಂಬಾಲಿಸಿ ಬರುತ್ತವೆ. ಆಗ ರಾಣಿಜೇನು ಅತ್ಯಂತ ಎತ್ತರಕ್ಕೆ ಹಾರುತ್ತದೆ. ಹಾರಲಾಗದ ಗಂಡುಜೇನುಹುಳಗಳು ಮಧ್ಯದಲ್ಲೇ ಸಾಯುತ್ತವೆ. ಅಷ್ಟು ಎತ್ತರಕ್ಕೆ ಹಾರುವ ಸಾಮರ್ಥ್ಯವುಳ್ಳ ಗಂಡುಜೇನು ರಾಣಿಜೇನಿನೊಂದಿಗೆ ಮಿಲನ ಹೊಂದುತ್ತವೆ. ಅದನ್ನೇ "ಗಾಳಿಯಲ್ಲಿ ಮಿಲನ/ವಿವಾಹ" (ನಪ್ಶಲ್ ಪ್ಲೈಟ್) ಎನ್ನುವುದು. ಮಿಲನ ಹೊಂದಿದ ನಂತರ ಗಂಡುಜೇನು ಕೂಡಲೇ ಸಾಯುತ್ತವೆ.


ಇನ್ನು, ಜೇನುಗೂಡಿನ ಬಗ್ಗೆ ಹೇಳುವುದಾದರೆ, ಅದು ಜೇನುಹುಳಗಳ ಮನೆ. ಕೆಲಸಗಾರಜೇನುಗಳಿಂದ ಸ್ರವಿಸಲ್ಪಟ್ಟ ಮೇಣದಿಂದ ಕಟ್ಟಲ್ಪಟ್ಟ ಷಡ್ಭುಜೀಯ ಕೋಶಗಳು ಗೂಡಿನಲ್ಲಿರುತ್ತವೆ. ಜೇನುಗೂಡುಗಳು ಕಟ್ಟಡಗಳಲ್ಲಿ, ಮರದ ಕೊಂಬೆಗಳಲ್ಲಿ, ಶಿಲೆ/ಬಂಡೆಗಳಲ್ಲಿ ಲಂಬವಾಗಿ ನೇತಾಡುವುದನ್ನು ನೋಡಿರಬಹುದು. ಅದರಲ್ಲಿರುವ ಕೋಶಗಳು ನಮಗೆ ಒಂದೇ ತೆರನಾಗಿ ಕಂಡರೂ ಅವುಗಳಲ್ಲಿ ಬೇಧಗಳಿವೆ. ಗೂಡಿನ ಅಂಚಿನಲ್ಲಿ, ಮೇಲ್ಭಾಗದಲ್ಲಿ ಸಂಗ್ರಹಣಾಕೋಶಗಳಿರುತ್ತದೆ. ಅದರಲ್ಲಿ ಜೇನು ಸಂಗ್ರಹವಾಗಿರುತ್ತದೆ. ಕೆಳಭಾಗದಲ್ಲಿ, ಮಧ್ಯದಲ್ಲಿ ಜೇನುಹುಳುವಿನ ಸಂಸಾರ ಕೋಶಗಳಿರುತ್ತವೆ. ಅದರಲ್ಲಿ ೩ ವಿಧಗಳು.

೧. ಕೆಲಸಗಾರಕೋಣೆಗಳು- ಇಲ್ಲಿ ಕೆಲಸಗಾರಜೇನುಗಳು ವಾಸಿಸುತ್ತವೆ. ಗೂಡಿನ ಬಹುಪಾಲು ಕೋಣೆಗಳು ಕೆಲಸಗಾರರ ಕೊಠಡಿಗಳೇ! ಅಡ್ಡಲಾಗಿ ಇವು ೫ ಮಿಮೀ.ಇರುತ್ತವೆ. ರಾಣಿಜೇನು ಫಲಿತ ಮೊಟ್ಟೆಗಳನ್ನು ಇಲ್ಲಿ ಇಡುತ್ತದೆ. ಅವು ಕೆಲಸಗಾರ ಜೇನುಗಳಾಗಿ ಬೆಳೆಯುತ್ತವೆ. 

೨. ಗಂಡುಜೇನಿನ ಕೋಣೆ/ಡ್ರೋನ್ ಛೇಂಬರ್- ಗಂಡುಜೇನುಗಳು ವಾಸಿಸುವ ಕೊಠಡಿಗಳಿವು. ಸಾಮಾನ್ಯವಾಗಿ ೨೦೦ ಕೋಣೆಗಳಿದ್ದು ರಾಣಿಜೇನಿನ ಕೋಣೆಗಿಂತ ಚಿಕ್ಕದಾಗಿರುತ್ತವೆ. ರಾಣಿಜೇನು ಫಲಿತವಾಗದ ಮೊಟ್ಟೆಗಳನ್ನು ಇಲ್ಲಿಡುತ್ತದೆ. ಅವು ಗಂಡುಜೇನುಗಳಾಗಿ ಪಾಲಿಸಲ್ಪಡುತ್ತವೆ.

೩. ರಾಣಿ ಕೊಠಡಿ- ಇಲ್ಲಿ ರಾಣಿಜೇನು ವಾಸಿಸುತ್ತದೆ. ಉಳಿದ ಕೋಣೆಗಳಿಗಿಂತ ರಾಣಿ ಕೊಠಡಿ ದೊಡ್ಡದಾಗಿದ್ದು , ಗೂಡಿನ ಅಂಚಿನಲ್ಲಿರುತ್ತದೆ. ಇಲ್ಲಿರುವ ಲಾರ್ವಾಗಳು ಉತ್ಕೃಷ್ಟ ಜೆಲ್ಲಿಯನ್ನು ಸೇವಿಸಿ, ರಾಣಿಜೇನಾಗಿ ಬೆಳೆಯುತ್ತವೆ.

ಜೇನುಹುಳುಗಳ ಕೊಡುಗೆಗಳೆಂದರೆ ಜೇನುತುಪ್ಪ ಹಾಗೂ ಜೇನುಮೇಣ. ಜೇನುತುಪ್ಪ, ಆಹಾರದ ವಲಯದಲ್ಲಷ್ಟೇ ಅಲ್ಲದೆ ವೈದ್ಯಕೀಯ ವಲಯದಲ್ಲೂ ಅತ್ಯಂತ ಉಪಯೋಗಕಾರಿ. ಸಸ್ಯಗಳಲ್ಲಿ ಪರಕೀಯ ಸ್ಪರಾಗಸ್ಪರ್ಶಕ್ಕೆ ಜೇನುಹುಳಗಳೂ ಕಾರಣವಾಗುತ್ತವೆ. ಜೇನುಸಾಕಾಣಿಕೆ/ಜೇನುಕೃಷಿಯೂ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದೆ.


ಎಲ್ಲೋ ಓದಿದ ನೆನಪು,
ಒಮ್ಮೆ ಒಂದು ಹಕ್ಕಿ ಜೇನುಹುಳುವಿನ ಬಳಿ ಕೇಳಿತಂತೆ, 'ನೀನು ನಿರಂತರ ಪರಿಶ್ರಮದಿಂದ ಜೇನನ್ನು ತಯಾರಿಸುವೆ. ಆದರೆ ಮಾನವ ಅದನ್ನು ಕದಿಯುತ್ತಾನೆ. ನಿನಗೆ ಬೇಸರವಾಗುವುದಿಲ್ಲವೇ?' ಎಂದು. ಆಗ ಜೇನುಹುಳು, 'ಎಂದಿಗೂ ಇಲ್ಲ... ಯಾಕಂದ್ರೆ, ಮನುಷ್ಯ ನನ್ನಿಂದ ತಯಾರಿಸಲ್ಪಟ್ಟ ಜೇನನ್ನಷ್ಟೇ ಕದಿಯಬಹುದು. ಜೇನು ತಯಾರಿಸುವ ಕಲೆಯನ್ನಲ್ಲ' ಎಂದು ಉತ್ತರಿಸಿತಂತೆ.
ಜೇನುಹುಳು ನಮ್ಮ ಬದುಕಿಗೂ ಸ್ಫೂರ್ತಿಯಲ್ಲವೇ...?!


ಇದು ಜೇನುಹುಳುವಿನ ಪ್ರಪಂಚ. ಇಲ್ಲಿ ಹೇಳಿದ್ದು ...........,,,,,

ಸೂಜಿ ಮೊನೆಯಷ್ಟು.!





ಕಾಮೆಂಟ್‌ಗಳು

  1. Wow.. really you opened to us the world of honey bees.. very informative and interesting. ಜೇನು ಗೂಡಿನ ಬಗ್ಗೆ ಇನ್ನು ಹೆಚ್ಚಾಗಿ ತಿಳಿದು ಕೊಳ್ಳಬೇಕೆಂಬ ಆಸೆ ಯಾಗುತ್ತಿದೆ.. Can you suggest any good book on honey bees ?

    ಪ್ರತ್ಯುತ್ತರಅಳಿಸಿ
  2. ನೀವೂ ಕೊಟ್ಟಂತಹ ಮಾಹಿತಿ ತುಂಬಾ ಚೆಂದ ಇದೆ ,ಅಲ್ಲದೆ ಅದಕ್ಕೆ ಕೊಟ್ಟಂತಹ ಶೀರ್ಷಿಕೆ ,ಮನ ಹೊಳಹೊಕ್ಕ ನೆನಪಾಗಿದೆ "ಜೇನು ಗೂಡ ಹೊ ಳ ಹೊಕ್ಕಿ " ತುಂಬಾ ಚೆಂದ ಇದೆ ನಿಮ್ಮ ಬರವಣಿಗೆಯ ಮೂಲಕ ಜನಮಾನಸದ ನೆನಪಲ್ಲಿ ಬರವಣಿಗೆಗಳು ಹಾಗೆ ಇನ್ನೂ ಉಳಿಯಲಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..