ಬುಲ್ ಬುಲ್ ಮಾತಾಡಕಿಲ್ವಾ...?
ಬುಲ್ ಬುಲ್ ಮಾತಾಡಕಿಲ್ವಾ...? ಬುಲ್ ಬುಲ್ ಮಾತಾಡಕಿಲ್ವಾ...? ನಮ್ಮ ಮನೆಗೆ ಬರುವ ಬುಲ್ ಬುಲ್ಗಳು ಮಾತನಾಡುತ್ತವೆಂದರೆ ನೀವು ನಂಬಲೇಬೇಕು. ಬೆಳಗಾದೊಡನೆ ಬಂದು ಆಹಾರಕ್ಕಾಗಿ ಚಿಲಿಪಿಲಿಗುಟ್ಟುವ, ಆಹಾರವೋ-ನೀರೋ ಖಾಲಿಯಾದೊಡನೆ ಬಾವಿದಂಡೆಯ ಮೇಲೆ, ಅಡುಗೆಮನೆ ಕಿಟಕಿಯ ಬಳಿ ಬಂದು ಕರೆಯುವ, ಆ ಕರೆಗೂ ಓಗೊಡದಿದ್ದರೆ ಸೀದಾ ಮನೆಯೊಳಗೇ ಬರಲೆತ್ನಿಸುವ ಬುಲ್ಬುಲ್ಗಳೂ ಹೀಗೆ ಮಾತನಾಡುತ್ತವೆ. ಕೆಮ್ಮೀಸೆ ಪಿಕಳಾರ(ರೆಡ್ ವಿಸ್ಕರ್ಡ್ ಬುಲ್ಬುಲ್), ಕೆಂಪು ಬಾಲದ ಪಿಕಳಾರ(ರೆಡ್ ವೆಂಟೆಡ್ ಬುಲ್ಬುಲ್), ಕೆಂಪು ಕತ್ತಿನ ಪಿಕಳಾರ(ಫ್ಲೇಮ್ ತ್ರೋಟೆಡ್ ಬುಲ್ಬುಲ್)ಗಳೆಂಬ ೩ ವಿಧದ ಪಿಕಳಾರಗಳು ಮನೆಗೆ ಬರುತ್ತವೆ. ಇವುಗಳಲ್ಲಿ ಕೆಮ್ಮೀಸೆ ಮತ್ತು ಕೆಂಪು ಬಾಲದ ಪಿಕಳಾರಗಳು ಪ್ರತಿದಿನ ಭೇಟಿ ಮಾಡುವವುಗಳಾದರೆ, ಕೆಂಪು ಕತ್ತಿನ ಪಿಕಳಾರಗಳು ವಾರಕ್ಕೆ ಒಂದೆರಡು ಬಾರಿ ಬರುವ ಅತಿಥಿಗಳು. ಅನ್ನ, ಚಪಾತಿಯಂತಹ ಯಾವುದೇ ಆಹಾರ ಹಾಕಿದರೂ ತಿನ್ನುತ್ತಾವಾದರೂ ಬಾಳೆಹಣ್ಣೆಂದರೆ ಪ್ರೀತಿ ಜಾಸ್ತಿ. ತಮ್ಮ ಪುಟ್ಟ ಕೊಕ್ಕಿನಲ್ಲಿ ದೊಡ್ಡ ಭಾಗವನ್ನಾರಿಸಿ, ಇರಿಸಿಕೊಳ್ಳುವಾಗ ಬೀಳಿಸಿಕೊಂಡು, ಮತ್ತೆ ಮತ್ತೊಂದು ಭಾಗವನ್ನು ಕಚ್ಚಿ ತಮಗೆ ಬೇಕಾದಷ್ಟು ತಿಂದು, ಮರಿಗಳಿದ್ದರೆ ಅವುಗಳಿಗೆ ಆಹಾರವನ್ನು ಕಚ್ಚಿಕೊಂಡು ರಪ್ಪೆಂದು ಗೂಡಿಗೆ ಹಾರಿಹೋಗುತ್ತವೆ. ಇವುಗಳಿಗೆ ಚಿಕ್ಕ ಮರಿಗಳಿದ್ದರಂತೂ ತನ್ನ ತಂದೆ-ತಾಯಿಯ ಬಳಿ ತಿನ್ನಿಸುವಂತೆ ಕೇಳಿಕೊಳ್ಳುವ ರೀತಿ, ಅವುಗಳು ತಿನ್ನಿಸುವ ಪರಿ ನೋಡುವುದೇ ...