ಏನೋ ಒಂಥರಾ ಕಚಗುಳಿ..
ಏನೋ ಒಂಥರಾ ಕಚಗುಳಿ...
ಅಂತಹ ಕಣ್ಮಣಿಗೆ ಅವಳ ಫ್ರೆಂಡ್ಸ್ 'ಒನ್ ಮ್ಯಾನ್ ಆರ್ಮಿ' ಎಂದು ಯಾವಾಗಲೂ ಟೀಕಿಸುತ್ತಿದ್ದರು. ಏನನ್ನೋ ಯೋಚಿಸುತ್ತಾ ನಡೆಯುತ್ತಿದ್ದ ಕಣ್ಮಣಿ ಎದುರಿನಿಂದ ಒಬ್ಬ ನಡೆದು ಬರುತ್ತಿದ್ದ. ಎಂದೂ, ಯಾರನ್ನೂ ನೋಡಿದಾಗ ಆಗದ ವಿಚಿತ್ರ ಭಾವ ಅವನನ್ನು ನೋಡಿದಾಗ ಅವಳಿಗಾಯಿತು. ಮೊದಲ ಸಲ..ಸುತ್ತಲಿನ ಹಸಿರಿನ ರಮ್ಯತೆ, ಮುದ ನೀಡುತ್ತಾ ರೋಮಾಂಚನಗೊಳಿಸಿತು! ಬೀಸುತ್ತಿರುವ ತಣ್ಣನೆಯ ಗಾಳಿ ಮೊದಲ ಬಾರಿಗೆ ಕಚಗುಳಿಯಿಟ್ಟಂತಾಯಿತು! .....
ಆತ......, ಮನ್ಮಥನಲ್ಲದಿದ್ದರೂ ಸುಂದರನೇ! ಮುಖದಲ್ಲಿದ್ದ ಮಂದಹಾಸವೇ ಸಾಕಿತ್ತು ಅವನ ಅಂದ ಹೆಚ್ಚಿಸಲು. ‘ಯಾರಿವನು..?!’ ಎಂದು ಯೋಚಿಸುತ್ತಾ , ಕಳೆದು ಹೋಗಿದ್ದ ಕಣ್ಮಣಿ ಎಚ್ಚೆತ್ತುಕೊಳ್ಳುವಾಗಲೇ ಆತ ಮಾಯವಾಗಿದ್ದ. ‘ಯಾವುದೋ ಲೋಕದಲ್ಲಿ ವಿಹರಿಸದೇ ಇದ್ದಿದ್ದರೆ, ಅವನು ಯಾವ ಕಡೆ ಹೋದನೆಂದಾದರೂ ತಿಳಿದುಕೊಳ್ಳಬಹುದಿತ್ತು. ಛೇ! ಎಂಥಾ ಕೆಲಸವಾಯ್ತು’ ಎಂದು ತನ್ನನ್ನೇ ಶಪಿಸುತ್ತಾ ಕ್ಲಾಸ್ಗೆ ತೆರಳಿದಳು.
‘ಅಯ್ಯೋ! ಹೇಗಿದ್ದೆ ಕಣ್ಮಣಿ.!! ಹುಡುಗರನ್ನು ಕಣ್ಣೆತ್ತಿಯೂ ನೋಡದವಳು ಇಂದು ಏಕೆ ಈ ರೀತಿ ವರ್ತಿಸುತ್ತಿರುವೆ’ ಎಂದು ಮನಸ್ಸು ಎಚ್ಚರಿಸಿದರೂ, ಒಳಮನಸ್ಸು ಅವನ ಕುರಿತಾಗಿಯೇ ಚಿಂತಿಸುತ್ತಿತ್ತು. ಕ್ಲಾಸ್ ಅಲ್ಲಿ ಪ್ರೊಫೆಸರ್ ಪಾಠ ಮಾಡುತ್ತಿದ್ದರೂ ಕಣ್ಣೆದುರು ಮಾತ್ರ ಅವನೇ ಕಾಣಿಸುತ್ತಿದ್ದ. ಕ್ಲಾಸ್ ಮುಗಿಸಿ ಫೇಸ್ಬುಕ್, ಇನ್ಸ್ಟಾಗ್ರಾಮ್ ಅಲ್ಲಿ ಸರ್ಚ್ ಮಾಡೋಣವೆಂದುಕೊಂಡರೆ ಆತನ ಹೆಸರು ತಿಳಿದಿಲ್ಲ. ಡಿಪಾರ್ಟ್ಮೆಂಟ್ ಹೆಸರು ಗೊತ್ತಾಗಿದ್ದರೂ ಹೇಗಾದರೂ ಹುಡುಕಬಹುದಿತ್ತು ಎಂದುಕೊಳ್ಳುತ್ತಲೇ ಆ ದಿನ ಹೇಗೋ ಕಳೆಯಿತು.
ಮತ್ತೆ ಎರಡು ದಿನ ಆತ ಕಾಣಸಿಗಲೇ ಇಲ್ಲ. ಮೂರನೇ ದಿನ ಮತ್ತೆ ಕಣ್ಣೆದುರಿಗೆ ಬಂದ. ಆದರೆ ಈ ಬಾರಿ ಒಬ್ಬನೇ ಇರಲಿಲ್ಲ, ಆತನೊಂದಿಗೆ ಕೆಲವು ಹುಡುಗರಿದ್ದರು. ಈ ದಿನವೂ ನೋಡುವುದಕ್ಕಿಂತ ಹೆಚ್ಚಿನದೇನೂ ಆಗಿಲ್ಲ. ಮಾರನೇ ದಿನ ಆತನ ಗುಂಪು ಕಾಣಿಸಿದಾಗ, ಕಣ್ಮಣಿಯ ಕಣ್ಣುಗಳು ತಿಳಿಯದೇ ಅವನನ್ನು ಹುಡುಕಾಡಿದವು. ಇದನ್ನು ಅವನ ಗುಂಪಿನವನೊಬ್ಬ ಗಮನಿಸುತ್ತಿದ್ದನೆಂದು ತಿಳಿದಾಗ, ‘ಶಿಟ್! ಬೇಕಿತ್ತಾ ಇದು!’ ಎಂದು ಅಲ್ಲಿಂದ ಕಾಲ್ಕಿತ್ತಳು. ಅವರ ಗುಂಪಿನಲ್ಲಿ ಅವನನ್ನು ಹುಡುಕುವುದೇ ಒಂದು ಸವಾಲಾಗಿತ್ತು.
ಎರಡು ಮೂರು ಬಾರಿ ಹೀಗೆಯೇ ಆದಾಗ ಅವರನ್ನು ನೋಡುವುದೇ ಬೇಡ ಎನ್ನುವ ತೀರ್ಮಾನಕ್ಕೆ ಬಂದರೂ ಕಣ್ಣು ಅವನನ್ನು ನೋಡುವುದಕ್ಕಾಗಿ ತವಕಿಸುತ್ತಿತ್ತು. ಮನಸ್ಸು ಅವನ ಧ್ಯಾನದಲ್ಲೇ ಮುಳುಗಿತ್ತು.
ಇದಿಷ್ಟು ಜಠಿಲವಾಗಲು ಕಾರಣವೇ ಆತ ಕಣ್ಣಿಗೆ ಬೀಳುತ್ತಿದ್ದ ಸ್ಥಳಗಳು. ಕ್ಯಾಂಟೀನ್, ಬಸ್ ಸ್ಟ್ಯಾಂಡ್, ಗೇಟ್ ಬಳಿ ಸಿಕ್ಕಿದರೆ ಆತನ ಪೂರ್ವಾಪರವಾದರೂ ಕಣ್ಮಣಿಗೆ ಹೇಗೆ ಸಿಕ್ಕೀತು! ಅವನನ್ನು ಹಿಂಬಾಲಿಸಿಯೋ, ಮಾತನಾಡಿಯೋ, ಕ್ಲಾಸ್ ಮೇಟ್ಸ್ ಬಳಿ ಕೇಳಿಯೋ, ವಿಷಯ ತಿಳಿದುಕೊಳ್ಳುವಷ್ಟು ಧೈರ್ಯ ಕಣ್ಮಣಿಗಿರಲಿಲ್ಲ. ಒಂಥರಾ ಮುಜುಗರ...!
ಮನಸ್ಸಿಗೆ ಮೋಡಿ ಮಾಡಿದ ಆತನನ್ನು ನೋಡುವುದರಲ್ಲೇ ತೃಪ್ತಿಪಡಲಾರಂಭಿಸಿದಳು. ಇದೇ ಗುಂಗಲ್ಲಿರುವಾಗ ವಾರ್ಷಿಕ ಪರೀಕ್ಷೆ ಬಂದೇ ಬಿಟ್ಟಿತು. ಮತ್ತೆ ಆತ ಕಾಣಲೇ ಇಲ್ಲ.
ಕೊನೆಯ ಪರೀಕ್ಷೆ ಮುಗಿಸಿ, ಮನೆಗೆ ತೆರಳಲು ಅನುವಾಗಿ ಕಣ್ಮಣಿ ಬಸ್ ಸ್ಟ್ಯಾಂಡ್ ಗೆ ಬಂದಳು. ಅಲ್ಲಿ ಒಬ್ಬಾತ ಕುಳಿತಿದ್ದ. ಮುಖ ನೋಡುತ್ತಾಳೆ, ಅರ್ರೇ! ಅದೇ ಹುಡುಗ....!! ಮತ್ತೆ ಮತ್ತೆ ನೋಡಿದಳು. ಹೌದು, ತನ್ನನ್ನು ಆಕರ್ಷಿಸಿ, ತಿಳಿಯಾದ ಮನದಲ್ಲಿ ಸಂಚಲನ ತಂದಾತ..! ಪ್ರಶಾಂತ ಭಾವದಲ್ಲಿ ಬಿರುಗಾಳಿ ಎಬ್ಬಿಸಿದಾತ...!
ಯಾರಿಗೋ ಕಾಯುತ್ತಿರುವಂತೆ ಕುಳಿತಿದ್ದ ಅವನ ಬಳಿ ಹಲವರು ಬಂದರು.. ಕೆಲವರು ಅಳುತ್ತಿದ್ದರು, ಇನ್ನು ಕೆಲವರು ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಿದ್ದರು. ಉಳಿದವರು ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಾ ವಿದಾಯ ಹೇಳುತ್ತಿದ್ದರು.
ಇದನ್ನೆಲ್ಲಾ ನೋಡುತ್ತಿದ್ದ ಕಣ್ಮಣಿಗೆ ಥಟ್ಟನೆ ಹೊಳೆಯಿತು. ‘ಓಹ್! ಆತ ತನ್ನ ಸೀನಿಯರ್..!’ ಮನಸ್ಸು ಒದ್ದಾಡಿತು.. ಅವನು ಇನ್ನು ತನ್ನ ಕಣ್ಣೆದುರು ಬರಲಾರ. ‘ಅವನೊಂದಿಗೆ ಮಾತನಾಡಬೇಕಿತ್ತಾ? ಹೆಸರನ್ನಾದರೂ ತಿಳಿದುಕೊಳ್ಳಬೇಕಿತ್ತಾ?’ ಎಂದು ತನ್ನೊಳಗೆ ಪ್ರಶ್ನೆ ಹಾಕಿಕೊಳ್ಳುವಾಗ ಬಸ್ ಬಂದಿತು. ಕಾಲುಗಳು ಬಸ್ನತ್ತ ಹೆಜ್ಜೆ ಹಾಕಿದವು. ಯಾವುದೋ ಲೋಕದಲ್ಲಿ ಮುಳುಗಿದವಳಂತೆ ಬಸ್ ಹತ್ತಿ ಕೂತಳು. ಮನಸ್ಸು ಖಾಲಿ ಖಾಲಿಯಾಗಿತ್ತು.. ಖಾಲಿಯಾದರೂ ಭಾರವಾಗಿತ್ತು.! ಬಸ್ ಅಲ್ಲಿ ಹಾಕಿದ್ದ ಹಾಡಿನ ಸಾಲು ಕಿವಿಗಷ್ಟೇ ಅಲ್ಲ, ಹೃದಯಕ್ಕೂ ಅಪ್ಪಳಿಸಿತ್ತು. ಆ ಹಾಡು ಮುಗಿದರೂ, “ಹೀಗೆ ಬಂದು ಹಾಗೆ ಹೋಗುವ ಮಂಜಾದೆ ನೀನು ನನಗೆ...” ಎಂಬೀ ಸಾಲು ಅವಳ ಕಿವಿಯಲ್ಲಿ ಮತ್ತೆ ಮತ್ತೆ ರಿಂಗಣಿಸುತ್ತಿತ್ತು..
ಮುಂದಿನ ಭಾಗ ಯಾವಾಗ?
ಪ್ರತ್ಯುತ್ತರಅಳಿಸಿಕಣ್ಮಣಿ ಯು ಮನದ ಭಾವನೆಗಳಿಗೆ ಸುಂದರವಾದ ಪದಗಳ ಜೋಡಣೆಯೊಂದಿಗೆ ಅದನ್ನು ಪ್ರಕಟಪಡಿಸುವ ಕಣ್ಮಣಿ ಯು ಪ್ರಯತ್ನ ಸಫಲವಾಗಿದೆ. ಧನ್ಯವಾದಗಳು. ಇಂತಹ ಇನ್ನೂ ಹಲವಾರು ಬರಹಗಳು ಲೇಖಕರ ಲೇಖನಿಯ ಮೂಲಕ ಓದುಗರಿಗೆ ಓದುವ ಭಾಗ್ಯ ಸಿಗಲಿ ಎಂದು ಹಾರೈಸುತ್ತಾ ....... 🙏
ಪ್ರತ್ಯುತ್ತರಅಳಿಸಿಧನ್ಯವಾದಗಳು ನಿಮ್ಮ ಹಾರೈಕೆಗೆ😇🙏
ಅಳಿಸಿತುಂಬಾ ಚೆನ್ನಾಗಿದೆ.. ಹೀಗೆ ಬರೆಯುತ್ತ ಇರಿ..
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏😊
ಅಳಿಸಿ