ಬದುಕು- ಎಂತಹದು!

 ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ

ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು

ಮದುವೆಗೋ ಮಸಣಕೋ ಹೋಗೆಂದಕಡೆಗೋಡು

ಪದಕುಸಿಯೆ ನೆಲವಿಹುದು ಮಂಕುತಿಮ್ಮ||

ಈ ಬದುಕು‌ ಮೂರೇ ಮೂರು‌ ದಿನ, ಅವ ನಡೆಸಿದಂಗೆ ನಾವು ನಡೆವವರು. ಆದರೂ ನಮ್ಮ ಬದುಕಿನ ಗುರಿ‌ ಏನು, ದಾರಿ‌ ಯಾವುದು, ಬದುಕಿಗೊಂದು‌ ಅರ್ಥ ಬೇಕಲ್ಲವೇ, ಅದು ಏನು ಎನ್ನುವ ಗೊಂದಲಗಳು ನಮ್ಮಲ್ಲಿ ಇದ್ದೇ ಇರುತ್ತದೆ, ಸಾಯುವ ತನಕ. ಹಣ, ಪ್ರತಿಷ್ಠೆ, ಹೆಸರು, ಅಧಿಕಾರ ಇದಕ್ಕಾಗಿ ಜೀವಮಾನವಿಡೀ ಓಡುತ್ತಲೇ ಇರುತ್ತೇವೆ, ಈ ಕ್ಷಣದ ಖುಷಿಯನ್ನು ಮರೆತು. 

ಇತ್ತೀಚೆಗೆ ನನಗೆ ಆತ್ಮೀಯರಾದವರನ್ನು ವರುಷಗಳ ನಂತರ ಭೇಟಿ ಆಗಿದ್ದೆ. ಅವರ ಕಾರ್ಯಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿದವರು. ಎಷ್ಟೋ ಸಂಘ-ಸಂಸ್ಥೆಗಳು ಅವರನ್ನು ಗುರುತಿಸಿ ಸನ್ಮಾನಿಸಿದ್ದವು. ನಾನು‌ ಅವರಿಗೆ ಸಿಕ್ಕ ಹೆಸರು, ಮನ್ನಣೆ ನೋಡಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇದ್ದಾರೆ ಅಂದುಕೊಂಡಿದ್ದೆ. ಆದರೆ ಅವರ ಬಳಿ ತುಂಬಾ ಹೊತ್ತು‌ ಮಾತನಾಡಿದಾಗಲೇ‌ ತಿಳಿದದ್ದು, ನನ್ನ ಊಹೆ ತಪ್ಪೆಂದು. ಮೂರು ಜನ ಹೆಣ್ಣುಮಕ್ಕಳು, ಅವರನ್ನು ಸಾಕಿ, ಬೆಳೆಸಿ ಮದುವೆ ಮಾಡುವಾಗಲೇ ಸುಮಾರು ಸಾಲ ಮಾಡಿಯಾಗಿತ್ತು. ಅದರಲ್ಲಿ ಒಬ್ಬಳು‌ ಮಗಳು ಆರೂವರೆ‌ ತಿಂಗಳಿಗೆ ಹೆತ್ತಳಂತೆ. ಒಂಭತ್ತು‌ ತಿಂಗಳಾಗುವವರೆಗೆ ಮಗು ಎನ್.ಐ.ಸಿ.ಯು ನಲ್ಲೇ ಇರಬೇಕು. ಅಳಿಯಂದಿರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ, ಇವರೇ ಆಸ್ಪತ್ರೆಯ ಖರ್ಚು-ವೆಚ್ಚ ನೋಡಿಕೊಂಡರಂತೆ. "೧೨-೧೫ ಲಕ್ಷ, ಎಲ್ಲಿಗೆ‌ ಹೋಗಲಿ! ದುಡಿದದ್ದು‌ ಮೂರು‌ ಹೊತ್ತಿನ ಊಟಕ್ಕಾಯಿತು.  ದೊಡ್ಡ ಕುಟುಂಬ, ಬಂಧು-ಬಾಂಧವರೆಲ್ಲಾ‌ ಇದ್ದಾರೆ. ಆದರೆ, ಕಷ್ಟ ಎಂದಾಗ ಸಹಾಯ ಮಾಡುವವರು ಯಾರೂ ಇರುವುದಿಲ್ಲ. ನನಗೂ ವಯಸ್ಸಾಯಿತು, ಹೆಂಡತಿಗೂ ವಯೋಸಹಜ ಖಾಯಿಲೆಗಳು. ಆದರೆ, ಬಾಣಂತಿ ಮಗಳ ಕಣ್ಣಲ್ಲಿ ನೀರು ನೋಡಲಾದೀತೇ! ಮತ್ತೆ ಸಾಲ ಮಾಡಿದೆ. ನಡೆಯುತ್ತದೆ ಜೀವನ. ಮೂರು ಹೊತ್ತಿನ ಊಟ ಅಲ್ಲವೆಂದರೆ, ಎರಡು ಹೊತ್ತು‌. ಅನ್ನದ ಬದಲು ಗಂಜಿ. ಹುಟ್ಟಿಸಿದ ದೇವರು ಹುಲ್ಲು ಮೇಯಿಸಿಯಾನೇ! ಸಾಗುತ್ತದೆ‌ ಜೀವನ. ಮೊಮ್ಮಗು ಈಗ ಆರೋಗ್ಯವಾಗಿದೆ. ಅದಕ್ಕಿಂತ ಭಾಗ್ಯ ಬೇರೇನು ಬೇಕು" ಎಂದು ಬಾಡಿದ್ದ ಮುಖದಲ್ಲಿ ನಗು ತರಿಸಿಕೊಂಡು ನಿಟ್ಟುಸಿರುಬಿಟ್ಟರು. ಅವರ ಪರಿಸ್ಥಿತಿಯನ್ನು ಅವರ ಕಣ್ಣುಗಳೇ ಹೇಳುತ್ತಿದ್ದವು. ನಾವು‌ ಸ್ವಲ್ಪ ಧೈರ್ಯ ಹೇಳಿ‌ ಬಂದೆವು. 

ನಾನು‌ ಇಂದಿಗೂ‌ ಯೋಚಿಸುತ್ತಿರುವುದೊಂದೇ! ಅವರಿಗೆ ಒಳ್ಳೆಯ ‌ಹೆಸರಿದೆ. ಜನ ಗುರುತಿಸುತ್ತಾರೆ. ಕಾರ್ಯಕ್ಷೇತ್ರದಲ್ಲಿ ಸಂತೋಷ ಇದೆ, ಸಾಧನೆಯ ಬಗ್ಗೆ ಹೆಮ್ಮೆ ಇದೆ. ಆದರೆ ಜೀವನ? ಸಾಲದ ಹೊರೆ, ತೀರಿಸುವ ಹೊಣೆ, ನೆಮ್ಮದಿಯಾಗಿ ನಿದ್ದೆ ಮಾಡಲು ಬಿಡುವುದೇ! 

ಹೀಗೆನ್ನುವಾಗ 'ನೀ ಹೀಂಗ ನೋಡಬ್ಯಾಡ ನನ್ನ' ಹಾಡು ನೆನಪಾಗುತ್ತಿದೆ, ಹಾಡಿಗಿಂತ ಹಾಡು ಹುಟ್ಟಿದ ಸಮಯ ಕಾಡುತ್ತಿದೆ. ಬೇಂದ್ರೆಯವರು ಆಗಲೇ ಖ್ಯಾತಿ ಪಡೆದಿದ್ದ ಕವಿಗಳು. ಆದರೆ ಬಡತನ. ಅವರ ಒಬ್ಬ ಮಗಳು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಳಂತೆ. ಹೆಂಡತಿ ಗಂಡನ ಬಳಿ ಅಂಗಲಾಚಿ ಹಣ ಹೊಂದಿಸಲು ಕೋರಿದ್ದರು‌. ಆದರೆ ಆಗಿನ ಬ್ರಿಟಿಷ್ ಸರ್ಕಾರದ ಆದೇಶದಿಂದ ಇವರಿಗೆ ಕೆಲಸ ಕೊಡುವವರಾರೂ ಇರಲಿಲ್ಲ. ಹಣ ಹೇಗೆ ತಾನೇ ಹೊಂದಿಸಿಯಾರು! ಬರಿಕೈಯಲ್ಲಿ ಮರಳಿ ಬಂದಾಗ ನೋಡಿದ್ದು ಮಗಳ ಶವ ಮಾತ್ರ. ಅಲ್ಲೇ ಪಕ್ಕದಲ್ಲೇ ಕುಳಿತಿದ್ದ ಅವರ ಪತ್ನಿ, ಹೇಳಲಾಗದ, ಹೇಳಿತೀರದ ಎಲ್ಲಾ ಭಾವನೆಗಳನ್ನು ಮನದಲ್ಲೇ ಬಿಗಿದಿಟ್ಟುಕೊಂಡು ಬೇಂದ್ರೆಯವರನ್ನ ಒಮ್ಮೆ ನೋಡಿದರಂತೆ! ಆ ಕಣ್ಣುಗಳಲ್ಲಿದ್ದ ಅದೆಂಥ ಜ್ವಾಲೆ, ನೋವು, ಸಂಕಟ, ಕೋಪ, ಆಕ್ರೋಶ ಬೇಂದ್ರೆಯವರನು ಕಾಡಿತೋ! ಆಗಲೇ ಬರೆದ ಹಾಡು 'ನೀ ಹೀಂಗ ನೋಡಬ್ಯಾಡ ನನ್ನ'. ಹಣವಿಲ್ಲದೇ, ಚಿಕಿತ್ಸೆ ಕೊಡಿಸಲಾಗದೇ ಆರು ಮಕ್ಕಳನ್ನು ಕಳೆದುಕೊಂಡಿದ್ದರಂತೆ ಬೇಂದ್ರೆ ದಂಪತಿಗಳು. ಹೆಸರು, ಖ್ಯಾತಿ, ಈಗಲೂ ಜನಮನದಲ್ಲಿರುವ ಬೇಂದ್ರೆಯವರನ್ನೂ ಬಡತನ ಅಷ್ಟರಮಟ್ಟಿಗೆ ಕಾಡಿತ್ತು. 

ಹೆಸರು ನೆಮ್ಮದಿಯನ್ನು ನೀಡುವುದಿಲ್ಲ, ಖುಷಿಯ ಜೀವನವನ್ನೂ ನೀಡುವುದಿಲ್ಲ. ಅಂದರೆ ಹಣ ನೀಡಬಹುದೇ ಇವೆರೆಡನ್ನೂ! ಹಾಹಾ! ಹಾಗೆನ್ನುವವರು ಮೂರ್ಖರು. ಹಾಗಂದುಕೊಂಡವರೂ ಮೂರ್ಖರು. ನನಗೆ ಪರಿಚಿತರೊಬ್ಬರಿದ್ದಾರೆ. ಅವರ ತಂದೆ ಕಡಿಮೆಯೆಂದರೂ ಮೂರು ಪೀಳಿಗೆಗೆ ಆಗುವಷ್ಟು ಹಣ ಮಾಡಿಟ್ಟಿರಬಹುದು. ಅವರ ತಂದೆ ಮೇಧಾವಿ, ಎಲ್ಲರಿಗೂ ಬೇಕೆನಿಸಿಕೊಂಡವರು, ಅವರಾಡಿದ ಮಾತುಗಳಿಗೆ ಬೆಲೆ ಕೊಡದವರಿರಲಿಲ್ಲವಂತೆ. ಆದರೆ ಇವರು ಹಾಗಲ್ಲ. ಒಳ್ಳೆಯವರು ಆದರೆ ದಡ್ಡ. ಯಾರೇನಂದರೂ ಹೂ‌ ಅನ್ನುವವರು. ಅವರಿಗೆ ನೂರು ಜನರು ಸೇರಿ ಅಪಮಾನ‌ ಮಾಡಿದರೂ ನಕ್ಕು ಮನೆ ಸೇರುವವರು. ಅದು ಒಂದರ್ಥದಲ್ಲಿ ಒಳ್ಳೆಯದೇ. ಆದರೆ ಎಂದಾದರೂ ಒಮ್ಮೆ ಅಪಮಾನಕ್ಕೆ ನಮ್ಮ ಒಳ್ಳೆಯ ಕಾರ್ಯದಿಂದ ಉತ್ತರ ಕೊಟ್ಟಾಗ ಮಾತ್ರ. ಇಲ್ಲವೆಂದರೆ ನಮ್ಮ ವ್ಯಕ್ತಿತ್ವವೇ ಇಲ್ಲವಾಗಿಬಿಡುತ್ತದೆ. ಅವರನ್ನು ನೋಡಿದಾಗಲೂ ಹಾಗೆ ಎನಿಸುವುದು ನನಗೆ. ಆಡುವವರ ಬಾಯಲ್ಲಿ ನಗೆಪಾಟಲಾಗುತ್ತಾರೆ. ಹಣ ಇದೆ. ಅಪ್ಪನಿಂದ ಬಂದ ಹೆಸರಿದೆ! ಆದರೆ ಅವರಿಗೇ ಆದ ಒಂದು ವ್ಯಕ್ತಿತ್ವವಿಲ್ಲ. ಅವರಿಗೆ ಗೌರವ ಕೊಡುವವರಿಲ್ಲ. ಅವರ ಹೆಸರು ಕೇಳಿ ಮೂಗು ಮುರಿಯುವವರೇ ಹೆಚ್ಚು‌. ಹಣವಿದ್ದು ಏನು ಪ್ರಯೋಜನ!

ಇದೊಂದು‌ ಚಿಕ್ಕ ಉದಾಹರಣೆ ಅಷ್ಟೇ! ರಾಶಿ ಹಣವಿದ್ದೂ, ಆರೋಗ್ಯವಿಲ್ಲದವರೆಷ್ಟು! ಹಣವನ್ನು ಅನುಭವಿಸಲಾಗದವರೆಷ್ಟು! ಖುಷಿ ಇಲ್ಲದಿರುವವರೆಷ್ಟು! ನಿದ್ದೆ ಇಲ್ಲದವರೆಷ್ಟು! ನೆಮ್ಮದಿ ಇಲ್ಲದವರೆಷ್ಟು!

ಇನ್ನು ಅಧಿಕಾರ, ಪ್ರಾಬಲ್ಯತೆ, ಹಣ ಎಲ್ಲಾ ಇದ್ದೂ ಮಾಡಬಾರದ ಕೆಲಸಗಳನ್ನು ಮಾಡಿ, ಜನರಿಂದ ಛೀ! ಥೂ! ಎನಿಸಿಕೊಂಡವರ ಪಟ್ಟಿ ದೊಡ್ಡದಿದೆ. ಮೊನ್ನೆ ಮೊನ್ನೆಯಷ್ಟೇ ಇಂತಹ ಘಟನೆ ನಡೆದು, ಕುರ್ಚಿಗಾಗಿ ಏನು ಬೇಕಾದರೂ ಮಾಡುವವರೇ, ಕುರ್ಚಿ ಬಿಟ್ಟುಕೊಟ್ಟರು. 

ನಮ್ಮೆಲ್ಲರ ಸೂತ್ರಧಾರಿ ಬಲುಬುದ್ಧಿವಂತ! ಎಲ್ಲವನ್ನೂ ಕೊಟ್ಟರೆ ಮನುಷ್ಯನನ್ನು ಹಿಡಿಯಲಾದೀತೇ! ಈಗಲೇ ಇರುವುದನ್ನು ನಾಶ ಮಾಡಿಕೊಂಡು, ಇಲ್ಲದ್ದನ್ನು ಹುಡುಕುವ ಬುದ್ಧಿವಂತ ದಡ್ಡರು, ಎಲ್ಲವೂ ಸಿಕ್ಕಿದ್ದಲ್ಲಿ ಇನ್ನೇನು ಮಾಡುತ್ತಿದ್ದರೋ!

ಜಗತ್ತಿನ ಆಗುಹೋಗುಗಳು ಎಷ್ಟು ಪಾಠ ಕಲಿಸುತ್ತವೆ. ಆದರೂ ನಾವು ಕಲಿಯದೇ ಕೂರುತ್ತೇವೆ. ಯಾವುದೋ ಶ್ರೀಮಂತನ ಹಣವನ್ನೋ, ಆಸ್ತಿಯನ್ನೋ ನೋಡಿ ನಾವು ಹೀಗಿರಬೇಕಿತ್ತು ಅಂದುಕೊಳ್ಳುವುದಕ್ಕಿಂತ ಮನಃಪೂರ್ವಕವಾಗಿ ನಗುವವನ ನೋಡಿ ಸ್ಫೂರ್ತಿ ಪಡೆದುಕೊಳ್ಳೋಣ. ಒಬ್ಬ ನೆಮ್ಮದಿಯಾಗಿ‌ ಸಂತೆಯಲ್ಲೂ ನಿದ್ದೆಮಾಡಬಲ್ಲ ಎನ್ನುವುದಾದರೆ ಅವನ ನೆಮ್ಮದಿಯ ಗುಟ್ಟನ್ನು ತಿಳಿದುಕೊಳ್ಳೋಣ. ಹೆಸರು, ಹಣ ಮಾಡಬಾರದೆಂದಲ್ಲ, ಅದಕ್ಕಾಗಿಯೇ ಜೀವನವನ್ನೆಲ್ಲಾ ತೇಯ್ದು ಮುದುಕರಾದಾಗ ಕೊರಗುವುದು ಬೇಡ. 'ತುತ್ತು ಕಾಣದ ಬಳಗ ಸುತ್ತ ನಿಂತಿರುವಾಗ ಗತ್ತು ಶ್ರೀಮಂತಿಕೆಯ ಲೋಭವೇಕೆ !'

 ಮೂರು ದಿನದ ಬಾಳು. ನಾವು ಹೊತ್ತು ಬಂದದ್ದೂ ಏನಿಲ್ಲ, ಹೊತ್ತುಕೊಂಡು ಹೋಗುವುದೂ ಏನಿಲ್ಲ. ಮುಗ್ಧ ಮನಸ್ಸಿನ‌ ಮಗು ಬೆಳೆಯುತ್ತ ಕ್ರೂರ ಜಗತ್ತಿಗೆ ಸಿಕ್ಕಿ ಮಾಯವಾಗುತ್ತದೆ. ಆ ಮುಗ್ಧಮನಸ್ಸನ್ನು ಕಾಪಿಟ್ಟುಕೊಂಡು ಆಗಾಗ ಮಕ್ಕಳಾಗೋಣ. ಯಾರನ್ನೋ ಆಡಿ ನಗುವುದಕ್ಕಿಂತ, ಪ್ರತಿ ಕ್ಷಣಗಳು ಕೊಡುವ ಖುಷಿಗೆ ನಗುವಾಗೋಣ. ಉಪಕಾರ ಮಾಡಲಾಗದಿದ್ದರೂ ಅಪಕಾರ ಮಾಡದೇ, ತಪ್ಪುಗಳನ್ನು ಒಪ್ಪಿ ತಿದ್ದಿಕೊಂಡು ಬಾಳನ್ನು ಸುಂದರವಾಗಿಸೋಣ. 

ಹೆತ್ತವರು ನಮಗೆ ಎಲ್ಲವನ್ನೂ ನೀಡಿದ್ದಾರೆ. ಅವರಿಗೆ ವಯಸ್ಸಾದಾಗ ನಮ್ಮ ಮಕ್ಕಳಂತೆಯೇ ಅವರನ್ನು ನೋಡಿಕೊಳ್ಳೋಣ. ನಮಗೆ ಅಪಕಾರ ಮಾಡಿದವರಿಗೆ ದ್ವೇಷದ ಬದಲು ಕ್ಷಮೆ ನೀಡಿ, ಉಪಕಾರಿಯಾದವರಿಗೆ ಉಪಕಾರಿಗಳಾಗಿರೋಣ. ನಮ್ಮಲ್ಲಿ ಇರುವುದರ ಬೆಲೆ ಅದು ಕಳೆದು ಹೋಗುವ ಮುನ್ನ ಅರಿಯೋಣ. ಎಲ್ಲವೂ ಕ್ಷಣಿಕ ಎಂಬ ಸತ್ಯವನ್ನು ಒಪ್ಪಿಕೊಂಡು, ನಿನ್ನೆ-ನಾಳೆಗಳ ಚಿಂತೆ ಮರೆತು ನೆಮ್ಮದಿಯಾಗಿರೋಣ.

ಕೊನೆಯದಾಗಿ, ನಾವು ಹುಟ್ಟಿದ್ದು ಮಾನವರಾಗಿ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮಾನವರಾಗಿರೋಣ. 

ಧನ್ಯವಾದಗಳು 🙏🏻




ವೈಷ್ಣವಿ ಕೆ.


ಕಾಮೆಂಟ್‌ಗಳು

  1. ಹೌದು, ಬರಹ ಅತ್ಯುತ್ತಮವಾಗಿದೆ. ಬದುಕಿನ ಅನಿಷಿತತೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಮ್ಮಲ್ಲಿರುವ ಮುಗ್ಧತೆ ಉಳಿಸಿಕೊಂಡರೆ ಆ ವಿಶ್ವ ಶಕ್ತಿ ನಮ್ಮಲ್ಲೇ ಪ್ರವಹಿಸುತ್ತದೆ!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..