ಲಕ್ಕಿ- ಮುದ್ದು ಬೆಕ್ಕು
ಲಕ್ಕಿ- ಮುದ್ದು ಬೆಕ್ಕು
ನಮ್ಮ ಮನೆಯಲ್ಲಿ ೫ ಬೆಕ್ಕುಗಳಿದ್ದವು. ಅದರಲ್ಲಿ ನಮ್ಮ ಚುಕ್ಕಿ ಹೊಟ್ಟೆ ಯಾವಾಗ ದೊಡ್ಡದಾಯ್ತೋ ಆಗಿಂದ, ಅವಳು ಹೋದಲ್ಲಿ, ಬಂದಲ್ಲಿ, ನಿಂತಲ್ಲಿ, ಕುಳಿತಲ್ಲಿ ನಾ ಹೇಳುತ್ತಿದ್ದದ್ದು ಒಂದೇ, "ಚುಕ್ಕಿ ಪ್ಲೀಸ್, ಒಂದೇ ಗಂಡು ಮರಿ ಹಾಕು" ಅಂತ. ಅದನ್ನು ಕೇಳಿ ಕೇಳಿ, ಅಸ್ತುದೇವತೆಗಳು ಅಸ್ತು ಅಂದಿದ್ದರೋ, ಅದೇನು ಕಾಕತಾಳೀಯವೋ, ನಮ್ಮ ಚುಕ್ಕಿ ಏಕೈಕ ಸುಪುತ್ರನನ್ನು ಹಡೆದಿದ್ದಳು. ಹುಟ್ಟಿದ ದಿನಾಂಕವೂ ವಿಶೇಷವಾಗಿಯೇ ಇತ್ತು. ಏಂಜೆಲ್ ನಂಬರ್ ಅಂತೀವಲ್ಲ, ಅದರಂತೆ ೪-೪-೨೦೨೪!! ಒಂದೇ ಮಗ ಹುಟ್ಟಿದ್ದಕ್ಕೋ, ಈ ಏಂಜೆಲ್ ನಂಬರ್ ಕಾರಣಕ್ಕೋ , ಹುಡುಕಿ ಹುಡುಕಿ ಕೊನೆಗೆ "ಲಕ್ಕಿ" ಅಂತ ಹೆಸರಿಟ್ವಿ. ಅವನು ಪ್ರೀತಿ ಎಂಬ 'ಲಕ್'ಅನ್ನೇ ಹೊತ್ತು ತಂದಿದ್ದ.
ನಮ್ಮ ಮನೆಯಲ್ಲಿ ನಾನು, ಅಕ್ಕ, ಅಮ್ಮ ಬೆಕ್ಕನ್ನು ಮನುಷ್ಯರ ಹಾಗೆ ಪಾಲಿಸಿದರೆ, ಅಪ್ಪ ಮಾತ್ರ ಬೆಕ್ಕನ್ನು ಬೆಕ್ಕಿನ ಹಾಗೇ ನೋಡುವವರು. ಮಾತುಕಥೆ ಏನಿದ್ದರೂ ಎಲ್ಲಾ ದೂರದಲ್ಲೇ! ಬೆಕ್ಕು ಮೈಮೇಲೆ ಕುಳಿತುಕೊಳ್ಳುವುದು/ಮಲಗುವುದು ಇದೆಲ್ಲಾ ಅವರಿಗೆ ಆಗದು. ಆದ್ದರಿಂದ ನಮ್ಮಲ್ಲಿರುವ ಬೆಕ್ಕುಗಳೂ ಅವರ ಬಳಿ ಹೋಗುವುದು ಕಡಿಮೆ. ಆದರೆ ಈ ಲಕ್ಕಿ, ಚಿಕ್ಕ ಮರಿಯಾಗಿದ್ದಾಗಲೇ ಅವರ ಮೈಮೇಲೆ ಹೋಗಿ ಕುಳಿತು ಇತಿಹಾಸವನ್ನೇ ಸೃಷ್ಟಿಸಿದ್ದ! ಅವನು ಮಾತ್ರ ನಮ್ಮ ಬಳಿ ಹೇಗೋ ಅಪ್ಪನ ಬಳಿಯೂ ಹಾಗೇ ವರ್ತಿಸುವುದು. ಅವನಿಗೆ ಆಹಾರ ಬೇಕೆಂದೊಡನೆ ಮನೆಯ ಯಜಮಾನನಾದರೂ ಅಪ್ಪ ಕೊಡಲೇಬೇಕು. ಅವರು ಕೊಡದೇ ಇದ್ದರೆ, ಅವರ ಹಿಂದೆ ಸುತ್ತಿ ಸುತ್ತಿ, ಕಾಲಿಗೆ ಒಂದಿಷ್ಟು ಗುದ್ದಿ, ಕೊನೆಗೂ ಅವರಿಂದಲೇ ಹಾಕಿಸಿಕೊಳ್ಳುತ್ತಿದ್ದ. ಅವನನ್ನೂ ಸೇರಿ ಇದ್ದ ೬ ಬೆಕ್ಕುಗಳಲ್ಲಿ , ಈ ಸಲುಗೆ-ಧೈರ್ಯ ಇದ್ದಿದ್ದು ಅವನಿಗೆ ಮಾತ್ರ! ಬೆಕ್ಕೆಂದರೆ ದೂರವೇ ಇದ್ದ ಅಪ್ಪನನ್ನೂ ತನ್ನದೇ ಕೀಟಲೆಗಳಿಂದ ಮೋಡಿ ಮಾಡಿಬಿಟ್ಟಿದ್ದ. ನಾವೆಲ್ಲರೂ ಲಕ್ಕಿ ಎಂದು ಕರೆಯುತ್ತಿದ್ದರೆ, ಅವರ ಪಾಲಿಗವನು 'ಪೋಕರಿಪುಟ್ಟ'ನಾದ.
ಅವನ ಕೀಟಲೆಗಳು ಒಂದೆರಡಲ್ಲ. ಪೆನ್ ಟಾಪನ್ನೋ, ದಾರದುಂಡೆಯನ್ನೋ ಕಚ್ಚಿಕೊಂಡು ಹೋಗಿ ಯಾವುದೋ ಮೂಲೆಯಲ್ಲಿ ಹಾಕುವುದು. ನೂಲಿನ ಎಳೆ ಸಿಕ್ಕಿದರಂತೂ ಮುಗಿದೇ ಹೋಯ್ತು, ಟಿಪಾಯಿಯ ೪ ಕಾಲಿಗೂ, ಉಂಡೆಯಿಂದ ದಾರ ಮುಗಿಯುವ ತನಕ ಸುತ್ತಿಯಿಡುವುದು, ಪೇಪರ್ ಸ್ಟ್ಯಾಂಡ್ ಅಲ್ಲಿಟ್ಟ ಪೇಪರ್ಗಳನ್ನು ಹಾಲ್ ತುಂಬಾ ಚೆಲ್ಲಾಪಿಲ್ಲಿಯಾಗಿ ಮಾಡುವುದು, ಹಕ್ಕಿಗೆ ಗುರಿಯಿಡುವುದು, ಯಾರಾದರೂ ಓಡಿಸಲು ಹೋದರೆ ಒಳಗೆ ಬಂದು ಸಿಕ್ಕಿದ್ದನ್ನು ಬೀಳಿಸುವುದು, ಸುಮ್ಮನೆ ಕುಳಿತ ಅವನ ಅಕ್ಕಂದಿರಿಗೋ, ಅಣ್ಣನಿಗೋ ಹೊಡೆಯುವುದು, ಲ್ಯಾಪ್ ಟಾಪ್ ಓಪನ್ ಮಾಡಿ ಇಟ್ಟರೆ, ಕೀ ಬೋರ್ಡ್ ಮೇಲೆ ಮಲಗಿ, ಒಂದಿಷ್ಟು ಅಕ್ಷರಗಳನ್ನು ಟೈಪ್ ಮಾಡಿ ಇಡುವುದು.. ಹೀಗೆ ಹೇಳುತ್ತಾ ಹೋದರೆ ಮುಗಿಯದ ಕಥನ...
"ನಮ್ಮ ಮನೆಗೆ ಯಾರಾದರೂ ಬಂದರೆ, ಇವರು ಮನೆಯೇ ಕ್ಲೀನ್ ಮಾಡುವುದಿಲ್ಲವೇನೋ ಎಂಬಂತೆ ಮಾಡಿಬಿಟ್ಟಿದ್ದೀಯಲ್ಲ" ಎಂದು ಬೈದೇ ಅವನ ಈ ಅವ್ಯವಸ್ಥೆಗಳನ್ನು ವ್ಯವಸ್ಥಿತವಾಗಿಡುತ್ತಿದ್ದದ್ದು. ಈ ಮಹಾನ್ ತುಂಟ, ಏನೋ ತಪ್ಪು ಮಾಡಿದನೆಂದು ಹೊಡೆಯಲು ಹೋದರೆ ಅಲ್ಲೇ ಮಲಗಿ ಬಿಡುವುದು. ಯಾರಿಗೆ ಹೊಡೆಯಲು ಮನಸ್ಸು ಬರುತ್ತದೆ?! ಒಂದು ವೇಳೆ ಹೊಡೆದರೂ/ಬೈದರೂ, ಮತ್ತೆ ಬಂದು ಅವರ ಕಾಲಿನ ಬಳಿಯೇ ಸುಳಿಯುವಾಗ, ಹೇಗೆ ತಾನೇ ಕೋಪವಿರಲು ಸಾಧ್ಯ! ಆದ್ದರಿಂದಲೇ ಅವನು, ಪೋಕರಿಪುಟ್ಟನಾದರೂ ಎಲ್ಲರಿಗೂ ಮುದ್ದು!!
ನಮ್ಮ ಮನೆಯಲ್ಲಿರುವ ನಾಲ್ವರೂ, ಅವರವರು ಎದ್ದ ಬಳಿಕ ಅವನಿಗೆ ಆಹಾರ ಕೊಡಲೇಬೇಕು. ಕೊಡದಿದ್ದರೆ, ಕಾಲಿನ ಬಳಿಯೇ ಸುಳಿದಾಡುತ್ತ, ಹಲ್ಲುಜ್ಜಿ ಬರುವವರೆಗೂ ಬಾಗಿಲ ಬಳಿಯೇ ಕೂಗುತ್ತಾ, ಕಾದು ನಿಂತಿರುತ್ತಾನೆ, ಈ ಪೋರ. ಬೆಳಿಗ್ಗೆ ಡೈರಿಯಿಂದ ಹಾಲು ತರುವುದನ್ನೇ ಕಾಯುವ ಲಕ್ಕಿ, ಎಲ್ಲಿದ್ದರೂ ಅಪ್ಪನ ಹಿಂದೆಯೇ ಅಡುಗೆಮನೆಗೆ ಬರುತ್ತಾನೆ. ಕೆಲವೊಮ್ಮೆ ತರಲು ತಡವಾದರಂತೂ ಅವನದ್ದು ರಂಪವೋ ರಂಪ. ಕುಡಿಯುವುದು ೨-೩ ಚಮಚವಾದರೂ, ಬೆಳಿಗ್ಗೆಯ ಫ್ರೆಶ್ ಹಾಲು ಅವನಿಗೆ ಬೇಕೇ! ಹಾಲಿನ ಕೆನೆಯೆಂದರೆ ಎಲ್ಲಿಲ್ಲದ ಪ್ರೀತಿ. ಬಿಸಿ ಹಾಲು ತಣ್ಣಗಾದ ಮೇಲೇ ಕುಡಿಯುವ ನಾನು, ಅಕ್ಕ, ಹಾಲಿನಲ್ಲಿ ಮೂಡಿದ ಕೆನೆಯನ್ನು ಅವನಿಗೇ ಮೀಸಲಿಡುತ್ತೇವೆ. ಎಂಥಹಾ ನಿದ್ದೆಯಲ್ಲಿದ್ದರೂ ಎದ್ದು, ಚಪ್ಪರಿಸಿ ತಿನ್ನುತ್ತಾನೆ.
ನಮ್ಮ ಲಕ್ಕಿ ಒಳ್ಳೆಯ ಬೇಟೆಗಾರ. ಅವನಿಟ್ಟ ಗುರಿ ತಪ್ಪಿದ್ದೇ ಇಲ್ಲ. ತಪ್ಪಿತೆಂದರೆ, ನಾವ್ಯಾರೋ ಅವನ ಹಿಂದೆ ಕೋಲು ಹಿಡಿದು ನಿಂತಿದ್ದೇವೆಂದೇ ಅರ್ಥ! ಹಕ್ಕಿಗಳಿಗೆ ಅವನು ಗುರಿಯಿಡುವಾಗ, ನಾವು ನೋಡಿದೆವೆಂದು ಗೊತ್ತಾದ ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡುವ ಮಹಾನ್ ಕಿಲಾಡಿ! ನಮ್ಮಲ್ಲಿರುವ ಬೇರೆ ಬೆಕ್ಕುಗಳು ನಾಯಿಯನ್ನು ಕಂಡೊಡನೆ ಹೆದರಿದರೆ, ಅವನು ನಾಯಿಗೇ ಹೊಡೆದು, ಅದು ಓಡುವ ಹಾಗೆ ಮಾಡುವ ದಿಟ್ಟ!
ನಾನು ಕುಂಭಕರ್ಣನ ವಂಶಸ್ಥಳಾದ್ದರಿಂದ ನನ್ನನ್ನು ಬೆಳಿಗ್ಗೆ ಎಬ್ಬಿಸಲು ಅಮ್ಮನೋ/ಅಕ್ಕನೋ ಲಕ್ಕಿಯನ್ನು ಬಿಡುತ್ತಿದ್ದರು. ಅವನೋ ನನ್ನ ಕಿವಿಯ ಮೇಲೆ ಅವನ ಬಾಯಿಯಿಟ್ಟು ಗಟ್ಟಿ ಕಿರುಚಿ ಎಬ್ಬಿಸಲಾರಂಭಿಸುತ್ತಾನೆ. ಎಚ್ಚರವಾಗಿಯೂ ನಿದ್ದೆ ಬಂದಂತೆ ನಟಿಸುತ್ತಿದ್ದರಂತೂ ಮುಖಕ್ಕೆ, ಕೈಗೆ ಹೊಡೆದು, ಮೈಮೇಲೆ ಹತ್ತಿ ಹಾರಿ, ನಾ ಏಳುವವರೆಗೆ ಅಲ್ಲಿಂದ ಕದಲಲಾರ. ನನ್ನನ್ನು ಈ ರೀತಿ ಎಬ್ಬಿಸುವ ಧೈರ್ಯವಿದ್ದದ್ದು ಅವನೊಬ್ಬನಿಗೇ!! ಅವನ ಕಾಟ ತಾಳಲಾರದೇ ಎದ್ದಾಗ, "ನಿನ್ನನ್ನು ಎಬ್ಬಿಸಲು ಲಕ್ಕಿನೇ ಸರಿ" ಎಂದು ಅಮ್ಮ ಹೇಳುತ್ತಿದ್ದಳು. ಆದರೆ ಕೆಲವೊಮ್ಮೆ ಅವನಿಗೆ ನನ್ನ ಮೇಲೆ ಕರುಣೆಯೋ, ಸ್ವಾರ್ಥವೋ, ಎಬ್ಬಿಸಲೆಂದು ಬಂದವ ನನ್ನೊಡನೆಯೇ ಮಲಗಿ, ನಾ ಏಳುತ್ತೇನೆಂದರೂ ಕೈ ಹಿಡಿದು, ಏಳಬೇಡ ಎನ್ನುವಾಗ, "ಎಬ್ಬಿಸು ಅಂತ ಕಳಿಸಿದ್ರೆ, ನೀನೇ ಮಲಗಿ, ಏಳ್ಬೇಡ ಅಂತ ಹೇಳ್ತೀಯಾ" ಅಂತ ಅಮ್ಮನ ಬಳಿ ಅವನು ಹೇಳಿಸಿಕೊಳ್ಳುತ್ತಿದ್ದ.
ರಾತ್ರಿ ಮಲಗಲು ಕೆಲವೊಮ್ಮೆ ನಮ್ಮ ಬಳಿ ಬರುತ್ತಿದ್ದ. ಅಕ್ಕ ನಾನು ಒಟ್ಟಿಗೆ ಮಲಗಿದರೂ, ಲಕ್ಕಿ ಹೆಚ್ಚಿನ ಬಾರಿ ನನ್ನ ಬಳಿ ಇರುತ್ತಿದ್ದ. ಎಲ್ಲಾದರೂ ಅಕ್ಕನ ಬಳಿ ಮಲಗಿದ ದಿನ, "ಲಕ್ಕಿ, ನನ್ನ ಜೊತೆ ಬರ್ಲಿಲ್ಲ ಅಲ್ವಾ ಇವತ್ತು" ಎಂದು ಒಮ್ಮೆ ಕರೆದರೂ ಸಾಕು, ಅವನಿಗೆ ಅದೆಷ್ಟು ಅರ್ಥವಾಗುತ್ತದೋ ಗೊತ್ತಿಲ್ಲ, ಇಬ್ಬರಿಗೂ ಬೇಸರ ಆಗಬಾರದೆಂದು, ಸ್ವಲ್ಪ ಹೊತ್ತು ನನ್ನೊಡನೆ, ಸ್ವಲ್ಪ ಹೊತ್ತು ಅವಳೊಡನೆ ಮಲಗಲಾರಂಭಿಸುತ್ತಾನೆ. ನಮಗೇ ಪಾಪವೆನಿಸಿ, 'ಯಾರ ಜೊತೆಯಾದರೂ ಮಲಗು ಮಹಾರಾಯ' ಎನ್ನುತ್ತಿದ್ದೆವು. ಅಂತಹ ಮುದ್ದು ಅವನು!
ಇಂತಹ ಪೋರನಿಗೆ ಏನಾಯಿತೋ ಗೊತ್ತಿಲ್ಲ. ಹುಷಾರು ತಪ್ಪಿದ, ತಿನ್ನುವುದು-ಕುಡಿಯುವುದನ್ನೇ ನಿಲ್ಲಿಸಿಬಿಟ್ಟ. ನಾವೂ ೧-೨ದಿನ, ಅವನಿಗೆ ಅತ್ಯಾಪ್ತಳಾಗಿದ್ದ ಅವನಕ್ಕ ಸತ್ತುಹೋಗಿದ್ದಕ್ಕೆ ಬೇಸರದಲ್ಲಿರಬಹುದೆಂದು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಅವನು ಮಂಕಾದ ಅನ್ನಿಸಿತೋ, ಆಹಾರ-ಔಷಧಿ ಎಲ್ಲವನ್ನೂ ಕೊಟ್ಟೆವು, ತಿನ್ನಿಸಿದೆವು, ಕುಡಿಸಿದೆವು. ಆದರೆ ಅವನು ಮಾತ್ರ ಹುಷಾರಾಗಲೇ ಇಲ್ಲ. ಒತ್ತಾಯದಿಂದ ಕುಡಿಸಿದರೂ, ಹೊಟ್ಟೆಗೆ ಹೋಗಿದ್ದನ್ನೆಲ್ಲ ಹೊರಹಾಕಲಾರಂಭಿಸಿದ. ನಮ್ಮಿಂದಾಗಬಹುದಾದ ಎಲ್ಲಾ ಪ್ರಯತ್ನಗಳನ್ನೂ ಮಾಡಿದೆವು. ಸಾಯುವ ಸ್ಥಿತಿಯಲ್ಲಿಯೂ "ಲಕ್ಕಿ" ಎಂದೊಡನೆ ಬಾಲ ತಿರುಗಿಸುತ್ತಿದ್ದ ಅವನಿನ್ನೂ ಕಾಡುತ್ತಲೇ ಇದ್ದಾನೆ. ನಾನು ಅತ್ಯಂತ ಪ್ರೀತಿಸುವ ಕೃಷ್ಣನಲ್ಲೂ ಮನವಿಯಿಟ್ಟಿದ್ದೆ. ಬಹುಶಃ ಕೃಷ್ಣನಿಗೂ ಲಕ್ಕಿ ಇಷ್ಟವಾಗಿದ್ದನೇನೋ, ಕರೆಸಿಕೊಂಡುಬಿಟ್ಟ. ಮನೆಯಲ್ಲಿ ಎಲ್ಲರನ್ನೂ ಪ್ರೀತಿಯಿಂದಲೇ ಮೋಡಿ ಮಾಡಿದ್ದ ಲಕ್ಕಿ ಪ್ರತಿಕ್ಷಣವೂ ನೆನಪಾಗುತ್ತಾನೆ. ಅವನಿಲ್ಲದೆ ಮನೆ-ಮನದ ಪ್ರತಿ ಮೂಲೆಯೂ ಖಾಲಿ ಖಾಲಿ. ಅವನು ಇದ್ದಷ್ಟು ದಿನ ಕೊಟ್ಟಿದ್ದು ಪ್ರೀತಿ.....ಪ್ರೀತಿಯನ್ನಷ್ಟೇ....
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ಧನ್ಯವಾದಗಳು😊🙏..