ಬುಲ್ ಬುಲ್ ಮಾತಾಡಕಿಲ್ವಾ...?

ಬುಲ್ ಬುಲ್ ಮಾತಾಡಕಿಲ್ವಾ...?


ಬುಲ್ ಬುಲ್ ಮಾತಾಡಕಿಲ್ವಾ...? ನಮ್ಮ ಮನೆಗೆ ಬರುವ ಬುಲ್ ಬುಲ್ಗಳು ಮಾತನಾಡುತ್ತವೆಂದರೆ ನೀವು ನಂಬಲೇಬೇಕು. ಬೆಳಗಾದೊಡನೆ ಬಂದು ಆಹಾರಕ್ಕಾಗಿ ಚಿಲಿಪಿಲಿಗುಟ್ಟುವ, ಆಹಾರವೋ-ನೀರೋ ಖಾಲಿಯಾದೊಡನೆ ಬಾವಿದಂಡೆಯ ಮೇಲೆ, ಅಡುಗೆಮನೆ ಕಿಟಕಿಯ ಬಳಿ ಬಂದು ಕರೆಯುವ, ಆ ಕರೆಗೂ ಓಗೊಡದಿದ್ದರೆ ಸೀದಾ ಮನೆಯೊಳಗೇ ಬರಲೆತ್ನಿಸುವ ಬುಲ್ಬುಲ್ಗಳೂ ಹೀಗೆ ಮಾತನಾಡುತ್ತವೆ. ಕೆಮ್ಮೀಸೆ ಪಿಕಳಾರ(ರೆಡ್ ವಿಸ್ಕರ್ಡ್ ಬುಲ್ಬುಲ್), ಕೆಂಪು ಬಾಲದ ಪಿಕಳಾರ(ರೆಡ್ ವೆಂಟೆಡ್ ಬುಲ್ಬುಲ್), ಕೆಂಪು ಕತ್ತಿನ ಪಿಕಳಾರ(ಫ್ಲೇಮ್ ತ್ರೋಟೆಡ್ ಬುಲ್ಬುಲ್)ಗಳೆಂಬ ೩ ವಿಧದ ಪಿಕಳಾರಗಳು ಮನೆಗೆ ಬರುತ್ತವೆ. ಇವುಗಳಲ್ಲಿ ಕೆಮ್ಮೀಸೆ ಮತ್ತು ಕೆಂಪು ಬಾಲದ ಪಿಕಳಾರಗಳು ಪ್ರತಿದಿನ ಭೇಟಿ ಮಾಡುವವುಗಳಾದರೆ, ಕೆಂಪು ಕತ್ತಿನ ಪಿಕಳಾರಗಳು ವಾರಕ್ಕೆ ಒಂದೆರಡು ಬಾರಿ ಬರುವ ಅತಿಥಿಗಳು.

ಅನ್ನ,‌ ಚಪಾತಿಯಂತಹ ಯಾವುದೇ ಆಹಾರ ಹಾಕಿದರೂ ತಿನ್ನುತ್ತಾವಾದರೂ ಬಾಳೆಹಣ್ಣೆಂದರೆ ಪ್ರೀತಿ ಜಾಸ್ತಿ. ತಮ್ಮ ಪುಟ್ಟ ಕೊಕ್ಕಿನಲ್ಲಿ ದೊಡ್ಡ ಭಾಗವನ್ನಾರಿಸಿ, ಇರಿಸಿಕೊಳ್ಳುವಾಗ ಬೀಳಿಸಿಕೊಂಡು, ಮತ್ತೆ ಮತ್ತೊಂದು ಭಾಗವನ್ನು ಕಚ್ಚಿ ತಮಗೆ ಬೇಕಾದಷ್ಟು ತಿಂದು,‌ ಮರಿಗಳಿದ್ದರೆ ಅವುಗಳಿಗೆ ಆಹಾರವನ್ನು ಕಚ್ಚಿಕೊಂಡು ರಪ್ಪೆಂದು ಗೂಡಿಗೆ ಹಾರಿಹೋಗುತ್ತವೆ. ಇವುಗಳಿಗೆ ಚಿಕ್ಕ ಮರಿಗಳಿದ್ದರಂತೂ ತನ್ನ ತಂದೆ-ತಾಯಿಯ ಬಳಿ ತಿನ್ನಿಸುವಂತೆ ಕೇಳಿಕೊಳ್ಳುವ ರೀತಿ, ಅವುಗಳು ತಿನ್ನಿಸುವ ಪರಿ ನೋಡುವುದೇ ಚೆಂದ. ಪುಟ್ಟ ಮರಿಗಳಿಗೆ ಹೆಚ್ಚು ಎತ್ತರ ಹಾರಲಾಗದೇ ಇರುವುದರಿಂದ, ಅವುಗಳ‌ ಅಪ್ಪ ಅಮ್ಮ ಹಾರಲನುವಾಗುವಂತೆ ನೋಡಿಕೊಳ್ಳುವುದು, ಕಾಯುವುದು ಇವುಗಳನ್ನು ಕಾಣಲು ಸೊಗಸು. ಇನ್ನು ಬೇಸಿಗೆ ಆರಂಭವಾದೊಡನೆ, ಕುಡಿಯಲು ಇಟ್ಟ ನೀರಿನ ಮಡಕೆಗಳಲ್ಲೇ ಮಿಂದೇಳುತ್ತವೆ.

ಆಹಾರಕ್ಕಾಗಿ ದಿನಕ್ಕೆ ಹತ್ತಾರು ಬಾರಿ ಬರುವ ಪಿಕಳಾರಗಳು, ಗೂಡು ಕಟ್ಟಲಾರಂಭವಾಗಿ ಮುಗಿಯುವ ತನಕ ಒಂದೆರಡು ಬಾರಿ ಬರುತ್ತವೆಯಷ್ಟೆ. ಯಾವಾಗಲೂ ಜೋಡಿಯಾಗಿಯೇ ಇರುವ ಇವುಗಳು, ವೃತ್ತಾಕಾರದ ಚಿಕ್ಕ ಗೂಡನ್ನು ತಮಗೆ ಸುರಕ್ಷಿತವೆನಿಸಿದ ಚಿಕ್ಕ ಪೊದೆಗಳಲ್ಲೋ, ಮನೆಯ ಮೇಲೋ ಕಟ್ಟಿಕೊಂಡು, ಮೊಟ್ಟೆಯಿಟ್ಟು, ಕಾದು, ಕಾವು ಕೊಟ್ಟು, ಮರಿಗಳು ಹೊರಬಂದು, ಸದೃಢವಾಗುವ ತನಕ ಪೋಷಿಸುತ್ತವೆ.

ಪಿಕಳಾರಗಳು ಸ್ವಭಾವದಲ್ಲಿ ಆಕ್ರಮಣಕಾರಿಗಳಲ್ಲದೇ ಇದ್ದರೂ, ಅವುಗಳಲ್ಲೇ ಆಹಾರಕ್ಕಾಗಿ ಸ್ಪರ್ಧೆಯನ್ನು ಗಮನಿಸಬಹುದು. ಕೆಂಪು ಕತ್ತಿನ ಪಿಕಳಾರ ತಿನ್ನಲು ಬಂದಾಗ ಓಡಿಸುವ ಕೆಮ್ಮೀಸೆ ಪಿಕಳಾರಗಳು, ಅದು ಮತ್ತೆ ಈಚೆ ಬಾರದ ಹಾಗೆ ಕಾಯುತ್ತವೆ. ಅದೇ ಅವುಗಳಿಗಿಂತ ದೊಡ್ಡ ಪಕ್ಷಿಗಳಾದ ಪಾರಿವಾಳ, ಮಟಪಕ್ಷಿ , ಕೋಗಿಲೆಗಳು ಇದ್ದರಂತೂ ಭಯದಿಂದ ತಿನ್ನಲೂ ಹತ್ತಿರ ಬರದೇ, ಆ ಹಕ್ಕಿಗಳು ಹೋಗುವುದನ್ನೇ ಕಾಯುತ್ತಾ ಕುಳಿತಿರುತ್ತವೆ.

ಇನ್ನು, ನಮ್ಮ ಮನೆಯ ಬೆಕ್ಕೆಂಬ ದಾಂಡಿಗರಿಂದ ಕಾಪಾಡಿಕೊಳ್ಳುವುದು ಹಕ್ಕಿಗಳಿಗೂ, ನಮಗೂ ಕಷ್ಟದ ಕೆಲಸವೇ! ಮೊದಲು ದಂಡೆಯ‌ ಮೇಲೆ ಆಹಾರ ಹಾಕುತ್ತಿದ್ದ ನಾವು, ಬೆಕ್ಕಿನಿಂದ ಅವುಗಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಕಂಬದ ಮೇಲೆ ತಟ್ಟೆಯನ್ನು ಕಟ್ಟಿ ಆಹಾರ ಹಾಕಲಾರಂಭಿಸಿದಾಗ‌ ಹೆದರಿದ ಹಕ್ಕಿಗಳು, ಈ ವ್ಯವಸ್ಥೆಗೆ ಹೊಂದಿಕೊಳ್ಳಲು ಒಂದು ವಾರ ತೆಗೆದುಕೊಂಡವು. ಅಪಾಯವಿಲ್ಲವೆಂದು ಅರಿತ ಮೇಲಷ್ಟೇ ಅಲ್ಲಿ ತಿನ್ನಲಾರಂಭಿಸಿದವು.

ಮೊದಮೊದಲು ನಮ್ಮನ್ನು ಕಂಡರೂ ತುಂಬಾ ಹೆದರುತ್ತಿದ್ದ ಬುಲ್ಬುಲ್ಗಳು, ಈಗ ಆಹಾರ ಖಾಲಿಯಾದೊಡನೆ ಕರೆಯುವಷ್ಟು ಆಪ್ತವಾಗಿಬಿಟ್ಟಿವೆ. ಈ ಎಲ್ಲದರ ನಡುವೆ, ನಾವು ಆಹಾರ ಹಾಕುವುದನ್ನೂ ನಿಲ್ಲಿಸದೇ, ಅವುಗಳು ಬರುವುದನ್ನೂ, ಕರೆಯುವುದನ್ನೂ ನಿಲ್ಲಿಸದೇ, ಸುಪ್ತ ಪ್ರೀತಿಯೊಂದು ಬದುಕಿನಲ್ಲಿ ಹಾಸುಹೊಕ್ಕಾಗಿ ಉಳಿದುಕೊಂಡಿದೆ.



ಕಾಮೆಂಟ್‌ಗಳು