ಊರೆಲ್ಲಾ ದೀಪಾವಳಿ- ಆದರೆ!

 


"ಓಹ್ ಭಟ್ರೇ, ದೀಪಾವಳಿ ಈ ಸಲ ಜೋರಾ?" ಗೋಪಾಲ ಭಟ್ಟರನ್ನ ಶೇಖರ ಕೂಗಿದ. "ಇಲ್ಲ ಮಾರಾಯ" ಎಂದು ಅವರು ಮುನ್ನಡೆದರು. ಅಲ್ಲೇ ಇದ್ದ ಶೇಖರನ ಅಪ್ಪ ರಾಮ "ನಿಂಗೇನು ಮಂಡೆಪೆಟ್ಟನಾ, ಅವ್ರ ಮನೇಲಿ ಇನ್ನೆಲ್ಲಿ ದೀಪಾವಳಿ! ಹೋದ ವರ್ಷ ಆಗಿದ್ದೆಲ್ಲಾ ನೆನಪಿದೆ ಅಲ್ವಾ" ಎಂದರು. "ಅಯ್ಯೋ, ಹೌದಲ್ಲ ಅಪ್ಪ. ಅವರಿಗೆ ಸುಮ್ಮನೆ ನೋವು‌ ಮಾಡಿದ ಹಾಗಾಯ್ತು ನೆನಪಿಸಿ" ಎಂದ.

ಸಂಜೆಯ ಹೊತ್ತಿಗೆ ರಾಮ ಗೋಪಾಲಯ್ಯರ ಮನೆಗೆ ಹೋದ. "ಹೋ! ಬಾ ರಾಮ. ಒಟ್ಟಿಗೆ ಚಹಾ ಕುಡಿಯುವ" ಎಂದರು ಗೋಪಾಲಯ್ಯ. " ಬೇಡ ಅಂದ್ರೆ ನೀವು ಬಿಡಬೇಕಲ್ಲ" ಎಂದ ರಾಮ. ಇಬ್ಬರೂ ಚಹಾ ಕುಡಿಯುತ್ತಾ ಲೋಕಾರೂಢಿಯ ಎಲ್ಲಾ ಮಾತುಗಳನ್ನೂ ಮುಗಿಸಿ ಕೊನೆಗೆ ಭಟ್ಟರು, "ಅವನಿದ್ದಿದ್ದರೆ ನಮಗೂ ದೀಪಾವಳಿ ಇರುತ್ತಿತ್ತು. ಈಗೆಲ್ಲಿಯ ದೀಪಾವಳಿ ಅವನೇ ಹೋದ ಮೇಲೆ. ಹಣೇಲಿ ಬರೆದಿರಬೇಕು ಪಡೆದದ್ದನ್ನು ಉಳಿಸಿಕೊಳ್ಳಲು" ಎಂದರು. "ಏನು ಮಾಡುವುದು. ದೇವ್ರಿಗೆ ರಂಗಯ್ಯ ಎಂದರೆ ಬಹಳ ಪ್ರೀತಿ ಇರಬೇಕು, ಈಗ ಮತ್ತೇಕೆ ಮನಸಿಗೆ ನೋವು ಮಾಡಿಕೊಳ್ತೀರ ಬಿಡಿ" ಎಂದ ರಾಮ. 

ಹಿಂದಿನ ವರ್ಷ, ಗೋಪಾಲ ಭಟ್ಟರ ಮನೆಯಲ್ಲಿ ದೀಪಾವಳಿ ಆಚರಿಸಲು ಸಿದ್ಧತೆ ಭರದಿಂದಲೇ ಸಾಗಿತ್ತು. ಅವರ ಒಬ್ಬನೇ ಮಗ ರಂಗನಾಥ ಪೌರೋಹಿತ್ಯ ವೃತ್ತಿಯಲ್ಲಿ ಇದ್ದರು. ಮದುವೆಯ ವಯಸ್ಸಿನ ಸುಂದರ ಯುವಕ. ದೀಪಾವಳಿಯ ದಿನವೂ ಬೆಳಿಗ್ಗೆ ರಂಗನಾಥ ಭಟ್ಟರು ಒಂದು ಮನೆಗೆ ಪೂಜೆಗೆ ಹೋಗಿ ವಾಪಾಸ್ಸಾಗುವಾಗ ಒಂದು ಕಾರು ಅವರ ಗಾಡಿಗೆ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದರು. ಇನ್ನೇನು ಅವರು ಏಳಬೇಕು ಎನ್ನುವಾಗ ಹಿಂದಿನಿಂದ ಬಂದ ಲಾರಿ ಅವರ ದೇಹದ‌ ಮೇಲೆ ಚಲಿಸಿ ದೇಹ ಎರಡು ಹೋಳಾಯಿತು. ನೋಡ ನೋಡುತ್ತಿದ್ದಂತೆ ಇನ್ನೂ ಬದುಕಿನ ಹಲವು ಮಜಲುಗಳನ್ನು ನೋಡಬೇಕಿದ್ದ ರಂಗನಾಥ ಭಟ್ಟರ ಪ್ರಾಣಪಕ್ಷಿ ಹಾರಿಹೋಗಿತ್ತು. 

ದೀಪಾವಳಿಯ ಸಡಗರದಲ್ಲಿದ್ದ ಗೋಪಾಲ ಭಟ್ಟರ ಮನೆಯವರಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು. ಒಬ್ಬನೇ ಮಗ ಅದೂ ಅಕಾಲದಲ್ಲಿ‌ ಮರಣ ಹೊಂದಿದರೆ ಯಾರು ಸಹಿಸಿಯಾರು! ಪ್ರತಿಕ್ಷಣ ಆರಾಧಿಸುತ್ತಿದ್ದ ದೇವರ ಮೇಲೆ ನಂಬಿಕೆಯೇ ಹೋಗಿತ್ತು. ದೀಪಾವಳಿಯ ಬದಲು, ಮಗನ ಅಂತ್ಯಕ್ರಿಯೆ ಮಾಡುವ ಹಾಗಾಯಿತು. ಇನ್ನೆಲ್ಲಿ ಅವರ ಮನೆಯಲ್ಲಿ ದೀಪಾವಳಿ!

ಎಲ್ಲವನ್ನೂ ನೆನೆದು ಕಣ್ಣೀರಿಟ್ಟರು ಗೋಪಾಲ ಭಟ್ಟರು. ಅವರ ಆತ್ಮೀಯ ರಾಮ, ಅವರನ್ನು ಸಮಾಧಾನಪಡಿಸಿದ. ಎಲ್ಲರ ಬದುಕೂ ಒಂದೇ ಮಜಲಿನಲ್ಲಿರುವುದಿಲ್ಲ. ಒಬ್ಬರಿಗೆ ಸಡಗರವಾದರೆ ಇನ್ನೊಬ್ಬರಿಗೆ ನೋವು. ಗೋಪಾಲ ಭಟ್ಟರ ಬದುಕು ಹೀಗೆಯೇ ಆಯಿತು. ಆದರೆ, ನೋವು-ನಲಿವು ಎರಡೂ ಜೀವನದ ಭಾಗಗಳೇ ಅಲ್ಲವೇ! 

.

.









ಕಾಮೆಂಟ್‌ಗಳು

  1. ನೋವು ನಲಿವುಗಳ ಸಮರಸವೇ ಜೀವನ. ಅಂಧಕಾರ ಕಳೆದು ಬೆಳಕು ಮೂಡಲೆಂದು ಆಚರಿಸುವ ದೀಪಾವಳಿಯ ಉಲ್ಲೇಖ ಕಥೆಯಲ್ಲಿ ಸಮಂಜಸ ವಾಗಿದೆ

    ಪ್ರತ್ಯುತ್ತರಅಳಿಸಿ
  2. ವೈಷ್ಣವಿ ಯವರೆ ನಿಮ್ಮ ಚಿತ್ರ ಸುಂದರವಾಗಿ ಮೂಡಿಬಂದಿದೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..