ಮೊಬೈಲ್ ತಂದಿಟ್ಟ ಫಜೀತಿ
ನಮ್ಮ ದೈನಂದಿನ ಜೀವನದಲ್ಲಿ ಆಗುವ ಅದೆಷ್ಟೋ ಘಟನೆಗಳು ಅಥವಾ ಸಂದರ್ಭಗಳು ಕೆಲವೊಮ್ಮೆ ಚಿಕ್ಕದೆನಿಸಿದರೂ ಅದರ ಪರಿಣಾಮ ಮಾತ್ರ ದೊಡ್ಡದಾಗಿರತ್ತೆ. ಇತ್ತೀಚೆಗೆ ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗ ಆಗಿದೆ. ಈ ಲಾಕ್ಡೌನ್ ನಂತರವಂತೂ ಆಟ, ಪಾಠ, ಹೀಗೆ ಎಲ್ಲಾ ಕಾರ್ಯಕ್ಕೂ ಮೊಬೈಲ್ ಬೇಕು. ಮೊಬೈಲ್ ಎಂದ ತಕ್ಷಣ ನೆನಪಾಯ್ತು.
ಬಿಟ್ಟೆನೆಂದರೂ ಬಿಡದೀ ಮಾಯೆ
ಲೋಕದಲ್ಲಿದೆ ಈ ಮೊಬೈಲ್ನ ಮಾಯೆ
ಇದರಿಂದ ಬರುವವು ಕ್ಯಾನ್ಸರ್ನಂತಹ ರೋಗಗಳು
ಆದರೂ ಏಕೆ ಮೊಬೈಲ್ನ ಅತಿಯಾದ ಬಯಕೆ?
ಸಂದೇಶ ಕಳಿಸಲು ಸಮಯವೊಂದಿಷ್ಟು
ಅದರೊಂದಿಗೆ ಹಾಳು ನಮ್ಮ ಆರೋಗ್ಯವಿಷ್ಟು
ಅದಕ್ಕೆ ಖರ್ಚು ಹಣವೊಂದಿಷ್ಟು
ಆದರೂ ಬೇಸರವಿಲ್ಲ ಇಷ್ಟಿಷ್ಟು..!
ಮೊಬೈಲ್ ಬೇಕು ಅನೇಕ ಲಾಭಗಳಿಗೆ
ತಲೆಬಾಗಬೇಡಿ ಅದರ ಕೆಡುಕುಗಳಿಗೆ
ಮಿತಿಯೆಂಬುದಿರಲಿ ಉಪಯೋಗಕ್ಕೆ
ಮಿತಿ ಇರದಿರೆ ಜೀವಕ್ಕೆ ಕುತ್ತೇ!!
ಮೊಬೈಲ್ ಬಳಕೆಯ ತರಂಗಗಳಿಗೆ
ಪ್ರಾಣವನಿತ್ತವು ಅನೇಕ ಜೀವಿಗಳು
ಮೊಬೈಲನ್ನು ನಿಯಂತ್ರಿಸಿ, ಜೀವಿಗಳನ್ನುಳಿಸಿ
ಇದೇ ನನ್ನ ಘೋಷಣೆ, ಪ್ರಾರ್ಥನೆ..!
ಇದನ್ನು ನಾನೇ ೬-೭ ವರ್ಷಗಳ ಹಿಂದೆ ಬರೆದಿದ್ದು. ಇತ್ತೀಚೆಗೆ ಇದನ್ನ ಓದಿದಾಗೆಲ್ಲಾ ನಮಗಾಗಿಯೇ ಬರೆದಿಟ್ಟಿರುವೆನೇನೋ ಅನ್ನಿಸುತ್ತೆ. ಅಷ್ಟರ ಮಟ್ಟಿಗೆ ಮೊಬೈಲನ್ನು ನಾವು ಅವಲಂಬಿಸಿದ್ದೇವೆ. ಘಟನೆ, ಸಂದರ್ಭ ಅಂತೆಲ್ಲಾ ಹೇಳಿ, ಈಗ ಮೊಬೈಲ್ ಬಗ್ಗೆ ಹೇಳ್ತಿದಾರಲ್ಲಾ, ಅಂತ ಅಂದ್ಕೊಳ್ಬೇಡಿ. ಇದೆಲ್ಲಾ ಯಾಕೆ ಹೇಳ್ತಿದೀನಿ ಅಂದ್ರೆ ಇತ್ತೀಚೆಗೆ ಈ ಮೊಬೈಲ್ನ ಅವಾಂತರ ನಡೆದು ಹೋಯ್ತು.
ಕಾಲೇಜು, ಕ್ಲಾಸು ಎಲ್ಲಾ ಮುಗಿಸಿ ಮನೆಗೆ ಬಂದು ಬ್ಯಾಗ್ ನೋಡ್ತೀನಿ, ಮೊಬೈಲ್ ಇಲ್ಲ. ಮೇಲೆ, ಕೆಳಗೆ, ಉಲ್ಟಾ ಪಲ್ಟಾ ಎಲ್ಲಾ ಮಾಡಿ, ಬ್ಯಾಗ್ ಅಲ್ಲಿರೋದು ಎರಡೇ ಅರೆ ಆದ್ರೂ ಹುಡುಕಿದ್ದೇ ಹುಡುಕಿದ್ದು! ಎಷ್ಟೇ ಹುಡುಕಿದ್ರೂ ಮೊಬೈಲ್ ಇದ್ರೆ ಮಾತ್ರ ತಾನೇ ಸಿಗೋದು?! ಸತ್ಯ ಅರಗಿಸಿಕೊಳ್ಳೋದಕ್ಕೆ ಸ್ವಲ್ಪ ಸಮಯನೇ ಬೇಕಾಯಿತು. ಎಲ್ಲಿ ಮೊಬೈಲ್ ಬಿಟ್ಟೆ ಅನ್ನೋ ನೆನಪು ಕೂಡ ಇರಲಿಲ್ಲ ನನಗೆ! ಕಂಪ್ಯೂಟರ್ ಕ್ಲಾಸು, ಝೆರಾಕ್ಸ್ ಅಂಗಡಿ, ಹೀಗೆ ಎಲ್ಲೆಲ್ಲಾ ಹೋಗಿದ್ದೆ. ನೆನಪು ಮಾಡ್ಕೊಳ್ಳೋ ಪ್ರಯತ್ನವೇನೋ ಮಾಡಿದೆ. ಆದ್ರೆ ನೆನಪಾಗಬೇಕಲ್ಲ! ಉಹ್ಞೂ! ನೆನಪಾಗಲೇ ಇಲ್ಲ! ಮನೇಲಿ ಹೇಳಿದೆ. ಎಲ್ಲರೂ ಶುರು ಮಾಡಿದ್ರು, ಬೈಯ್ಯೋದಕ್ಕೆ ರೀ! ನನ್ನ ಅಪ್ಪ ಅಂತೂ ಕಾಲೇಜ್ಗೆ ಇವತ್ತು ಮೊಬೈಲ್ ಯಾಕೆ ತಗೊಂಡು ಹೋಗಿದ್ದೆ ಅಂತ ಕೇಳೇ ಬಿಟ್ರು.! (ಈ ಲಾಕ್ ಡೌನ್ ನಂತರ ನೋಟ್ಸ್ ಎಲ್ಲಾ ಮೊಬೈಲ್ ಅಲ್ಲೇ ಇರತ್ತೆ. ಈ ಚಿಕ್ಕ ಮೊಬೈಲ್ ಅಲ್ಲಿರೋ ಚಿಕ್ಕ ಚಿಕ್ಕ ಅಕ್ಷರಗಳನ್ನು, ಕಣ್ಣುಗಳನ್ನು ಚಿಕ್ಕದು ಮಾಡ್ಕೊಂಡು ಓದೋದು ಅಂದ್ರೆ ನನಗಂತೂ ಆಗಲ್ಲ! ತಲೆನೋವೇ ಬಂದ್ಬಿಡತ್ತೆ! ಹೇಗೂ ನಮ್ಮ ಶಿಕ್ಷಣಸಚಿವರೇ ಮೊಬೈಲ್ ತಗೊಂಡ್ಹೋಗೋದಕ್ಕೆ ಅವಕಾಶ ಕೊಟ್ಟಿದ್ದಾರೆ ಅಂದ್ಕೊಂಡು ಅಮ್ಮನ ಹತ್ತಿರ ಹೇಳೀನೇ ತಗೊಂಡು ಹೋಗಿದ್ದು. ಆದ್ರೆ ಇದ್ಯಾವ್ದು ಅಪ್ಪನಿಗೆ ಗೊತ್ತಿರ್ಲಿಲ್ಲ.) ಅವ್ರಿಗೆಲ್ಲಾ ಉತ್ತರ ಕೊಟ್ಟು ಅಕ್ಕನ ಹತ್ತಿರ ಕೂಡಲೇ ನನ್ನ ನಂಬರ್ಗೆ ಕರೆ ಮಾಡೋಕೆ ಹೇಳ್ದೆ. ಝೆರಾಕ್ಸ್ ಅಂಗಡಿ ಅಲ್ಲಿ ಬಿಟ್ಟಿರಬಹುದು ಅಂತ ನಾನಿದ್ದೆ. ಕರೆ ಏನೋ ಸ್ವೀಕಾರ ಆಯ್ತು. ಆದ ತಕ್ಷಣ ಸಂತೆಕಟ್ಟೆ ಸಂತೆಕಟ್ಟೆ ಅಂತ ಕೇಳಿಸ್ತು. ಓಹ್! ನನ್ನ ಮೊಬೈಲ್ ಕಳ್ದು ಹೋಗಿದ್ದು ಬಸ್ ಅಲ್ಲಿ ಅಂತ ಆವಾಗ್ಲೇ ಗೊತ್ತಾಗಿದ್ದು. ಕಂಡಕ್ಟರ್ ರಿಸೀವ್ ಮಾಡಿ, ಮೊಬೈಲ್ ಬಿಟ್ಟು ಹೋಗಿದ್ದಾರೆ ಬಸ್ಸಿನಲ್ಲೇ ಅಂತ ಹೇಳಿದ್ರು. ನನಗೆ ಬಸ್ ಹೆಸರು ದುರ್ಗಾಂಬ ಅನ್ನೋದು ಬಿಟ್ಟು ಕಲರ್ ರೂಟ್ ಏನೂ ಗೊತ್ತಿರ್ಲಿಲ್ಲ. ಅಕ್ಕ ಅದನ್ನು ಅವರಿಗೆ ಕೇಳ್ದಾಗ ಒರಟಾಗಿ, 'ನಾವೇನು ಮೊಬೈಲ್ ಇಟ್ಕೊಳಲ್ಲಾ ರೀ, ನಾನು ಈಗ ತಾನೇ ಕಾಲ್ ಮಾಡಿ ಒಬ್ರಿಗೆ ಹೇಳಿದ್ದೆ, ಈ ವಿಷಯ ಅವರಿಗೆ ತಿಳ್ಸಿ ಅಂತ , ನಾವು ಉಡುಪಿ ಇಂದ ವಾಪಾಸ್ ಬರ್ತಾ ನಿಮ್ಗೆ ಕೊಡ್ತೀವಿ' ಅಂತ ಹೇಳಿ, ಮನೆ ಎಲ್ಲಿ ಕೇಳಿ, ಎಲ್ಲಿ ನಿತ್ಕೊಳ್ಬೇಕು ಅಂತೆಲ್ಲಾ ಹೇಳಿದ್ರು. 'ಅವಳಿಗೆ ಏನೂ ನೆನಪಿಲ್ಲ, ಅದಕ್ಕೆ ಕೇಳಿದ್ದಷ್ಟೇ' ಅಂತ ನನಗೆ ಬೈಯ್ಯುತ್ತಾ, ಕಂಡಕ್ಟರ್ಗೆ ಥ್ಯಾಂಕ್ಸ್ ಹೇಳಿ ಕಾಲ್ ಇಟ್ಟಳು ನನ್ನಕ್ಕ! ಇದು ಇಷ್ಟೇ ಆಗಿದ್ರೇ ಸ್ವಲ್ಪ ಸಮಾಧಾನ ಆಗ್ತಿತ್ತು. ಆದ್ರೆ ಈ ಕಂಡಕ್ಟರ್ ಪುಣ್ಯಾತ್ಮ ಕಾಲ್ ಮಾಡಿದ್ರಲ್ಲ, (ಅಯ್ಯೋ! ಅವರು ಮೊಬೈಲ್ ಅಲ್ಲಿ ಅಷ್ಟೆಲ್ಲಾ ಹೇಗೆ ಹುಡುಕಿದ್ರು, ಲಾಕ್ ಹಾಕಿಲ್ವಾ ಅಂತ ಯೋಚಿಸ್ಬೇಡಿ. ನನಗೆ ಈ ಲಾಕ್ ಹಾಕೋದು, ಪ್ರತಿಸಲ ಮೊಬೈಲ್ ನೋಡ್ಬೇಕಾದಾಗ ಪಾಸ್ವರ್ಡ್ ಹಾಕೋದು, ಅದು ಮರೆತು ಹೋಗೋದು ಇದೆಲ್ಲಾ ಬೇಡ ಅಂತ ಅಷ್ಟೇ! ಇದಕ್ಕೆ ಉದಾಸೀನ ಅಂತನೂ ಹೇಳ್ಬಹುದೇನೋ! ಬೆರಳಚ್ಚು ಅಂದ್ರೆ ಫಿಂಗರ್ ಪ್ರಿಂಟ್ ಲಾಕ್ ಹಾಕೋದಕ್ಕೂ ಉದಾಸೀನನೇ ರೀ ನನಗೆ!) ಅದು ನನ್ನ ಕಾಲ್ ಲಿಸ್ಟ್ ಅಲ್ಲಿ ಮೊದಲು ಇದ್ದ ನನ್ನ ಸ್ನೇಹಿತೆಗೆ. ಅವಳಿಗೆ ನನ್ನ ನಂಬರ್ ಬಿಟ್ಟು ನಮ್ಮ ಮನೆಯವರ ನಂಬರ್ ಗೊತ್ತಿಲ್ಲ. ಅವಳ ಪಕ್ಕದ ಮನೆಗೆ ಪಶುವೈದ್ಯಾಧಿಕಾರಿ ನನ್ನ ಚಿಕ್ಕಪ್ಪ. ಅವಳು ಅವರ ಮನೆಗೆ ಹೋಗಿ ನನ್ನ ಚಿಕ್ಕಪ್ಪನ ನಂಬರ್ ತಗೊಂಡು ಕಾಲ್ ಮಾಡಿ ವಿಷಯ ತಿಳಿಸಿದ್ಲು. ಅವರು ನಮ್ಮನೆಗೆ ಕಾಲ್ ಮಾಡಿದ್ರು. ಅಷ್ಟರಲ್ಲಿ ನಮಗೆ ವಿಷಯ ಗೊತ್ತಾಗಿದ್ರೂ, ನನ್ನ ಬೇಜವಾಬ್ದಾರಿತನ, ಈ ಪುಟ್ಟ ವಿಷಯವನ್ನು ದೊಡ್ಡದೇ ಮಾಡಿಬಿಟ್ಟಿತ್ತು!
ಕಂಡಕ್ಟರ್ ಕಾಲ್ ಮಾಡಿ ೧೦ ನಿಮಿಷದಲ್ಲಿ ಬಸ್ ಸ್ಟಾಂಡ್ಗೆ ಬರ್ತೀವಿ ಅಂತ ಹೇಳಿ ಕಾಲ್ ಇಟ್ಟು, ೨ ನಿಮಿಷ ಬಿಟ್ಟು ಮತ್ತೆ ಕಾಲ್ ಮಾಡಿ, ಮೊಬೈಲ್ ಕೊಡ್ಬೇಕಾದ್ರೆ ೨೦೦೦ ಕೊಡ್ಬೇಕು ಇಲ್ಲಾಂದ್ರೆ ಕೊಡಲ್ಲ ಅಂತ ಖಡಕ್ ಆಗೇ ಹೇಳಿ ಕಾಲ್ ಇಟ್ಟರು. ಉರಿತಿರೋ ಬೆಂಕಿಗೆ ತುಪ್ಪ ಸುರಿದ ಹಾಗಾಯ್ತು! ಮೊದಲೇ ಬಸವಳಿದಿದ್ದೆ. ಈಗ ಅಂತೂ ಕರಗಿನೇ ಹೋದೆ. ಇದನ್ನು ಅಪ್ಪನಿಗೆ ಹೇಳ್ದಾಗ, ತಮಾಷೆಗೆ ಹೇಳಿದ್ದು ಅಂದ್ರೂ ನನಗೇನೋ ಹಾಗೆ ಅನ್ನಿಸಿರ್ಲಿಲ್ಲ. ಬಸ್ ಬಂತು. ಕಂಡಕ್ಟರ್ ಇಳಿದು ಬರ್ತಿದ್ರು. ಮುಖ ನೋಡ್ತೀನಿ, ನಗ್ತಾ ಬರ್ತಿದಾರೆ. ಫೋನಲ್ಲಿ ಅಷ್ಟು ಒರಟಾಗಿ ಮಾತಾಡಿದ್ದು ಇವ್ರೇನಾ ಅನ್ಸಿದ್ದು ಮಾತ್ರ ಸುಳ್ಳಲ್ಲ! ಮಾತು ಗಡಸಾದರೂ ಮನಸು ಮೃದು ಆಗಿರೋರು ಇರ್ತಾರೆ ನೋಡಿ! ಮಾತಿನ ಮೂಲಕವೇ ಒಬ್ರನ್ನ ಅಳೆಯೋದು ಕೂಡ ಕಷ್ಟನೇ ಅಲ್ವಾ! ಮೊಬೈಲ್ ಕೊಟ್ಟು ನಮ್ಮ ಥ್ಯಾಂಕ್ಸ್ನೆಲ್ಲ ತಗೊಂಡು ಟಾಟಾ ಹೇಳಿ ಹೋದರು.
ಬಸ್ಸಿನಲ್ಲಿ ಮೊಬೈಲೇ ಬ್ಯಾಗಿಂದ ತೆಗ್ದಿರ್ಲಿಲ್ಲ. ಸ್ನೇಹಿತೆ ಜೊತೆ ಅಷ್ಟು ಮಾತಾಡ್ತಾ ಬರ್ತಿದ್ದ ನನಗೆ ಬ್ಯಾಗ್ನಿಂದ ಮೊಬೈಲ್ ಜಾರಿದ್ದು ಗೊತ್ತಾಗಲೇ ಇಲ್ಲ.! ದುಡ್ಡು ತೆಗೆಯುವಾಗ ಬಿದ್ದಿರಬಹುದು ಅನ್ನೋ ಊಹೆ ಮಾಡ್ಕೋಬೇಕಾಯ್ತು ಅಷ್ಟೇ! ಮೊಬೈಲ್ ಯಾವ್ದೋ ಪ್ಯಾಸೆಂಜರ್ಗೆ ಸಿಕ್ಕಿದ್ರೆ ಅಥವಾ ಕಂಡಕ್ಟರ್ ಮೊಬೈಲ್ ಕೊಡದೇ ಅವ್ರೇ ಸ್ವಿಚ್ ಆಫ್ ಮಾಡಿ ಇಟ್ಕೊಂಡಿದ್ರೆ ಅಂತೆಲ್ಲಾ ಯೋಚನೆ ಮಾಡ್ತಾ, ಅದೆಲ್ಲಾ ಆಗ್ದೇ ಇರೋದಕ್ಕೆ ದೇವ್ರಿಗೆ, ಕಂಡಕ್ಟರ್ಗೆ ಥ್ಯಾಂಕ್ಸ್ ಹೇಳಿದ್ದಂತೂ ಆಯ್ತು.
ಮೊಬೈಲ್ ಏನೋ ಸಿಗ್ತು. ಅದರ ಜೊತೆ ಬೈಗುಳಗಳೂ.. ಎಲ್ಲರೂ ಹೇಳಿದ್ದು ಒಂದೇ! ಈ ಕಾಲದಲ್ಲೂ ಮೊಬೈಲ್ನ ಮರೆತುಬಿಡೋರು ಇದ್ದಾರಾ ಅಂತ!!
ಮೊಬೈಲೇ ಜೀವ-ಜೀವನ ಆಗಿರೋ ಈ ಕಾಲದಲ್ಲೂ ಮೊಬೈಲ್ ಮರೆತ್ಹೋದೆ ಅಂತ ಖುಷಿ ಪಡಬೇಕೋ? ಅಥವಾ ಮೊಬೈಲ್ನೇ ಮರೆತೆ ಇನ್ನೇನ್ ನೆನಪಿರತ್ತೆ ಅಂತ ದುಃಖ ಪಡಬೇಕೋ ಅಂತ ಮಾತ್ರ ಇವತ್ತಿಗೂ ಗೊತ್ತಾಗಿಲ್ಲ!
ಮೊಬೈಲ್ನ ಇನ್ನು ತಗೊಂಡೇ ಹೋಗ್ಬಾರ್ದು, ಹೋದ್ರೂ ಲಾಕ್ ಹಾಕಿರ್ಬೇಕು ಅಂತ ನಿರ್ಧಾರ ಏನೋ ಮಾಡಿದೆ! ಎಷ್ಟು ದಿನ ಇದನ್ನು ಪಾಲಿಸ್ತೀನಿ ಅಂತ ಮಾತ್ರ ನನಗೂ ಗೊತ್ತಿಲ್ಲ..ಹಹ್ಹ
ಮೊಬೈಲ್ ಏನೋ ಸಿಗ್ತು. ಅದರ ಜೊತೆ ಬೈಗುಳಗಳೂ.. ಎಲ್ಲರೂ ಹೇಳಿದ್ದು ಒಂದೇ! ಈ ಕಾಲದಲ್ಲೂ ಮೊಬೈಲ್ನ ಮರೆತುಬಿಡೋರು ಇದ್ದಾರಾ ಅಂತ!!
ಮೊಬೈಲೇ ಜೀವ-ಜೀವನ ಆಗಿರೋ ಈ ಕಾಲದಲ್ಲೂ ಮೊಬೈಲ್ ಮರೆತ್ಹೋದೆ ಅಂತ ಖುಷಿ ಪಡಬೇಕೋ? ಅಥವಾ ಮೊಬೈಲ್ನೇ ಮರೆತೆ ಇನ್ನೇನ್ ನೆನಪಿರತ್ತೆ ಅಂತ ದುಃಖ ಪಡಬೇಕೋ ಅಂತ ಮಾತ್ರ ಇವತ್ತಿಗೂ ಗೊತ್ತಾಗಿಲ್ಲ!
ಮೊಬೈಲ್ನ ಇನ್ನು ತಗೊಂಡೇ ಹೋಗ್ಬಾರ್ದು, ಹೋದ್ರೂ ಲಾಕ್ ಹಾಕಿರ್ಬೇಕು ಅಂತ ನಿರ್ಧಾರ ಏನೋ ಮಾಡಿದೆ! ಎಷ್ಟು ದಿನ ಇದನ್ನು ಪಾಲಿಸ್ತೀನಿ ಅಂತ ಮಾತ್ರ ನನಗೂ ಗೊತ್ತಿಲ್ಲ..ಹಹ್ಹ
Super
ಪ್ರತ್ಯುತ್ತರಅಳಿಸಿಧನ್ಯವಾದ 😊
ಅಳಿಸಿಸುಂದರವಾದ ಬರಹ....
ಪ್ರತ್ಯುತ್ತರಅಳಿಸಿಧನ್ಯವಾದ 😊
ಅಳಿಸಿಲಾಕ್ ಹಾಕಿದ್ರೆ ಮೊಬೈಲೇ ಸಿಗ್ತಿರ್ಲಿಲ್ವೋ ಏನೋ...?
ಪ್ರತ್ಯುತ್ತರಅಳಿಸಿಚೆನ್ನಾಗಿ ಬರ್ದೀರಿ.... ಕವಿತೆನೂ ಚೆನ್ನಾಗಿದೆ...
ಲಾಕ್ ಹಾಕಿದ್ದರೂ ಮೊಬೈಲ್ ಸಿಗುತ್ತಿತ್ತೋ ಏನೋ! ನಾವು ಕಾಲ್ ಮಾಡಿದಾಗ ಲಾಕ್ ಇದ್ರೂ ರಿಸೀವ್ ಮಾಡಬಹುದಲ್ಲಾ...!😄
ಅಳಿಸಿನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ😊..
ಇದು ಒಂದು ಸಾಮಾನ್ಯ ವಿಷಯ ಆದರೆ ನಿಮ್ಮ ವ್ಯತಿರಿಕ್ತಥೆ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿನಿಮ್ಮ ಕವನ ಚೆನ್ನಾಗಿದೆ
ನಾನು ಫೊನ್ ಬಗ್ಗೆ ಬರೆಯುತ್ತೀರುವೆ ಆದರೆ ಅದು ಬೇರೆ ರೀತಿಯಲ್ಲಿ
ಒಟ್ಟಿನಲ್ಲಿ ಚೆನ್ನಾಗಿ ಮೂಡಿ ಬಂದಿದೆ...
😊🙏.. ಧನ್ಯವಾದ
ಅಳಿಸಿಸೊಗಸಾಗಿದೆ ಮೇಡಂ
ಪ್ರತ್ಯುತ್ತರಅಳಿಸಿಧನ್ಯವಾದಗಳು...😊
ಅಳಿಸಿಕವನ ಮತ್ತು ಬರಹ ಎರಡೂ ಇಷ್ಷವಾದವು ಮೇಡಂ.
ಪ್ರತ್ಯುತ್ತರಅಳಿಸಿಧನ್ಯವಾದ ಸರ್😇
ಅಳಿಸಿ