ವರ್ಕ್ ಫ್ರಮ್ ಹೋಮ್

 

    'ಹೋ! ನಿಂಗೀಗ ವರ್ಕ್ ಫ್ರಮ್ ಹೋಮ್, ಅಲ್ವಾ! ಹೇಗಾಗುತ್ತೆ' ಕೋರೋನಾ ಶುರುವಾದ ನಂತರದ ಸಾಮಾನ್ಯ ಪ್ರಶ್ನೆ. ನಾನಂತು 'ನಂಗಂತು ಫುಲ್ ಖುಷಿ' ಅನ್ನೋಳು. ಇನ್ನೊಂದು ಸಾಮಾನ್ಯವಾಗಿ ಕೇಳೋ ಮಾತು, 'ಅಯ್ಯೋ, ಈ ವರ್ಕ್ ಫ್ರಮ್ ಹೋಮ್ ಯಾವಾಗ ಮುಗ್ಯುತ್ತೋ' ಅಂತ. ನಾನಂತು ಈ ಕ್ಯಾಟೆಗರಿ ಅಲ್ಲಪ್ಪ. ಯಾಕಲ್ಲ ಅನ್ನೋದಿಕ್ಕೆ ಕಾರಣ ಇದೆ. ಒಂದ್ ಚಿಕ್ಕ ಫ್ಲಾಷ್ಬ್ಯಾಕ್ ಬಿ.ಸಿ ಟೈಮಿಗೆ, ಅಂದ್ರೆ ಬಿಫೋರ್ ಕೊರೋನಾ ಟೈಮಿಗೆ.



    ಕರ್ನಾಟಕ ಕರಾವಳಿಯ ಒಂದು ಭಾಗ, ಉಡುಪಿಯ ಸಾಲಿಗ್ರಾಮ ನಮ್ಮೂರು. ಮಲೆನಾಡಿನ ತಪ್ಪಲು ಪ್ರದೇಶ ಸಿದ್ಧಾಪುರದ ಆಜ್ರಿಯಲ್ಲಿ ಅಜ್ಜನಮನೆ. ಹಾಗಾಗಿ ಪ್ರಕೃತಿಯ ಮಡಿಲಿನಲ್ಲಿ ಬೆಳೆದವಳು. ಬೇಸಿಗೆಯ ರಜೆಯಲ್ಲಿ ಬೆಂಗಳೂರಿನ ನೆಂಟರಿಷ್ಟರ ಮನೆಗೆ ಹೋಗಿಬರ್ತಾ ಇದ್ರೂ, ಆಗೆಲ್ಲಾ ಪ್ರವಾಸದ ಖುಷಿ ಬಿಟ್ಟರೆ ಮತ್ತೇನು ತಲೆಕೆಡಿಸುವ ವಿಚಾರಗಳು ಇರಲಿಲ್ಲ. ಓದಿನ ಉದ್ದೇಶವಾಗಿಯೂ ಊರು ಬಿಡುವ ಪ್ರಸಂಗವೂ ಬಂದಿರಲಿಲ್ಲ. 

       ಬಿ.ಎಸ್ಸಿಯಲ್ಲಿ ವಿಪ್ರೋಗೆ ಕ್ಯಾಂಪಸ್ ಸೆಲೆಕ್ಷನ್ ಆಗಿತ್ತು. ಯಾವುದೋ ಒಂದು ನಿರ್ಧಾರ, ಹುರುಪಿನಲ್ಲಿ ಸೇರಲು ಬಯಸಿದ್ದೆ. ಹಾಗೇ ಕರೆ ಬಂದಾಗ ನಾನು, ಅಪ್ಪ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ವಿ. ನೆಂಟರಿಷ್ಟರ ಮನೆಯಲ್ಲಿ ಉಳಿದು, ಮರುದಿನ ರಿಪೋರ್ಟ್ ಮಾಡಿಕೊಳ್ಳಲು ಎಲಿಕ್ಟ್ರಾನಿಕ್ ಸಿಟಿಗೆ ಕ್ಯಾಬಿನಲ್ಲಿ ಹೊರಟೆವು‌, ಅದೇ ನಮ್ಮಿಬ್ಬರ ಮೊದಲ ಕ್ಯಾಬ್ ಪಯಣ. ಅಲ್ಲಿ ಎಲ್ಲೆಲ್ಲಿಂದಲೋ ಬಂದ ನನ್ನಂತಹ ನೂರಾರು ಪದವೀಧರರು, ಅವರ ಹೆತ್ತವರಿದ್ದರು‌. ಆದರೆ, ನನಗೂ ಅಪ್ಪನಿಗೂ ಕೇಳಿಸುತ್ತಿದ್ದದ್ದು ಬರೀ ಹಿಂದಿ, ಇಂಗ್ಲಿಷ್, ತೆಲುಗು, ತಮಿಳು. ರಿಪೋರ್ಟಿಂಗ್ ಮುಗಿಯುವಾಗಲೇ ಸಂಜೆ ನಾಲ್ಕು ದಾಟಿತ್ತು. ಪಿಜಿಗಾಗಿ ಅಲೆದು, ಯಾವುದೂ ಸಿಗದೇ ಇದ್ದಾಗ ಮತ್ತೆ ಬಂಧುಗಳ ಮನೆಗೆ ಹೊರಟೆವು. ಮರುದಿನ ಮತ್ತೆ ಇ.ಸಿಯಲ್ಲಿ ಪಿಜಿಗಾಗಿ ಹುಡುಕಾಟ. ಹೊಸ ಊರಿನಲ್ಲಿ ಅಷ್ಟು ದೊಡ್ಡ ದೊಡ್ಡ ಕಂಪೆನಿಗಳ ಕಟ್ಟಡಗಳ ಮಧ್ಯೆ, ಪಿಜಿ ಹುಡುಕುವುದು ನಮ್ಮಿಬ್ಬರಿಗೂ ಸಾಹಸವೇ ಆಗಿತ್ತು. ಕೊನೆಗೆ ಒಬ್ಬ ಆಟೋಡ್ರೈವರ್ ನಮ್ಮ ಪೇಚಾಟ ನೋಡಿ, ವಿಪ್ರೋನ ಇನ್ನೊಂದು ಬದಿಯಲ್ಲಿರುವ ಪಿಜಿಗಳ ಏರಿಯಾಗೆ ಕರೆದುಕೊಂಡು ಹೋಗಿ ಬಿಟ್ಟರು. ಒಂದು ನಿಟ್ಟುಸಿರು ಬಿಟ್ಟೆವು. ಆ ದಿನ ಪಿಜಿಗೆ ಅಡ್ವಾನ್ಸ್ ಕೊಟ್ಟು ಮರುದಿನ ಲಗೇಜ್ ಶಿಫ್ಟ್ ಮಾಡಿ, ಊಟ ಮಾಡಿ ಅಪ್ಪನಿಗೆ ಬೈ ಹೇಳುವ ಸಮಯ ಬಂದೇ ಬಿಟ್ಟಿತು. ಆದರೆ ಆ ಮೂರು ದಿನ ನಾನು ಅಪ್ಪ ಕಂಡಿದ್ದು ಒಂದು ಹೊಸ ಜಗತ್ತನ್ನು. ನಮ್ಮ ಭಾಷೆಯೇ ಕೇಳಿಸದ ಊರು. ಅಲ್ಲಿಯ ಜೀವನ ಶೈಲಿ, ವಾತಾವರಣ ಇದು ನಮಗಲ್ಲ ಎನ್ನುವಂತದು. ಆಫೀಸಿನ ಹೊರಗೆ ಹುಡುಗಿಯರೂ ಸಿಗರೇಟು ಸೇದುವುದು ನೋಡಿ, ಅಪ್ಪ ದಂಗಾಗಿ ಹೋಗಿದ್ದರು. ಇಂತಹ ಜನಗಳ ಮಧ್ಯೆ ನನ್ನದಲ್ಲದ ಊರಿನಲ್ಲಿ ನಾನು ಹೇಗೆ ನನ್ನ ಮೌಲ್ಯಗಳನ್ನು ಮರೆಯದೆ ಇರಬಲ್ಲೆ ಎನ್ನುವುದು ನನ್ನನ್ನು ಅತಿಯಾಗಿ ಕಾಡಿತ್ತು. ಅಪ್ಪ ತನ್ನ ಮಗಳು ಹೀಗೆ ಹಾಳಾದರೆ ಎನ್ನುವ ಭಯದಲ್ಲೋ ಅಥವಾ ಇಲ್ಲಿ ಹೇಗಿರುವಳು ಎನ್ನುವ ಭಯದಲ್ಲೋ "ನಿನಗಿದು ಬೇಡ ಮಗಳೇ, ಮರಳಿ ಊರಿಗೆ ಹೋಗುವ, ಅಲ್ಲಿ ಏನಾದ್ರೂ ಮಾಡಿದರಾಯಿತು" ಎಂದಾಗ ಹ್ಞೂ ಎನ್ನುವ ಮನಸ್ಸು ಒಂದೆಡೆ, ಇಷ್ಟಕ್ಕೇ ಸೊಲುವೆಯಾ ಎನ್ನುವ ಮನಸ್ಸು ಇನ್ನೊಂದೆಡೆ. ಎರಡರ ಗೊಂದಲದಲ್ಲೂ, "ಇಲ್ಲಪ್ಪ, ನೋಡುವ ನದಿಗೆ ಬಿದ್ದಾಯಿತು" ಎಂದೆ.  ಅಪ್ಪ ಊರಿಗೆ ಹೊರಟರು. ಮನೆಯಿಂದ ಹೊರಟಾಗಿಂದ, ಮತ್ತೆ ಒಂದೆರೆಡು ವಾರದವರೆಗೆ ನನ್ನ ಕಣ್ಣಿಂದ ಜಾರಿದ ಹನಿಗಳೆಷ್ಟೋ!




ಟ್ರೈನಿಂಗಿನಲ್ಲೂ  ನನ್ನ ಸಹಪಾಠಿಗಳೆಲ್ಲರೂ ಹಿಂದಿ, ತೆಲುಗು, ತಮಿಳಿನವರಾಗಿದ್ದರು. ಅವರ ಜೊತೆ ನನ್ನ ಬಟ್ಲರ್ ಇಂಗ್ಲಿಷಿನಲ್ಲಿ ಮಾತನಾಡುವುದು ಎರಡು ದಿನ ಕಷ್ಟವಾದರೂ ಈಗ ಅದೇ ನನ್ನ ಬಂಡವಾಳವಾಗಿದೆ. ಪಿ.ಜಿಯಲ್ಲೋ ಆಫೀಸಿನಲ್ಲೋ ಯಾರಾದ್ರೂ ಕನ್ನಡ ಮಾತನಾಡುವುದು ಕೇಳಿಸಿಕೊಂಡಾಗ ಓಡಿ ಹೋಗಿ ಮಾತನಾಡಿಸುತ್ತಿದ್ದೆ. ಎಲ್ಲರೂ ನನ್ನನ್ನು ಅದೇ ಪ್ರೀತಿಯಿಂದ ಮಾತನಾಡಿಸದೇ ಇದ್ದಾಗ ಮತ್ತೆ ಬೇಸರ!

     ಬೆಂಗಳೂರಿನಲ್ಲಿ ಇದ್ದ ಸಮಯದಲ್ಲಿ ಒಂದು ದಿನವೂ ಅದು ನನ್ನೂರು ಅನ್ನಿಸಲಿಲ್ಲ. ಒಬ್ಬರೂ ನನ್ನವರು ಎನ್ನಿಸಲಿಲ್ಲ. ಎಷ್ಟು ನಕ್ಕರೂ, ಯಾರ ಬಳಿ ಎಷ್ಟು ಮಾತನಾಡಿದರೂ ಖಾಲಿತನ ಮರೆಯಾಗಲಿಲ್ಲ. ಮುಖವಾಡ ಹಾಕಿದವರೇ ಹೆಚ್ಚು. ಎಲ್ಲಾ ಭಾವನೆಗಳನ್ನು, ಮನದ ಬೇಗುದಿ-ತೊಳಲಾಟಗಳನ್ನು, ತೊಂದರೆ-ತಾಪತ್ರಯಗಳನ್ನು ಮರೆಮಾಚಲು ನಗುವಿನ ಮುಖವಾಡ. ಯಾರ ಬಳಿಯೂ ಮನಸ್ಸು ಬಿಚ್ಚಿ ಮಾತನಾಡಲು ಸಾಧ್ಯವೇ ಆಗುವುದಿಲ್ಲ, ಎಲ್ಲಿ ಅದನ್ನು ಅವರ ಉಪಯೋಗಕ್ಕಾಗಿ, ನಮ್ಮನ್ನು ತಿವಿಯಲಿಕ್ಕಾಗಿ ಬಳಸುತ್ತಾರೋ ಎನ್ನುವ ಭಯ. ಹಾಗಾಗಿ ನಮ್ಮದೇ ಹತ್ತು ಹಲವು ರೂಪಗಳು ನಮ್ಮನ್ನೇ ಕಾಡಿಸುತ್ತವೆ.



ಬದುಕುವುದಕ್ಕಾಗಿ ಅಲ್ಲಿ ಹೆಚ್ಚಿನವರು ಬೇರೆ ಭಾಷೆ ಕಲಿತೇ ಕಲಿಯುತ್ತಾರೆ, ತನ್ನತನವನ್ನು ಎಲ್ಲೋ ಮರೆಯುತ್ತಾರೆ.  ನಮ್ಮ ಪ್ರೊಫೆಸರ್ ಒಬ್ಬರು, "ಮಕ್ಕಳೇ ಎಲ್ಲರೂ ನಗರ ಜೀವನ ಇಷ್ಟಪಡ್ತಾರೆ, ಅದಕ್ಕೆ ಒಗ್ಗಿಕೊಂಡು ಬಿಡುತ್ತಾರೆ, ಆದರೆ ಅಲ್ಲೆಲ್ಲಿ ಶುದ್ಧ ನೀರು, ಗಾಳಿ, ಆಹಾರ ಸಿಗುತ್ತದೆ? ಇನ್ನು ಐಟಿ, ದೂರುವುದೆಂದಲ್ಲ ಆದರೆ ನೆಮ್ಮದಿಯ ಬದುಕೆಲ್ಲಿದೆ ಅಲ್ಲಿ! ಅಂಗನವಾಡಿಯ ಮಕ್ಕಳಿಗೆ ಕಲಿಸುವುದಾದರೂ ಓಕೆ, ಆದರೆ ನೆಮ್ಮದಿಯ ಜೀವನವೇ ಮುಖ್ಯ" ಎಂದ ಮಾತು ಈಗಲೂ ಕಾಡುತ್ತದೆ. ಆದರೂ ಇನ್ನೂ ಐಟಿ ಯಾಕೆ ಬಿಟ್ಟಿಲ್ಲ ಎನ್ನುವುದಕ್ಕೆ ನನ್ನ ಬಳಿ ಉತ್ತರವಿಲ್ಲ. ಬೆಂಗಳೂರಿನಲ್ಲಿ ಒಂದೈದು ನಿಮಿಷ‌ ಹೊರ ಹೋಗಿ ಬಂದರೂ ಮೈಮೇಲೆ ದಪ್ಪನೆಯ ಧೂಳಿನ ಪದರವಿರುತ್ತಿತ್ತು. ನೀರಲ್ಲಿ ಕೆಮಿಕಲ್ಗಳ ವಾಸನೆ. ಆಹಾರವೋ! ಪಿ.ಜಿಯದ್ದು ಒಂದು ಥರಾ, ಹೋಟೇಲ್ಗಳ ಊಟ ಇನ್ನೊಂದು ಥರಾ! ಎಂಥಾ ಲೈಫಪ್ಪಾ ಅಂತ ಯಾವಾಗಲೂ ಕೊರಗುತ್ತಿದ್ದೆ. ಎಲ್ಲಾ ಬಿಟ್ಟು ಸೋಲೊಪ್ಪಲು ತಯಾರಿಲ್ಲದ ಒಳಮನಸ್ಸಿಗೂ ಬೈಯುತ್ತಿದ್ದೆ. ಎಲ್ಲೋ ಒಂದು ಕಡೆ, ನಾನೂ  ಕಣ್ಣಿಗೆ ಪಟ್ಟಿಕಟ್ಟಿಕೊಂಡು ಓಡುವ ಕುದುರೆಗಳ ಗುಂಪಿಗೆ ಸೇರುತ್ತೇನೆ. ಇಲ್ಲ, ಅದು ಹಾಗಲ್ಲ. ಆದರೂ ಹಾಗೆಯೇ! ಗೊಂದಲದ ಗೂಡಾಗಿದ್ದೇನೆ.
      ಕೊರೋನಾ ಎಷ್ಟೋ ಜನರ ಪ್ರಾಣ ಕಸಿಯಿತು. ಜೀವಮಾನವಿಡೀ ಕೆಲವರನ್ನು ರೋಗಿಗಳನ್ನಾಗಿಸಿದೆ. ಆದರೆ ಅದು ನನಗೆ ಕೊಟ್ಟ ವರದಾನ ವರ್ಕ್ ಫ್ರಮ್ ಹೋಮ್. ಊರಿನವಳೂ ಅಲ್ಲ, ಬೆಂಗಳೂರು ನನ್ನದಲ್ಲ ಸ್ಥಿತಿಯ ತ್ರಿಶಂಕು ಸ್ವರ್ಗದಿಂದ ಹೊರಬಂದೆ. ಹಚ್ಚಹಸಿರಿನ ಸೀರೆ ಉಟ್ಟ ಪ್ರಕೃತಿಮಾತೆಯ ದರ್ಶನ ಪ್ರತಿಕ್ಷಣ. ಹಕ್ಕಿಗಳ ಚಿಲಿಪಿಲಿ ಕಲರವ. ಕಿಲೋಮೀಟರಿನಾಚೆ ಸಮುದ್ರ, ಅಲೆಗಳ ಸೆಳೆತಕ್ಕೆ ಎಷ್ಟು ಬಾರಿ ಸೋತಿಲ್ಲ!  ಪ್ರಕೃತಿ ಕಲಿಸದ ಪಾಠವಿಲ್ಲ, ಅಲ್ಲವೇ!



       ಅಪ್ಪ-ಅಮ್ಮ, ನಾನು-ತಂಗಿ ನನ್ನ ಈ ಪುಟ್ಟ ಪ್ರಪಂಚದಲ್ಲಿ ಯಾವ ಕೊರತೆಯೂ ಇಲ್ಲ. ನಗು-ಹರುಷ-ಪ್ರೀತಿ-ಚಿಕ್ಕ ಪುಟ್ಟ ಜಗಳ, ಮತ್ತದೇ ಹರಟೆ. ನಿಮ್ಮ ಬಲ-ದೌರ್ಬಲ್ಯ ಏನು ಎಂದು ಕೇಳುತ್ತಾರಲ್ಲಾ! ನನಗೇ ಎರಡೂ ನನ್ನ ಫ್ಯಾಮಿಲಿ‌. ಜೊತೆಯಲ್ಲಿದ್ದಾಗ ಅದೇ ನನ್ನ ಬಲ, ದೂರವಿದ್ದಾಗ ಅದೇ ದೌರ್ಬಲ್ಯ, ಮನಸ್ಸೆಲ್ಲಾ ಇಲ್ಲೇ ಇರುತ್ತದಲ್ಲಾ!   ನನ್ನ ಈ ಪುಟ್ಟ ಪ್ರಪಂಚ ನೀಡದ ಸುಖವಿಲ್ಲ. ನನ್ನ ಹವ್ಯಾಸಗಳೆಲ್ಲಾ ಬೆಂಗಳೂರಿಗೆ ಹೋದ ಮೇಲೆ ಮೂಲೆ ಸೇರಿದ್ದವು. ನಾವು ರೂಢಿಸಿಕೊಳ್ಳುವ ಹವ್ಯಾಸ ನಮ್ಮ ಖುಷಿಗೆ ಕಾರಣವಾಗುತ್ತದೆ, ಎನ್ನುವುದನ್ನೂ ನಾನು ಬೆಂಗಳೂರಿನಲ್ಲಿ ಮರೆತಿದ್ದೆ. ವರ್ಕ್ ಫ್ರಮ್ ಹೋಮ್ ಮತ್ತೆ ನನಗೆ ಅದನ್ನು ಮರಳಿಸಿತು. ಸಮಯ ಎಷ್ಟಿದ್ದರೂ ಇಲ್ಲಿ ಕಡಿಮೆಯೇ! ಒಂದು ಬಾರಿ ಮನೆಯ ಸುತ್ತಲಿನ ನೋಟ, ಮನೆಯವರ ಜೊತೆಗಿನ ಹರಟೆ, ಎಂತದ್ದೇ ಕೆಲಸವಿದ್ದರೂ, ಒತ್ತಡವಿದ್ದರೂ, ಅದನ್ನು ಚಿಟಿಕೆ ಹೊಡೆಯುವುದರಲ್ಲಿ ದೂರ ಮಾಡುತ್ತವೆ. ಇಂತಹದರಲ್ಲಿ ಯಾವ ನೋವು ಕಾಡಲು ಸಾಧ್ಯ!  ಯಾರಿಗೆ ಒಂಟಿತನ ಕೊಡಲು ಸಾಧ್ಯ! ಏನಾದರೂ, ನನ್ನ ಜೊತೆ ಮನೆಯವರಿದ್ದಾರೆ ಎನ್ನುವ ಧೈರ್ಯ! 
ಹೀಗಿರುವಾಗ ಅಯ್ಯೋ! ವರ್ಕ್ ಫ್ರಮ್ ಹೋಮ್ ಬೇಡ, ಬೇಗ ಮುಗೀಲಿ ಅನ್ನುವವರನ್ನು ನೋಡಿದಾಗ ನನಗೆ ಅಚ್ಚರಿಯಾಗುತ್ತದೆ! ನಮ್ಮವರ ಜೊತೆಯೇ ಇರಲು ಕಷ್ಟವಾದಾಗ ನಾವು ಹೇಗೆ ಹೊರ ಜಗತ್ತಿನ ಜೊತೆ ಚೆನ್ನಾಗಿರಲು ಸಾಧ್ಯ!  ಎಷ್ಟಾದರೂ ಎಲ್ಲರದೂ ಈಗೀಗ ಮುಖವಾಡದ ಬದುಕೇ!!! ಅಲ್ವಾ!!!!



      ಸಿಟಿ ಲೈಫ್ ನನಗೆ ಕಷ್ಟಾನೇ! ಬೆಂಗಳೂರನ್ನು ದೂರಿದ್ದೇನೆ‌, ಹಾಗಂತ‌ ಅದು ಮಾತ್ರ ಅಲ್ಲ, ಹೊಗಳುವುದು ಅನೇಕ ಇದೆ. ಅಲ್ಲಿಯ ಹವಾಮಾನ ವೈಶಿಷ್ಟ್ಯವಾದದ್ದು ಮತ್ತು ಅತ್ಯುತ್ತಮವಾದುದು. ಬೆಂಗಳೂರು ಎಷ್ಟೋ ಜನರಿಗೆ ಜೀವನ ನೀಡಿದ ಊರು, ಅದಕ್ಕೆ ಹೆಮ್ಮೆ ಇದೆ! ಬದುಕನ್ನು ಕಲಿಸುವ ಊರು, ನಾನೂ ಕಲಿತಿದ್ದೇನೆ. ಕನ್ನಡತಿ ಎಂದ ಕೂಡಲೇ, ಆಟೋ ಡ್ರೈವರುಗಳು, ಕ್ಯಾಬ್ ಡ್ರೈವರುಗಳು ಮಾತನಾಡುವ ರೀತಿಯೇ ಖುಷಿ ಕೊಡುತ್ತದೆ, ಅವರ ಎಷ್ಟೋ ಕಥೆಗಳಿಗೆ ಕಿವಿಯಾಗಿದ್ದೆ. ಸ್ಪಂದಿಸುವವರಿಗೆ, ನಮ್ಮನ್ನು ಅರ್ಥ ಮಾಡಿಕೊಳ್ಳುವವರಿಗೆ ಭಾಷೆ, ವಯಸ್ಸು, ಲಿಂಗ, ಪ್ರದೇಶ ಯಾವುದೂ ಮುಖ್ಯವಾಗುವುದಿಲ್ಲ ಎಂಬುದನ್ನು ಅರಿತಿದ್ದೇನೆ! ನಾನು ನಾನಾಗಿಯೇ ಇದ್ದೆ. ಅದಕ್ಕೆ ನಾನು ಚಿರಋಣಿ.
ಆದರೂ, ನನ್ನ ಊರಿನಲ್ಲಿ ನನ್ನವರ ಜೊತೆ ನೆಮ್ಮದಿಯಿಂದ  ಜೀವಮಾನವಿಡೀ ವರ್ಕ್ ಫ್ರಮ್ ಹೋಮ್ ಮಾಡುವುದಕ್ಕೆ ನಾನು ರೆಡಿ. ಮತ್ತೆ ನೀವು???


ಕಾಮೆಂಟ್‌ಗಳು

  1. ಉತ್ತಮವಾದ ಬರಹ. ತನ್ನೂರಿನಿಂದ ಕನಸಿನೂರಿಗೆ ಬಂದು ಬಳಲಿ ಬೆಂಡಾದವಳ ಕಥೆ - ವ್ಯಥೆ, ಕೋರೋನಾ ಮಹಾವ್ಯಾಧಿಯಾದರೂ, ಕೆಲವರಿಗೆ ತಮ್ಮ ಮನಸಿನ ಇಚ್ಛೆ ಪೂರೈಸಲು ಸಹಕಾರಿಯಾದ ಬಗ್ಗೆ ಸೊಗಸಾಗಿ ವರ್ಣಿಸಿದ್ದೀರಿ. ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  2. ಕೊರೋನಾ ಹಲವರಿಗೆ ಹಲವು ಪಾಠ ಕಲಿಸಿದೆ. ನೆಟ್ ಇಲ್ಲದೆ ಪರದಾಡುವವರಿಗೆ ತುಂಬಾ ಕಷ್ಟವಾಯ್ತು.ಚೆನಾಗಿದೆ ಬರಹ..

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..