ತಿರುವು (ಭಾಗ - ೧)

ತಿರುವು (ಭಾಗ - ೧)



ಕರೆ ಬಂದ ಕೂಡಲೇ, ಇದ್ದ ಕೆಲಸಗಳನ್ನು ಬದಿಗಿಟ್ಟು, ನನ್ನ ಮ್ಯಾನೇಜರಿಗೆ ತಿಳಿಸಿ, ನಾಲ್ಕು ದಿನಗಳ ರಜೆ ಪಡೆದು, ಸಿಕ್ಕ ಬಸ್ಸಿಗೆ ಟಿಕೇಟನ್ನು ಪಡೆದು ಹೊರಟೆ. ಮನದಲ್ಲಿ ಸಾವಿರ ದುಗುಡಗಳು, ಆತಂಕ, ಇನ್ನೊಬ್ಬರ ಸಾವಿಗೆ ಕಾರಣ ನಾನಾಗುವೆನೇ ಎಂಬ ಭಯ, ಅದರ ಮಧ್ಯೆ ಸಾವಿರ ಬಾರಿ ಏನು ಆಗದಿರಲೆಂದು ದೇವರಲ್ಲಿ ಮೊರೆ ಹೋಗುತ್ತಿದ್ದೆ. ಎಲ್ಲದರ ಮಧ್ಯೆ, ಪ್ರತಿ ಬಾರಿ, ಇದೇ ಕತೆ. ಬೊಗಳುವ ನಾಯಿ  ಕಚ್ಚುವುದಿಲ್ಲ, ಕಚ್ಚುವ ನಾಯಿ ಬೊಗಳುವುದಿಲ್ಲ ಎಂಬ ಮಾತಿನಂತೆ, ಇದು ನನ್ನನ್ನು ಹಣಿಸಲು ಮಾಡುತ್ತಿರುವ ಅವನ ಪ್ರಯತ್ನವಷ್ಟೇ ಎಂಬ ಭಂಡ ಧೈರ್ಯ.
೩೦‌ ಮೈಲಿಯ ದಾರಿ. ಕ್ರಮಿಸುತ್ತಾ ಒಂದೊಂದೇ ನೆನಪುಗಳ ಮೈಲಿಗಲ್ಲು ಪಾಸಾಗುತ್ತಿತ್ತು.. ಐದು ವರ್ಷಗಳ ಹಿಂದೆಯೇ, ಬೆಂಬಿಡದ ಭೂತವೊಂದು ನನ್ನ ಬೆನ್ನಟ್ಟಿತ್ತು. ಅವನು ನನ್ನನ್ನು ಅಕ್ಕನ ಮದುವೆಯಲ್ಲಿ ನೋಡಿದ್ದೇ ಮೊದಲು. ಅದೇ ದಿನ ತಂದೆಯ ಬಳಿ ಬಂದು, ಅವನು ನನ್ನನ್ನು ಇಷ್ಟ ಪಡುತ್ತಿರುವುದಾಗಿಯೂ, ಅವನಿಗೂ ನನಗೂ ಮದುವೆ ಮಾಡಿಸಬೇಕೆಂದು ಅವನ ಇಂಗಿತ‌ ವ್ಯಕ್ತಪಡಿಸಿದ. ಅಪ್ಪನಿಗೆ ದಿಗ್ಭ್ರಮೆ, ನಾನಂತೂ ಆಕಾಶ ತಲೆಯ ಮೇಲೆ ಬಿದ್ದವಳಂತಿದ್ದೆ. ನಾನೇನು ಸುಂದರಿಯಲ್ಲ. ಬಣ್ಣವೂ ಕಪ್ಪು, ಮಾತನಾಡುವವಳೂ ಅಲ್ಲ. ಅಲ್ಲದೇ, ಅವನನ್ನು ನಾನೊಮ್ಮೆ ದಿಟ್ಟಿಸಿ ನೋಡಿದ್ದೂ ಇಲ್ಲ. ಇದೆಂತಾ ಪ್ರೀತಿಯಪ್ಪಾ ಅಂದುಕೊಂಡೆ. ಅಪ್ಪ ಅವನ ಬಗ್ಗೆ ಎಲ್ಲಾ ವಿಚಾರಿಸಿದ ನಂತರ, ಎಲ್ಲಿಯೋ ಸ್ವಲ್ಪ ಹುಡುಗಾಟಿಕೆಯ ಹುಡುಗ ಎಂದುಕೊಂಡು “ನೋಡುವ ಮುಂದೆ, ಈಗ ಹೋಗು‌” ಎಂದರು.
ನಾವು ಅಕ್ಕನನ್ನು ಅವಳ‌ ಗಂಡನ‌ ಮನೆಗೆ ಕಳಿಸಿ, ಈ ನಗೆಯ ಪ್ರಸಂಗವನ್ನು ಅಲ್ಲೇ ಮರೆತು ಮನೆಗೆ‌ ಬಂದಿದ್ದೆವಷ್ಟೇ. ಅಪ್ಪನ ಫೋನು ರಿಂಗಣಿಸಿತು. ಆ ಕಡೆಯಿಂದ ಬಂದ ಸುದ್ದಿ ನಮ್ಮೆಲ್ಲರಲ್ಲೂ‌ ನಡುಕ ಹುಟ್ಟಿಸಿತ್ತು. ಅವನು ನನ್ನ ಜೊತೆ ಮದುವೆ ಮಾಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೆಯವರಿಗೆ ಬೆದರಿಕೆಯೊಡ್ಡಿ, ಕೋಣೆ ಸೇರಿಕೊಂಡಿದ್ದನಂತೆ. ಅವನಿಗೆ ಆ ಹುಚ್ಚು ಎಲ್ಲಿಂದ ಹುಟ್ಟಿತೋ ಗೊತ್ತಿಲ್ಲ. ಅಪ್ಪ ಅಲ್ಲಿ ಹೋಗಿ ಅವನ ಬಳಿ ಮಾತನಾಡಿದರಂತೆ.  ಅಪ್ಪ ನಮಗಂದರು ಅವನ ಬಳಿ ಮಾತನಾಡಿದೆ. ಅವನ ಡಿಗ್ರೀ ಮುಗಿದಿದೆ, ಆದರೆ ಕೆಲಸ ಇಲ್ಲ. ಅವನಿಗೆ “ಮೊದಲು ಕೆಲಸ ಹುಡುಕಿಕೋ. ನನಗೂ ಐದು ಜನ ಮಕ್ಕಳು. ಇಬ್ಬರ ಮದುವೆ ಆಗಿದೆ ಅಷ್ಟೇ. ನೀನು ಕೇಳುತ್ತಿರುವ ನೀರಜಾ ಐದನೆಯವಳು, ಅವಳಿಗೆ ಅಣ್ಣನಿದ್ದಾನೆ, ಅಕ್ಕ ಇದ್ದಾಳೆ. ಅವರ ಮದುವೆಯಾಗಬೇಕು. ನೀರಜಾಳ ಡಿಗ್ರೀ ಮುಗಿಯಬೇಕು. ಆಮೇಲೆ ಇದೆಲ್ಲವನ್ನೂ‌ ಯೋಚಿಸೋಣ ಎಂದು ಬಂದಿರುವೆ. ಅರ್ಥವಾಗಿರುವಂತೆ ತಲೆಯಲ್ಲಾಡಿಸಿದ‌. ಸಾವಿತ್ರಿಯ ಭಾವನಿಗೆ ಇಬ್ಬರು ಮಕ್ಕಳು‌ ಎಂದು ಗೊತ್ತಿತ್ತು, ಮಗ ಇಂತಹ ವಿಚಿತ್ರದವ ಎಂದುಕೊಂಡಿರಲಿಲ್ಲ. ಅವನ ಅಪ್ಪನೂ ಇಲ್ಲ. ಜವಾಬ್ದಾರಿಯ ನೊಗ ಹೊರಬೇಕಾದವ ಹೀಗೆ ವರ್ತಿಸಿದರೆ ಹೇಗೆ! ಬೇರೆಯವರಿಗೇನು ಹೇಳುವುದು, ನಮ್ಮ ಮಗನೇ ಕುಡುಕ, ಅವನಿಗಿದೆಯೇ ಜವಾಬ್ದಾರಿ” ಎಂದರು. ಅವನೊಬ್ಬ ಹುಡುಗಾಟಿಕೆಯ  ಹುಚ್ಚನಂತೆ ಕಾಣಿಸುತ್ತಿದ್ದ ನಮಗೆಲ್ಲರಿಗೂ. ನಾನು ಸತ್ತರೂ ಅವನಿಗೆ ಕೊರಳೊಡ್ಡುವುದಿಲ್ಲ ಎಂದುಕೊಂಡೆ.
ಆಗ‌ ನನ್ನ ಬಳಿ ದೂರವಾಣಿ ಇರಲಿಲ್ಲ. ಹಾಗಾಗಿ ನಾನು ನನ್ನ ಪಾಡಿಗೆ ಓದಿನ ಕಡೆ ಗಮನ ಕೊಟ್ಟಿದ್ದೆ. ನಾನು ದ್ವಿತೀಯ ವರ್ಷ ಡಿಗ್ರೀ ಮುಗಿಸುತ್ತಿದ್ದಂತೆ ಅಣ್ಣನ ಮದುವೆ‌ ನಿಶ್ಚಯವಾಯಿತು‌. ಅಪ್ಪನಿಗೆ ಅವನು ಮದುವೆಯಾದ ಮೇಲಾದರೂ ಕುಡಿಯುವುದು ಬಿಟ್ಟು ಸರಿ ಹೋಗಬಹುದೆನ್ನುವ ಭರವಸೆ. ಆದರೆ ನನಗೆ‌ ಆ ಭರವಸೆ ಇರಲಿಲ್ಲ. ಅವನು ಕುಡಿತದಿಂದ ದೂರಾಗುವುದು ಒಂದೇ ದಿನ ಎನ್ನಿಸುತ್ತಿತ್ತು. ಆಗಿದ್ದೂ ಅದೇ. ಮದುವೆಯಾದ ಮೇಲೂ ಅವನು ಕುಡಿಯುವುದು ಬಿಟ್ಟಿರಲಿಲ್ಲ. ಅಪ್ಪನ ಮೇಲಿನ ಭಯವೊಂದು‌ ಬಿಟ್ಟರೆ ಮತ್ಯಾರ ಮೇಲೂ ಪ್ರೀತಿ, ಮಮಕಾರ ಏನೂ ಇರಲಿಲ್ಲ ಅಣ್ಣನಿಗೆ. ತನಗಾಗಿ ಬಂದ ಹೆಂಡತಿಯೂ ಅವನ ಪಾಲಿಗೆ ಭೋಗದ ವಸ್ತುವಾಗಿದ್ದಳಷ್ಟೇ. ಅಣ್ಣನ ಮದುವೆಯ ದಿನ ಆ ಹುಡುಗ ಮತ್ತೆ ಸಿಕ್ಕಿದ್ದ. ಅವನ ಹೆಸರು ಮಿತೇಶ ಎಂದು ಅಂದೇ ತಿಳಿದದ್ದು. ಅಪ್ಪನ ಬಳಿ ಅವನು ಒಂದು ಕೆಲಸಕ್ಕೆ ಸೇರಿರುವುದಾಗಿ ತಿಳಿಸಿದ್ದ. ಅಪ್ಪ ಅಂದೂ ಮತ್ತೊಬ್ಬಳ ಮದುವೆಯಾಗಲಿ ನೋಡೋಣ ಎಂದಿದ್ದರಂತೆ.
ನನ್ನ ಡಿಗ್ರೀ ಮುಗಿಯುತ್ತಿದ್ದಂತೆ, ಕೆಲಸವೂ ಸಿಕ್ಕಿತ್ತು. ಅದಕ್ಕಾಗಿ ಬೇರೆ ರಾಜ್ಯಕ್ಕೆ ಹೋಗಬೇಕಿತ್ತು. ಒಂದು ತಿಂಗಳಿದೆ ಎನ್ನುವಾಗಲೇ ಎಲ್ಲಾ ತಯಾರಿ ನಮ್ಮ ಮನೆಯಲ್ಲಿ ನಡೆದಿತ್ತು. ಒಂದು‌ ದಿನ ಅಪ್ಪ ಎದೆನೋವು ಎಂದು ಕೆಲಸದಿಂದ ಬೇಗ ಬಂದಿದ್ದರು. ಆದರೆ ಅದು ಅಸಿಡಿಟಿಗೆ ಎಂದೇ ನಾವೆಲ್ಲರೂ ನಿರ್ಲಕ್ಷಿಸಿದ್ದೆವು. ಅದಕ್ಕೆ ದೊಡ್ಡ ಬೆಲೆಯನ್ನೇ ತೆತ್ತವು.  ಒಂದು ವಾರದಲ್ಲಿ ಅಪ್ಪ ಮತ್ತೆ, ಎದೆನೋವು ಎಂದು ಒದ್ದಾಡುತ್ತಿದ್ದರು, ಆಸ್ಪತ್ರೆಗೂ ಕರೆದುಕೊಂಡು ಹೋದೆವು. ಆದರೆ, ಏನು ಪ್ರಯೋಜನ! ಎದೆನೋವು ಮೊದಲೇ ಬಂದಿರಬೇಕಲ್ಲ, ಒಂದೆರೆಡು ಬಾರಿಯಾದರೂ, ಆಗ ಕರೆದುಕೊಂಡು ಬಂದಿದ್ದರೆ ಏನಾದರೂ ಸರ್ಜರಿ ಮಾಡಬಹುದಿತ್ತು. ಆದರೆ ಈಗ ಸಮಯ ಮೀರಿದೆ. ವಿ ಆರ್ ಸಾರಿ ಎಂದರು ವೈದ್ಯರು. ಆಕಾಶವೇ ದೊಪ್ಪೆಂದು ಬಿದ್ದಂತಾಗಿತ್ತು. ಎಲ್ಲವೂ ಕನಸೋ ಎಂದು ಪದೇ ಪದೇ ಮೈಕೊಡವುತ್ತಿದ್ದೆ. ಆದರೆ ಎಲ್ಲವೂ ನಿಜ. ಏನಾಯಿತು! ಮೊನ್ನೆ ಮೊನ್ನೆಯವರೆಗೂ ಅಷ್ಟು ಆರಾಮಿದ್ದ ಅಪ್ಪ ಈಗಿಲ್ಲ‌ ಎನ್ನುವುದೇ ನಂಬಲಾಗುತ್ತಿರಲಿಲ್ಲ. ಕಾರ್ಮೋಡವೊಂದು ಕವಿದಿತ್ತು ನಮ್ಮ ಬಾಳಲ್ಲಿ. ನಿರ್ಲಕ್ಷ್ಯಕ್ಕೆ ತೆತ್ತ ಬೆಲೆಯಾದರೂ ಎಂತಹದು! ನನಗೇ ಈ ವಿಷಯವನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಈಗಲೂ ಅಪ್ಪ ಜೊತೆ ಇದ್ದಾರೆ ಎನ್ನುವುದೇ ನನ್ನ ಭಾವನೆ. ನೋಡನೋಡುತ್ತಿದ್ದಂತೆ ಎಲ್ಲ ಕಾರ್ಯವೂ ಮುಗಿದಿತ್ತು. ಅಮ್ಮನ ಮುಖ ನೋಡಲಾಗುತ್ತಿರಲಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ದುಃಖ ಉಮ್ಮಳಿಸಿ ಬರುತ್ತಿತ್ತು. ಆದರೆ ನನ್ನ ಅಣ್ಣನ ಕಣ್ಣಲ್ಲಿ ಒಂದು ತೊಟ್ಟು ನೀರು ಜಾರಿದ್ದೂ ನಾನು ನೋಡಿಲ್ಲ.  ನನಗೆ ಅವನು, ಅವನ ನಡೆ-ನುಡಿ‌ ಎಲ್ಲವೂ ಅಸಹ್ಯ ಹುಟ್ಟಿಸುತ್ತಿತ್ತು. ನನ್ನ ಒಡಹುಟ್ಟಿದವನಾ ಇವನು ಎಂದು ಆಶ್ಚರ್ಯ ಪಡುತ್ತಿದ್ದೆ. ಅಪ್ಪನ ಬದಲು ಇವನಾದರೂ ಹೋಗಬಾರದಿತ್ತಾ ಎಂದುಕೊಂಡಿದ್ದೂ ಇದೆ.
ಸಮಯ ಸರಿಯುತ್ತಲೇ ಇತ್ತು, ಯಾವ ಸುಖ-ದುಃಖಗಳ ಪರಿವೇ ಇಲ್ಲದಂತೆ. ಹದಿನೈದು ದಿನಗಳು ಉಳಿದಿದ್ದವು, ನಾನು ಕೆಲಸಕ್ಕೆ ಸೇರಲು. ಆದರೆ ಯಾವ ನಿರ್ಧಾರ ತೆಗೆದುಕೊಳ್ಳಲೂ ನನಗಾಗಲಿಲ್ಲ. ಅಮ್ಮನ ಬಳಿ ಕೇಳಿದಾಗ ಅವಳಂದಳು, “ಹೋಗು ಮಗು, ನಿನ್ನ ಕಾಲ ಮೇಲೆ ನೀನು ನಿಲ್ಲು. ಅಪ್ಪ ಇಲ್ಲ, ಅಕ್ಕನ ಮದುವೆಯಾಗಬೇಕು. ನಿನ್ನ ಮದುವೆಯಾಗಬೇಕು. ಅಣ್ಣ ಇದ್ದ ಹಣವನ್ನೆಲ್ಲಾ ಹೆಂಡದ ಅಂಗಡಿಗೆ ಸುರಿಯುತ್ತಾನೆ. ನಾವು ಬೀದಿಗೆ ಬಿದ್ದಾಗ ಗುಡಿಸಲು ಕಟ್ಟುವುದಕ್ಕಾದರೂ, ನಿನಗೊಂದು ಉದ್ಯೋಗ ಬೇಕು, ನೀನು ಹೋಗು” ಎಂದರು. ಅವರ ಮಾತು ಸರಿ ಎನ್ನಿಸಿತು. ಆದರೆ ಇದರ ಮಧ್ಯೆ ಅಪ್ಪನ ಕೆಲಸ ಅಕ್ಕನಿಗೆ ಕೊಡಿಸುವ ನಿರ್ಧಾರ ಮಾಡಿದೆವು. ಮಾರನೇ ದಿನವೇ ಹೋಗಿ ಮಾತನಾಡಿ ಬರುವುದು ಎಂದುಕೊಂಡೆವು. ಆದರೆ ವಿಧಿ ನಮ್ಮ ಬಾಳಿನಲ್ಲಿ ಖುಷಿಯನ್ನು ಇಷ್ಟು ಬೇಗ ನೀಡಲು ಮನಸ್ಸೇ ಮಾಡಲಿಲ್ಲ, ಅನ್ನಿಸುತ್ತೆ. ಅಣ್ಣ  ಅಪ್ಪನ ಕೆಲಸವನ್ನು ಅವನಿಗೆ ಮಾಡಿಸಿಕೊಂಡು ಬಂದಿದ್ದ, ಕುಡುಕನಾದರೂ ಇದಕ್ಕೆಲ್ಲ ತಲೆ ಚೆನ್ನಾಗಿಯೇ ಕೆಲಸ ಮಾಡುತ್ತದೆ, ಅಪ್ಪ ತೀರಿಕೊಂಡ ಸುದ್ದಿ ಕೇಳಿ ಅವನು ಮಾಡಿದ ಮೊದಲ ಕಾರ್ಯವೇ ಇದನ್ನಿಸುತ್ತದೆ. ‌ಹೋಗಲಿ, ಇನ್ನಾದರೂ ಜವಾಬ್ದಾರಿ ಬರಲಿ ಎಂದು ಪ್ರಾರ್ಥಿಸಿದೆವು. 
ಮತ್ತೆ ಒಂದು ವಾರದ ಅಂತರದಲ್ಲಿ ನಾನು ಕೆಲಸಕ್ಕಾಗಿ ಬೇರೆ ರಾಜ್ಯಕ್ಕೆ ಹೊರಟೆ, ದೊಡ್ಡಕ್ಕ-ಭಾವ ನನ್ನ ಜೊತೆ ಬರುವವರಿದ್ದರು. ಮಿತೇಶನೂ ನನ್ನ ಮೇಲಿನ ಪ್ರೀತಿಯನ್ನು ತೋರಿಸುವುದಕ್ಕೆ ರೈಲ್ವೇ ನಿಲ್ದಾಣದವರೆಗೆ ಬಂದಿದ್ದ. ಅಮ್ಮ, ಅಕ್ಕನನ್ನು ರಾಕ್ಷಸನ ಜೊತೆಯಲ್ಲಿರಿಸಿ ನಾನು ಇನ್ನೆಲ್ಲಿಗೋ ಸಾಗಿದ್ದೆ, ಬಾಳ ಪಯಣದ ಹೊಸ ಹಾದಿಯಲ್ಲಿ....


ಕಥೆ ಮುಂದುವರಿಯುವುದು........

ಕಾಮೆಂಟ್‌ಗಳು

  1. ನನಗೆ ಈ ಕಥೆಯ ಮುಂದುವರಿದ ಭಾಗವು ಅತ್ಯಂತ ಕುತೂಹಲಕಾರಿಯಾಗಿದೆ. ನಾನು ಅದನ್ನು ಓದಲು ಕಾತರದಿಂದ ಕಾಯುತ್ತಿದ್ದೇನೆ!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..