'ಯಕ್ಷಸುಂದರ' ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ

 'ಯಕ್ಷಸುಂದರ' ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ

ಗಂಡುಕಲೆಯೆಂದೇ ಖ್ಯಾತವಾಗಿರುವ ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನ. ಈ ಕ್ಷೇತ್ರದಲ್ಲಿ ಮಿಂಚಿ ಮರೆಯಾದ ತಾರೆಗಳೊಂದಿಗೆ, ಪ್ರಸ್ತುತ ರಂಗವನ್ನಾಳುತ್ತಿರುವ ದಿಗ್ಗಜರು ಹಲವರು. ಅವರಲ್ಲೊಬ್ಬರು ಬಡಗಿನ ಪ್ರಧಾನ ವೇಷಧಾರಿ, 'ಯಕ್ಷಸುಂದರ' ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ.

೧೪/೦೭/೧೯೮೫ರಲ್ಲಿ ಗಂಗಾಧರ ಶೆಟ್ಟಿಗಾರ್, ಸುಲೋಚನ ದಂಪತಿಗಳ ಮಗನಾಗಿ ಉಡುಪಿಯಲ್ಲಿ ಜನಿಸಿದ ಇವರು, ಬೆಳೆದಿದ್ದೆಲ್ಲಾ ಮಂದಾರ್ತಿಯಲ್ಲಿ. ತಂದೆ ವಿದೇಶದಲ್ಲಿದ್ದ ಕಾರಣ, ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ತಾಯಿಮನೆ ಮಂದಾರ್ತಿಗೆ ಆಗಮಿಸಿ, ಸೋದರಮಾವನ ಆಸರೆಯಲ್ಲಿ, ತಾಯಿ-ತಮ್ಮ-ತಂಗಿಯೊಂದಿಗೆ ಬಾಡಿಗೆಮನೆಯಲ್ಲಿ ವಾಸಿಸಿದರು. ಬಾಲ್ಯದಲ್ಲಿ, ಅತಿಯಾದ ಶಿಸ್ತಿನ ಮಾವನೆಂದರೆ ಭಯ. ಅವರೆದುರು ನಿಲ್ಲಲೂ ಹೆದರುತ್ತಿದ್ದುದಲ್ಲದೆ, ಎದುರಾದಾಗ ಸೀದಾ ಕೋಣೆಯೊಳಗೆ ಓಡಿ ಅಡಗಿಕೊಳ್ಳುತ್ತಿದ್ದರಂತೆ. ಮಂದಾರ್ತಿಗೆ ಬಂದ ಮೇಲೆ ಈ ಪುಟ್ಟ ಪ್ರಸನ್ನರನ್ನು ಆಕರ್ಷಿಸಿದ್ದು ಅಲ್ಲಿ ನಡೆಯುತ್ತಿದ್ದ ಮಂದಾರ್ತಿ ಮೇಳದ ಯಕ್ಷಗಾನ. ಪ್ರತೀ ದಿನ ತಪ್ಪದೇ ಆಟ ನೋಡಲು ಹೋಗುತ್ತಿದ್ದ ಇವರು, ಅಲ್ಲಿ ಕಣ್ಣಿಮನೆ ಗಣಪತಿ ಭಟ್ಟರಲ್ಲಿ ಹೇಳುತ್ತಿದುದೊಂದೇ, "ಮೇಳಕ್ಕೆ ಸೇರಿಸಿಕೊಳ್ಳಿ, ಹಣ ಕೊಡದಿದ್ದರೂ ಪರವಾಗಿಲ್ಲ" ಎಂದು. ಏಳನೇ ತರಗತಿಯಲ್ಲಿಯೇ ವೇಷ ಹಾಕಲು ಆರಂಭಿಸಿದ್ದ ಇವರಿಗೆ ಮೊದಲ ಗುರು ಮಕ್ಕಳ ಮೇಳ ತಂತ್ರಾಡಿಯ ಹಿರಿಯಣ್ಣ ಶೆಟ್ಟಿಗಾರ್.

ಪಿಯುಸಿಯಲ್ಲಿ ಜಾಸ್ತಿ ಅಂಕ ಬರಲೆಂದು ದೇವರಲ್ಲಿ ಪ್ರಾರ್ಥಿಸುವವರ ಮಧ್ಯೆ, ಅನುತ್ತೀರ್ಣನಾಗಬೇಕು ಎಂದು ಮೊರೆಯಿಟ್ಟವರು ಇವರು ಮಾತ್ರವೇ ಇರಬೇಕು. ಯಕ್ಷಗಾನದ ಹುಚ್ಚು ಅಷ್ಟು ಆವರಿಸಿಬಿಟ್ಟಿತ್ತು. ಇವರ ಬೇಡಿಕೆಗೆ ದೇವರೂ 'ಅಸ್ತು' ಎಂದುಬಿಟ್ಟಿದ್ದರು. ಎಣಿಸಿದಂತೆ ಇಂಗ್ಲಿಷ್ನಲ್ಲಿ ಅನುತ್ತೀರ್ಣರಾದರು. 'ಒಂದು ವರ್ಷ ವ್ಯರ್ಥವಾಗುವುದು ಬೇಡ, ಹೇಗೂ ಆಸಕ್ತಿ ಇದೆಯಲ್ಲಾ ಮೇಳಕ್ಕೆ ಹೋಗಲಿ' ಎಂಬ ಮಾವನ ಮಾತಿಗೆ ಸ್ವರ್ಗವೇ ಕಣ್ಣೆದುರು ಕುಣಿದಂತಾಗಿತ್ತು. ಹಲವರು ಮೇಳಕ್ಕೆ ಸೇರುವುದು ಬೇಡವೆಂದರೂ, ಯಾವುದಕ್ಕೂ ಕಿವಿಗೊಡದೆ, ಸೇರುವ ನಿರ್ಧಾರ ಮಾಡಿಯಾಗಿತ್ತು. ಪಿಯುಸಿಯಲ್ಲಿರುವಾಗಲೇ ೫೦ಕ್ಕೂ ಹೆಚ್ಚು ವೇಷ ಮಾಡಿದ್ದ ಇವರು, ೨೦೦೪ರಲ್ಲಿ ಮಂದಾರ್ತಿ ಮೇಳಕ್ಕೆ ಸೇರಿ, ಅಲ್ಲಿ ಒಡ್ಡೋಲಗದ ವೇಷದಿಂದ ತಮ್ಮ ಯಕ್ಷಪಯಣವನ್ನಾರಂಭಿಸಿದರು. ಆಗ, ೬ ತಿಂಗಳಿಗೆ ಇವರಿಗಿದ್ದ ಸಂಬಳ ೭೫೦೦ರೂ.!

ರಾತ್ರಿ ಮೇಳದಲ್ಲಿ ವೇಷ, ಹಗಲಿನಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯುತ್ತಾ, ಪಿಯುಸಿ ಮರುಪರೀಕ್ಷೆ ಕಟ್ಟಿ ತೇರ್ಗಡೆ ಹೊಂದಿದರು. ಮಂದಾರ್ತಿ ಮೇಳದಲ್ಲಿ ೫ ವರ್ಷ ವೇಷ ಮಾಡಿದ ಅನುಭವ ಹೊಂದಿದ್ದ ಇವರನ್ನು, ಒಂದು ಮಳೆಗಾಲದ ದಿನ ಸೂರಾಲು ರವಿ ಎನ್ನುವವರು ತಮ್ಮ ಯಾವುದೋ ಕೆಲಸದ ನಿಮಿತ್ತ ಕಿಶನ್ ಹೆಗ್ಡೆಯವರನ್ನು ಭೇಟಿ ಮಾಡಲು ಹೋಗುವಾಗ ಕರೆದರು. ಮೊದಲೇ ಬೈಕೆಂದರೆ ವಿಪರೀತ ಇಷ್ಟವಿದ್ದ ಕಾರಣ ಅವರೊಂದಿಗೆ ತೆರಳಿದರು. ಅಲ್ಲಿ ರವಿಯವರು, ಕಿಶನ್ ಹೆಗ್ಡೆಯವರಿಗೆ ಪ್ರಸನ್ನರ ಪರಿಚಯ ಮಾಡಿಸಿ, ನಿಮ್ಮ ಮೇಳಕ್ಕೆ ಸೇರಿಸಿಕೊಳ್ಳಿ ಎಂದಾಗ, ಈ ವಿಷಯವೇ ತಿಳಿಯದಿದ್ದ ಇವರಿಗೆ ಆಶ್ಚರ್ಯವಾಗಿತ್ತು. ಅದಾಗಲೇ ಮಂದಾರ್ತಿ ಮೇಳದಲ್ಲಿ ಆ ವರ್ಷದ ಒಪ್ಪಂದ ಆಗಿದ್ದರಿಂದ, ಮುಂದಿನ ವರ್ಷ ಸಾಲಿಗ್ರಾಮ ಮೇಳಕ್ಕೆ ಸೇರ್ಪಡೆಯಾಗಲು ಹೆಗ್ಡೆಯವರು ಸಮ್ಮತಿಸಿ, ಒಪ್ಪಂದವನ್ನೂ ಮಾಡಿಕೊಂಡರು. ಆ ೬ನೇ ವರ್ಷವೂ ಮಂದಾರ್ತಿ ಮೇಳದಲ್ಲಿ ವೇಷ ಮಾಡಿ, ನಂತರದ ೨ ವರ್ಷ ಸಾಲಿಗ್ರಾಮ ಮೇಳದಲ್ಲಿ, ಮತ್ತೆ ೧ ವರ್ಷ ಮಂದಾರ್ತಿ ಮೇಳದಲ್ಲಿದ್ದು, ಪುನಃ ಸಾಲಿಗ್ರಾಮ ಮೇಳಕ್ಕೆ ವಾಪಾಸಾದರು. ಅಂದಿನಿಂದ ಇಂದಿನವರೆಗೆ ಒಟ್ಟು ೧೫ವರ್ಷಗಳಿಂದ ಸಾಲಿಗ್ರಾಮ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಧಾನ ವೇಷಧಾರಿಗಳು ಗೈರಾದಾಗ, ಯಜಮಾನರ ಪ್ರೋತ್ಸಾಹದಿಂದ ಕಿರಿಯ ಪ್ರಾಯದಲ್ಲೇ ಪ್ರಧಾನ ವೇಷ ಮಾಡಿ, ಅದರಿಂದ ಜನಮನ್ನಣೆ ಗಳಿಸಿಕೊಂಡ ಹೆಗ್ಗಳಿಕೆ ಇವರದು. ಆರಂಭದಲ್ಲಿ ಸಾಲಿಗ್ರಾಮ ಮೇಳಕ್ಕೆ ಸೇರುವಾಗ ೬ನೇ ಸ್ಥಾನದಲ್ಲಿದ್ದ ಇವರು, ಹಲವು ದಿಗ್ಗಜ ಕಲಾವಿದರೊಂದಿಗೆ ರಂಗವನ್ನು ಹಂಚಿಕೊಂಡು, ೨೦೨೩-೨೪ರಿಂದ ಮೇಳದ ಪ್ರಧಾನ ವೇಷಧಾರಿಯಾಗಿದ್ದಾರೆ. ಯಜಮಾನರಾದ ಕಿಶನ್ ಹೆಗ್ಡೆಯವರ ನಿರಂತರ ಬೆಂಬಲ, ರಂಗದಲ್ಲೂ ಚೌಕಿಯಲ್ಲೂ ದೊರೆತ ಹಿಮ್ಮೇಳ-ಮುಮ್ಮೇಳ ಕಲಾವಿದರ ಉತ್ತೇಜನ, ಮೇಳದ ಹಿರಿಯ ಕಲಾವಿದರಾದ ಶಶಿಕಾಂತ್ ಶೆಟ್ಟಿ ಕಾರ್ಕಳ ಮತ್ತು ಈಶ್ವರ ನಾಯ್ಕ್ ಮಂಕಿಯಂತವರ ಮಾರ್ಗದರ್ಶನ, ತಮ್ಮ ಸಂದೇಹ ಪರಿಹರಿಸುವ ಪ್ರೊ.ಪವನ್ ಕಿರಣ್ಕೆರೆ ಮತ್ತು ಹಿರಿಯ ಕಲಾವಿದರ ಪ್ರೋತ್ಸಾಹ, ಅಭಿಮಾನಿಗಳಿಂದ ಸಿಕ್ಕ ಪ್ರೀತಿ, ಗುರುಹಿರಿಯರ ಹಾರೈಕೆ ಹಾಗೂ ಕುಟುಂಬದ ಸಂಪೂರ್ಣ ಸಹಕಾರ, ಮಿಗಿಲಾಗಿ ನಂಬಿದ ದೇವರ ಆಶೀರ್ವಾದವೇ ಕಿರಿಯ ವಯಸ್ಸಿನಲ್ಲಿ ಹಿರಿಯ ಪಟ್ಟ, ಜವಾಬ್ದಾರಿ ದೊರೆಯಲು ಕಾರಣ ಎನ್ನುತ್ತಾರೆ ಪ್ರಸನ್ನ ಶೆಟ್ಟಿಗಾರರು. ಯಾಜಿ, ಕೊಂಡದಕುಳಿ, ಕಣ್ಣಿಯವರಿಂದ ಪ್ರೇರಣೆ ಹೊಂದಿರುವ ಇವರು, ಈ ತನಕ ಬರಲು ಕಾರಣರಾದ ಹಲವರನ್ನು ಸ್ಮರಿಸಿಕೊಳ್ಳುತ್ತಾರೆ.

'ಯಕ್ಷಸುಂದರ' ಎಂಬ ಬಿರುದಿಗೆ ತಕ್ಕಂತೆ ಆಕರ್ಷಕ ನಿಲುವು, ಶಾರೀರತೆ, ವೇಷಕ್ಕೆ ತಕ್ಕ ಭೂಷಣ, ಅಭಿನಯದಲ್ಲಿ ಪ್ರಬುದ್ಧತೆ, ಸುಂದರ ಲಯಬದ್ಧ ಕುಣಿತ, ಪಾತ್ರೋಚಿತ ಮಾತು ಹೀಗೆ ಎಲ್ಲಾ ರೀತಿಯಲ್ಲೂ ಪೂರ್ಣರೆನಿಸಿಕೊಂಡು ಅಭಿಮಾನಿಗಳ ಮನದಲ್ಲಿ ಜಾಗವನ್ನು ದಕ್ಕಿಸಿಕೊಂಡವರು. ಪೌರಾಣಿಕ, ಸಾಮಾಜಿಕ ಎರಡೂ ವಿಧದ ಪ್ರಸಂಗಗಳಿಗೆ, ಅದಕ್ಕೆ ಅಗತ್ಯವಾದ ರೀತಿಯಲ್ಲಿ ಪಾತ್ರವನ್ನು ಕಟ್ಟಿಕೊಡುವ ಇವರ ಶೈಲಿ ಅದ್ಭುತ. ಸಾಲ್ವ, ದುಷ್ಟಬುದ್ಧಿ, ದುಶ್ಯಾಸನ, ಈಶ್ವರ, ಭೀಮ, ಕೃಷ್ಣ ಇವರ ಪ್ರಸಿದ್ಧ ಪೌರಾಣಿಕ ಪಾತ್ರಗಳು. ಹಿಮ್ಮೇಳದಲ್ಲಿ ಭಾಗವತರಾದ ಚಂದ್ರಕಾಂತ ರಾವ್ ಮೂಡುಬೆಳ್ಳೆಯವರು ಹಾಡುತ್ತಿದ್ದರೆ, ರಂಗದಲ್ಲಿ ಬಡಗಿನ ಖ್ಯಾತ ಸ್ತ್ರೀ ವೇಷಧಾರಿ ಶಶಿಕಾಂತ ಶೆಟ್ಟಿ ಕಾರ್ಕಳ ಹಾಗೂ ಪ್ರಸನ್ನರ ಜೋಡಿ ಮಾಡುವ ಮೋಡಿಯನ್ನು ಒಮ್ಮೆಯಾದರೂ ಸವಿಯಲೇಬೇಕು.

ವಯಸ್ಸಿಗೆ ಮೀರಿದ ಪಾತ್ರಗಳಾದ ಪಟ್ಟಾಭಿಷೇಕದ ದಶರಥ, ಪರ್ವದ ಭೀಷ್ಮ ಸವಾಲೆನಿಸುವ ಪಾತ್ರಗಳೆನ್ನುವ ಪ್ರಸನ್ನರು, ಅದನ್ನಿನ್ನೂ ಸುಂದರವಾಗಿ ಕಟ್ಟಿಕೊಡಬೇಕು ಎನ್ನುವಾಗ, ಅವರ ವಿನಮ್ರ ಭಾವ ವ್ಯಕ್ತವಾಗುತ್ತದೆ. ಎಲ್ಲಾ ರೀತಿಯ ವೇಷ ಮಾಡಿರುವ ಅನುಭವ ಹೊಂದಿರುವ ಇವರು, ಯಾವುದೇ ವೇಷ ಕೊಟ್ಟರೂ ಭೇದ ತೋರದೆ, ಅದಕ್ಕೆ ಜೀವ ತುಂಬುವುದರಲ್ಲಿ ನಿಸ್ಸೀಮರು. ೬ ತಿಂಗಳು ಮೇಳದ ತಿರುಗಾಟವಾದರೆ, ಉಳಿದ ೬ ತಿಂಗಳಿನಲ್ಲೂ ಬಿಡುವಿಲ್ಲದ ಕಲಾವಿದರು. ಬೇರೆ ಬೇರೆ ಜಿಲ್ಲೆ, ರಾಜ್ಯಗಳಲ್ಲದೆ, ವಿದೇಶಗಳಲ್ಲೂ ಯಕ್ಷಗಾನವನ್ನು ಮಾಡಿ ಜನ‌ಮನಗೆದ್ದವರು.

ಇವರಲ್ಲಿರುವ ಕಲಾನಿಷ್ಠೆಯಿಂದಲೇ "ವೈಶಂಪಾಯನ ತೀರ"ವೆಂಬ ಚಲನಚಿತ್ರದಲ್ಲಿ ಅಭಿನಯಿಸುವ ಅವಕಾಶ ದೊರೆಯಿತು‌. ಏಪ್ರಿಲ್ ೨೦೨೫ರಲ್ಲಿ ತೆರೆಕಂಡ "ವೀರ ಚಂದ್ರಹಾಸ"ವೆಂಬ ಯಕ್ಷಗಾನೀಯ ಚಿತ್ರದಲ್ಲಿ ದುಷ್ಟಬುದ್ಧಿ ಎನ್ನುವ ಖಳನಾಯಕರಾಗಿ ನಟಿಸಿದ್ದಾರೆ. ಇಡೀ ಚಲನಚಿತ್ರದಲ್ಲಿ ಇವರ ಅಭಿನಯವೇ ಜನರ ಮನ ಸೂರೆಗೊಂಡು, ಕನ್ನಡದ ಖಳನಟ 'ವಜ್ರಮುನಿ'ಯವರಿಗೆ ಹೋಲಿಸಿದ್ದು ಇವರ ಸಾಧನೆಯೇ ಸರಿ.

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಡಾ.ಶಾಂತಾರಾಮ್ ಪ್ರಶಸ್ತಿಯೊಂದಿಗೆ ಹಲವು ಪುರಸ್ಕಾರಗಳು, ಸಂಘ-ಸಂಸ್ಥೆಗಳ ಗೌರವ-ಸನ್ಮಾನಗಳು ಇವರ ಮುಡಿಗೇರಿವೆ. ಮೇ ೨೦೨೫ರಂದು ಮಂದಾರ್ತಿಯಲ್ಲಿ ನಡೆದ ಹುಟ್ಟೂರ ಸನ್ಮಾನದೊಂದಿಗೆ, "ಯಕ್ಷನಂದನ" ಎಂಬ ಬಿರುದು ಇವರ ಮುಕುಟಕ್ಕೆ ಸಿಕ್ಕ ಮತ್ತೊಂದು ಗರಿ. ಇದಕ್ಕಿಂತ ಮಿಗಿಲಾದ ಸಾರ್ಥಕತೆ ಇನ್ನೇನಿದೆ!

ಯುವ ಮನಸ್ಸುಗಳೂ ಕೂಡ ಯಕ್ಷಗಾನದತ್ತ ಒಲವು ಹರಿಸಲಿ. ಯಕ್ಷಗಾನವನ್ನು ಕಲಿಯುವುದೆಂದರೆ, ಕಲೆಯನ್ನು ದಕ್ಕಿಸಿಕೊಳ್ಳುವುದರೊಂದಿಗೆ, ದುಡಿಮೆಯ ದಾರಿಯೂ ಹೌದು. ಕಲಾವಿದರಿಗೆ ಪ್ರೋತ್ಸಾಹ ನೀಡಲು, ಸಹಾಯ ಮಾಡಲು ಪಟ್ಲರಂತಹ ಅನೇಕ ಗಣ್ಯವ್ಯಕ್ತಿಗಳು, ಸಂಘ ಸಂಸ್ಥೆಗಳಿವೆ. ಉಡುಪಿಯ ಕಲಾರಂಗ ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಿದೆ ಎನ್ನುತ್ತಾರಿವರು.

ಪ್ರಸನ್ನರ ತಂದೆ ತಾಯಿ, ಇಂದು ಮಗನ ಸಾಧನೆಯನ್ನು ಕಣ್ಣಾರೆ ಕಂಡು ಸಂತೃಪ್ತರಾಗಿದ್ದಾರೆ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಪತ್ನಿ ವೀಣಾ, ಮಗಳು ಧನಿಷ್ಕಾಳೊಂದಿಗೆ ಸಂತಸದ ಜೀವನ ನಡೆಸುತ್ತಿರುವ ಇವರು, ಯಕ್ಷಗಾನದಲ್ಲಿ ಇನ್ನಷ್ಟು ಮಿಂದು, ಬೆಂದು, ಪಾತ್ರಗಳೇ ತಾವಾಗಿ ಪ್ರೇಕ್ಷಕರನ್ನು ರಂಜಿಸಲಿ. ಕಲೆಯನ್ನೇ ಉಸಿರಾಗಿಸಿಕೊಂಡಿರುವ ಪ್ರಸನ್ನರ ಹೆಸರು ಮತ್ತಷ್ಟು ಪಸರಿಸಲಿ. ಇವರಲ್ಲಿರುವ ಶ್ರದ್ಧೆ, ಸೌಮ್ಯ ಸ್ವಭಾವವೇ ಇವರ ಶಕ್ತಿಯಾಗಲಿ. 'ಯಕ್ಷ'ಮಾತೆಯ ನೆಚ್ಚಿನ 'ನಂದನ'ರಾಗಿ ನೆಮ್ಮದಿಯಿಂದ ಬಾಳಲಿ, ಬೆಳಗಲಿ.




ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..