ಅರೆರೆರೆ ಗಿಣಿರಾಮ!


 ಅರೆರೆರೆ ಗಿಣಿರಾಮ!

ಅರೆರೆರೆ ಗಿಣಿರಾಮ!... ಇದು ನಮ್ಮ ಮನೆಯ ಪೇರಳೆ ಮರದಲ್ಲಿನ ಕಾಯಿ, ಹಣ್ಣುಗಳನ್ನು ತಿನ್ನಲು ಗಿಳಿಗಳು ಬಂದಾಗಲೆಲ್ಲಾ ನಾನು ಗುನುಗೋ ಹಾಡು. ೩-೪ ಪ್ರಭೇದದ ಗಿಳಿಗಳು ಬರುತ್ತಾವಾದರೂ, ನನ್ನನ್ನು ಆಕರ್ಷಿಸಿದ್ದು ಚಿಟ್ಟು ಗಿಳಿ. ಇದನ್ನು ಚುಟ್ಟು ಗಿಳಿ,‌ ನೇತಾಡುವ ಗಿಳಿ ಎಂದೂ, ಆಂಗ್ಲ ಭಾಷೆಯಲ್ಲಿ ಲೋರಿಕೀಟ್, ವರ್ನಲ್ ಹ್ಯಾಂಗಿಂಗ್ ಪ್ಯಾರಟ್ ಎಂದೂ ಕರೆಯುತ್ತಾರೆ.

ಪ್ರತಿಬಾರಿ ಮಳೆಗಾಲದಲ್ಲಿ ತಪ್ಪದೇ ಹಾಜರಾಗುವ ಈ ಗಿಳಿಗಳು, ತಮ್ಮ ಬಣ್ಣ, ಗಾತ್ರ, ವರ್ತನೆಯಿಂದಲೇ ಮನಸೋಲಿಸಬಲ್ಲವು. ಹೆಚ್ಚೆಂದರೆ ೫-೬ ಇಂಚು ಉದ್ದ, ಚಿಕ್ಕ ಬಾಲ, ಸುಂದರ ಕಣ್ಣುಗಳು, ಹಸಿರು ಬಣ್ಣದ ದೇಹ, ಕಿತ್ತಳೆ ಬಣ್ಣದ ಕೊಕ್ಕು, ಕೆಂಬಣ್ಣದ ಹಿಂಭಾಗ ಇವು ಈ ಚಿಟ್ಟು ಗಿಳಿಯ ಸಾಮಾನ್ಯ ಲಕ್ಷಣಗಳು.

ಬಾವಲಿಯಂತೆ ತಲೆಕೆಳಗಾಗಿ ಮಲಗುವ, ಕೆಲವೊಮ್ಮೆ ತಲೆಕೆಳಗಾಗಿ ಕುಳಿತುಕೊಳ್ಳುವ ಹಾಗೂ ಆಹಾರ ಸೇವಿಸುವ ಕಾರಣದಿಂದಲೇ ಇವು ಇತರ ಗಿಳಿಗಳಿಗಿಂತ ಭಿನ್ನ ಮತ್ತು ನೇತಾಡುವ ಗಿಳಿ ಎಂದು ಕರೆಯಲ್ಪಡುವುದು.

ಚಿಟ್ಟು ಗಿಳಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಕಷ್ಟದ ಕೆಲಸವೇ.. ಕಾರಣ, ಇವುಗಳ ಚುರುಕಾದ ಹಾರಾಟ. ಎಲೆಹಸಿರ ಬಣ್ಣದವುಗಳೇ ಆಗಿರುವುದರಿಂದ, ಈ ಗಿಳಿಗಳನ್ನು ಎಲೆಗಳ ಮಧ್ಯೆ ಹುಡುಕುವುದೂ ಒಂತರಹದ ಸೋಜಿಗದಾಟ. ಸಣ್ಣಗೆ ಮಳೆ ಹನಿಯುತ್ತಿರುವಾಗ, ಇವುಗಳು ಕೊಂಬೆಯಿಂದ ಕೊಂಬೆಗೆ ಹಾರಿ, ಆಹಾರ ಹುಡುಕುವ ಬಗೆ, ಆಹಾರ ಸಿಕ್ಕಿದೊಡನೆ ಅತ್ತಿತ್ತ ನೋಡಿಕೊಂಡು ತಿನ್ನುವ ಪರಿ, ಮನಸ್ಸಿಗೆ ಮುದ ನೀಡುತ್ತದೆ. ಇವುಗಳು ಒಂದೆಡೆಯಿಂದ ಇನ್ನೊಂದೆಡೆಗೆ ನಡೆದಾಡುವುದೇ ಬಲು ಚೆಂದ..

ಗಿಳಿಗಳಿಗೂ ನಮಗೂ ಈ ನಂಟು ಬೆಸೆಯಲು ಕಾರಣವಾಗಿದ್ದು ನಮ್ಮ ಮನೆಯ ಪೇರಳೆ ಮರ. ಪೇರಳೆ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ! ನನ್ನ ಅಮ್ಮನಿಗೆ ಪಕ್ಷಿಗಳು ಹಣ್ಣು, ಕಾಯಿ ತಿಂದರೆ ಪರವಾಗಿಲ್ಲ, ಆದರೆ ಅದಕ್ಕಿಂತಲೂ ಹೆಚ್ಚು ಇಷ್ಟ ಹಣ್ಣುಗಳನ್ನು ಕೊಯ್ದು, ಬೇರೆಯವರಿಗೆ ಕೊಡುವುದು. ಅವರು ಯಾರಾದರೂ ಸರಿ! ಕೊಡುವುದು ಅವಳ ಖುಷಿಗಾಗಿ ಅಥವಾ ಯಾರೋ ಆಸೆಪಟ್ಟರೆಂದು! ಅಕ್ಕ ಹಾಗೂ ನಾನು ಇದನ್ನು ಸಹಿಸೆವು. ಈ ಪೇರಳೆ ಹಣ್ಣುಗಳು, ಕೃತಜ್ಞತೆಯೇ ಇಲ್ಲದ, ಕೆಲವು ಬಾರಿ ಮನೆಯ ಯಾರಲ್ಲಿಯೂ ಕೇಳದೆಯೇ ಕಳ್ಳರಂತೆ‌ ಕೊಯ್ದು ತಿನ್ನುವ ಮನುಷ್ಯರ ಪಾಲಾಗುವ ಬದಲು, ಈ ಗಿಳಿಗಳಂಥ ಮುಗ್ಧ ಜೀವಿಗಳ ಪಾಲಾಗಲಿ, ಹಣ್ಣು ಕಾಯಿಗಳ ಮೇಲೆ ನಮಗೆಷ್ಟು ಹಕ್ಕಿದೆಯೋ ಅವುಗಳಿಗೂ ಅಷ್ಟೇ ಇದೆ; ಅವುಗಳ ಪಾಲನ್ನು ಅವುಗಳೇ ತಿನ್ನಲಿ ಎನ್ನುವುದು ನಮ್ಮ ಆಶಯ. ಯೋಚಿಸಿದರೆ ಎರಡೂ ಸರಿಯೇ..! ಪ್ರತಿ ಮಳೆಗಾಲದಲ್ಲೂ ಗಿಳಿಗಳ ಸುತ್ತ ಈ ದ್ವಂದ್ವ ಆಗುತ್ತಲೇ ಇರುತ್ತವೆ. ಆದಾಗ್ಯೂ ಪ್ರತಿ ಬಾರಿ ಅವುಗಳು ಬಂದಾಗ ಮನಸ್ಸು ಅರಳುತ್ತದೆ... ಮತ್ತೆ ಅದೇ ಹಾಡು ನೆನಪಾಗಿ ಗುನುಗುತ್ತೇನೆ....‌ಅರೆರೆರೆ ಗಿಣಿರಾಮ..



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..