ಮಿಯಾಂವ್ ಕತೆ

ಈ ಮನುಷ್ಯ ಎಂಬ ಪ್ರಾಣಿ ಮಾಡುವ ಅನಾಹುತ ಒಂದೋ ಎರಡೋ! ನಾವು ಹುಲಿ, ಚಿರತೆಗಳಂತೆ ಮೊದಲು ಕಾಡು ಪ್ರಾಣಿಗಳೇ. ಈ ಮಾನವ ಅವನ ಖುಷಿಗಾಗಿ , ಅವನಿಗೆ ಆಗುವ ಇಲಿಗಳ ಕಾಟದಿಂದ ಮುಕ್ತನಾಗಲು ನಮ್ಮನ್ನು ಮನೆಯಲ್ಲಿ ಸಾಕಲು ಪ್ರಾರಂಭಿಸಿದ. ನಿಮಗೆ ಗೊತ್ತಿರಬೇಕಲ್ಲ, ಹುಲಿಗೆ ವಿದ್ಯೆ ಕಲಿಸಿದ್ದು ನಮ್ಮ ಪೂರ್ವಜರೇ! ಎಲ್ಲವೂ ಹಳೆಯ ಕಥೆ ಬಿಡಿ..
ನಿಮಗೆ ನಾ ಯಾರೆಂದು ಗೊತ್ತಾಗಿರಬೇಕಲ್ಲ, ಹೌದು ನಿಮ್ಮ ಯೋಚನೆ ಸರಿಯೇ! ನಾನು ಮಿಯಾಂವ್ ಅಂದ್ರೆ ಬೆಕ್ಕು. ನಾನು ನಮ್ಮಮ್ಮನಿಗೆ ಒಬ್ಬನೇ ಮುದ್ದಿನ ಮಗ.
ನಮ್ಮನ್ನು ಸಾಕಿದವರ ಅಲ್ಲ ಅಲ್ಲ, ನಮ್ಮ ಸೇವೆ ಮಾಡುವವರ ಮನೆಯಲ್ಲಿ ನನ್ನ ಹಾಗೆ ಇನ್ನೂ ಅನೇಕರಿದ್ದಾರೆ. ನನ್ನ ಅಮ್ಮ, ಅಜ್ಜಿ, ಚಿಕ್ಕಮ್ಮನ ಮಕ್ಕಳು, ಅಕ್ಕ ಹೀಗೆ.. ನಾನೇ ಕೊನೆಯವ, ಸ್ವಲ್ಪ ಮುದ್ದು ಜಾಸ್ತಿಯೇ. ನಮ್ಮನ್ನು ಸಾಕಿದವರು ಮೀನು-ಮಾಂಸ ತಿನ್ನುವವರಲ್ಲ. ಆದರೆ ನಮಗೆ ಅನ್ನ ಸೇರುವುದಿಲ್ಲ. ನಮಗಾಗಿ ಅದೆಲ್ಲಿಂದಲೋ ಒಣ ಆಹಾರ, ಬಿಸ್ಕೇಟ್ ಎಲ್ಲಾ ತರಿಸುತ್ತಾರೆ. ಅದನ್ನೆಲ್ಲ ತಿಂದು, ಹಾಲು ಕುಡಿದು ನನ್ನ ಕುಟುಂಬದವರು ಹಾಯಾಗಿ, ಖುಷಿಯಾಗಿ ಇರುತ್ತಾರೆ. ಆದರೆ ನಾನು ಹಾಗಲ್ಲ! ನನಗೆ ಪೂರ್ವಜರ ಬೇಟೆಯ ವಿಷಯ ಚೆನ್ನಾಗಿ ಗೊತ್ತು. ನಾನೂ ದೊಡ್ಡ ಬೇಟೆಗಾರನಾಗಬೇಕೆಂಬ ಆಸೆ ನನಗೆ! ಆ ಕಾಡಿನಲ್ಲಿರುವ ಹುಲಿ, ಚಿರತೆ, ಸಿಂಹಗಳನ್ನು ಮೀರಿಸುವ ಛಲ ನನಗೆ. ಆದರೆ ಈ ಮನುಷ್ಯರು..! ಎಲ್ಲಿ ಬಿಡುತ್ತಾರೆ., ಸ್ವಾರ್ಥಿಗಳವರು! ಅವರಿಗೆ ಮುದ್ದು ಮಾಡಲು ನಾವೂ ಬೇಕು! ಆಚೆ‌, ಸಾಕದ ಪ್ರಾಣಿ-ಪಕ್ಷಿಗಳೂ ಸ್ವಚ್ಛಂದವಾಗಿರಬೇಕು!!
ಎಷ್ಟೋ ಬಾರಿ ನಾ ಬೇಟೆ ಮಾಡಿ ಮನುಷ್ಯರಿಗೆ ತೋರಿಸಲು ಕೊಂಡುಹೋಗುವುದು. ಅದೇ ನಾ ಮಾಡುವ ತಪ್ಪೋ ಏನೋ! ಅವರು ನನ್ನ ಬೇಟೆ ಇನ್ನೂ ಬದುಕಿದೆ ಎಂದು ತಿಳಿದರೆ, ನನಗೆ ಚೆನ್ನಾಗಿ ಬಾರಿಸಿ ನನ್ನ ಬೇಟೆಯನ್ನು ನನ್ನಿಂದ ತಪ್ಪಿಸಿ ಬಿಡುತ್ತಾರೆ. ಬರೀ ಅಧಿಕಪ್ರಸಂಗ!
ಅವರಲ್ಲಿ ಒಬ್ಬರ ಮೇಲೆ ಸಿಟ್ಟು ಹೆಚ್ಚಾಗಲು ಇವತ್ತು ಒಂದು ಘಟನೆ ನಡೆಯಿತು. ನಾ ಎಂದಿನಂತೆ ಊಟ ಮುಗಿಸಿ ಬೇಟೆಗೆ ಹೊರಟಿದ್ದೆ. ಇದು ಗೊತ್ತಾಗಿದ್ದೇ ತಡ ಒಬ್ಬರು ನನ್ನ ಬಿಸ್ಕೇಟ್ ಡಬ್ಬಿ ಶಬ್ದ ಮಾಡಿದರು. ಎಷ್ಟೇ ತಿಂದರೂ ನನಗೆ ಬಿಸ್ಕೇಟ್ ಆಸೆ ಜಾಸ್ತಿ. ನಾನೂ ಮನೆ ಒಳಗೆ ಓಡಿದೆ. ಹೋದ ತಕ್ಷಣ ಬಾಗಿಲು ಹಾಕಿಬಿಟ್ಟರು. ಆಹಾರ ತಿಂದ ಮೇಲೆ, ಹೊರಹೋಗಲು ಬಾಗಿಲು ಹಾಕಿದೆ, ಹಾಗಾಗಿ ಕಿಟಕಿಯಲ್ಲಿ ಹೋಗುವ ಎಂದರೆ ಈ ಮನುಷ್ಯಳು ಅದಕ್ಕೂ ಬಿಡುತ್ತಿಲ್ಲ. ನಾನೂ ಅವರನ್ನು ಆಟ ಆಡಿಸುತ್ತಿದ್ದೆ. ಅದಕ್ಕೆ ನನಗೆ ಬುದ್ಧಿ ಕಲಿಸಲು, ನನ್ನ ಕುತ್ತಿಗೆಗೆ ಒಂದು ಪಟ್ಟಿ ಕಟ್ಟಿ ಅದನ್ನು ಮಂಚದ ಕಾಲಿಗೆ ಕಟ್ಟಿದಳು.
ನನಗೇನು ತಿಳಿದೀತು, ಆ ಪಟ್ಟಿಯ ಬಗ್ಗೆ. ನಾನು ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟರೆ ಅದು ಇನ್ನೂ ಬಿಗಿಯಾಗುವುದೇ! ಕೂಗಾಡಿದೆ, ಕಿರುಚಾಡಿದೆ, ಒದ್ದಾಡಲು ಪ್ರಯತ್ನ ಪಟ್ಟೆ. ನಾ ತಪ್ಪಿಸಿಕೊಳ್ಳುವ ಭರದಲ್ಲಿ ಪಟ್ಟಿ ನನ್ನ ಬಾಯಿ ಮತ್ತು ಕುತ್ತಿಗೆಯನ್ನು ಬಿಗಿಗೊಳಿಸಿತ್ತು. ಹೋಗಲಿ ಪಟ್ಟಿ ಕಟ್ಟಿದವರಾದರೂ ಬಿಡಿಸಬೇಕಲ್ಲ, ಅವರೇ ಬೆದರಿ ಕಿರುಚಾಡುತ್ತಿದ್ದಾರೆ. ಎಂಥ ಅವಸ್ಥೆ! ಮನುಷ್ಯ ಬುದ್ಧಿವಂತನಂತೆ! ಆ ಅವಸ್ಥೆಯಲ್ಲಿ ಕೋಪ, ನೋವೆಲ್ಲಿದ್ದರೂ ಈ ವಿಷಯ ನಗು ತರಿಸುವುದೇ!!
ಅವರಲ್ಲಿ ಒಬ್ಬರು ಏನೋ ಪ್ರಯತ್ನ ಪಡುತ್ತಿದ್ದರು. ನನಗೋ ಸಿಟ್ಟು! ಮಾಡುವುದೆಲ್ಲ ಮಾಡಿ, ಈಗ ಹೀಗೆ ಅಂತ.. ಭಯವೂ ಕೂಡ, ಪಟ್ಟಿ ಕಟ್ಟಿದವರು ನನಗೇ ಏನಾದರೂ ಮಾಡಿಬಿಟ್ಟರೆ ಅಂತ.. ನಮ್ಮನ್ನು ಸಾಕುತ್ತಾರೆ, ಸೇವೆ ಮಾಡುತ್ತಾರೆ, ಆದರೂ ಹೇಗೆ ನಂಬುವುದು ಮನುಷ್ಯರನ್ನು!
ಸಹಾಯಕ್ಕೆ ಬಂದವರಿಗೂ ನಾ ತಪ್ಪಿಸಿಕೊಳ್ಳುವ ಭರದಲ್ಲಿ ಪರಚಿದ್ದೆ. ಅಂತೂ ನನ್ನ ೯೦% ಶ್ರಮ, ಅವರ‌ ೧೦% ಪ್ರಯತ್ನದಿಂದ ನಾ ಬಚಾವಾದೆ. ಪಟ್ಟಿ ಸಡಿಲಗೊಂಡಿತು, ಅವರು ಕುತ್ತಿಗೆಯಿಂದ ಬಿಚ್ಚಿದರು. ಯಾವ ಜನ್ಮದ ಪುಣ್ಯವೋ.. ಹೇಳಿದ್ದೆನಲ್ಲ ಆಗಲೇ, ನಮ್ಮಮ್ಮನಿಗೆ ನಾ ಒಬ್ಬನೇ ಮಗ ಬೇರೆ.
ಅಂತೂ, ಈ ಮನುಷ್ಯರ ಮುದ್ದಿಗೋ, ಪೆದ್ದುತನಕ್ಕೋ ನಾ ಬಲಿಯಾಗುವವನಿದ್ದೆ, ಸ್ವಲ್ಪದರಲ್ಲಿ ಬಚಾವಾದೆ. ಬಾಯಿಯ ಹತ್ತಿರ ಗಾಯವಾಗಿದೆ, ನೋವಿದೆ, ಗುಣಪಡಿಸಿಕೊಳ್ಳಬೇಕಿನ್ನು! ಅದಕ್ಕೇ ಹೇಳಿದ್ದು, ಮನುಷ್ಯರು ಮಾಡುವ ಅನಾಹುತ ಒಂದೋ ಎರಡೋ ಎಂದು. ಪಟ್ಟಿ ಕಟ್ಟಿದವರಿಗೆ ಬೇರೆಯವರೆಲ್ಲ ಸರೀ ಮಂಗಳಾರತಿ ಮಾಡುತ್ತಿದ್ದಾರೆ. ನಾನು ಮತ್ತೆ ಬೇಟೆಗೆ ಮನೆಯಿಂದ ಹೊರಬಂದೆ.

ಕಾಮೆಂಟ್‌ಗಳು

  1. ಬೆಕ್ಕಿನ ಸ್ವಗತ ಚೆನ್ನಾಗಿದೆ, ನವಿರು ಹಾಸ್ಯದ ಶೈಲಿ ಸಲೀಸಾಗಿ ಓದಿಸಿಕೊಂಡು ಹೋಯ್ತು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..