ಸಮಯದ ಗೊಂಬೆ, ವ್ಯಸನದ ಬಂಧಿ
ಆಶೆ ಬಲೆಯನು ಬೀಸಿ, ನಿನ್ನ ತನ್ನಡೆಗೆಳೆದು|
ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ||
ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ|
ಮೋಸದಾಟವೊ ದೈವ - ಮಂಕುತಿಮ್ಮ||
ಈ ಕಗ್ಗವನು ಅಂದೆಂದೋ ಓದುವಾಗ ಅರ್ಥವಾಗಲೇ ಇಲ್ಲ, ಈಗ ಅರ್ಥವಾಗುತ್ತಿದೆ, ಅದಕ್ಕೆ ನಿನ್ನ ಜೀವನವೇ ಉದಾಹರಣೆಯಾಗಬೇಕಿತ್ತೇ ಸುನೈನಾ ಎಂದು ನಾನು ಗೊಣಗುತ್ತ ತಯಾರಾಗುತ್ತಿರುವುದ ನೋಡಿ ನನ್ನ ಅಮ್ಮ, "ತಮ್ಮ ಪಯಣ ಎತ್ತ ಕಡೆಗೋ" ಎಂದರು. ಇದು, ಸಾವಿರದೊಂದನೇ ಬಾರಿ, ನಾನು ಹೇಳಿದ್ದು, ನೀನು ಕೇಳಿದ್ದು. ನೀನೆಷ್ಟು ಹೇಳಿದರೂ ಅಷ್ಟೇ ಅಮ್ಮ. ಸುನೈನಾಳನ್ನು ಒಮ್ಮೆ ನೋಡಿ, ಮಾತನಾಡಿ ಬರುತ್ತೇನೆ. ಮಾತನಾಡಿದ ಕೂಡಲೇ ಕೆಟ್ಟುಹೋಗುವುದಿಲ್ಲ ಎಂದೆ. "ನಿನ್ನ ಬಾಯಿಗೆ ಬಾಯಿ ಕೊಡಲಾದೀತೇ! ಏನಾದರೂ ಮಾಡಿಕೋ! ಹುಷಾರು" ಎಂದರು. ಧನ್ಯವಾದಗಳು ಎಂದು ಕೈಮುಗಿದು ನಕ್ಕು, ನನ್ನ ಸ್ಕೂಟಿಯೊಂದಿಗೆ ಹೊರಟೆ. ಆರು ತಿಂಗಳಿನಿಂದ ಸುನೈನಾಳದ್ದೇ ಚಿಂತೆ ನನಗೆ. ಯಾರೂ ಊಹಿಸಿಯೇ ಇರಲಿಲ್ಲ. ಅಂತಹ ಘಟನೆ ನಡೆದು ಹೋಗಿತ್ತು.
ಓಹ್! ನನ್ನ ಪರಿಚಯ ಆಗಿಲ್ಲ ಅಲ್ವಾ ನಿಮಗೆ! ನಾನು ಕ್ಷಮಾ. ವೃತ್ತಿಯಲ್ಲಿ ವಕೀಲೆ. ಸುನೈನಾ ನನ್ನ ಸ್ನೇಹಿತೆ, ನನಗಿಂತ ಎರಡು ವರ್ಷ ಚಿಕ್ಕವಳು ಮತ್ತು ನನ್ನ ಗುರುಗಳ ಮಗಳು. ಅಂದರೆ, ನಾನು ವಕೀಲೆಯಾಗಿ ಕೆಲಸ ಆರಂಭಿಸಿದ್ದೇ ಅವಳ ತಂದೆಯ ಮಾರ್ಗದರ್ಶನದಲ್ಲಿ. ಅವಳ ತಂದೆ ಡಾ|ಸತೀಶ್, ಪ್ರಸಿದ್ಧ ಕ್ರಿಮಿನಲ್ ವಕೀಲರು. ನಾನೀಗ ಹೋಗುತ್ತಿರುವುದು ಅವರ ಮನೆಗೇ. ನನ್ನ ಬಗ್ಗೆ ವರ್ಣನೆ ಬೇಡ. ನನ್ನ ಎತ್ತರ ನೋಡಿ, ನೀನು ವಕೀಲೆಯಾ! ಅಂತ ಮೂಗಿನ ಮೇಲೆ ಬೆರಳಿಡುವವರೇ ಜಾಸ್ತಿ. ಐದಡಿ ಅಷ್ಟೇ! ಅಂತಹ ಸುಂದರಿ ಏನಲ್ಲ ಬಿಡಿ. ಸುನೈನಾಳ ಬಗ್ಗೆ ಹೇಳ್ತೀನಿ ಕೇಳಿ. ದೇವರು ಅತ್ಯಂತ ಬಿಡುವಿದ್ದಾಗ ಮಾಡಿದ ಸೃಷ್ಟಿ ಇರಬೇಕು ಅವಳು, ಅಂತಹ ಸುಂದರಿ. ಶಾಲೆಯಲ್ಲಿಯೇ ಅದೆಷ್ಟೋ ಪ್ರೇಮ ಪತ್ರಗಳು ಅವಳ ಕೈಸೇರುತ್ತಿದ್ದವು. ಚಿತ್ರರಂಗದಿಂದಲೂ ಅವಳಿಗೆ ಅವಕಾಶಗಳು ಬಂದಿದ್ದವು. ಆದರೆ ಸುನೈನಾ ತನ್ನದೇ ಆದ ಕನಸು, ಗುರಿಯೊಂದಿಗೆ ಮುನ್ನುಗ್ಗುತ್ತಿದ್ದಳು. ಭರತನಾಟ್ಯ ಕಲಾವಿದೆ. ಅವಳ ನರ್ತನ ನೋಡಿ ಮಾರುಹೋಗದವರಿಲ್ಲ. ಓದುವುದರಲ್ಲೂ ಅಷ್ಟೇ. ತರಗತಿಗೆ ಅವಳೇ ಮೊದಲು. ಅವಳ ತಂದೆಗೆ ಮಗಳು ತನ್ನಂತೆಯೇ ವಕೀಲೆಯಾಗಬೇಕೆಂಬ ಆಸೆಯಿತ್ತು. ಆದರೆ ಸುನೈನಾಳಿಗೆ ವೈದ್ಯೆಯಾಗಬೇಕೆಂಬ ಆಸೆ. ಪಿಯುಸಿ ಆದ ನಂತರ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡಲು ತೆರಳಿದಳು.
ಎರಡನೇ ವರ್ಷದಿಂದ ಮನೆಗೆ ಹೆಚ್ಚು ಕರೆ ಮಾಡುತ್ತಿರಲಿಲ್ಲ. ಅಪ್ಪ ಅಮ್ಮ ಮಾಡಿದಾಗಲೂ ಅಷ್ಟಾಗಿ ಉತ್ತರಿಸುತ್ತಿರಲಿಲ್ಲ. ಆದರೂ ಇವರು ತಲೆಕೆಡಿಸಿಕೊಂಡಿರಲಿಲ್ಲ. ಮೂರನೇ ವರ್ಷದ ಕೊನೆಯಲ್ಲಿ ಕಾಲೇಜಿನಿಂದ ಕರೆ ಬಂದಿತ್ತು. ಸುನೈನಾ ಹೆಚ್ಚಿನ ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದಳು. ಅಲ್ಲದೇ ತರಗತಿಗಳಿಗೂ ಹೆಚ್ಚಾಗಿ ಹೋಗುತ್ತಿರಲಿಲ್ಲ. ತರಗತಿಗೇ ಮೊದಲಿದ್ದವಳು ಈಗ ಯಾವುದರಲ್ಲೂ ಆಸಕ್ತಿ ಇಲ್ಲದವಳಾಗಿದ್ದಾಳೆ. ಮೂರನೆಯ ವರ್ಷದ ಒಂದು ತರಗತಿಗೂ ಹೋಗಿರಲಿಲ್ಲ ಎಂದು ದೂರುಗಳ ಸುರಿಮಳೆ ಗೈದರು. ಮಗಳು ಓದುತ್ತಿದ್ದಾಳೆ ಎಂದುಕೊಂಡವರಿಗೆ ಇದು ಬಹುದೊಡ್ಡ ಆಘಾತ ಮಾಡಿತ್ತು. ಏನೋ ಹೆಚ್ಚುಕಮ್ಮಿ ಆಗಿದೆ ಎಂದು ಗ್ರಹಿಸಿ ಕೂಡಲೇ ಬೆಂಗಳೂರಿಗೆ ಹೋದರು. ಎರಡು ವರ್ಷದಿಂದ ಮಗಳು ಕಾಲೇಜಿನ ಹಾಸ್ಟೆಲ್ನಲ್ಲಿ ಇರಲೇ ಇಲ್ಲ ಎಂದು ತಿಳಿಯಿತು. ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು. ಕೊನೆಗೆ ಅವಳ ಸ್ನೇಹಿತರಿಂದ ದೊರೆತ ಚೂರು ಪಾರು ಮಾಹಿತಿಯ ಮೇರೆಗೆ ಸಿಕ್ಕ ವಿಳಾಸವನ್ನರಸಿ ಹೋದರೆ ಅವರ ಕಣ್ಣುಗಳನ್ನೇ ಅವರಿಗೆ ನಂಬಲಾಗಲಿಲ್ಲ. ಒಂದು ಬಾಡಿಗೆಯ ಮನೆ, ಅಲ್ಲಿ ಮೂರು-ನಾಲ್ಕು ಜನ ಹುಡುಗರು, ಮೂರು-ನಾಲ್ಕು ಜನ ಹುಡುಗಿಯರು. ಎಲ್ಲರೂ ಹಾಡಹಗಲೇ ಅಮಲಿನಲ್ಲಿದ್ದರು. ಅದು ಹೇಗೆ ಎರಡು ವರ್ಷ ಕಣ್ಣುಮುಚ್ಚಿ ಮಗಳನ್ನು ನಂಬಿದೆನೋ ಎಂದು ತಲೆ ಚಚ್ಚಿಕೊಂಡು, ಕೂಡಲೇ ಮಗಳನ್ನು ಮನೆಗೆ ಕರೆದುಕೊಂಡು ಬಂದರು. ಅವಳ ಕೈಯೆಲ್ಲಾ ಸೂಜಿಯಿಂದಾದ ತೂತುಗಳು. ಮಗಳು ಮಾದಕವ್ಯಸನಿಯಾಗಿದ್ದಾಳೆ ಎಂಬುದನ್ನು ತಿಳಿಯಲು ಹೆಚ್ಚು ಸಮಯವಾಗಲಿಲ್ಲ. ಅವರು ವಕೀಲರಾಗಿದ್ದರಿಂದ ವಿಷಯ ದೊಡ್ಡದಾಗಲು ಬಿಡಲಿಲ್ಲ. ಅವರ ವೈದ್ಯಸ್ನೇಹಿತರ ಬಳಿಯೇ ಚಿಕಿತ್ಸೆ ಕೊಡಿಸಲಾರಂಭಿಸಿದರು. ರೂಪದರ್ಶಿಯಂತಿದ್ದವಳು ರೂಪವಿಲ್ಲದಂತವಳಾಗಿದ್ದಾಳೆ.
ಅವಳ ಮನೆ ತಲುಪಿದೆ. "ಬಾ ಕ್ಷಮಾ! ನಿನ್ನ ಸರ್ ಒಳಗಿದ್ದಾರೆ ನೋಡು" ಎಂದರು ಅವರ ಪತ್ನಿ. ಹಾಂ ಆಂಟಿ. ತಿಂಡಿ ಆಯ್ತಾ ಅಂದೆ, "ಹಾ! ನಿನಗೂ ತರುತ್ತೇನೆ" ಎಂದರು. ಬೇಡ, ನನ್ನದು ತಿಂಡಿ ಆಗಿದೆ ಆಂಟಿ. ಪುಲಾವ್ ತಿಂದು ಬಂದೆ ಎಂದೆ. "ಸರಿ. ಟೀ ಮಾಡುತ್ತೇನೆ" ಎಂದು ಒಳನಡೆದರು. ಸರ್ ಅವರ ಕೋಣೆಯಲ್ಲಿ ಪುಸ್ತಕ ಓದುತ್ತಾ ಕುಳಿತಿದ್ದರು. ಸರ್ ಎಂದೆ. "ಬಾರಮ್ಮಾ, ಕುಳಿತುಕೊ" ಎಂದರು. ಹೇಗಿದ್ದೀರಿ ಎಂದು ಕೇಳುವುದು ತಪ್ಪೇ ಆದರೂ ಕೇಳಿಯೇ ಬಿಟ್ಟೆ. "ಏನು ಹೇಳುವುದು ಒಬ್ಬಳೇ ಮಗಳು. ಮುದ್ದಿನಿಂದ ಸಾಕಿದೆ. ಹಣದ ಕೊರತೆಯಿಲ್ಲ. ಅವಳು ಕೇಳಿದ್ದು ಅವಳ ಬಳಿ ಮರುದಿನದೊಳಗೆ ಇರುತ್ತಿತ್ತು. ವೈದ್ಯೆಯಾಗಬೇಕು ಎಂದಾಗ ಅವಳಿಗೆ, ಸಮಾಜಸೇವೆ ಮಾಡುವ ಮನಸ್ಸಿದೆ, ಜವಾಬ್ದಾರಿ ಇದೆ ಎಂದುಕೊಂಡೆ. ಅವಳ ಕರೆ ಇಲ್ಲದಾಗ, ಮನೆಗೆ ಬರದಾಗ ಓದುವುದರಲ್ಲಿ ಮಗ್ನಳಾಗಿದ್ದಾಳೆ ಎಂದು ನಂಬಿದೆ. ನನ್ನದೇನು ತಪ್ಪಮ್ಮಾ! ಪಾಪ ನನ್ನ ಹೆಂಡತಿ, ಅವಳಿಗೋ ಇನ್ನೂ ಮಗಳು ಮಾದಕದ್ರವ್ಯ ವ್ಯಸನಿಯಾಗಿದ್ದಳು ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ, ಅರ್ಥವೂ ಆಗುತ್ತಿಲ್ಲ. ಮಗಳನ್ನು ಸಾಕುವಲ್ಲಿ ನಾನೆಲ್ಲಿ ಎಡವಿದೆ" ಎಂದು ಹಣೆಗೆ ಕೈಚಚ್ಚಿಕೊಂಡರು. ಸರ್ ಹೀಗೆಲ್ಲಾ ಮಾತನಾಡಬೇಡಿ, ಕೆಲವು ಘಳಿಗೆ ಹಾಗೆಯೇ ಇರುತ್ತದೆ. ನಾವಂದುಕೊಂಡಂತಾಗುವುದಾದರೆ, ಮೇಲೊಬ್ಬ ಯಾಕಿರುವ ಎಂದೆ. "ನನ್ನ ಬಳಿ ಹಣ, ಹೆಸರು, ಗೌರವ, ಪ್ರತಿಷ್ಠೆ ಎಲ್ಲಾ ಇದೆ, ಆದರೆ ಮಗಳ ಭವಿಷ್ಯ ರೂಪಿಸಲು ಸೋತೆ, ಬಿಡು! ಸುನೈನಾ ಅವಳ ಕೋಣೆಯಲ್ಲಿ ಮಲಗಿದ್ದಾಳೆ ಹೋಗು" ಎನ್ನುತ್ತಾ ಕಣ್ಣೊರೆಸಿಕೊಂಡರು.
ನಾನು ಆಂಟಿ ಮಾಡಿದ ಚಹಾ ಕುಡಿದು, ಅವಳ ಕೋಣೆಗೆ ಹೋದೆ. ಜೀವಂತ ಶವದಂತೆ, ಅವಳ ಹಾಸಿಗೆಯ ಮೇಲೆ ಕುಳಿತಿದ್ದಳು. ಸಾವಿರ ಕನಸು ಕಟ್ಟಿಕೊಂಡಿದ್ದ ಅವಳ ಕಣ್ಣುಗಳು ಇಂದು ನಿಸ್ತೇಜಕವಾಗಿವೆ. ಎಲ್ಲರ ಮೋಡಿಮಾಡುತ್ತಿದ್ದ ಅವಳ ಸೊಬಗು ಇಂದು ಸೊರಗಿದೆ. ಮುಖದಲ್ಲಿ ಯಾವ ಕಾಂತಿಯೂ ಇಲ್ಲ. ಮೈಯಲ್ಲಿ ಯಾವ ಶಕ್ತಿಯೂ ಇಲ್ಲದಂತಿದೆ. ದೇಹ ಬಾಡಿದ ಹೂವಂತಾಗಿದೆ. ಅವಳ ಬಳಿ ಕುಳಿತು ಸುನೈನಾ ಎಂದೆ.
ನನ್ನನ್ನು ನೋಡಿ ಅತಿವೃಷ್ಟಿಯಿಂದ ಅಣೆಕಟ್ಟನ್ನು ಒಡೆದುಕೊಂಡು ನದಿ ಹರಿಯುವಂತೆ, ಮನಸೊಳಗಿನ ಎಣಿಸಲಾಗದಷ್ಟು ದುಃಖ-ದುಮ್ಮಾನಗಳು ಒಮ್ಮೆಯೇ ಉಕ್ಕಿ ಬಂದಂತಾಗಿ ಮುಖಮುಚ್ಚಿಕೊಂಡು ಗಳಗಳನೆ ಅತ್ತುಬಿಟ್ಟಳು. ಅದ್ಯಾವ ಆಸೆಯ ಬಲೆಗೆ ಸಿಲುಕಿದಳೋ, ಅದ್ಯಾವ ಹುಡುಗನ ಪ್ರೇಮ ತಪ್ಪು-ಸರಿ ತಿಳುವಳಿಕೆಯನ್ನೇ ಅಳಿಸಿತ್ತೋ, ಅದೆಂತಾ ವಸ್ತು ಅವಳು ಕಲಿತ ಬದುಕಿನ ಮೌಲ್ಯಗಳನ್ನೇ ಮರೆಸಿತ್ತೋ, ಅದ್ಯಾವ ಸಮಯ ವೈದ್ಯಳಾಗಿ ಸಾವಿರಾರು ಜನರ ಕಾಯಿಲೆಗಳನ್ನು ಗುಣಪಡಿಸಿ ಮಾದರಿಯಾಗಬೇಕಿದ್ದವಳನು, ಮಾದಕದ್ರವ್ಯ ವ್ಯಸನಿಯಾಗಿ ಮಾಡಿತೋ, ಅದ್ಯಾವ ಪಾಪ ಇವಳನ್ನು ಈ ಕೂಪಕ್ಕೇ ತಳ್ಳಿತೋ ನನಗಂತೂ ಅರ್ಥವಾಗುತ್ತಿಲ್ಲ. ಎಂತಹ ದೊಡ್ಡ ತಪ್ಪು ಮಾಡಿದ್ದರೂ ನನ್ನ ಕಣ್ಣಿಗೆ ಸುನೈನಾ ಸಮಯದ ಕೈಗೊಂಬೆಯಂತೆ ಕಾಣಿಸುತ್ತಿದ್ದಾಳೆ ಈಗಲೂ. "ನಾನು ತಪ್ಪು ಮಾಡಿದೆ ಕ್ಷಮಾ. ಬೇರೆಯವರು ಕ್ಷಮಿಸುವುದಿರಲಿ, ನನ್ನನ್ನೇ ನಾನು ಎಂದಿಗೂ ಕ್ಷಮಿಸುವುದಿಲ್ಲ. ನನ್ನ ಮೇಲೆ ನನಗೆ ಅಸಹ್ಯ ಹುಟ್ಟಿದೆ, ಈ ಉಸಿರು ಇನ್ನೂ ಯಾಕಿದೆಯೋ ಅರ್ಥವಾಗುತ್ತಿಲ್ಲ" ಎಂದು ತೊದಲುತ್ತಾ ಗೋಳಾಡಿದಳು. ಈಗ ಅತ್ತರೇನು ಪ್ರಯೋಜನ, ಅವಳ ಕನಸು ನಾಶವಾಗಿತ್ತು, ಗುರಿ ದಿಕ್ಕು ತಪ್ಪಿ ವರ್ಷಗಳೇ ಕಳೆದಿತ್ತು. ಮಾಡಿದ ತಪ್ಪಿಗೆ ಅವಳು ಶಿಕ್ಷೆ ಇನ್ನೆಷ್ಟು ವರ್ಷ ಅನುಭವಿಸಬೇಕೋ ದೇವರಿಗೇ ಗೊತ್ತು. ಆದರೆ ಸಮಯ ನಕ್ಕು ಮುಂದೆ ಸಾಗುತ್ತಿದೆ, ಎಲ್ಲರೂ ಅದರ ಜೊತೆ ಸಾಗಲೇಬೇಕು ಎಂದುಕೊಂಡೆ. ಯಾವ ಜನ್ಮದ ಪುಣ್ಯವೋ, ಪೋಲೀಸರವರೆಗೆ ವಿಷಯ ಹೋಗಿರಲಿಲ್ಲ. ಸತೀಶ್ ಸರ್ ಗೆ ಇವಳನ್ನು ಬಿಡಿಸುವುದು ಕಷ್ಟವಾಗುತ್ತಿರಲಿಲ್ಲ, ಆದರೆ ಹುಡುಗಿ, ಇವಳ ಮಾನ ಮರ್ಯಾದೆ ಹೋಗಿದ್ದರೆ! ಎಂದು ನಿಟ್ಟುಸಿರುಬಿಟ್ಟೆ. ಎಲ್ಲವೂ ಸರಿಹೋಗುತ್ತದೆ. ಸಮಾಧಾನ ಮಾಡಿಕೋ! ಎಂದು ಬಿಗಿದಪ್ಪಿ ಸಮಾಧಾನ ಮಾಡಿದೆ. ಅವಳು ಸಾವಿರ ಬಾರಿ, ತನ್ನನ್ನೇ ತಾನು ಜರಿದು ಅಳುವಿಗೆ ವಿರಾಮವನ್ನಿಡದೆ ಸುಸ್ತಾದಳು. ಎದ್ದು ನಿಲ್ಲಲೂ ಆಗದೆ, ಮತ್ತೆ ಹಾಸಿಗೆಯ ಮೇಲೆ ತಲೆತಿರುಗಿ ಬಿದ್ದಳು. ಭಯವಾಗಿ 'ಸರ್' ಎಂದು ಕೂಗಿದೆ. ಸರ್ ಮತ್ತು ಆಂಟಿ ಇಬ್ಬರೂ ಬಂದು, ಕೂಡಲೇ ಅವರ ವೈದ್ಯರಿಗೆ ಕರೆಮಾಡಿದರು. ವೈದ್ಯರು ಬಂದು ಚಿಕಿತ್ಸೆ ಕೊಟ್ಟು, "ನನ್ನ ಪ್ರಯತ್ನ ಮಾಡುತ್ತಿದ್ದೇನೆ, ಆದರೆ ಅವಳು ಸಂಪೂರ್ಣ ಗುಣವಾಗಲು ಹಲವು ವರ್ಷಗಳು ಬೇಕು. ಹೆರಾಯಿನ್ ನಂತಹ ಮಾದಕದ್ರವ್ಯಗಳ ವ್ಯಸನ ಹಾಗೆಯೇ. ನೀನು ಆಗಾಗ ಇವರ ಮನೆಗೆ ಬಂದು ಹೋಗು, ಅವಳಿಗೂ ಒಂಟಿ ಎನ್ನಿಸಬಾರದು" ಎಂದು ನನಗೆ ಹೇಳಿ ಹೊರನಡೆದರು. ಸುನೈನಾಳಿಗೆ ನಿದ್ದೆ ಬಂತಂದಾಗ ನಾನು ಹೊರಟೆ.
ನನ್ನ ಕಣ್ಣೀರನ್ನು ಒರೆಸಿಕೊಂಡು ಸ್ಕೂಟಿ ಏರಿದೆ. ಬದುಕು ಎಂತಹದಪ್ಪಾ ಎನಿಸಿತು. ! ಸುಖ ಬೇಕು ನಿಜ, ಆದರೆ ಮೌಲ್ಯಗಳಿಲ್ಲದ ಬದುಕೆಂತಹದು! ಸ್ವಾತಂತ್ರ್ಯ ಇರಬೇಕು, ಆದರೆ ಅದು ಸ್ವೇಚ್ಛಾಚಾರ ಆಗಬಾರದು. ಅಪರಿಮಿತ ಎತ್ತರಕ್ಕೆ ಜಿಗಿಯಬೇಕು, ಹೆಸರು ಗಳಿಸಬೇಕು, ಆದರೆ ನಮ್ಮದೇ ಆದ ನಿಯಮಗಳ ಪರಿಮಿತಿ ಇರಬೇಕು. ಸುಖ-ದುಃಖಗಳು ಬದುಕಿನ ಮಜಲುಗಳೇ. ಆದರೆ ಇಷ್ಟು ನೋವು, ದುಃಖ! ವಿಧಿಯಾಟಕೆ ಹೊಣೆಯಾರು, ಅಲ್ಲವೇ!
ಮನೆ ತಲುಪಿಯೇ ಬಿಟ್ಟೆ. ಅಮ್ಮನ ಸಾವಿರ ಪ್ರಶ್ನೆಗಳ ಸುರಿಮಳೆಯಾಗುತ್ತದೆ ಈಗ ಎಂದುಕೊಳ್ಳುವಾಗಲೇ ಅಮ್ಮ "ಹೇಗಿದ್ದಾಳೆ ಅವಳು, ಅವಳಿಗೇನು, ಈಗ ಅಪ್ಪ-ಅಮ್ಮ ಅಳುವವರು" ಎಂದರು. ಸುಮ್ಮನಿರಮ್ಮ, ಬಂದೆ, ಊಟಕ್ಕೆ ಸಿದ್ಧಪಡಿಸು ಎಂದು ಕೋಣೆಗೆ ಹೋದೆ. ಅವರ ಮಾತು ನಿಜ. ಮಕ್ಕಳು ಮಾಡುವ ತಪ್ಪಿಗೆ, ಶಿಕ್ಷೆ ಹೆತ್ತವರಿಗೂ ಆಗುತ್ತದೆ. ಪ್ರತಿಹೆಜ್ಜೆಯನ್ನಿಡುವ ಮೊದಲು ಸಾವಿರ ಬಾರಿ ಯೋಚಿಸಬೇಕು. ಆಗ ತಪ್ಪು ಹೆಜ್ಜೆ ಇಡುವುದು ತಪ್ಪಬಹುದು. ಅಲ್ಲವೇ!
ಚಿತ್ರ- ವೈಷ್ಣವಿ ಕೆ.
ತುಂಬಾ ಚೆನ್ನಾಗಿದೆ, ಆಸೆಯನ್ನು ಅಶೆ ಎಂದೂ ಬಳಸುತ್ತಾರೆ ಎಂದು ತಿಳಿದಿರಲಿಲ್ಲ. ಧನ್ಯವಾದಗಳು.
ಪ್ರತ್ಯುತ್ತರಅಳಿಸಿಅದು ಅಶೆ ಅಲ್ಲ. ಆಶೆ. ಸಂಸ್ಕೃತದ ಆಶಾ ಇಂದ, ಕನ್ನಡದ ಆಶೆ ಎಂಬ ಪದ ಹುಟ್ಟಿಕೊಂಡಿದ್ದು, ಕಾಲಕ್ರಮೇಣ ಹೊಸಗನ್ನಡದಲ್ಲಿ ಆಸೆ ಎಂದಾಯಿತು. ಡಿವಿಜಿಯವರ ಮಂಕುತಿಮ್ಮನ ಕಗ್ಗದಲ್ಲಿ ಆಶೆ ಎಂಬುದೇ ಇದೆ. ಧನ್ಯವಾದಗಳು 🙏🏻
ಅಳಿಸಿಹೌದು, ನನ್ನ ಮೇಲಿನ ಕಾಮೆಂಟ್ ಅಲ್ಲಿ ಅಕ್ಷರದೋಷವಾಗಿತ್ತು. Thank you 🙏
ಅಳಿಸಿಧನ್ಯವಾದಗಳು
ಅಳಿಸಿತುಂಬಾ ಚೆನ್ನಾಗಿದೆ ಈಕಥೆ
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ ಈಕಥೆ
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ ಈಕಥೆ
ಪ್ರತ್ಯುತ್ತರಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿ