ಯುನೈಟೆಡ್ ಬ್ರೂವರೀಸ್ ಅಲ್ಲಿ- ಹೀಗೊಂದು ದಿನ...

 ಯುನೈಟೆಡ್ ಬ್ರೂವರೀಸ್ ಅಲ್ಲಿ- ಹೀಗೊಂದು ದಿನ..

ನಮ್ಮ ವಿಭಾಗದಿಂದ ಆಯೋಜಿಸಿದ್ದ, ಕೈಗಾರಿಕಾ ಭೇಟಿಯ ಭಾಗವಾಗಿ ನಾವು ಮೊದಲು ತೆರಳಿದ್ದು, ಬೈಕಂಪಾಡಿ ಹತ್ತಿರ ಇರೋ ಯುನೈಟೆಡ್ ಬ್ರೂವರೀಸ್(United Breweries)ಗೆ. ಕರ್ನಾಟಕದಲ್ಲಿರೋ ಅವರ ಮೂರು ಶಾಖೆಗಳಲ್ಲಿ ಇದೂ ಒಂದು. ಇದು ಮದ್ಯ ಉತ್ಪಾದಿಸೋ ಕೈಗಾರಿಕೆ (Brewing/beer producing industry). ಯು.ಬಿ.ಯ ಬಿಯರ್ ಉತ್ಪನ್ನಗಳಲ್ಲಿ ಕಿಂಗ್ ಫಿಶರ್ ಮುಖ್ಯವಾದುದು. ಅದ್ರಲ್ಲೂ ಸ್ಟ್ರಾಂಗ್, ಬ್ಲೂ, ಡ್ರಾಟ್ ನಂತಹ ವಿವಿಧ ಫ್ಲೇವರ್ ಗಳುಂಟು. ಯುಬಿಯು ಹೈನೆಕೆನ್ ಕಂಪೆನಿಯ ಭಾಗವಾದ ನಂತರ, ಹೈನೆಕೆನ್ ಇತ್ತೀಚೆಗೆ ತಯಾರಿಸಲ್ಪಡುತ್ತಿರುವ ಉತ್ಪನ್ನ.

ಅವರ ಕೈಗಾರಿಕೆಗೆ ಪ್ರವೇಶಿಸಲು ಅವರಿಂದ ವಿಶೇಷ ಅನುಮತಿ ಪಡೆದುಕೊಳ್ಳೋದು ಕಡ್ಡಾಯ. ಹಾಗೆಯೇ ಅವರದೇ ಆದ ವಿಶೇಷ ನಿಯಮಗಳೂ ಉಂಟು. 

ಅನುಮತಿ ಪತ್ರ ತೋರಿಸಿದ ನಂತರ‌, ಎಲ್ಲರ ಹೆಸರನ್ನು ಬರೆದುಕೊಂಡು, ಅವರ ಕೆಲವು ನಿಯಮಗಳನ್ನು ಹೇಳಿ ಒಳಗೆ ಬಿಟ್ಟರು. ಅಲ್ಲಿಯ ಎಚ್.ಆರ್. ಅವರ ಉದ್ಯಮದ ಬಗ್ಗೆ, ವಿವಿಧ ಉತ್ಪನ್ನಗಳ ಬಗ್ಗೆ ತಿಳಿಸಿದರೆ, ಇನ್ನೊಬ್ಬರು ನಿಯಮಗಳನ್ನು, ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಿದರು.

ಸ್ವಲ್ಪ ಮಳೆ ಹನಿಯ ನಡುವೆಯೇ, ಉತ್ಪಾದನಾ ಸ್ಥಳಕ್ಕೆ ಹೋದೆವು. ಅಲ್ಲಿಯ ಗುಣಮಟ್ಟ ನಿಯಂತ್ರಣಾಧಿಕಾರಿ, ಮದ್ಯ ಉತ್ಪಾದನೆಗೆ ಉಪಯೋಗಿಸುವ ಕಚ್ಚಾ ಮತ್ತು ರಾಸಾಯನಿಕ ವಸ್ತುಗಳ ಬಗ್ಗೆ ತಿಳಿಸಿ, ಅವುಗಳ ಗುಣಮಟ್ಟ ಪರೀಕ್ಷೆ & ನಿಯಂತ್ರಣಾ ಸ್ಥಳ, ಮದ್ಯ ತಯಾರಿಕಾ ಮನೆಗೆ(brew house area) ಕರೆದೊಯ್ದರು. ಅಲ್ಲಿಯ ವಿವಿಧ ಪ್ರಕ್ರಿಯೆಗಳಾದ ಕಚ್ಚಾವಸ್ತುಗಳ ಪುಡಿ ಮಾಡುವಿಕೆ, ಕುದಿಸುವಿಕೆ, ಸೋಸುವಿಕೆ ಮುಂತಾದವುಗಳನ್ನೂ, ಹಾಗೆಯೇ ಕೆಳ ಮಾಳಿಗೆಯಲ್ಲಿರುವ ತಾಪಮಾನ ಬದಲಾವಣಾ ತಟ್ಟೆಗಳು, ಯೀಸ್ಟ್ ಸಂಗ್ರಹಣಾ ಪಾತ್ರೆಗಳು ಮುಂತಾದುವುಗಳನ್ನು ತೋರಿಸುತ್ತಾ, ಅಲ್ಲಿಯ ಬೇರೆ ಬೇರೆ ಪ್ರಕ್ರಿಯೆಗಳನ್ನು ವಿವರಿಸುತ್ತಾ ಬಿಯರ್ ಹೇಗೆ ಉತ್ಪಾದಿಸುತ್ತಾರೆ ಎಂದು ತಿಳಿಸಿದರು. ಅಷ್ಟು ದೊಡ್ಡ ದೊಡ್ಡ ಪಾತ್ರೆಗಳು,‌ ತೊಟ್ಟಿಗಳು, ಸಂಗ್ರಹಣಾ ಟ್ಯಾಂಕ್ಗಳನ್ನು ನೋಡೋದೇ, ಅಲ್ಲಾಗುವ ವಿವಿಧ ಪ್ರಕ್ರಿಯೆಗಳನ್ನು ತಿಳಿದುಕೊಳ್ಳೋದೇ ಒಂಥರಾ ಕುತೂಹಲ! ಈ ಮೇಲಿನ ಪ್ರಕ್ರಿಯೆಗಳಲ್ಲಿ ಸಿಗುವ, ಅವರಿಗೆ ಬೇಡವಾದ ಕೆಲವು ಉತ್ಪನ್ನಗಳನ್ನು ಪ್ರಾಣಿ ಆಹಾರವಾಗಿ ಉಪಯೋಗಿಸಲು ಕಳುಹಿಸುತ್ತಾರಂತೆ. 

ಅಲ್ಲಿಂದ ತಯಾರಾದ ಬಿಯರ್, ಕ್ಯಾನ್ ಗೆ ಹೇಗೆ ತುಂಬಿಸುತ್ತಾರೆ, ಪಾಶ್ಚರೀಕರಣ ವಿಧಾನ, ಉತ್ಪಾದನಾ ದಿನಾಂಕ ಹಾಗೂ ಇತ್ಯಾದಿ ಮಾಹಿತಿಗಳನ್ನು ಯಾವಾಗ ಸೀಲ್ ಮಾಡಲಾಗುತ್ತದೆ, ಕ್ಯಾನನ್ನು ಹೇಗೆ ಪ್ಯಾಕ್ ಮಾಡುತ್ತಾರೆ ಎಂದೆಲ್ಲಾ ತೋರಿಸುತ್ತಾ, ವಿವರಿಸಿದರು. ಇದು ನನಗೆ ಅತ್ಯಂತ ಇಷ್ಟವಾದ ಭಾಗ. ಯಾಕಂದ್ರೆ, ಯಂತ್ರಗಳು ಮೇಲೆ ತಿಳಿಸಿದ ಕೆಲಸಗಳನ್ನೆಲ್ಲಾ ಮಾಡೋ ರೀತಿನೇ ಅದ್ಭುತ. ಪ್ರತಿಯೊಂದೂ ಎಷ್ಟು ಅಚ್ಚುಕಟ್ಟು..!!

ಅಲ್ಲಿ ಕೆಲವು ಕಡೆ ಇದ್ದ ದುರ್ವಾಸನೆಯಿಂದ, ಆಕ್ಸಿಜನ್ ಪ್ರಮಾಣ ಕೆಲವೆಡೆ ಕಡಿಮೆ ಇದ್ದುದರಿಂದ ಸ್ವಲ್ಪ ಕಷ್ಟವಾದರೂ, ಇವೆಲ್ಲಾ ಅಲ್ಲಿ ಸಾಮಾನ್ಯವಾದ್ದರಿಂದ, ಅಲ್ಲಿ ಕೆಲಸ ಮಾಡುತ್ತಿರುವವರ ಮೇಲೆ, ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡ ರೀತಿಗೆ ಹೆಮ್ಮೆ ಆಯ್ತು. ಒಟ್ಟಾರೆಯಾಗಿ ನಮ್ಮ ಭೇಟಿ ಚೆನ್ನಾಗಿತ್ತು.

 ಹ್ಞಾ! ಹೇಳೋಕೆ ಮರೆತೆ.! ಅಲ್ಲಿ ಉತ್ಪಾದಿಸಿದ ಬಿಯರ್ ನೋಡೋಕೆ ಕೊಟ್ಟರು. ಬಣ್ಣ ಏನೋ ಓಕೆ🙊.. ಆ ವಾಸನೆ ನಂಗಂತೂ ಇಷ್ಟವಾಗಲಿಲ್ಲ. ಮದ್ಯಪ್ರಿಯರು ಹೇಗಪ್ಪಾ ಕುಡೀತಾರೆ ಇದನ್ನು , ಎಂದನಿಸಿದ್ದು ಸತ್ಯ..

ಆದ್ರೂ, ಸ್ವಲ್ಪ ಟೇಸ್ಟ್ ಮಾಡೋಕಾದ್ರು ಬಿಯರ್ ಕೊಡ್ಬೇಕಿತ್ತು ಅಂತ ನಮ್ಮ ಕೆಲವು ಹುಡ್ಗೀರಿಗೆ ಬೇಜಾರಾಗಿದ್ದಂತು ಸುಳ್ಳಲ್ಲ😂😛.. 

ಏನೇ ಇರ್ಲಿ....

ಚಿಯರ್ಸ್🥂 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..