ಅವಳು
ಅವಳು,
ಅಲ್ಲೊಂದು ಮನೆಯ ಮಗುವಾಗಿ,
ಮಗಳಾಗಿ ನಗು ತುಂಬಿದವಳು!
ಬಾಲ್ಯದ ಆಟ-ಪಾಠಗಳ ಮಧ್ಯೆ
ಅಳುತ್ತಾ, ತನ್ನದೇ ರಕ್ತ ತನ್ನಿಂದ
ಹರಿಯುವುದ ನೋಡುತ್ತ ಕೂತವಳು!
ಆಗಾಗ ಅಂಜಿದವಳು, ಮತ್ತೊಮ್ಮೆ
ನಾಚುತ್ತ, ದೇಹದ-ಮನಸ್ಸಿನ
ಭಾವಗಳ ಬದಲಾವಣೆಗೆ ಒಗ್ಗಿದವಳು!
ಭುವಿಯಂತೆ ಜವಾಬ್ದಾರಿಗಳ ಭಾರಹೊತ್ತು,
ಅವಳಂತೆ ಸಹನಾಮೂರ್ತಿಯಾದವಳು!
ಲೋಕದ ಋಣಾತ್ಮಕ ವಿಷಯಗಳ ವಿಷದ
ನಡುವಲ್ಲಿ, ಅಮೃತದ ಮಡುವಾದವಳು!
ತನ್ನೆಡೆಗೆ ಬಿದ್ದ ಕಲ್ಲುಗಳ ಮೆಟ್ಟಿಲಾಗಿಸಿ,
ಸಿಕ್ಕ ಸ್ವಾತಂತ್ರ್ಯದ ಬಾಗಿಲಿಗೆ ಹೊಸ್ತಿಲಾದವಳು!
ಅಮ್ಮನಾಗಿ-ಅಜ್ಜಿಯಾಗಿ ಮನೆಯ ಕಟ್ಟಿದವಳು!
ನಗುವಿಗೆ ತನ್ನನೇ ತೆರೆದು, ಅಳುವ ಮರೆತವಳು!
ಅವಳು ಎಲ್ಲರಂತಲ್ಲ,
ಅದ್ಯಾರ ಒತ್ತಡಕ್ಕೂ ಮಣಿಯದ ಮುತ್ತವಳು!
ತನ್ನದೇ ಜಗದಲ್ಲೂ ಮೌಲ್ಯಗಳ ಹೊತ್ತವಳು!
ಏನನ್ನೂ ಬಯಸದೇ, ಎಲ್ಲವನ್ನೂ ನೀಡಿದವಳು!
ಅವಳು ಎಲ್ಲರಂತಲ್ಲ,
ಎಲ್ಲರೊಳಗೂ ಇದ್ದೂ, ಎಲ್ಲರಿಂದ ದೂರ ಉಳಿದವಳು!
👍🏻
ಪ್ರತ್ಯುತ್ತರಅಳಿಸಿ