ಕಂಗ್ಲೀಷ್ ಕಥೆ- ಕ್ರಷ್

 

ಒಂಟಿ ಆಗಿರೋ ಬಾಳಲ್ಲಿ ಕ್ರಷ್ ಅನ್ನೋ ಪದ ಎಷ್ಟು ಖುಷಿ ಕೊಡುತ್ತೆ ಅಲ್ವಾ! ಶಾಲೇಲಿ, ಕಾಲೇಜಲ್ಲಿ, ಕೆಲಸದಲ್ಲಿ ಆಗಾಗ ನಮ್ ಜೀವನದಲ್ಲಿ ಎಂಟ್ರಿ ಕೊಡ್ತಾನೆ ಇರ್ತಾರೆ.
ಹೈಸ್ಕೂಲಲ್ಲೂ ಒಬ್ಳು ಇದ್ಲು. ಅಂದವಾದ ಮುಖ, ಎರಡು ಜಡೆ, ಕಣ್ಣಿಗೆ ಕಾಡಿಗೆ, ಹಣೇಲಿ ಹೊಳೆಯೋ ಒಂದು ಚಿಕ್ಕ ಬಿಂದಿ, ಕಾಲಿಗೆ ದಪ್ಪದ ಗೆಜ್ಜೆ, ಕೈಗೆ ಒಂದೊಂದ್ ಬಳೆ, ಫಸ್ಟ್ ಬೆಂಚು, ಅಧ್ಯಾಪಕರ ಮೆಚ್ಚುಗೆಯ ಹುಡುಗಿ ಅಂದ್ರೆ ಕ್ಲಾಸಿಗೆ ಫಸ್ಟ್. ಅವಳಿಗೆ ಆಗ್ಲೇ ಸ್ವಲ್ಪ ಸೊಕ್ಕಿತ್ತು. ನನ್ ಹೆಸರು ಯಾವಾಗ್ಲೂ ಬೋರ್ಡ್ ಮೇಲೆ ಇರ್ತಿತ್ತು. ನಾವ್ ಬಿಡಿ, ಲಾಸ್ಟ್  ಅವಳಿಂದ ಅಧ್ಯಾಪಕರ ಹತ್ರ ಬೈಸ್ಕೊಂಡಿದ್ದು ಒಂದೆರಡ್ ಸಲ ಏನಲ್ಲ. ಆದ್ರೂ ಅವಳಂದ್ರೆ ನಂಗಿಷ್ಟ. ಅವಳನ್ನ ನೋಡೋ ಖುಷಿ, ಅವ್ಳು ಕ್ಲಾಸಿಗೆ ಬರದೇ‌ ಇದ್ದಾಗ ಆಗೋ ಬೇಜಾರು‌ ನಂಗೇ‌ ಗೊತ್ತು. ಹೈಸ್ಕೂಲ್ ಮುಗಿದ ಬಳಿಕ ಅವಳ ಮನೆಯವರು ಬೇರೆ ಊರಿಗೆ ಹೋದ್ರು. ಇತ್ತೀಚೆಗೆ ಅವಳ ನೆನಪಾಗಿ ಫೇಸ್ಬುಕ್ನಲ್ಲಿ ನೋಡಿದಾಗ, ಅವ್ಳಿಗೆ ಮದ್ವೆ ಆಗಿದ್ದೂ‌ ಗೊತ್ತಾಯ್ತು. ಆಗೆಲ್ಲಾ‌ ಅವಳು ಇಷ್ಟ, ಕ್ರಷ್ ಅಂತ ಕರೆಯೋ ಧೈರ್ಯ ‌ನಂಗಂತೂ ಇರ್ಲಿಲ್ಲ. ಈಗ ಅನ್ಸುತ್ತೆ, ಅದೇ ಕ್ರಷ್ ಅಂತ.
ಅದ್ರ ಮೇಲೆ ಆ ಥರಾ ಯಾರೂ ಇಷ್ಟ ಆಗಿರ್ಲಿಲ್ಲ. ಮೆಕಾನಿಕಲ್ ಎಂಜಿನಿಯರಿಂಗ್ ಓದಿದ್ದು, ಒಬ್ಬ ಹುಡ್ಗೀನು ನಮ್ ಕ್ಲಾಸ್ನಲ್ಲಿ ಇರ್ಲಿಲ್ಲ. ಓದಿ, ಕೆಲಸ ಸಿಕ್ಕಿ ಎರಡ್ ವರ್ಷ ಆಗ್ತಾ ಬಂದಿತ್ತು. 

ಜೀವನ ಅಂದ್ರೆ, ಅಮ್ಮ, ಮನೆ, ಕೆಲಸ, ಅಣ್ಣ-ಅತ್ತಿಗೆ, ನನ್ನ ಹಾಗೆಯ ಸ್ನೇಹಿತರು ಇಷ್ಟೇ ಆಗಿತ್ತು. ನಮ್ಮಮ್ಮ ಎಷ್ಟು ಫ್ರೆಂಡ್ಲಿ ಅಂದ್ರೇ, ಬೇರೆ ಎಲ್ರೂ ಹುಡ್ಗೀರ ವಿಷ್ಯ ಹೇಳ್ದಾಗ ಬೈದ್ರೆ ನಮ್ಮಮ್ಮ ನಂಗೆ, ಒಂದು ಹುಡ್ಗೀನು ಇಷ್ಟ ಆಗಿಲ್ವೇನೋ ಇಷ್ಟ್ ಚೆನ್ನಾಗಿದೀಯ ಅನ್ನೋರು. ಹುಡ್ಗೀರೇನು ಅವರಾಗೇ ಬಂದು ಹೇಳ್ತಾರಾ, ನಾವೇ ಕಾಳ್ ಹಾಕ್ಬೇಕು, ನಾನು ಅದಕ್ಕೆ ಅಂತ ಟೈಮ್ ಮಾಡ್ಕೊಂಡಿದ್ದೇ ಇಲ್ಲ. ಹೀಗಿತ್ತು ನಮ್ ಲೈಫ್. ಒಂಥರಾ ಬೋರ್. ಅಲ್ವಾ!
ನಾನು ದೊಡ್ಡ ಕಂಪೆನಿಯಲ್ಲಿ ಕೆಲಸ ಮಾಡ್ತಾ ಇದ್ದೆ, ಅಲ್ಲಿ ಸಾಫ್ಟ್ವೇರ್ ಕೂಡ ಇತ್ತು, ನಮ್ಮ ಹಾರ್ಡ್ವೇರ್ ಕೂಡ ಇತ್ತು. ನಮ್ದು ಗ್ರೌಂಡ್ ಫ್ಲೋರಲ್ಲಿ ಆಫೀಸ್. ಮಾಮೂಲಿಯಂತೆ ಟೆಸ್ಟಿಂಗ್ ಕೆಲಸ ಮುಗಿಸಿ, ಅಲ್ಲೇ ಊಟ ಮಾಡಿ, ರಿಪೋರ್ಟ್ ರೆಡಿ ಮಾಡೋಕೆ ಕಿಟಕಿಯ ಎದುರು ಕೂತಿದ್ದೆ. ನಮಗೆ ಹೊರಗೀನೋರು ಕಾಣ್ತಾರೆ, ಆದರೆ ಅವರಿಗೆ ಒಳಗಡೆ ಇರೋರು ಕಾಣ್ಸಲ್ಲ. ಐದು ಜನ ಹುಡ್ಗೀರು, ಎಲ್ರೂ ಐದಡಿ ಅದ್ಕಿಂತ ಜಾಸ್ತಿ ಏನಿಲ್ಲ. ನಾಲ್ವರು ಏನೋ ಅವರವರೇ ಮಾತಾಡ್ತಾ ಇದ್ರೇ, ಒಬ್ಳು ಮಾತ್ರ ಗಾಜಲ್ಲಿ ತನ್ನ ಮುಖ ನೋಡ್ಕೊಂಡು, ಕೂದ್ಲು ಸರಿ ಮಾಡ್ಕೊಳ್ತಾ ಹೋಗ್ತಿದ್ಲು. ನಂಗೆ ನಗೂನೆ ಬಂತು, ನಾನು ಸಡೆನ್ ಆಗಿ ನಕ್ಕಿದ್ದು ನೋಡಿ, ಎಲ್ಲಾ ಏನಾಯ್ತೋ ಅಂದ್ರು. ಏನಿಲ್ಲ ಅಂದೆ. ತುಂಬಾನೆ ಬಿಳಿ ಇದ್ಲು, ಸಿಕ್ಕಾಪಟ್ಟೆ ಕ್ಯೂಟ್ ಆಗಿದ್ಲು. ಮೂಗಿಗೊಂದು ರಿಂಗ್,  ಜೀನ್ಸ್ ಹಾಕಿದ್ಲು, ಆದ್ರೂ ಅಂಥಾ ಮಾಡೆರ್ನ್ ಹುಡುಗಿ ಅನ್ಸಿಲ್ಲ.  ಮತ್ತೆ ನಕ್ಕಿದ್ದು ಏನಕ್ಕೆ ಅಂತಾನಾ! ಅರ್ಧ ಗುಂಗುರು ಕೂದ್ಲು, ಅದನ್ನು ಫ್ರೀ ಆಗೇ ಬಿಟ್ಟಿದ್ಲು, ತಲೆ ಬಾಚಿದ ಯಾವ ಲಕ್ಷಣಾನು ನನಗೆ ಕಾಣಿಸ್ಲಿಲ್ಲ. ಅದ್ರಲ್ಲೂ, ಒಳಗೆ ಯಾರಾದ್ರೂ ಇರ್ಬೋದು ಅಂತ ಯೋಚನೆ ಮಾಡದೇನೆ ಕೂದ್ಲು ಸರಿ ಮಾಡ್ಕೊಂಡ್ಲಲ್ಲಾ, ಅದ್ಕೆ ನಗು ಬಂತು. ಆದ್ರೂ ಒಂಥರಾ ಇಷ್ಟ ಆಗ್ಬಿಟ್ಲು.
ಮರುದಿನ ಅದೇ ಟೈಮ್ಗೆ ಅಲ್ಲೇ ಕೂತಿದ್ದೆ, ಮತ್ತೆ ಅವರೇ ಐವರು, ಅವ್ಳು ಇವತ್ತು ಚೂಡಿದಾರ್ ಹಾಕಿದ್ಲು. ಆದ್ರೆ ಕೂದ್ಲು ಮಾತ್ರ ಅದೇ‌ ತರಾ! ಇವತ್ತೂ ನಕ್ದೆ, ಆದ್ರೆ ಕೂದ್ಲು ನೋಡಲ್ಲ. ಅವಳು ನಾಲಿಗೆ ಹೊರಗೆ ಹಾಕಿ, ತಲೆ ಪಕ್ಕ ಕೈಯಿಟ್ಟು, ಯಾವ್ದೋ ಎಮೋಜಿ ತರಾ ಕಪಿಚೇಷ್ಠೆ ಮಾಡಿ ಹೋದ್ಲು. ಅವಳದ್ದು ಮಗುವಿನ ಮನಸ್ಸು ಅಂತ ನಂಗೆ‌ ಗೊತ್ತಾಗೋಯ್ತು, ಒಳಗೆ ಯಾರಾದ್ರೂ ಇದ್ರೆ ಅನ್ನೋ ಯೋಚನೇನು‌ ಮಾಡಿಲ್ಲ ಅವ್ಳು‌ ಅನ್ಸುತ್ತೆ. ಮನೆಗೆ ಹೋದ್ರೂ ಅವ್ಳೇ ಕಣ್ಮುಂದೆ ಬಂದ ಹಾಗೆ ಅನ್ನಿಸ್ತಿತ್ತು.
ಒಂದು ವಾರ ನಂದು ಅದೇ ಟೈಮ್ ಟೇಬಲ್. ಪ್ರತಿದಿನ ಒಂದಲ್ಲ ಒಂದು‌ ವಿಷಯಕ್ಕೆ ನಗು‌ ತರಿಸ್ತಾ ಇದ್ಲು, ಇದೆಲ್ಲಾ ನನ್ ಫ್ರೆಂಡ್ಸ್ಗೆ ಗೊತ್ತಾಗೋಕೆ ಹೆಚ್ಚು‌ ಸಮಯ ಏನು ಬೇಕಾಗಿರ್ಲಿಲ್ಲ.
ಮತ್ತೆ ಹದಿನೈದು ದಿನ, ನಂಗೆ ನೈಟ್ ಶಿಫ್ಟ್ ಇತ್ತು. ಒಂದ್ ವಾರ ಅವ್ಳೆಲ್ಲೂ‌ ನನ್ನ ಕಣ್ಣೆದುರಿಗೆ ಬಿದ್ದಿರ್ಲಿಲ್ಲ. ಎಂಟನೇ ದಿನ, ರಾತ್ರಿ ಊಟಕ್ಕೆ ಅಂತ ಆಫೀಸ್ ಕ್ಯಾಂಟೀನಿಗೆ ಹೋಗ್ತೀನಿ, ಅರ್ರೇ, ನಮ್ ಹುಡುಗಿ, ಅವಳ ಒಬ್ಳು ಫ್ರೆಂಡ್ ಜೊತೆ ಇದ್ಲು. ನಾನು ಊಟ‌ ತಗೊಂಡು ಅವಳ ಎದುರು, ಸ್ವಲ್ಪ ದೂರದಲ್ಲಿ ಇರೋ ಟೇಬಲ್ಲಲ್ಲಿ ಕೂತೆ. ನಾನು ಅವ್ಳನ್ನ ನೋಡ್ತಾ ಊಟ ಮಾಡ್ತಾ ಇದ್ದೆ. ಒಮ್ಮೆಗೆ ಕರೆಂಟ್ ಶಾಕ್ ಹೊಡೆದ ಹಾಗಾಯ್ತು. ಅವ್ಳೂ ನನ್ನ ಇಣುಕಿ ನೋಡಿದ್ಲು. ನಾನು‌ ಹಿಂದೆ-ಮುಂದೆ ಎಲ್ಲಾ ಚೆಕ್ ಮಾಡಿದೆ. ಬೇರೆ ಯಾರಾದ್ರೂ ಇದಾರಾ ಅಂತ, ಇನ್ನೊಂದೆರೆಡು ಹುಡ್ಗೀರ ಗ್ಯಾಂಗ್ ಇತ್ತು ಅಷ್ಟೇ. ಯಾರನ್ನ ನೋಡಿದ್ಲೋ ಅನ್ಕೊಂಡೆ. ಆದರೆ, ಅದರ ನಂತ್ರಾನೂ ನಾಲ್ಕೈದು ಬಾರಿ ಇಣುಕಿ ನೋಡಿದ್ಲು. ನನ್ನನ್ನೇ ಅಂತ ಪಕ್ಕ ಆಯ್ತು. ಆದ್ರೆ, ಅವ್ಳಿಗೆ ಹೇಗೆ ನಾನ್ಗೊತ್ತು, ಯಾಕ್ ಆ ತರಾ ನೋಡ್ತಾ‌ ಇದ್ಲೋ ಗೊತ್ತೇ ಆಗಿಲ್ಲ. 

ಮತ್ತೆ ಒಂದೆರೆಡು ದಿನ ಕಣ್ಣಿಗೆ ಬಿದ್ದೇ ಇಲ್ಲ ಹುಡುಗಿ, ಆಮೇಲೆ ಒಂದಿನ ನಾನು ರಾತ್ರಿ ಊಟಕ್ಕೆ ಅಂತ ಕ್ಯಾಂಟೀನ್ ಹೋಗ್ತಾ ಇದ್ದೆ, ಅವಳು ಕ್ಯಾಂಟೀನ್ನಿಂದ ಹೊರಗೆ ಬರ್ತಾ ಇದ್ಲು, ನಾಲ್ಕೈದು ಜನ ಹುಡ್ಗೀರು ಇದ್ರು. ಅವಳು ನನ್ನನ್ನ ನೋಡಿದ್ಲು, ಆದ್ರೆ ಯಾರೋ ಏನೋ ಅನ್ನೋವಂತೆ. ಆದ್ರೆ ಎಷ್ಟ್ ಚೆನ್ನಾಗ್ ಕಾಣಿಸ್ತಿದ್ಲು ಅಂದ್ರೆ ದೇವತೇನೆ ಅನ್ಕೊಂಡು ಹಿಂದೆ ತಿರುಗ್ತೀನಿ, ಶಾಕಲ್ಲಿ ಏನ್ ಮಾಡೋದು ಅಂತಾನು ಗೊತ್ತಾಗಿಲ್ಲ. ಅವ್ಳ ತೋರುಬೆರಳು ನನ್ ಕಡೇನೆ ಇತ್ತು, ಎಲ್ಲಾ ಹುಡ್ಗೀರು ನನ್ನನ್ನೇ ನೋಡ್ತಾ ಇದ್ರು. ಏನ್ ಮಾಡೋದು ಅಂತ ಗೊತ್ತಾಗ್ದೇ ರಪಕ್ ಅಂತ ಅಲ್ಲಿಂದ ಒಳಗೆ ಹೋದೆ. ತಲೆ ಎಲ್ಲಾ ಕೆಟ್ಟೋಯ್ತು, ನಮ್ಗೆ ಕ್ರಷ್ ಆಗೋದೇನೋ ಸರಿ, ಆದ್ರೆ ನಮ್ ಕ್ರಷ್ಗೆ ನಮ್ಮೇಲೆ ಕ್ರಷ್ ಆಗುತ್ತಾ?! ಭ್ರಮೇನೆ!!. ನಾನು ನೋಡೋಕೇನೋ ಚೆನ್ನಾಗಿದೀನಿ, ಆದ್ರೂ ಅನುಮಾನನೇ. ಅವ್ಳು ಯಾಕೆ ನನ್ನ ತೋರಿಸ್ತಾ ಇದ್ಲು, ಯಾಕಷ್ಟು ಖುಷಿ ಆಗಿದ್ಲು ಅಂತ ಯೋಚ್ನೆ ಮಾಡ್ತಾ ಒಂದು ವಾರ ಕಳ್ದೇ ಹೋಯ್ತು.
ಆಗಿದ್ ಆಗ್ಲಿ ಅನ್ಕೊಂಡ್ ಫ್ರೆಂಡ್ಸ್ ಗೆ ವಿಷ್ಯ ಹೇಳ್ದೆ. ಮಧ್ಯಾಹ್ನ ಕ್ಯಾಂಟೀನಿಗೆ ಊಟಕ್ಕೆ ಹೋಗುವ, ಎಲ್ಲಾದ್ರೂ ಸಿಗ್ತಾಳಾ ನೋಡುವ ಅಂತ ಹೋಗೋಕ್ ಶುರು‌ ಮಾಡಿದ್ವಿ. ಮತ್ತೆ ಒಂದ್ ವಾರ ಎಲ್ಲೂ ಕಾಣೋಕ್ ಸಿಗ್ಲೇ‌ ಇಲ್ಲ. ಫ್ರೆಂಡ್ಸ್ ಎಲ್ಲಾ ಏನ್ ಕತೆ ಬಿಡ್ತಾ ಇದೀಯಾ ಅಂದ್ರು. ಎಂಥಾ ಮಾಯಾಂಗನೆ ಇವ್ಳು‌ ಅನ್ಕೊಂಡೆ. ಮತ್ತೆ ಒಂದಿನ ಕ್ಯಾಂಟೀನಲ್ಲಿ ತಿಂತಾ ಇರ್ಬೇಕಾದ್ರೆ ಅವ್ಳ ಗ್ಯಾಂಗ್ ಬಂತು. ನನ್ನ ಎದುರಿನ ಟೇಬಲಲ್ಲಿ, ನನ್ನೆದುರಿಗೆ ಕೂತ್ಲು. ನಾನು ಎಲ್ಲಾರ್ಗೂ‌ ಅವಳನ್ನ ತೋರಿಸ್ದೆ! ಹೂ ನೋಡಿದ್ರೇನೆ ಗೊತ್ತಾಗುತ್ತೆ ಪಕ್ಕಾ ಚೈಲ್ಡಿಷ್, ಆದ್ರೆ ಚೆನ್ನಾಗಿದಾಳೋ ಅಂದ್ರು. ಮೊನ್ನೆ ಏನೋ ನನ್ನ ಎಲ್ಲಾರ್ಗೂ ತೋರ್ಸಿದ್ಲು, ಅದು ಇದು ಅಂದೆ. ಈಗೇನು ನೋಡಿದ್ರೂ ನೋಡಿಲ್ಲ ಅನ್ನೋ ಹಾಗೆ ಇದಾಳೆ, ಏನ್ ಕತೆ ಅಂದ್ರು‌. ನಂಗೂ ಏನು ಅರ್ಥಾನೆ ಆಗಿಲ್ಲ, ಅವ್ಳನ್ನೇ ನೋಡ್ತಾ ಕೂತಿದ್ದೆ. ಅವಳೊಂದು ಲುಕ್ ಕೊಟ್ಲು, ಯಾರಿವ ಆಗಿಂದ ನೋಡ್ತಿದಾನಲ್ಲಾ, ಏನ್ ಕೆಲ್ಸ ಇಲ್ವಾ ಅನ್ನೋ ಥರಾ ಇತ್ತು. ಏನ್ ಈ ಹುಡ್ಗೀಗೆ ತಲೆ ಕೆಟ್ಟಿದ್ಯಾ, ಅಥವಾ ಇವಳ ಥರಾನೆ ಇನ್ನೊಬ್ಳು ಇದಾಳಾ ಅನ್ಕೊಂಡೆ. ಆದ್ರೆ ಗ್ಯಾಂಗ್ ಅದೇ. ಈ ಹುಡ್ಗೀರು ಎಷ್ಟು ತಲೆ ಕೆಡಿಸ್ತಾರೆ‌ ಅನ್ನಿಸ್ತು. ಏನೇ ಆಗ್ಲಿ ಅವಳೆಲ್ಲಿ ಹೋಗ್ತಾಳೆ ನೋಡ್ಬೇಕು‌ ಅನ್ಕೊಂಡು ಅವಳ ಹಿಂದೇನೆ ಹೋದ್ವಿ. ನಮ್ ಆಫೀಸ್ ಎದ್ರಿಗೆ ಒಂದ್ ರೌಂಡ್ ಹಾಕಿ ಹೋದ್ರು. ಅವ್ಳೇ ಇವ್ಳು ಅನ್ನೋದು ಪಕ್ಕಾ ಆಯ್ತು‌. ಆದ್ರೆ ಎರಡು ಥರಾ ಯಾಕ್ ಆಡ್ತಾಳೋ ಗೊತ್ತಾಗಿಲ್ಲ. ಮತ್ತೆ ನಾಲ್ಕೈದು ದಿನ  ಕ್ಯಾಂಟೀನಲ್ಲಿ ಸಿಕ್ಕಿದ್ಲು. ಆದ್ರೆ ಅದೇ ಕತೆ, ಯಾರೋ ಏನೋ ಅನ್ನೋ ಹಾಗೆ ಇದ್ಲು. ಏನೇ ಆಗ್ಲಿ ಅವ್ಳು ಬರೋ ದಾರೀಲಿ ಅವ್ಳ ಎದ್ರಿಗೆ ನಡ್ಕೊಂಡು ಹೋದೆ, ಹತ್ರ ಆಗೋಕು ನನ್ನ ನೋಡಿ ನಕ್ಕಿದ್ಲು, ಅಬ್ಬಾ ದೇವ್ರೆ ನಾನಲ್ಲೇ ಬೀಳೋದ್ ಒಂದ್ ಬಾಕಿ. ಮತ್ತೆ ಹೀಗೆ ಆಯ್ತು, ನಾನು‌ ಫ್ರೆಂಡ್ಸ್ ಜೊತೆ‌ ಇದ್ದಾಗ ಪರಿಚಯಾನೆ ಇಲ್ಲಾ ಅನ್ನೋ ಹಾಗೆ ಇರ್ತಾಳೆ, ಒಬ್ನೇ ಸಿಕ್ಕಿದ್ರೆ ಎಷ್ಟೋ ವರ್ಷದ ಪರಿಚಯ ಅನ್ನೋ ಹಾಗೆ ನಗ್ತಾಳೆ. ಇವ್ಳು ಹೀಗೆ ಅಂತ ಅರ್ಥ ಆಯ್ತು.
ಆದ್ರೆ ಅವಳ‌ ಹೆಸರು ಏನು ಅಂತ ಗೊತ್ತೇ ಆಗಿಲ್ಲ. ಅವಳ ಐಡಿ ಕಾರ್ಡಲ್ಲಿ ಹೆಸರು ನೋಡೋಕೆ ಎಷ್ಟು ಟ್ರೈ ಮಾಡಿದ್ವೋ ದೇವ್ರಿಗೆ‌ ಗೊತ್ತು. ಒಂದಿನ ಅವ್ಳು‌ ಎದ್ರು ಬರೋವಾಗ "ಚಿರಂತ್" ಅಂತ ನನ್ ಫ್ರೆಂಡ್ಸ್ ನನ್ ಹೆಸರು‌ ಜೋರಾಗಿ ಕೂಗಿದ್ರು. ಅವ್ಳು ಕಿಸಕ್ ಅಂತ ನಕ್ಕೊಂಡು ಹೋದ್ಲು. ಮಗ ಏನೋ ಇದೆ, ಪಕ್ಕಾ ಏನೋ ಇದೆ ಅಂತ ಎಲ್ರೂ ಟೀಸ್ ಮಾಡಿದ್ರು. ನಾನು ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲೆಲ್ಲಾದ್ರೂ ರಿಕ್ವೆಸ್ಟ್ ಬರಬಹುದು ಅಂತ ಕಾದೆ, ಈಗ್ಲೂ ಕಾಯ್ತಾ ಇದೀನಿ. ಬಂದೇ ಇಲ್ಲ. ಅವ್ಳ ಹತ್ರ ಮಾತಾಡ್ಬೇಕು ಅನ್ಕೊಂಡೆ, ಧೈರ್ಯ ಸಾಕಾಗಿಲ್ಲ. ಏನಂತ ಮಾತಾಡ್ಸೋದು ಅನ್ನೋ ಚಿಂತೆ ಬೇರೆ. ನಾನು ಧೈರ್ಯ ಮಾಡೋದ್ರೊಳಗೆ ಈ ಕೊರೋನ ಬಂತು, ಲಾಕ್ಡೌನ್ ಆಯ್ತು. ವರ್ಕ್ ಫ್ರಮ್ ಹೋಮ್ ಆಯ್ತು. ನಾವು ಹಾರ್ಡ್ವೇರ್ ಅಲ್ಲಾ, ಆಫೀಸಿಗೆ  ದಿನ ಹೋಗ್ಲೇಬೇಕು. ಆದ್ರೆ ಅವ್ಳಿಲ್ಲ. ಎಲ್ಲಾ ಖಾಲಿ ಇದೆ, ಮನಸ್ಸೂ ಖಾಲಿ ಅನ್ನಿಸ್ತಿದೆ. ಊಟ ಮಾಡೋವಾಗ ಎದ್ರು ಟೇಬಲಲ್ಲಿ ಇದಾಳಾ ಅಂತ ನೋಡ್ತೀನಿ, ಆದ್ರೆ ಖಾಲಿ.
ಛೇ! ಎಷ್ಟೋ ವರ್ಷ ಆದ್ಮೇಲೆ ಒಬ್ಳು‌ ಇಷ್ಟ ಆದ್ಲು, ಮಾತಾಡ್ಬೇಕಿತ್ತು ಅಂತ ಈಗ್ಲೂ ಅನ್ನಿಸ್ತಿದೆ. ಹುಡ್ಗೀರು ವಿಚಿತ್ರ. 90% ಹುಡ್ಗೀರು ಕ್ರಷ್ ಆಗಿದೆ ಅಂತಾನೆ ಒಪ್ಕೊಳಲ್ಲ, ಒತ್ತಾಯ ಮಾಡಿದ್ರೆ ಯಾವ್ದೋ ಹೀರೋ ಹೆಸರು ಹೇಳ್ತಾರೆ. ಈ ಹುಡ್ಗಿ ಇನ್ನೂ ವಿಚಿತ್ರ. ನಾನೇ ಮಾತಾಡೋ ಧೈರ್ಯ ಮಾಡಿಲ್ಲ, ಇನ್ನು ಅವ್ಳು ಮಾಡ್ತಾಳಾ! ಅದು ಬೇರೆ ಕಥೆ. ಅವಳ ಮನಸಲ್ಲಿ ಏನಿತ್ತೋ ಆ ಭಗವಂತಂಗೆ ಗೊತ್ತು. ಆದ್ರೆ ಅವಳ ಅರ್ಧಂಬರ್ಧ ಗುಂಗುರು ಫ್ರೀ ಬಿಟ್ಟ ಕೂದ್ಲು, ಮುದ್ದು ಮುಖ, ಮೂಗುಬೊಟ್ಟು, ಅವಳ ತುಂಟತನ, ಕಪಿಚೇಷ್ಟೆ ಈಗ್ಲೂ ಕಾಡುತ್ತೆ! ಎದ್ರಿಗೆ ಇದಾಳೋ ಏನೋ ಅನ್ಸುತ್ತೆ. ಮನೇಲಿ ಹೇಳಿದ್ರೆ, ಹುಡುಗಿ ಯಾರು ತೋರ್ಸು ಅಂತಿದಾರೆ, ಯಾರನ್ನ ತೋರಿಸ್ಲಿ! ಯಾವಾಗ ವರ್ಕ್ ಫ್ರಮ್ ಹೋಮ್ ಮುಗ್ಯುತ್ತೋ, ವಾಪಾಸ್ ಇದೇ ಕಂಪೆನಿಗೆ ಬರ್ತಾಳೋ ಇಲ್ವೋ, ನಾನು ನೋಡ್ತೀನೋ ಇಲ್ವೋ ಗೊತ್ತಿಲ್ಲ, ಈಗ್ಲೂ ಫೇಸ್ಬುಕ್  ಖುಷೀಲಿ ಚೆಕ್ ಮಾಡ್ತೀನಿ , ಯಾವ ರಿಕ್ವೆಸ್ಟ್ ಬಂದ್ರೂ, ಆದ್ರೆ ಅವಳಲ್ಲ ಬಿಡಿ! 


ಚಿತ್ರ: ವೈಷ್ಣವಿ ಕೆ.



ಕಾಮೆಂಟ್‌ಗಳು

  1. ಬಹಳ ಚೆನ್ನಾಗಿದೆ.... ಅವಳಿಲ್ಲದ ಖಾಲಿ ಮನಸಿನ ವ್ಯಥೆಯ ಕಥೆ‌..... ವರ್ಕ್ ಫ್ರಮ್ ಹೋಂ ಮುಗಿಯೋದ್ರೊಳಗೆ ಅವಳದು ಮದುವೆ ಆದ್ರೆ ಮುಗೀತು.... ಏನಾಗುತ್ತೋ.... ಮುಂದುವರ್ಸಿ ಪ್ಲೀಜ್

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..