ಕಾಫಿ!!

ಕಾಫಿ!!



 ಅಕ್ಟೋಬರ್ ೧ "ಅಂತಾರಾಷ್ಟ್ರೀಯ ಕಾಫಿ ದಿನ"ವಂತೆ. ಯಾರಾದರೂ ನೀವು ಕಾಫಿ ಪ್ರಿಯರಾ ಅಥವಾ ಟೀ ಪ್ರಿಯರಾ ಕೇಳಿದರೆ, ಉತ್ತರಿಸೋದು ನನಗೆ ಸ್ವಲ್ಪ ಕಷ್ಟನೇ! ಯಾಕಂದ್ರೆ ನನಗೆ ಎರಡೂ ಇಷ್ಟ.‌ ಆದ್ರೂ ತಕ್ಕಡಿಯಲ್ಲಿ ಹಾಕಿ ತೂಗಿ ನೋಡಿದ್ರೆ, ಕಾಫಿಗೇ ತೂಕ ಜಾಸ್ತಿ..!

ಆದ್ರೆ ನಾನು ಹೆಚ್ಚು ಕುಡಿಯೋದು ಚಹಾವನ್ನೇ! ಸಂಬಂಧಿಕರ ಅಥವಾ ಪರಿಚಯಸ್ಥರ ಮನೆಯಲ್ಲಿ ಅವರು ಕೇಳಿದಾಗಲೂ ಹೇಳೋದು ಟೀ ಅಂತಲೇ! ಸ್ವಲ್ಪ ವಿಚಿತ್ರ ಅನ್ನಿಸಬಹುದು... ಅದಕ್ಕೆ ಕಾರಣವೂ ಇದೆ.

ಟೀ ಹೇಗಿದ್ರೂ ಕುಡಿಯಬಹುದು ಅನ್ನೋದು ನನ್ನ ಅಭಿಪ್ರಾಯ. ಹಾಕಿದ್ದು ಹಾಲೋ ನೀರೋ ಅನ್ನೋವಷ್ಟು ಕನ್ಫ್ಯೂಸ್ ಆದ್ರೂ, ಸಕ್ಕರೆ ಸ್ವಲ್ಪ ಜಾಸ್ತಿ ಅಥವಾ ಕಡಿಮೆ ಆದ್ರೂ, ಚಹಾ ಪುಡಿ ಹಾಕಿದ್ದು ಹೆಚ್ಚೋ ಕಡಿಮೆಯೋ ಹೇಗೆ ಇದ್ರೂ ನಾನು ಅಡ್ಜಸ್ಟ್ ಮಾಡಿಕೊಂಡು ಕುಡಿತೀನಿ. ಆದ್ರೆ.. ಕಾಫಿ ವಿಷಯದಲ್ಲಿ‌ ಮಾತ್ರ ನಾನು ಪರ್ಟಿಕ್ಯುಲರ್!! ಗಟ್ಟಿಹಾಲಿನಲ್ಲಿ ಬಿಸಿಬಿಸಿಯಾಗಿ, ಸ್ಟ್ರಾಂಗ್ ಆಗಿ, ಮೇಲೆ ನೊರೆ ನೊರೆಯಾಗಿ, ರುಚಿಗೆ ತಕ್ಕಷ್ಟೇ ಸಿಹಿ ಇದ್ದರಷ್ಟೇ ನನಗೆ ಇಷ್ಟ ಆಗೋದು! ನನಗೆ ಅದು ಕಾಫಿ ಅಂತ ಅನ್ನಿಸೋದು, ಕಾಫಿ ಕುಡಿದ ಸಂತೃಪ್ತಿ ಮೂಡೋದು.! ಕಾಫಿಯ ಘಮ ಆಸ್ವಾದಿಸಿದರೆ, ಮನಸ್ಸಿಗೆ ಹಿತ ನೀಡಬೇಕು. ಮೊದಲ ಗುಟುಕು ಹೀರಿದಾಗ, ನಾಲಿಗೆ ನಲಿಯಬೇಕು...ಜೀವದ ಕೋಶಗಳೆಲ್ಲ ಸಂತಸದಿಂದ ಕುಣಿಯಬೇಕು... ಅದರಲ್ಲೂ ಹೊರಗಡೆ ಮಳೆ ಬರೋವಾಗ, ನೆಚ್ಚಿನ ಪುಸ್ತಕ ಓದುತ್ತಾ, ಕೈಯಲ್ಲೊಂದು ಕಪ್ ಕಾಫಿ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು!

ಹಾಗೆಂದು, ಬೆಳಿಗ್ಗೆ ಎದ್ದೊಡನೆ ಕಾಫಿ ಬೇಕು ಅಂತೇನು ಇಲ್ಲ. ದಿನಕ್ಕೆ ೫-೬ ಸಲ ಕಾಫಿ ಕೊಟ್ಟರೂ ಬೇಸರವಂತೂ ಖಂಡಿತ ಇಲ್ಲ... ಯಾವುದೇ ಮನಸ್ಥಿತಿಯಲ್ಲಿದ್ದರೂ ಪಾನೀಯಗಳಲ್ಲಿ ಇಷ್ಟವಾಗೋದು ಕಾಫಿನೇ... ಅದೊಂಥರಾ ಮನಸ್ಸಿನ ವೈದ್ಯ. ನನಗೆ ಬೇರೆ ಡ್ರಗ್ಸ್ ಬಗ್ಗೆ ಗೊತ್ತಿಲ್ಲ. ನೀವು ಕಾಫಿಯನ್ನೂ ಡ್ರಗ್ ಅಂದ್ರೆ, ಖುಷಿಯಿಂದ ಒಪ್ಕೋತೀನಿ, ನಾನು ಡ್ರಗ್ ಅಡಿಕ್ಟ್ ಅಂತ🤪! ಎನಿವೇಸ್, ಕಾಫಿ ಪ್ರಿಯರೆಲ್ಲರಿಗೂ "ಅಂತಾರಾಷ್ಟ್ರೀಯ ಕಾಫಿ ದಿನ"ದ ಶುಭಾಶಯಗಳು...

Cheers 🥂!






ಕಾಮೆಂಟ್‌ಗಳು