ತಿರುವು(ಭಾಗ-೨)

ತಿರುವು(ಭಾಗ-೨)

ಕಥೆಯನ್ನು ಮುಂದುವರಿಸುತ್ತಾ.....


ಹೊಸ ಜಾಗ, ಹೊಸ ಊರು, ಹೊಸ ತಿರುವು, ಹೊಸ ಹೆಜ್ಜೆ, ಎಲ್ಲವೂ ಹೊಸತು, ಆದರೆ ಮನಸ್ಸು ಮಾತ್ರ ಹಳೆಯ ಲೋಕದಲ್ಲೇ ಇತ್ತು. ಆದರೆ ಮನೆಯಲ್ಲಿ ನಡೆದ ಅವಾಂತರಗಳ ಹೇಳುವವರಿರಲಿಲ್ಲ‌. ನಾನಾದರೂ ನೆಮ್ಮದಿಯಾಗಿರಲಿ ಎಂದು ಅವರು ಎಲ್ಲಾ ನೋವನ್ನೂ ಮುಚ್ಚಿಡುತ್ತಿದ್ದರು. ಎಲ್ಲವೂ ಹೊಸತಾಗಿ ಸಾಗುತ್ತಿತ್ತು ಎನ್ನುವಾಗಲೇ, ಮಿತೇಶ ಅದು ಹೇಗೋ ನನ್ನ ಫೋನಿನ ನಂಬರನ್ನು ಪಡೆದು, ಕರೆ ಮಾಡಿದ. ಇದೊಂದು ತೊಂದರೆ ತಪ್ಪಿತೆಂದುಕೊಂಡಿದ್ದೆ, ಆದರೆ ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಅನ್ನೋ ತರ ಆಗಿತ್ತು ಇವನ ವಿಷಯದಲ್ಲಿ‌. ಊರಿಂದೂರಿಗೆ ಬಂದರೂ ಕಾಟವಂತೂ ತಪ್ಪಿರಲಿಲ್ಲ. 
ಏನೇನೋ ಒಟಗುಟ್ಟಿದ, ಯಾವುದೂ ಕಿವಿಯಿಂದ ತಲೆಯನ್ನಂತೂ ತಲುಪಿರಲಿಲ್ಲ. ಒಂದು ಕರೆಗೆ ಸುಮ್ಮನಾದೆ, ಆದರೆ, ಅದು ಯಾವಾಗ ವಿಪರೀತವಾಯಿತೋ, ಆಗ ಅಮ್ಮನಿಗೆ ತಿಳಿಸಿ, ಅವನ ನಂಬರನ್ನು ಬ್ಲಾಕ್ ಮಾಡಿದೆ. ಎರಡು ದಿನದೊಳಗೆ ಮತ್ತೊಂದು ನಂಬರಿನಿಂದ ಕರೆ. ಪ್ರೀತಿ ಪ್ರೇಮ ಎಂದು ಎಷ್ಟೋ ಸಿನಿಮಾ ಶೈಲಿಯ ಮಾತುಗಳನ್ನಾಡಿದ. ಆದರೆ, ನನಗೊಂದು ಹಿಂಸೆಯಾಗಿತ್ತೇ ಹೊರತು ಪ್ರೀತಿ ಎನ್ನಿಸಲಿಲ್ಲ. ಆಶ್ಚರ್ಯ ಅನ್ನಿಸ್ತಾ? ಒಬ್ಬ ಅಷ್ಟು ಹಿಂದೆ ಬಿದ್ದು ಪ್ರೀತಿಸ್ತೀನಿ ಅಂದ್ರೂ, ಮನೇಲಿ ಹೇಳಿದ್ರೂ ಏನೂ ಅನ್ನಿಸದೆ, ಹಿಂಸೆ‌ ಎನ್ನುವ ನಾನೆಂತಾ ಕಲ್ಲು ಎಂತಲಾ? ಖಂಡಿತ ನಾನು ಕಲ್ಲಲ್ಲ. ಆದರೆ, ಒಂದು ಮಾತು ನನ್ನ ಅಭಿಪ್ರಾಯ ಕೇಳದೇ, ಯಾವ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳದೇ, ಯಾರಿಗೆ ಯಾವ ಗೌರವವನ್ನೂ ಕೊಡದೆ, ತನ್ನ ಮನೆಯವರ ಜವಾಬ್ದಾರಿ ಹೊರದೆ, ಅವರನ್ನು ಪ್ರೀತಿಸದೆ, ಹುಚ್ಚನಂತೆ ನನ್ನನ್ನು ಪ್ರೀತಿಸು ಎಂದು ಕಾಡಿದರೆ, ಅದು ಪ್ರೀತಿ ಹೇಗೆ! ನನಗಂತೂ ಅವನ ಮೇಲೆ ಯಾವ ಭಾವನೆಯೂ ಇರಲಿಲ್ಲ.
ಎರಡು-ಮೂರು ಬಾರಿ ಬ್ಲಾಕ್ ಮಾಡಿದರೂ ಅವನ ಕಾಟ ತಪ್ಪಲಿಲ್ಲ. ಅವನಿಂದ ಅಮ್ಮ, ಅಕ್ಕ, ಅತ್ತಿಗೆ ಅಣ್ಣನಿಂದ ಪೆಟ್ಟು ತಿನ್ನುತ್ತಿದ್ದರೆಂದು ತಿಳಿದು, ಅದನ್ನು ತಪ್ಪಿಸಲೋಸುಗ ಅವನಿಗೆ ನಾನಾಗಿಯೇ ಎಸ್.ಎಮ್.ಎಸ್ ಕಳುಹಿಸಿದೆ. ಆದರೆ ಅದಕ್ಕೂ ಮೊದಲು ಅಮ್ಮನ ಬಳಿ ಹೇಳಿದೆ, ಪೋಲೀಸರಿಗೊಂದು ದೂರು ಕೊಡೋಣವೆಂದು, ಆದರೆ ಅವಳು ಒಪ್ಪಲಿಲ್ಲ. ಅಲ್ಲಿಂದ ಅವನ ಕಾಟ ಇನ್ನಷ್ಟು ಹೆಚ್ಚಾಯಿತು. ಮಾತು-ಮಾತಿಗೂ ಅವನ ಆತ್ಮಹತ್ಯೆ ಎಂಬ ಅಸ್ತ್ರ ಪ್ರದರ್ಶನವಾಗುತ್ತಿತ್ತು‌. ಎಷ್ಟೋ ಬಾರಿ ನನ್ನಿಂದ ಹಣವನ್ನು ಸುಲಿಗೆ ಮಾಡಿದ್ದ. 
ಆಗೆಲ್ಲ, ಅಪ್ಪ ಇದ್ದಿದ್ದರೆ ಇಂತಹ ಒಂದು ಸಂದರ್ಭ ಒದಗಿ ಬರುತ್ತಿರಲಿಲ್ಲ ಎನ್ನಿಸುತ್ತಿತ್ತು. ಜಗತ್ತು ಎಷ್ಟು ಮುಂದುವರಿದರೂ, ಮಹಿಳೆ ಎಷ್ಟೇ ಬಲಿಷ್ಠಳು ಎಂದರೂ, ತವರು ಎಂಬ ಗಟ್ಟಿಯಾದ ಬೆನ್ನೆಲುಬು ಬೇಕೇ ಬೇಕು. ಮೊದಲಿನಿಂದಲೂ ಅಣ್ಣನ ಪ್ರೀತಿ ಪಡೆದೇ ಇರಲಿಲ್ಲ, ಅಪ್ಪ ನಮ್ಮನ್ನು ನಡುನೀರಿನಲ್ಲಿ ಬಿಟ್ಟುಹೋಗಿದ್ದರು, ಅಮ್ಮ, ಅಕ್ಕ ನನಗಿಂತ ಅಬಲೆಯರಂತಿದ್ದರು, ಮದುವೆಯಾದ ಅಕ್ಕಂದಿರು, ಅವರ ಬಾಳಿನ ದೋಣಿಯ ಪಯಣದಲ್ಲಿ, ಹುಟ್ಟು ಹಿಡಿದು ಸಾಗಿದ್ದರು. ನನ್ನ ನೋವಿಗೆ ಕಿವಿಯಾಗುವವರಾರು, ಆದರೂ ಎಷ್ಟು ದಿನ?! ಹೆಗಲು ನೀಡುವವರಾರು, ನೀಡಿದರೂ ಎಷ್ಟು ಹೊತ್ತು!! ನಾನೇ ಬಲವಾಗಿ ನಿಲ್ಲಬೇಕು, ನಿಲ್ಲಲೇಬೇಕು! ಆದರೆ ಎಂತು!!!
ಒಂದು ವಾರ ಕೆಲಸದಿಂದ ರಜೆ ಪಡೆದು ಮನೆಗೆ ತೆರಳಿದ್ದೆ. ಎರಡು ದಿನ ಎಲ್ಲವೂ ಸರಿಯಾಗಿಯೇ ಇತ್ತು, ಮೂರನೆಯ ದಿನ ರಾತ್ರಿ, ಮಿತೇಶ ನಮ್ಮನೆಗೆ ಬಂದು ಮದುವೆಯ ಬಗ್ಗೆ ರಂಪಾಟವನ್ನೇ ಮಾಡಿದ. ಮಧ್ಯೆ ಮಧ್ಯೆ ಯಾರಿಗೂ ನೆಮ್ಮದಿಯಾಗಿರಲು ಬಿಡುವುದಿಲ್ಲ ಎನ್ನುತ್ತಿದ್ದ. ಅಷ್ಟರಲ್ಲಿ ಕುಡಿದು ತೂರಾಡುತ್ತಾ ಅಣ್ಣ ಬಂದ‌. ಇಬ್ಬರ ಮಧ್ಯೆ ಕೆಟ್ಟ ಮಾತಿನ ಯುದ್ಧವಲ್ಲದೇ, ಹೊಡೆದಾಟವೂ ನಡೆಯಿತು‌. ನನ್ನ ಪಾಲಿಗೆ ಅಲ್ಲಿದ್ದದ್ದು ಉತ್ತರವಿಲ್ಲದ ಸಾವಿರಾರು ಪ್ರಶ್ನೆಗಳು‌ ಮಾತ್ರ‌. ಕೋಪ-ದುಃಖ ಎರಡೂ ಉಮ್ಮಳಿಸಿ ಬಂದು, ಕೋಣೆ ಸೇರಿದೆ. ಎರಡರ ವಿಪರೀತಕ್ಕೆ ಕಂಗೆಟ್ಟು ನಿದ್ದೆ ಆವರಿಸಿತ್ತು. ಎಷ್ಟೋ ಸಮಯದ ನಂತರ ಎದ್ದಾಗ ಗುಸುಗುಸು  ಪಿಸುಪಿಸು ಕೇಳಿಸುತ್ತಿತ್ತು. ನನ್ನಿಬ್ಬರು ಅಕ್ಕಂದಿರು, ಸಮಯ ನೋಡಿದೆ, ಆಗಲೇ ೧೨:೩೦ ಆಗಿತ್ತು. ಇನ್ನೂ ಏನು ಮಾತುಕತೆ ಮಲಗಿ ಎನ್ನಲು ಹೋದೆ. ಮಿತೇಶನ ಬಗ್ಗೆ ಮಾತನಾಡುತ್ತಿದ್ದರು. ಈ ರಾತ್ರಿಯಲ್ಲಿ ಅವನ ಬಗ್ಗೆ ಅದೇನು ಮಾತು ಎಂದು, ಮರೆಯಲ್ಲಿ ನಿಂತು ಆಲೈಸಿದೆ. 
“ಅಣ್ಣ ಮಾಡಿದ ತಪ್ಪಿಗೆ ಇವಳಿಗೆ ಶಿಕ್ಷೆಯಾಗುತ್ತಿದೆ. ನೀರಜಾಳಿಗೆ ಹೇಳೋಣ ಎಂದರೆ, ಅಮ್ಮ ಹೇಳೋದು ಬೇಡ ಅಂದಿದಾರೆ, ಅವಳನ್ನು, ಅವಳು ಒದ್ದಾಡುವುದನ್ನು ನೋಡಲಾಗುತ್ತಿಲ್ಲ” ಎಂದು ಪಿಸುಗುಡುತ್ತಿದ್ದರು. ನನಗೆ ಅವರ ಮಾತುಗಳು ಅರ್ಥವೇ ಆಗಲಿಲ್ಲ‌, ನನ್ನ ಬೆನ್ನ ಹಿಂದೆ ಏನೋ ನಡೆಯುತ್ತಿರುವುದು ಖಚಿತವಾಗಿತ್ತು. ಗೊಂದಲಮಯ ಮನಸಿನ ಗಲಭೆ, ನೋವನ್ನು ತಡೆಯಲಾಗದೇ, ಅವರಿಬ್ಬರನ್ನು ಪ್ರಶ್ನಿಸಿದೆ. ನಾನು ಬರುವುದನ್ನು ಎಣಿಸದ, ಬಂದುದನ್ನು ಗಮನಿಸದ ಅವರು, ನನ್ನ ಪ್ರಶ್ನೆಗೆ ಮೈಮೇಲೆ ಹಾವು ಬಿದ್ದಂತೆ ದುಗುಡಗೊಂಡು ಎದ್ದು ಒಬ್ಬರ ಮುಖ ಒಬ್ಬರು ನೋಡಿಕೊಂಡು, ಏನು ಇಲ್ಲ ಎಂದು ಒಳನಡೆದರು. ಏನಾಗುತ್ತಿದೆ ನನ್ನ ಬದುಕಿನಲ್ಲಿ ಎಂದು ಅರಿವಾಗದೇ, ಅತ್ತೆ, ಹತಾಶಳಾದೆ. ಆದರೆ ಉತ್ತರಿಸುವವರಿರಲಿಲ್ಲ. ಮರುದಿನವೇ ಅಮ್ಮನ ಬಳಿ ಕೇಳಿದೆ, ಆದರೆ ಉತ್ತರ ಇರಲಿಲ್ಲ. ಅಪ್ಪ ಇದ್ದಿದ್ದರೆ  ಉತ್ತರಿಸುತ್ತಿದ್ದರೋ ಏನೋ ಎಂದುಕೊಂಡೆ, ಆದರೆ ಅವರು ಉತ್ತರಿಸುತ್ತಿದ್ದದ್ದೂ ಅನುಮಾನವೇ! ಉತ್ತರಿಸುವವರಾಗಿದ್ದರೆ, ಅವನು ಅಷ್ಟೆಲ್ಲಾ ನಾಟಕವಾಡುವಾಗಲೇ ನನಗೆ ವಿಷಯ ಹೇಳುತ್ತಿದ್ದರು,ಅಲ್ಲವೇ? ಮಿತೇಶನಿಗೆ ಮಾನಸಿಕ ಸಮಸ್ಯೆ ಇದೆ ಎಂದುಕೊಂಡಿದ್ದೆ, ಆದರೆ ಇದು ಅವನಿಗೆ ಅಥವಾ ಅವನ ಕುಟುಂಬದಲ್ಲಿ ಯಾರಿಗೋ ನನ್ನ ಅಣ್ಣನಿಂದ ಆದ ನೋವಿಗೆ ಸೇಡು ತೀರಿಸಿಕೊಳ್ಳುತ್ತಿರುವ ಒಂದು ವಿಧಾನ ಎಂದು ಬಲವಾಗಿ ಅನ್ನಿಸಲಾರಂಭಿಸಿತು.....


ಕಥೆ ಮುಂದುವರಿಯುವುದು...

ಕಾಮೆಂಟ್‌ಗಳು