ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ
ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ
ಮಣಿಪಾಲದಲ್ಲಿರೋ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ ಬಗ್ಗೆ ತುಂಬಾ ಕೇಳಿರೋದ್ರಿಂದ, ಒಮ್ಮೆ ಭೇಟಿ ನೀಡಬೇಕು ಎಂಬ ಇಂಗಿತವಿತ್ತು. ಸ್ಥಳದ ಕುರಿತು ಸ್ವಲ್ಪ ವಿಷಯ ತಿಳಿದುಕೊಂಡೇ ಹೋಗಿದ್ರೂ, ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗಾಗಿತ್ತು ನಮ್ಮ ಸ್ಥಿತಿ. ಉಡುಪಿಯಿಂದ ಐದಾರು ಕಿಲೋಮೀಟರ್ ದೂರದಲ್ಲಿರೋ ಈ ಸ್ಥಳವನ್ನು ೧೦-೧೫ ಕಿಲೋಮೀಟರ್ ಮಾಡಿಕೊಂಡು ಅಂತೂ ಆ ಜಾಗವನ್ನು ತಲುಪಿದೆವು. ಪ್ರವೇಶ ದ್ವಾರದಲ್ಲೇ ಇರೋ ಕೌಂಟರ್ ಅಲ್ಲಿ ಇರೋ ವ್ಯಕ್ತಿಗೆ ಹಣವನ್ನು ನೀಡಿ, ಟಿಕೆಟ್ ತೆಗೆದುಕೊಳ್ಳಬೇಕು. ಸ್ಥಳದ ಕುರಿತು ಸ್ವಲ್ಪ ಮಾಹಿತಿ ನೀಡುವ ಅವರು, ಅಲ್ಲೇ ಇರೋ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಹೇಳುತ್ತಾರೆ. ಸ್ಕ್ಯಾನ್ ಮಾಡಿದರೆ ಆ ಸ್ಥಳದಲ್ಲಿರೋ ೨೪ ಕಟ್ಟಡಗಳ ಸಂಪೂರ್ಣ ಮಾಹಿತಿ, ಅದರ ವಿಶೇಷತೆಗಳಿರುವ ಕೈಪಿಡಿ ಲಭ್ಯವಾಗುತ್ತದೆ.
೧೯೯೭ ರಲ್ಲಿ ಆರಂಭವಾದ ಈ ಮ್ಯೂಸಿಯಂನ ರೂವಾರಿ ದಿ| ವಿಜಯನಾಥ ಶೆಣೈ. ಹಸ್ತಶಿಲ್ಪ ಹೆರಿಟೇಜ್ ಹೌಸ್ ನಿರ್ಮಿಸಲು ಹೋಗಿ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ ಆಗಿದ್ದು ಈಗ ಇತಿಹಾಸ. ಹಳೆಯ, ಸಾಂಪ್ರದಾಯಿಕ, ಐತಿಹಾಸಿಕ ಕಟ್ಟಡಗಳು, ಅವಶೇಷಗಳು, ಕರಕುಶಲ ವಸ್ತುಗಳು, ವಿವಿಧ ಶೈಲಿಯ ಉಪಕರಣಗಳನ್ನು ಸಂಗ್ರಹಿಸಿ, ಮುಂದಿನ ತಲೆಮಾರಿಗೆ ಪರಿಚಯಿಸುವ, ಪ್ರೇರೇಪಿಸುವ ದೃಷ್ಟಿಯಿಂದ ಎಲ್ಲಾ ವಸ್ತುಗಳನ್ನು ಜತನವಾಗಿರಿಸಿದ್ದಾರೆ. ಕರ್ನಾಟಕವಷ್ಟೇ ಅಲ್ಲದೆ ವಿವಿಧ ರಾಜ್ಯಗಳಿಂದ ಸಂಗ್ರಹಿಸಿದ ಅನೇಕ ಕಟ್ಟಡಗಳನ್ನು, ಕಟ್ಟಡಗಳ ವಿವಿಧ ಭಾಗಗಳನ್ನು ತಂದು ಇಲ್ಲಿ ಐದಾರು ಎಕರೆ ಜಾಗದಲ್ಲಿ ಪುನರ್ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಹೊಣೆಗಾರಿಕೆ ಈಗ ಹಸ್ತ ಶಿಲ್ಪ ಟ್ರಸ್ಟ್ ನದ್ದು. ಈ ಟ್ರಸ್ಟ್, ಇಂದಿನ ಮತ್ತು ಮುಂದಿನ ಪೀಳಿಗೆಗೆ ಇವುಗಳನ್ನೆಲ್ಲಾ ಪರಿಚಯಿಸುವ ಕೆಲಸ ಮಾಡಿದರೆ, ಹಿಂದಿನವರಿಗೆ ತಾವು ಉಪಯೋಗಿಸಿದ, ಈಗ ವಿರಳವಾಗಿರುವ ಹಾಗೂ ಕಣ್ಮರೆಯಾಗಿರುವ ವಸ್ತುಗಳನ್ನು ನೆನಪಿಸುವ ಕೆಲಸ ಮಾಡುತ್ತದೆ.
ಅದರಲ್ಲಿ ಬುಡಕಟ್ಟು ಜನಾಂಗದ ಕಲೆಗಾರಿಕೆ, ಜಾನಪದ ದೈವಗಳ ಗುಡಿಗಳು, ಗತಕಾಲದ ಬೀದಿಯ ಮರುಸೃಷ್ಟಿ, ಅಂಗಡಿ ಮುಂಗಟ್ಟುಗಳು, ಸಾಂಸ್ಕೃತಿಕ ಕಲಾಕೃತಿಗಳು .... ಅಬ್ಬಬ್ಬಾ ಕಣ್ಣಿಗೆ, ಮನಸ್ಸಿಗೆ ಹಬ್ಬವೇ ಸರಿ. ಹಿಂದೆ ನೋಡಿದ್ದ ವಸ್ತುಗಳು ಕೆಲವಾದರೆ, ನೋಡಿರದ ವಸ್ತುಗಳು ಹಲವು..
ಗೋಡೆಯ ಮೇಲೆ ತೂಗುಹಾಕಿದ ವಿವಿಧ ಬಗೆಯ ಚಿತ್ರಕಲೆಗಳು, ದಶಾವತಾರಗಳ ಚಿತ್ರಗಳು, ಗೋಡೆಯ ಮೇಲೆ ಚಿತ್ರಿಸಿದ ಚಿತ್ತಾರಗಳು .... ಇವುಗಳೆಲ್ಲಾ ಮನಸೂರೆಗಳ್ಳುತ್ತವೆ. ಅಲ್ಲಿರುವ ಕೆತ್ತನೆಗಳು, ಶಿಲ್ಪಗಳು, ಕಂಬಗಳು ಎಷ್ಟು ಆಕರ್ಷಣೀಯ..! ಅವುಗಳನ್ನು ಜೋಡಿಸಿಟ್ಟ ರೀತಿಯೂ ಎಷ್ಟು ಅಚ್ಚುಕಟ್ಟು! ಕೆಲವೊಂದು ಕಟ್ಟಡಗಳೊಳಗೆ ಹಾಕಿರುವ ಹಾಡುಗಳು, ಅಲ್ಲೇ ತಲ್ಲೀನವಾಗುವಷ್ಟು ಆಪ್ಯಾಯಮಾನ. ಒಮ್ಮೆ ಒಳಹೊಕ್ಕು, ಪೂರ್ಣ ವೀಕ್ಷಿಸಿ ಹೊರಬರಲು ೧ ರಿಂದ ೨ ಗಂಟೆಗಳೇ ಬೇಕಾಗುತ್ತದೆ. ಎಲ್ಲಾ ಕಾಲಕ್ಕೂ, ಹವಾಮಾನಕ್ಕೂ ಒಗ್ಗುವಂತೆ ರಕ್ಷಿಸುವುದು ನಿಜಕ್ಕೂ ಸವಾಲೇ. ಇದರಲ್ಲಿ ಹಸ್ತ ಶಿಲ್ಪ ಟ್ರಸ್ಟ್ ನ ಕಾರ್ಯ ಮೆಚ್ಚುವಂಥದ್ದು.
ಹಿಂದಿನ ಕಾಲದ ಜನರ ಜೀವನದ ಭಾಗವಾಗಿದ್ದ, ಇಂದು ಕಣ್ಮರೆಯಾಗಿರುವ, ಕಣ್ಮರೆಯಾಗುತ್ತಿರುವ ವಸ್ತುಗಳನ್ನು ಕಣ್ತುಂಬಿಕೊಳ್ಳಲು, ಇಂದಿನ ಮುಂದಿನ ಪೀಳಿಗೆಗೆ ಪರಿಚಯಿಸಲು ಭೇಟಿ ನೀಡಬಹುದಾದ ಜಾಗವೆಂದರೆ ತಪ್ಪಾಗಲಾರದು.
ಪ್ರವಾಸ ಕಥನ ಸೊಗಸಾಗಿದೆ
ಪ್ರತ್ಯುತ್ತರಅಳಿಸಿಧನ್ಯವಾದಗಳು😊
ಅಳಿಸಿSuper
ಪ್ರತ್ಯುತ್ತರಅಳಿಸಿಧನ್ಯವಾದ❤️
ಅಳಿಸಿಅಭಿನಂದನೆಗಳು .ತುಂಬ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಧನ್ಯವಾದಗಳು🤩
ಅಳಿಸಿ