ಸ್ವರ ಮಾಧುರ್ಯದ “ಚಂದ್ರಕಾಂತ ರಾವ್ ಮೂಡುಬೆಳ್ಳೆ”

 ಸ್ವರ ಮಾಧುರ್ಯದ “ಚಂದ್ರಕಾಂತ ರಾವ್ ಮೂಡುಬೆಳ್ಳೆ”

ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನದ ಸಾಂಪ್ರದಾಯಿಕ ಶೈಲಿಯನ್ನು ಉಳಿಸಿಕೊಂಡು, ನಿರಂತರ ಅಧ್ಯಯನದೊಡನೆ ಅಭ್ಯಸಿಸುವ, ಮಿತ-ಮೃದು ಭಾಷಿ, ಸೌಮ್ಯ ಸ್ವಭಾವದ, ನನ್ನ ನೆಚ್ಚಿನ, ಅತ್ಯಂತ ಶಿಸ್ತಿನ ಭಾಗವತರಲ್ಲಿ ಒಬ್ಬರು ಚಂದ್ರಕಾಂತ ರಾವ್ ಮೂಡುಬೆಳ್ಳೆ.

11/06ರಲ್ಲಿ ವೆಂಕಟರಮಣ ರಾವ್ ಮತ್ತು ಮೋಹಿನಿ ವಿ.ರಾವ್ ದಂಪತಿಗಳ ಮಗನಾಗಿ ಜನಿಸಿದರು. ಚಿಕ್ಕವಯಸ್ಸಿನಲ್ಲೇ ಮೂಡಿದ ಯಕ್ಷಗಾನದ ಮೇಲಿನ ಆಸಕ್ತಿಯು ಹಿರಿದಾಗಿ 10-11ನೇ ತರಗತಿಯಲ್ಲಿರುವಾಗ ಪಾತ್ರವನ್ನು ಪೋಷಿಸಿದರು. ಬಿ.ಕಾಂ. ಪದವಿಯೊಂದಿಗೆ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಭಾಗವತಿಕೆ ತರಬೇತಿ ಪಡೆದರು. ಸಂಗೀತದ ಮೇಲಿನ ಅತಿಯಾದ ಒಲವು ಹಾಗೂ ವಿದ್ವಾನ್ ಗಣಪತಿ ಭಟ್ ಮತ್ತು ಧಾರೇಶ್ವರರ ಭಾಗವತಿಕೆಯಿಂದ ಪ್ರೇರಣೆ ಹೊಂದಿ, ಗೋರ್ಪಾಡಿ ವಿಠಲ ಪಾಟೀಲ, ನೀಲಾವರ ಲಕ್ಷ್ಮೀನಾರಾಯಣಯ್ಯ, ದೇವದಾಸ್ ರಾವ್ ಕೂಡ್ಲಿ, ಸತೀಶ್ ಕೆದ್ಲಾಯ ಇವರೆಲ್ಲರಿಂದ ಪಳಗಿ ತಮ್ಮ ಊರಿನಲ್ಲಿ ಮೊದಲ ಭಾಗವತಿಕೆ ಮಾಡಿದರು. ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ, ತಮ್ಮ 37-38ನೇ ವಯಸ್ಸಿನಲ್ಲಿ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸುವ ಮೂಲಕ ತಮ್ಮ ಬದುಕಿನ ಹಾದಿಯನ್ನೇ ಬದಲಿಸಿದರು. ಇದು ಸಾಂಸಾರಿಕ ಜವಾಬ್ದಾರಿಗಳ ನೊಗವನ್ನು ಹೆಗಲಿಗೇರಿಸಿಕೊಂಡೇ, ತಮ್ಮಿಷ್ಟದ ಹವ್ಯಾಸವನ್ನು ನಂಬಿ ಇಟ್ಟ ದಿಟ್ಟ ಹೆಜ್ಜೆ.

ಹಟ್ಟಿಯಂಗಡಿ & ಜಲವಳ್ಳಿ ಮೇಳಗಳಲ್ಲಿ ಒಂದೊಂದು ವರ್ಷ, ಸಾಲಿಗ್ರಾಮ ಮೇಳದಲ್ಲಿ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು, 2023-24ರಿಂದ ಮೇಳದ ಪ್ರಧಾನ ಭಾಗವತರಾಗಿದ್ದು ಇವರ ಅರ್ಹತೆಗೆ ಸಂದ ಗೌರವ. ಸದಾ ಸಂಗೀತವನ್ನು ಕೇಳುವ , ಹಾಡುವ ಚಂದ್ರಕಾಂತರು , ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಲ್ಲೂ ಅಭ್ಯಾಗತ ಭಾಗವತರಾಗಿ ಹಾಡಿ ಶ್ಲಾಘನೆ ಪಡೆದುದಲ್ಲದೆ, ಮಂಗಳೂರು ಆಕಾಶವಾಣಿ ಕೇಂದ್ರದ 'ಎ' ಗ್ರೇಡ್ ಕಲಾವಿದರೂ ಹೌದು. 

ಕಾಲಮಿತಿ ಯಕ್ಷಗಾನವು ಕಾಲಕ್ಕನುಗುಣವಾಗಿ ಸರಿಯಿದೆ ಎನ್ನುವ ಅಭಿಪ್ರಾಯ ಹೊಂದಿರುವ ಇವರು, ಪೌರಾಣಿಕ & ಸಾಮಾಜಿಕ ಪ್ರಸಂಗಗಳೆರಡರಲ್ಲೂ ಭೇದ ತೋರದ ಕಲಾಪ್ರಿಯರು‌.

ಡಾ.ಎಚ್.ಶಾಂತಾರಾಮ ಪ್ರಶಸ್ತಿ, ಬೆಳ್ಕಳೆ ಸುಬ್ಬಣ್ಣಯ್ಯ ಸ್ಮಾರಕ ಪ್ರಶಸ್ತಿಯೊಂದಿಗೆ ಹಲವು ಸಂಘ-ಸಂಸ್ಥೆಗಳ ಗೌರವ, ಸನ್ಮಾನ, ಪುರಸ್ಕಾರಗಳೂ,’ಕುಶಲ ರಂಗ ನಿರ್ದೇಶಕ’ ಎಂಬ ಅಭಿದಾನವೂ ಇವರ ಮುಡಿಗೇರಿವೆ.

ತಂದೆ-ತಾಯಿ, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಪತ್ನಿ ದೀಪಿಕಾ ಸಿ.ರಾವ್, ಮಕ್ಕಳಾದ ಅನುಶ್ರೀ, ಸ್ಕಂದರೊಡನೆ ಸಂತೃಪ್ತ ಜೀವನ ನಡೆಸುತ್ತಿರುವ ಇವರನ್ನು ಯಕ್ಷಗಾನದ ಕಂಪು ಮತ್ತಷ್ಟು ಆವರಿಸಿ, ಇವರ ಸ್ವರದ ಇಂಪು ಎಲ್ಲೆಡೆ ಹಬ್ಬಲಿ. ಇವರಲ್ಲಿರುವ ಶ್ರದ್ಧೆ, ಶಿಸ್ತು, ಸರಳತೆ, ಸಾತ್ವಿಕತೆಯೇ ಇವರಿಗೆ ವರವಾಗಲಿ. ಇವರ ಪದ್ಯಗಳು ಭಾವದ ಮೆರುಗನ್ನು ಹೊತ್ತು, ರಾಗದ ರಂಜನೆ ನೀಡುತ್ತಾ, ಕೇಳುಗರ ಮನದಲ್ಲಿ ಸದಾ ಅನುರಣಿಸುತ್ತಿರಲಿ.


* ಯಾವ ರಾಗಗಳಲ್ಲೆಲ್ಲಾ ಹಾಡಿದ್ದೀರಿ? ಇಷ್ಟದ ರಾಗಗಳು ಯಾವುವು?

ಹಲವು ರಾಗಗಳಲ್ಲಿ ಹಾಡಿದ್ದೇನೆ. ಜಯಂತಶ್ರೀ, ಜಗತ್ ಸಮ್ಮೋಹಿನಿ, ಕೀರವಾಣಿ, ಕರ್ಣರಂಜಿನಿ, ರೀತಿಗೌಳ, ದೇಶ್, ಸೂರ್ಯರಾಗಗಳು ಇಷ್ಟವಾಗುತ್ತವೆ.



* ಯಕ್ಷಗಾನದ ಯಾವ ಪ್ರಸಂಗ ಇಷ್ಟ ಮತ್ತು ಯಾಕೆ?

ಭಾವನಾತ್ಮಕ ಪ್ರಸಂಗಗಳು ಇಷ್ಟ; ಅದರಲ್ಲೂ ಸತ್ಯವಾನ್ ಸಾವಿತ್ರಿ. ಆ ಪ್ರಸಂಗ ಮಾಡಿಸೋದು ಕಡಿಮೆ. ಆದರೆ, ಪ್ರಸಂಗದ ಹಲವು ಸನ್ನಿವೇಶಗಳಲ್ಲಿ, ಪದ್ಯಗಳನ್ನು ಹಾಡುವಾಗಲೇ ಭಾವುಕನಾಗಿದ್ದೂ ಉಂಟು.


* ರಾಗವನ್ನು ಆಯ್ಕೆ ಮಾಡುವಾಗ ಕಲಾವಿದ/ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಳ್ತೀರಾ?

ಕಲಾವಿದ/ಪ್ರೇಕ್ಷಕರಿಗಾಗಿ ರಾಗ ಅಂತಲ್ಲ. ಪ್ರಸಂಗದ ಪಾತ್ರ/ವೇಷಕ್ಕೆ ಸರಿಯಾಗಿ ರಾಗವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ.


* ಪೌರಾಣಿಕ ಪ್ರಸಂಗಗಳಿಗೆ ರಾಗ ನಿಶ್ಚಿತವಾಗಿರುತ್ತದೆ/ಹಿಂದಿನ ಭಾಗವತರಿಂದ ಪ್ರಸಿದ್ಧವಾಗಿರುತ್ತದೆ. ಅದನ್ನು ಬಿಟ್ಟು ಬೇರೆ ರಾಗದಲ್ಲಿ ಪ್ರಯತ್ನ ಮಾಡೋದು ಎಷ್ಟು ಕಷ್ಟ? ಮತ್ತು ಹೇಗೆ ಆಯ್ಕೆ ಮಾಡುತ್ತೀರಿ?

ರಾಗದ ಸಂಪೂರ್ಣ ಜ್ಞಾನ, ಬಳಕೆಯ ತಿಳಿವಿದ್ದರೆ ಪ್ರಯತ್ನಿಸೋದು ಕಷ್ಟ ಅಲ್ಲ. ರಾಗಗಳನ್ನು ಆಯ್ಕೆ ಮಾಡುವುದು ಸನ್ನಿವೇಶದ ಭಾವಕ್ಕೆ ತಕ್ಕಂತೆ; ಮೂಲಭಾವದ ಮೇಲೆ.


* ಯಕ್ಷಗಾನ ಪದ್ಯಗಳಲ್ಲಿ ಸಾಹಿತ್ಯದ ಜೊತೆಗೆ ಭಾವ ಮುಖ್ಯ. ಭಾಗವತರಾಗಿ ರಂಗಸ್ಥಳದ ಸನ್ನಿವೇಶಕ್ಕೆ ತಕ್ಕಂತೆ ರಾಗಗಳನ್ನು ಹೇಗೆ ಆರಿಸಿಕೊಳ್ಳುತ್ತೀರಿ ಮತ್ತು ಕ್ಷಣಾರ್ಧದಲ್ಲಿ ಬದಲಾವಣೆ ಹೇಗೆ ಮಾಡಿಕೊಳ್ಳುತ್ತೀರಿ?

ಕ್ಷಣಾರ್ಧದ ಬದಲಾವಣೆಗೆ ಹಾಗೂ ರಾಗದ ಆಯ್ಕೆಗೆ ನಿರಂತರ ಅಭ್ಯಾಸ, ರಂಗದಲ್ಲಿ ತಲ್ಲೀನತೆ, ರಾಗ/ತಾಳದ ಜ್ಞಾನ, ಕಥೆಯ ಭಾವದ ಅರಿವಿನಿಂದ ಸಾಧ್ಯವಾಗುತ್ತದೆ.


* ರಾಗಗಳ ಅಧ್ಯಯನಶೀಲರು ನೀವು. ಒಂದು ರಾಗವನ್ನು ಎಲ್ಲಾ ರೀತಿಯ ರಸಗಳಿಗೆ ಹಾಕಬಹುದಾ? ಅಥವಾ ರಾಗಗಳಿಗೂ ರಸಗಳಿಗೂ ಸಂಬಂಧ ಇದೆಯಾ?

ರಾಗಕ್ಕೂ ಧರ್ಮ-ಭಾವ ಇದೆ. ಉದಾಹರಣೆಗೆ, ಶಿವರಂಜಿನಿ ರಾಗವು ಭಕ್ತಿ-ಕರುಣ ರಸ ಪ್ರಧಾನ ರಾಗ. ಒಂದೇ ರಾಗವನ್ನು ಬೇರೆ ಬೇರೆ ರಸಗಳಿಗೆ ಹಾಡಿದ್ದಾರೆ. ಆದರೆ ಅದು ರಾಗಧರ್ಮದ ಪ್ರಕಾರ ಸರಿಯಲ್ಲ.


* ಚಂಡೆ – ಮದ್ದಳೆಗಾರರು ಭಾಗವತರ ೨ ಕಣ್ಣುಗಳಿದ್ದಂತೆ. ನಿಮ್ಮ ಮತ್ತು ಅವರ ನಡುವಿನ ರಂಗದ ಹೊಂದಾಣಿಕೆ ಹೇಗಿರಬೇಕು?

ಸರಿಯಾಗಿಯೇ ಇರಬೇಕು. ಭಾಗವತರಂತೆ ಚಂಡೆ – ಮದ್ದಳೆಗಾರರಿಗೆ ಪದ್ಯದ ಗುಣ, ಧರ್ಮ ಗೊತ್ತಿದ್ದರೆ ಮಾತ್ರ ಸಮನ್ವಯ ಸಾಧ್ಯವಾಗುತ್ತದೆ.


* ಹಿಂದೆ ಪ್ರೇಕ್ಷಕರು ಪದ್ಯದ ಸಾಹಿತ್ಯ ಮತ್ತು ರಾಗವನ್ನು ಗಮನಿಸುತ್ತಿದ್ದರು. ಆದರೆ ಈಗ ಮನರಂಜನೆ ಬಯಸುತ್ತಾರೆ. ನಿಮ್ಮ ಅಭಿಪ್ರಾಯ? ಮತ್ತು ಈ ಬದಲಾವಣೆಯ ನಡುವೆ ಕಲೆಯ ಘನತೆಯನ್ನು ಹೇಗೆ ಉಳಿಸಿಕೊಳ್ಳುತ್ತೀರಿ?

ಪ್ರೇಕ್ಷಕರು ಸಾಹಿತ್ಯ-ರಾಗಗಳ ಜ್ಞಾನವಿದ್ದು ಆಟಕ್ಕೆ ಬರಬೇಕೆಂದು ಬಯಸಲು ಆಗುವುದಿಲ್ಲ. ಆದರೆ, ಭಾಗವತರು ಹೆಚ್ಚಿನ ಅಭ್ಯಾಸ ಮಾಡಿ, ರಾಗ-ತಾಳ-ಲಯವನ್ನು ಗಟ್ಟಿಮಾಡಿಕೊಂಡರೆ ಪ್ರೇಕ್ಷಕರಿಗದು ಖಂಡಿತವಾಗಿ ಮುಟ್ಟುತ್ತದೆ, ಮನರಂಜನೆಯೂ ಆಗುತ್ತದೆ; ಕಲೆಯ ಘನತೆಯೂ ಉಳಿಯುತ್ತದೆ.


* ನೀವು ಮರೆಯಲಾಗದ/ಅತ್ಯಂತ ಸವಾಲಿನ ಕ್ಷಣ ಯಾವುದು ರಂಗದಲ್ಲಿ?

ನಿರೀಕ್ಷಿಸಲಾಗದ ಸವಾಲುಗಳು ಪ್ರತಿದಿನವೂ ಇರುತ್ತವೆ.


* ನಿಮ್ಮ ಭಾಗವತಿಕೆಯ ಜೀವನದಲ್ಲಿ, ಪ್ರೇಕ್ಷಕರನ್ನು ಅತೀ ಹೆಚ್ಚು ಭಾವುಕರನ್ನಾಗಿಸಿದ/ನೀವು ಹಾಡುವಾಗ ನೀವೇ ಮೈಮರೆತ ಯಾವುದಾದರೂ ವಿಶೇಷ ಘಟನೆಯನ್ನು ಹೇಳಿ.

ಸತ್ಯಹರಿಶ್ಚಂದ್ರ ಪ್ರಸಂಗದ ಪದ್ಯಗಳು; ಅದರಲ್ಲೂ, ಮನಸ್ಸಿಲ್ಲದ ಲೋಹಿತಾಶ್ವನನ್ನು ಕಟ್ಟಿಗೆ ತರುವಂತೆ ಕಾಡಿಗೆ ಕಳುಹಿಸುವ ಸನ್ನಿವೇಶದ ಪದ್ಯಗಳನ್ನು ಹಾಡುವಾಗಲೇ ಕಣ್ಣುಗಳು ಹನಿಗೂಡುತ್ತವೆ.


* ಪ್ರತಿದಿನದ ಭಾಗವತಿಕೆ ಹೇಗಾಯ್ತು ಅಂತ ಪ್ರೇಕ್ಷಕರ/ಸಹಕಲಾವಿದರ ಅಭಿಪ್ರಾಯದ ಮೇಲೆ ನಿರ್ಧರಿಸುತ್ತೀರಾ? ಅಥವಾ ನಿಮಗೇ ತೃಪ್ತಿ ಸಿಗುತ್ತದಾ?

ಆತ್ಮತೃಪ್ತಿ ಮುಖ್ಯ. ಹಾಗೆಯೇ ಪ್ರೇಕ್ಷಕರಿಂದಲೂ ತಿಳಿದುಕೊಳ್ಳುತ್ತೇನೆ. ಆದರೆ, ಅದಕ್ಕೆ ಮಾನದಂಡ ಚಪ್ಪಾಳೆಯಷ್ಟೇ ಅಲ್ಲ. ಪ್ರೇಕ್ಷಕ ನಿಜವಾಗಿಯೂ ಪ್ರಸಂಗದ ಒಳಹೊಕ್ಕು, ಸ್ತಬ್ಧವಾಗಿರುವಲ್ಲಿ ಸ್ತಬ್ಧವಾಗಿಯೇ ಇದ್ದರೆ, ಸನ್ನಿವೇಶ ಹಾಗೂ ಪದ್ಯಕ್ಕೆ ಸರಿಯಾಗಿ ಸಿಗುವ ಅಳು, ನಗು, ಮೌನವೂ ನಮಗೆ ಸಿಗುವ ಗೆಲುವು.


* ಯಕ್ಷಗಾನದಂತಹ ಸಾಂಪ್ರದಾಯಿಕ ಕಲೆಯನ್ನೇ ಆರಿಸಿಕೊಂಡಾಗ, ಸಾಮಾಜಿಕ/ಆರ್ಥಿಕ ಸವಾಲುಗಳು ನಿಮಗೆ ಎದುರಾಗಿವೆಯೇ?

ಹೌದು. ಸಾಮಾಜಿಕವಾಗಿಯಾದರೂ ಒಂದಷ್ಟು ಮಾತುಗಳನ್ನು ನಿರ್ಲಕ್ಷಿಸಬಹುದು. ಆದರೆ ಇಲ್ಲಿ ಆರ್ಥಿಕ ಸ್ಥಿರತೆ ಇಲ್ಲ. ಹಿಂದೆ ಮನರಂಜನೆಗೆ ಯಕ್ಷಗಾನವೇ ಪ್ರಮುಖವಾಗಿತ್ತು. ಆದರೆ ಈಗ ಬೇರೆ ಬೇರೆ ಮಾಧ್ಯಮಗಳಿವೆ. ಯಕ್ಷಗಾನ ಪ್ರೇಮಿಗಳು, ಪ್ರೇಕ್ಷಕರು, ಆರಾಧಕರು ಇದ್ದರೂ ಕೂಡ, ಇದನ್ನು ಮಾತ್ರವೇ ನಂಬಿಕೊಂಡರೆ ನಿಜಕ್ಕೂ ಸವಾಲು.


* ಸಾಮಾಜಿಕ ಪ್ರಸಂಗಗಳಲ್ಲಿ ಸಿನಿಮೀಯ ಪದ್ಯ/ರಾಗಗಳು ಹೆಚ್ಚುತ್ತಿವೆ. ಇದಕ್ಕೆ ಸಾಂಪ್ರದಾಯಿಕ ಪ್ರೇಕ್ಷಕರ ವಿರೋಧವೂ ಇದೆ. ಆ ವಿರೋಧಕ್ಕೆ ಮೊದಲ ಗುರಿ ಭಾಗವತರು. ಆದರೆ ನಿಜವಾಗಿ ಭಾಗವತರ ಪಾಲು ಎಷ್ಟು?

ಸಿನಿಮೀಯ ರಾಗ ಅಂತ ಇಲ್ಲ; ರಾಗಗಳು ಒಂದೇ, ಅದರ ಸಂಯೋಜನೆ ಬೇರೆ. ಆ ಪದ್ಯಗಳು ಹೆಚ್ಚಲು ಮುಖ್ಯ ಕಾರಣ ಕಥೆ. ಯಾಕೆಂದರೆ ಅಂತಹ ಸಂಯೋಜನೆಯ ಬೇಡಿಕೆ ಇಡುವುದು ಕಥೆಯೇ; ಹಾಗೆಯೇ ಒಂದಿಷ್ಟು ಹೇರಿಕೆಗಳು. ರಾಗಗಳ ಜ್ಞಾನವಿರುವ ಯಾವುದೇ ಭಾಗವತರು, ಅವರಾಗಿ ಸಿನಿಮಾ ಶೈಲಿಯಲ್ಲಿ ಹಾಡಲು ಇಚ್ಛಿಸುವುದಿಲ್ಲ. ಹಾಗಾಗಿ ಭಾಗವತರ ಪಾಲು ಬಿಂದುವಿನಷ್ಟೇ.


* ಸಾಲಿಗ್ರಾಮ ಮೇಳದ ಪ್ರಧಾನ ಭಾಗವತರಾಗಿ ನಿಮ್ಮ ಅಭಿಪ್ರಾಯವೇನು? ಪಾತ್ರಹಂಚಿಕೆಯ ಸವಾಲು ಮತ್ತು ರಂಗದ ನಿರ್ವಹಣೆಯ ಬಗ್ಗೆ ಹೇಳಿ

ಒಳ್ಳೆಯ ಅನುಭವಗಳನ್ನೇ ನೀಡಿದೆ. ಪಾತ್ರ ಮತ್ತು ವೇಷದ ಜ್ಞಾನ, ರಂಗದ ನಡೆಯ ಅರಿವು, ಹೇಳಿದ್ದನ್ನು ಅರ್ಥೈಸಿಕೊಳ್ಳುವ ಮನೋಭಾವ ಸಹಕಲಾವಿದರಲ್ಲಿ ಇದ್ದರೆ, ಪಾತ್ರಹಂಚಿಕೆ ಮತ್ತು ರಂಗದ ನಿರ್ವಹಣೆ ಸವಾಲಲ್ಲ.


* ಎಲ್ಲರಿಗೂ ತಿಳಿದಂತೆ ನೀವು ತುಂಬಾ ಶಿಸ್ತಿನ ಕಲಾವಿದರು. ಆದರೆ ಕಲೆಯಲ್ಲಿ’ಕಲೆ’ ಮಾಮೂಲು ಎಂಬ ಮಾತಿದೆ. ಇದಕ್ಕೆ ವಿರುದ್ಧ ಎಂಬಂತೆ ಶಿಸ್ತನ್ನು ನೀವು ಹೇಗೆ ಪಾಲಿಸುತ್ತೀರಿ?

ತಂದೆ-ತಾಯಿ ಕಲಿಸಿದ ಸಂಸ್ಕಾರ, ಬೆಳೆದು ಬಂದ ಸನ್ನಿವೇಶಗಳು ಮತ್ತು ಅವು ಕಲಿಸಿದ ಪಾಠಗಳು, ರೂಢಿಸಿಕೊಂಡ ಮೌಲ್ಯ, ಇವೆಲ್ಲವುಗಳ ಜೊತೆ ಅಚಲವಾದ ಮನಸ್ಥಿತಿ; ನಮ್ಮ ಸುಖದ ಹಿಂದೆ ಹೋಗದೆ, ಇತರರ ನಕಾರಾತ್ಮಕ ಪ್ರಭಾವಕ್ಕೆ, ಚಂಚಲತೆಗೆ ಒಳಗಾಗದೆ, ಸ್ಥಿರ ಮನಸ್ಸಿನಿಂದ ಇದ್ದರೆ ಶಿಸ್ತನ್ನು ಪಾಲಿಸುವುದು ಕಷ್ಟ ಅಲ್ಲ.



ಕಾಮೆಂಟ್‌ಗಳು