ತಿರುವು(ಅಂತಿಮ ಭಾಗ)

 ತಿರುವು(ಅಂತಿಮ ಭಾಗ)


ಕಥೆಯನ್ನು ಮುಂದುವರಿಸುತ್ತಾ...


ಹಾಗೆಲ್ಲ ಕೈಚೆಲ್ಲಿ ಕುಳಿತುಕೊಳ್ಳುವ ಹುಡುಗಿ ನಾನಲ್ಲ. ಆದರೆ, ಒಮ್ಮೆಗೇ ಬದುಕು ಇಷ್ಟೊಂದು ಸವಾಲುಗಳನ್ನು ಒಡ್ಡಿದರೆ ಎಂತು! ಅದನ್ನು ಸ್ವೀಕರಿಸುವುದೇ ಕಷ್ಟ, ಇನ್ನು ಅದೆಲ್ಲವನ್ನೂ ಎದುರಿಸಿ ನಿಲ್ಲುವುದು ನನ್ನ ಪಾಲಿಗೆ ಅಸಾಧ್ಯ ಎನ್ನಿಸುತ್ತಿತ್ತು‌. ಆದರೆ ನನ್ನ ಜೊತೆಗೆ ಅಪ್ಪ ನಿಂತಿದ್ದಾರೆ ಎಂದುಕೊಂಡು, ನಾನೇ ಒಂದು ನಿರ್ಧಾರಕ್ಕೆ ಬಂದೆ. ಮಿತೇಶನ ಬಳಿಯೇ ಕೇಳಬೇಕೆಂದು‌. ಆದರೆ ಇಷ್ಟು ದಿನ ಮಾತನಾಡಲು ಹಿಂಜರಿಯುತ್ತಿದ್ದವಳು, ಕೋಪಗೊಳ್ಳುತ್ತಿದ್ದವಳು ಒಮ್ಮೆಲೇ ಈ ವಿಷಯ ಕೇಳಿದರೆ, ಅವನು ನಿಜ ಹೇಳಲಾರ ಎಂದುಕೊಂಡೆ. ಜಗಳದ ನಂತರ ಒಂದು ವಾರ ಅವನ ಸುದ್ದಿ ಇರಲಿಲ್ಲ. ಮತ್ತೆ ಕರೆ ಬಂತು, ನನಗೆ ಸತ್ಯ ತಿಳಿದುಕೊಳ್ಳಲೇಬೇಕಿತ್ತು. ಹೊಸದಾಗಿ ಕೋಪವಿಲ್ಲದೇ ಮಾತನಾಡಿದೆ. ಅವನಿಗೆ ತಲೆಕೆಟ್ಟಿತೋ ಏನೋ, ಅಲೆಗಳ ರಭಸದಿಂದ ಕೂಡಿರುತ್ತಿದ್ದ ಮಾತಿನ ಸಾಗರ, ಒಮ್ಮೆಲೇ ಶಾಂತವಾಗಿದ್ದನ್ನು ಕೇಳಿ, ಏನೂ ಮಾತನಾಡದೇ ಕರೆಯನ್ನು ಕೊನೆಗೊಳಿಸಿದ.  

ಮತ್ತೆ ಮರುದಿನ ಕರೆ‌ಮಾಡಿ ಏನೇನೋ ಒಟಗುಟ್ಟಿದ, ನಾನು ಅದಕ್ಕೆ ಕೋಪಗೊಂಡು ಕಿರುಚಾಡುವೆ ಎಂದುಕೊಂಡವನಿಗೆ ಮತ್ತೆ ನನ್ನ ಮೆಲುನುಡಿಗಳು ಚಾಟಿ ಬೀಸಿದಂತಿದ್ದವೋ ಏನೋ! ಕೇಳಿಯೇ ಬಿಟ್ಟ ಬದಲಾವಣೆಗೆ ಕಾರಣ ಏನೆಂದು! ಏನಿಲ್ಲ ಎಂದೆ. ಮತ್ತೆ ಮಾತಿಲ್ಲ. 

ನಾನು ಎಷ್ಟು ಶಾಂತಳಾದಂತೆ ನಟಿಸುತ್ತಿದ್ದರೂ ಅವನು ಕೊಡುವ ಹಿಂಸೆಗೆ ಕೋಪ ನೆತ್ತಿಗೇರುತ್ತಿತ್ತು. ಯಾವಾಗಲೂ ಹಣ ಕೇಳುತ್ತಿದ್ದ, ಅದೇನು ಮಾಡುತ್ತಿದ್ದನೋ! ಬಲ್ಲವನೇ ಬಲ್ಲ. ಕಳಿಸದಿದ್ದಾಗ ಮತ್ತೆ ಅದೇ, ಬೆದರಿಕೆ! ಮಾಮೂಲಿ. ಒಮ್ಮೆ ಅವನ ಬಳಿ ಕೇಳಿಯೇ ಬಿಟ್ಟೆ, ಯಾಕೆ ನಿನಗೆ ಅಣ್ಣನ ಮೇಲೆ ದ್ವೇಷ, ನನ್ನನ್ನು ಪ್ರೀತಿಸುತ್ತೇನೆ ಎಂದು ಇಷ್ಟು ಕಾಡುವುದು ಏಕೆಂದು. ನಿಜವಾಗಿಯೂ ನಿನ್ನನ್ನು ಪ್ರೀತಿಸುತ್ತಿದ್ದೇನೆ, ಆದಷ್ಟು ಬೇಗ ಮದುವೆಯಾಗೋಣ, ಆಗ ನಿನಗೇ ಅರ್ಥವಾಗುತ್ತದೆ ಎಂದ. ಇನ್ನು ಅಣ್ಣನ ಮೇಲೆ ದ್ವೇಷ ಏನಿಲ್ಲ, ಜಗಳ ಅಷ್ಟೇ ಎಂದ. ನಂಬಲಾಗಲಿಲ್ಲ. ಮೌನಿಯಾದೆ. ಉತ್ತರ ಅವನಿಂದ ನಿರೀಕ್ಷಿಸಿದ್ದು ನನ್ನ ತಪ್ಪು ಎಂದುಕೊಂಡೆ. 

ಆದರೆ, ಒಂದಂತೂ ಖಚಿತವಾಗಿತ್ತು, ಅವನಿಗೆ ನನ್ನ ಮೇಲೆ ಯಾವ ಪ್ರೀತಿಯೂ ಇಲ್ಲ ಎನ್ನುವುದು. ಇದ್ದಿದ್ದರೆ, ನಾನು ಸಮಾಧಾನದಿಂದ ಮಾತನಾಡುವುದು ಕೇಳಿ ಖುಷಿಯಾಗಿರುತ್ತಿದ್ದ, ಇನ್ನೂ ಸನಿಹವಾಗುವುದಕ್ಕೆ ಹಾತೊರೆಯುತ್ತಿದ್ದ‌. ಆದರೆ ಅವನಿಗೇ ಅದೆರೆಡೂ ಬೇಡವಾಗಿದ್ದವು. ನನಗೆ, ನನ್ನ ಮನೆಯವರಿಗೆ ಹಿಂಸೆ ಕೊಡುವುದೇ ಅವನ ಗುರಿಯಾಗಿತ್ತು.

ನಾನು ಯಾವ ದಾಟಿಯಲ್ಲಿ ಮಾತನಾಡಿದರೂ ಅವನ ಮಾತುಗಳು ಯಾವಾಗಲೂ ಬಾಣದಂತೆ ತಿವಿಯುತ್ತಿದ್ದವು. ಆದರೆ ಯಾವಾಗಲೂ ನನ್ನನ್ನು ಪ್ರೀತಿಸುತ್ತೇನೆ ಎನ್ನುತ್ತಿದ್ದ, ಮದುವೆಯಾಗುವೆ ಎನ್ನುತ್ತಿದ್ದ‌. ಅವನನ್ನು ಬದಲಾಯಿಸಲು ಯತ್ನಿಸಿದೆ, ಸತ್ಯ ತಿಳಿದುಕೊಳ್ಳಲು ಪ್ರಯತ್ನಿಸಿದೆ, ಎಲ್ಲವೂ ವ್ಯರ್ಥ ಪ್ರಯತ್ನವಾಯಿತಷ್ಟೇ! ನಿರಾಶಳಾಗಿ ಮತ್ತೆ ಮೊದಲಿನಂತೆ ಅವನಿಗೆ ಬೈದು, ಅವನ ನಂಬರನ್ನು ಬ್ಲಾಕ್ ಮಾಡಿದೆ, ಇನ್ನೂ ಎಂತಹ ಕೆಟ್ಟ ಸ್ಥಿತಿ ಬಂದೀತೆಂದುಕೊಂಡು. 

ನನ್ನ ಮನೆಯವರ ಮೂಲಕ, ಮತ್ತೆ ಬೆದರಿಕೆ ಒಡ್ಡಿದ. ಎಂದೂ ಕರೆ ಮಾಡದ ಅಣ್ಣ ಒಂದು ದಿನ ಇದ್ದಕ್ಕಿದ್ದಂತೆಯೇ ಕರೆ ಮಾಡಿ, ನನಗೂ ಅವನಿಗೂ ನಿಶ್ಚಿತಾರ್ಥ ಎಂದ. ಅವನನ್ನು ಕೊಂದುಬಿಡಬೇಕೆನ್ನುವಷ್ಟು ಕೋಪ ಬಂದಿತ್ತು. ಆದರೆ ಏನು ಮಾಡುವುದು! ಅಮ್ಮನೂ ನನ್ನ ಪರ ಮಾತನಾಡಲಿಲ್ಲವಾ! ಗೊತ್ತಿಲ್ಲ. ಆಗುವುದೇ‌ ಇಲ್ಲ ಎಂದೆ, ಮನೆಗೇ ಬರುವುದಿಲ್ಲ ಎಂದೆ. ಯಾವುದನ್ನೂ ಅವನು ಕೇಳಲೇ ಇಲ್ಲ. ಕೊನೆಯದಾಗಿ, ಇದೇ ಭಾನುವಾರ ನಿಶ್ಚಿತಾರ್ಥ, ಮನೆಗೆ ಬಂದಿಲ್ಲ ಎಂದರೆ ಮುಂದಿನ ಯಾವ ಘಟನೆಗಳಿಗೂ ನನ್ನನ್ನು ಹೊಣೆ ಮಾಡಬೇಡ ಎಂದ. ಇದೆಂತಹ ಬರಡುಬಾಳು, ಇದೆಂತಹ ಹೊಡಬಾಳು.!! ನನ್ನ ಮಾತಿಗೆ ಬೆಲೆ ಇಲ್ಲ, ನನ್ನ ಮನಸಿಗೆ ಬೆಲೆ ಇಲ್ಲ, ನನ್ನ ಅಭಿಪ್ರಾಯ ಕೇಳುವವರೇ ಇಲ್ಲ. ಯಾರೋ ಮಾಡಿದ, ನನಗೇ ಅರಿವೇ ಇಲ್ಲದ ತಪ್ಪಿಗೆ ನನಗ್ಯಾಕೆ ಶಿಕ್ಷೆ! 

ಎಷ್ಟು ಗೋಗರೆದರೂ ಉತ್ತರಿಸುವವರಾರು...! ನನಗಾಗಿ ಮಿಡಿಯುವ ಒಂದು ಜೀವವೂ ಇರಲಿಲ್ಲ. ಅಮ್ಮನೂ ಅದ್ಯಾವ ಒತ್ತಡಕ್ಕೆ ಸಿಲುಕಿ ಬಾಯಿಗೆ ಬೀಗ ಹಾಕಿಕೊಂಡಿದ್ದಳೋ!

ಅವನು‌ ಹೇಳಿದ ದಿನ ನಾನು ಮನೆಗೆ‌ ಹೋಗಲೇ ಇಲ್ಲ. ಯಾರ ಕರೆಯನ್ನೂ ಸ್ವೀಕರಿಸಲಿಲ್ಲ. ಅಲ್ಲಿ ಏನಾಯಿತು ಎಂಬುದೂ ಗೊತ್ತಿಲ್ಲ. ಮತ್ತೆ ಒಂದು ವಾರ ಯಾರಿಗೂ ನಾನು ಕರೆ ಮಾಡಲಿಲ್ಲ. ನನಗೂ ಬರಲಿಲ್ಲ. ಮತ್ತೆ ಅಮ್ಮನ ಕರೆ ಬಂತು! ಅಮ್ಮನ ಬಳಿ ಅತ್ತು, ಮನಸಿನ ಭಾರವನ್ನು ಕಡಿಮೆ ಮಾಡಿಕೊಳ್ಳಬೇಕೆಂದಿದ್ದವಳಿಗೆ, ಉತ್ತರಿಸುತ್ತಲೇ ಅಮ್ಮನ ಅಳು ,ಹೃದಯವನ್ನೇ ಹಿಂಡಿ ಹಿಪ್ಪೆ ಮಾಡಿತು. ಎರಡು ನಿಮಿಷ ಬರೀ ಅಳು. ಅವಳು ನನಗಾಗಿ ಮರುಗುತ್ತಿದ್ದಳು ಎಂದುಕೊಂಡವಳಿಗೆ, ಅವಳ ಮಾತು ಕಾದ ಎಣ್ಣೆಯನ್ನು ಮೈಮೇಲೆ ಸುರಿದಂತಾಯ್ತು. ಮಿತೇಶ ಆತ್ಮಹತ್ಯೆ ಮಾಡಿಕೊಂಡನಂತೆ, ಬೇಗ ಊರಿಗೆ ಬಾ ಎಂದಳು. ನಾನು ಕೇಳಿಸಿಕೊಳ್ಳುತ್ತಿರುವುದು ನಿಜವೇ ಎಂದು ಚಿವುಟಿಕೊಂಡೆ. ನಿಜವೇ, ಆದರೆ ನಾನು ಕೇಳಿದ ಸುದ್ದಿ ಸುಳ್ಳಾಗಿರಲಿ ಎನ್ನುತ್ತಾ ಊರಿಗೆ ಹೊರಟೆ. 

ನಾನು ಎಲ್ಲವಕ್ಕೂ ಸಿದ್ಧಳಾಗಿದ್ದೆ, ಪೋಲೀಸು, ಕೇಸು‌ ಎಂದು. ಆದರೆ, ನಾವು ಹೋಗುವುದರಲ್ಲಿ, ಅಲ್ಲಿ ಅವನ ದೇಹವೂ ಇರಲಿಲ್ಲ, ಯಾವ ದೂರೂ ಹೋಗಿರಲಿಲ್ಲ. ನನ್ನನ್ನೂ, ಅಣ್ಣನನ್ನೂ ಅವರ ಅಮ್ಮ ಬಾಯಿಗೆ ಬಂದಂತೆ ಶಪಿಸಿದರು, ಅವರ ಇಬ್ಬರೂ ಮಕ್ಕಳನ್ನೂ ಬಲಿತೆಗೆದುಕೊಂಡೆವೆಂದು. ಒಂದಿಷ್ಟು ಶಾಪದೊಡನೆ ಮನೆಗೆ‌ ಬರುವಾಗ, ಅಕ್ಕಂದಿರ ಬಳಿ ಈಗಲಾದರೂ ಸತ್ಯ ಹೇಳುವಂತೆ ಅಂಗಲಾಚಿದೆ. ಅವರು ಹೇಳಿದ ಸತ್ಯ ಅರಗಿಸಿಕೊಳ್ಳುವಂತದ್ದಾಗಿರಲಿಲ್ಲ. ಮಿತೇಶನ ಅಕ್ಕನ ಹೆಸರು, ಸುನೀತ. ಅವಳು ನಮ್ಮ ಅಣ್ಣ ನಿರಂಜನನ್ನು ಇಷ್ಟ ಪಡುತ್ತಿದ್ದಳಂತೆ. ಆದರೆ ಇದ್ಯಾವುದೂ ನಮ್ಮ ಮನೆಯವರಿಗೆ ಗೊತ್ತಿರಲಿಲ್ಲ. ಅದೆಂತಹ ಸಂಬಂಧ ಅವರ ಮಧ್ಯೆ ಇತ್ತೋ ಗೊತ್ತಿಲ್ಲ, ಅಣ್ಣ ಅದ್ಯಾವಾಗ ಕುಡಿತದ ಚಟ ಶುರುವಿಟ್ಟನೋ, ಅವರಿಬ್ಬರ ಮಧ್ಯೆ ಬಿರುಕು ಮೂಡಿ ದೂರವಾಗಿದ್ದು, ಅವಳು ಆ ಸಮಯದಲ್ಲಿ ಗರ್ಭಿಣಿಯಾಗಿದ್ದಳಂತೆ. ಅವಳ ಮನೆಯಲ್ಲಿ ಹೇಳಲು ಭಯಪಟ್ಟು ಅಣ್ಣನ ಸಹಾಯವೂ ಇಲ್ಲದೆ, ಅಣ್ಣನ ಸಂಪರ್ಕವಿಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಕೆಟ್ಟ ನಿರ್ಧಾರ ತೆಗೆದುಕೊಂಡಳಂತೆ. ಆ ಸಮಯದಲ್ಲಿ ಅಣ್ಣನು ಪೋಲೀಸರ ಅತಿಥಿಯೂ ಆಗಿದ್ದನಂತೆ. ಅದು ಹೇಗೋ ಕೇಸು ಬಿದ್ದು ಹೋಗಿ, ಹೊರಬಂದಿದ್ದನಂತೆ. ಮಿತೇಶನ ಅಪ್ಪ ಇದೇ ನೋವಲ್ಲಿ ಕೊರಗಿ ಅಸುನೀಗಿದ್ದರಂತೆ. ಈ ಅಂತೆ-ಕಂತೆಗಳ ವಿಷಯ ಕೇಳಿ ಆಘಾತಕ್ಕೊಳಗಾದೆ. ಮಿತೇಶನ ಅಮ್ಮ ಅದೆಂತಹ ನೋವಲ್ಲಿ ಜೀವನ ಸಾಗಿಸಿದ್ದರೋ ಗೊತ್ತಿಲ್ಲ. ಆದರೆ ನನ್ನ ಅಪ್ಪ-ಅಮ್ಮನ ಮೇಲೆ ಎಂದೂ ಸೇಡು ತೀರಿಸಿಕೊಳ್ಳಲು ಬಯಸಿದವರಲ್ಲ. ಆದರೆ ಮಿತೇಶ ಸೇಡನ್ನೇ ಹೊತ್ತು ಬೆಳೆದವನಂತಿದ್ದ. 

ವಿಷಯ ಒಂದೊಂದೇ ಕತ್ತಲಿನಿಂದ ಬೆಳಕಿಗೆ ತೆರೆದುಕೊಂಡವು. ಆದರೆ ಉತ್ತರವಿರದ ಪ್ರಶ್ನೆಗಳು ನೂರಾರು ನನ್ನ ಮನದಲ್ಲಿ ಹುಟ್ಟಿಕೊಂಡವು. ಆದರೆ ಮಿತೇಶನ ನಡವಳಿಕೆಗಳು ಅವನು ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಯಲ್ಲ ಎಂದು ಪದೇ ಪದೇ ಒತ್ತಿ ಹೇಳುತ್ತಿದ್ದವು. ಒಂದಂತೂ ಖಚಿತವಾಯಿತು ನನಗೆ, ಮಿತೇಶ ಸತ್ತಿಲ್ಲ, ಬದುಕಿದ್ದಾನೆ ಎಂದು. ಅವನು ನನ್ನ ಕುಟುಂಬಕ್ಕೆ ಪಾಠ ಕಲಿಸಲು ಮಾಡಿದ ನಾಟಕವಷ್ಟೇ ಎಂದು ನನಗೆ ಮನವರಿಕೆಯಾಯಿತು. ಆದರೆ ಅವನೆಲ್ಲಿಗೆ ಹೋಗಿರಬಹುದು ಎಂಬ ದೊಡ್ಡ ಪ್ರಶ್ನೆ! ಉತ್ತರ ಯಾರ ಬಳಿ ಕೇಳುವುದು! ಒಂದೊಮ್ಮೆ ಅವನ ಅಮ್ಮನಿಗೆ ಸತ್ಯ ತಿಳಿದಿರಬಹುದೇ! ಮಗನ ನಿರ್ಧಾರದ ಹಿಂದೆ ತಾನೂ ನಿಂತಿರಬಹುದೇ, ಅಥವಾ ಅಸಹಾಯಕಳಾಗಿ ಮಗನ ಯಾವ ಯೋಜನೆಯನ್ನೂ ತಿಳಿಯದೇ, ನಿಜವಾಗಿಯೂ ಆತ ಸತ್ತಿದ್ದಾನೆ ಎಂದುಕೊಂಡಿರಬಹುದೇ! ಎಲ್ಲವೂ ಗೊಂದಲದ ಗೂಡಿನೊಳಗೆ ಸಿಕ್ಕಿ ಒದ್ದಾಡುತ್ತಿರುವ ಪ್ರಶ್ನೆಗಳಷ್ಟೇ... 

ದಿನಗಳು ಉರುಳಿದಂತೆ ಮಿತೇಶನ ಮೇಲಿನ ಕೋಪವೆಲ್ಲಾ ಕರಗಿ, ಅವನ ಬದುಕಿನ ಕೆಟ್ಟ ಘಟನೆಗಳಿಗೆ ಮರುಕ ಹುಟ್ಟಿತು. ಅಣ್ಣನಿಂದಾದ ತಪ್ಪನ್ನು ನಾನು ಸರಿಪಡಿಸಬೇಕು, ಅವನ ಬಾಳ ಸಂಗಾತಿಯಾಗಿ ಎಂಬ ನಿರ್ಧಾರಕ್ಕೆ ಬಂದೆ. ಆದರೆ ಇದನ್ನು ಯಾರಿಗಾದರೂ ಹೇಳಿದರೆ ನನ್ನನ್ನೇ ಹುಚ್ಚಿ ಎಂದುಕೊಂಡಾರು! ಅವನಿಗೆ ಹೇಳುವ ಎಂದರೆ ಎಲ್ಲಿ ಎಂದು ಹುಡುಕುವುದು ನಾನಾದರೂ! ಅವನು ಒಂದು ದಿನ ಬಂದೇ ಬರುವನೆಂದು ಹಂಬಲಿಸುತ್ತಿದ್ದೇನೆ, ಪ್ರೀತಿಯ ಪುಟ್ಟ ಗೂಡಿನೊಳಗೆ ಅವನನ್ನು ಬಚ್ಚಿಟ್ಟು... ಆದರೆ, ಅವನು ಬೇರೆಯ ಬದುಕನ್ನೇ ಕಟ್ಟಿಕೊಂಡರೆ, ಅಥವಾ ನಿಜವಾಗಿಯೂ ಸತ್ತಿದ್ದರೆ...!!!!!!!




ಕಾಮೆಂಟ್‌ಗಳು