ಸಂಸ್ಕೃತದಲ್ಲಿಹುದು ಸಂಸ್ಕೃತಿ


            ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲೇ ಹರಿದು ಬರುತ್ತದೆ. ಅವುಗಳಲ್ಲೊಂದು ವಿಶ್ವ ಸಂಸ್ಕೃತ ದಿನ. ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಸಂಸ್ಕೃತ ಭಾಷೆಯ ಮಹತ್ವವನ್ನು ಸಾರುವುದು ಇದರ ಉದ್ದೇಶ. ದೇವಭಾಷಾ, ಗೀರ್ವಾಣವಾಣೀ, ಅಮೃತವಾಣೀ, ಸುರಭಾರತೀ ಎಂದೆಲ್ಲಾ ಕರೆಸಿಕೊಳ್ಳುವ ಸಂಸ್ಕೃತ ಎಲ್ಲ ವಿಷಯಗಳ ಮೂಲಾಧಾರ.

           ಸರ್ವಸ್ವವನ್ನೂ ತನ್ನಲ್ಲಿ ಇಟ್ಟುಕೊಂಡ ವಿಶ್ವಕೋಶ. ಇದು  ಎಲ್ಲ ಭಾಷೆಗಳ ಜನನಿ. ಸಂಸ್ಕೃತವು ವಿಶಿಷ್ಟವಾದ, ಸುಲಲಿತವಾದ ಭಾಷೆ. ವೇದ-ವೇದಾಂಗ, ಉಪನಿಷತ್, ಪುರಾಣ, ರಾಮಾಯಣ, ಮಹಾಭಾರತ, ಪಂಚತಂತ್ರ ಇವುಗಳಿರುವುದು ಸಂಸ್ಕೃತದಲ್ಲಿ. ಅರ್ಥಶಾಸ್ತ್ರ, ವೇದಗಣಿತ, ನೀತಿಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ನ್ಯಾಯ, ಧರ್ಮ, ರಾಜನೀತಿ, ವ್ಯವಹಾರ, ನಾಟ್ಯ, ಕಲೆ ಇವುಗಳ ತವರೂರು ಸಂಸ್ಕೃತ. ಯಾವುದೇ ವಿಷಯವನ್ನಾಗಲಿ ಆಳವಾಗಿ ತಿಳಿಯಬೇಕೆಂದರೆ ಅದಕ್ಕೆ  ಸಂಸ್ಕೃತ ಬೇಕು.

            ‘ಭಾರತದ ಪ್ರತಿಷ್ಠೆ ಎರಡು- ಸಂಸ್ಕೃತ ಮತ್ತು  ಸಂಸ್ಕೃತಿ’. ಸನಾತನ ಸಂಸ್ಕೃತಿಯ ತಾಯಿಬೇರು ಸಂಸ್ಕೃತ. ಪ್ರಾಚೀನ ಕಾಲದಿಂದ ಇಂದಿನವರೆಗೂ ನಮ್ಮ ಭಾರತೀಯ ಸಂಸ್ಕೃತಿ ಅವಿಚ್ಛಿನ್ನವಾಗಿ, ಅವ್ಯಾಹತವಾಗಿ ಹರಿದು ಬರಲು ಕಾರಣ ಸಂಸ್ಕೃತವೇ. ಒಬ್ಬ ವ್ಯಕ್ತಿ ಮಾನಸಿಕವಾಗಿ, ಬೌದ್ಧಿಕವಾಗಿ, ನಿಷ್ಠಾವಂತನಾಗಿ, ಸರ್ವಗುಣ ಸಂಪನ್ನನಾಗಲು ಸಂಸ್ಕೃತ ಬೇಕು. ಯಾಕೆಂದರೆ ಸಂಸ್ಕೃತದಲ್ಲಿ  ಸಂಸ್ಕೃತಿ ಅಡಗಿದೆ. ಮಣ್ಣಿನ ಮುದ್ದೆಯಂತಿರುವ ಮಾನವನನ್ನು ಉತ್ತಮ ಮೂರ್ತಿಯನ್ನಾಗಿ ರೂಪಿಸುವ ಸಾಮರ್ಥ್ಯ ಸಂಸ್ಕೃತಕ್ಕಿದೆ. ಸಂಸ್ಕೃತ ಶ್ಲೋಕಗಳ ಓದುವಿಕೆಯಿಂದ ಮೆದುಳು ಚುರುಕಾಗುತ್ತದೆ ಎಂದು ಇತ್ತೀಚಿನ ವರದಿ ಹೇಳಿದೆ. ಇದು ಕಂಪ್ಯೂಟರ್ ಗೆ  ಸೂಕ್ತವಾಗುವ ಭಾಷೆಯೂ ಹೌದು. 

            ಸಂಸ್ಕೃತ ಮರೆಯಾಗುತ್ತಿರುವ ಈ ದಿನಗಳಲ್ಲಿ, ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ‘ನೂತನ ಶಿಕ್ಷಣ ನೀತಿ’ ಯಲ್ಲಿ ಸಂಸ್ಕೃತ ಭಾಷೆಗೆ ಮಹತ್ವ  ಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ. ಸಂಸ್ಕೃತವನ್ನು ಆರಿಸಿಕೊಂಡ ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗಾಗಿ ಓದದೆ, ಸಂಸ್ಕೃತ ಕಲಿಯುವಲ್ಲಿ ಮನಸ್ಸು ಮಾಡಬೇಕು. ವಿದೇಶೀಯರು ಸಂಸ್ಕೃತ ಕಲಿಯುವತ್ತ ಮುಖ ಮಾಡಿದ್ದು, ಸಂಸ್ಕೃತವೆಂದರೆ ಮೂಗು ಮುರಿಯುವ ಭಾರತೀಯರಿಗೆ ಆದರ್ಶವಾಗಬೇಕು. ಸಂಸ್ಕೃತವೆಂದರೆ ‘ಕಬ್ಬಿಣದ ಕಡಲೆ’ ಎಂಬ ಭಾವನೆಯನ್ನು ತೊಡೆದು ಹಾಕಬೇಕು. 

           ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಕೃತದ ಕುರಿತು ಶಿಕ್ಷಣ, ಶಿಬಿರ, ಲೇಖನ, ನುಡಿ, ವ್ಯಾವಹಾರಿಕ ಸಂಸ್ಕೃತ ಹಾಗೂ ಅದೆಷ್ಟೋ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು, ಸಂಸ್ಕೃತವನ್ನು ಬೆಳೆಸುವಲ್ಲಿ ಹೆಜ್ಜೆ ಹಾಕೋಣ. ಸಂಸ್ಕೃತವನ್ನು ಈ ದಿನಕ್ಕಷ್ಟೇ ಮೀಸಲಾಗಿರಿಸದೆ, ಎಲ್ಲ  ದಿನವನ್ನು  ಸಂಸ್ಕೃತಮಯವಾಗಿಸೋಣ.

ಕಾಮೆಂಟ್‌ಗಳು