ಸಾವಿತ್ರಿಬಾಯಿ ಫುಲೆ


        ಭಾರತದ ಮೊಟ್ಟಮೊದಲ ಶಿಕ್ಷಕಿಯಾಗಿ, ಸಂಚಾಲಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ, ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿ, ಅನನ್ಯ ಸಾಧಕಿಯಾಗಿ, "ಎಲೆ ಮರೆಯ ಕಾಯಿಯಂತೆ" ಇದ್ದು, ಮರೆಯಾದವರು ಸಾವಿತ್ರಿಬಾಯಿಫುಲೆಯವರು. ಅವರ ಬದುಕೇ ಸಂದೇಶ. ಅವರ ಕೊಡುಗೆಗಳು ಅಪಾರ.

        ಜನವರಿ ೩, ೧೮೩೧ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಂನ್ನಲ್ಲಿ, ನೇವಸೆ ಪಾಟೀಲರ ಮಗಳಾಗಿ ಜನಿಸಿದರು. ತಮ್ಮ ೯ನೇ ವರ್ಷದಲ್ಲೇ ಆ ಕಾಲದ ಕಟ್ಟುಪಾಡುಗಳಿಗೆ ಒಳಗಾಗಿ, ಸಾಮಾಜಿಕ ಸುಧಾರಕರಾದ ಜ್ಯೋತಿ ಬಾ ಫುಲೆಯನ್ನು ವಿವಾಹವಾದರು. ಇದೇ ಅವರ ಬದುಕಿನ ಮಹತ್ತರ ತಿರುವು. "ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ" ಎಂಬುದಕ್ಕೆ ಸಾವಿತ್ರಿಬಾಯಿ ಫುಲೆಯವರೇ ಸಾಕ್ಷಿ. ತನ್ನ ಪತಿಯ ಎಲ್ಲಾ ಕೆಲಸಗಳಲ್ಲೂ ಸಹಕರಿಸುತ್ತಾ, ಪ್ರತಿ ಹೆಜ್ಜೆಯಲ್ಲೂ ಜೊತೆಗಿದ್ದು, ಪತಿಯ ಕೀರ್ತಿಗೆ ಕಲಶವಾಗಿದ್ದವರು. 'ಬ್ರಿಟಿಷರ ಶಿಕ್ಷಣ ನೀತಿ'ಯಿಂದ ಪ್ರೇರಣೆ ಹೊಂದಿದ ಜ್ಯೋತಿ ಬಾ ಫುಲೆಯವರು, ತಮ್ಮ ಪತ್ನಿಗೂ ಶಿಕ್ಷಣವನ್ನು ಕಲಿಸತೊಡಗಿದರು. ಆದ್ದರಿಂದ ಸಾವಿತ್ರಿಬಾಯಿಯವರಿಗೆ "ಮನೆಯೇ ಮೊದಲ ಪಾಠ ಶಾಲೆ" ಆಯಿತು. ೧೮೪೭ರಲ್ಲಿ ಶ್ರೀಮತಿ ಮಿಚಲ್ರವರ ನಾರ್ಮಲ್ ಸ್ಕೂಲಿನಲ್ಲಿ ಶಿಕ್ಷಕ ತರಬೇತಿಯನ್ನು ಪಡೆದ ಅವರಿಗೆ, ಅಂದಿನ ಕಾಲದಲ್ಲಿ ಶಿಕ್ಷಣ ಪಡೆದ 'ಮೊದಲ ಮಹಿಳೆ' ಎನ್ನುವ ಪ್ರಸಿದ್ಧಿ ದೊರಕಿತು. ೧೭ನೇ ವಯಸ್ಸಿನಲ್ಲೇ ಶ್ರೀ ಭಿಡೆಯವರ ಮನೆಯಲ್ಲಿ ಆರಂಭವಾದ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿಯಾದರು.

         ಮಹಿಳೆ ಪ್ರಗತಿಯ ಪಥದಲ್ಲಿ ಸಾಗುವುದು ನಿಜಕ್ಕೂ ಕನಸಾಗಿದ್ದ ಕಾಲವದು. ಕೇವಲ ಅಡುಗೆಮನೆಗಷ್ಟೇ ಸೀಮಿತವಾಗಿದ್ದ ಮಹಿಳೆ, ಮನೆಯಿಂದ ಹೊರಗೆ ಕಾಲಿಡಲೂ ಹೆದರುತ್ತಿದ್ದ ಸಮಯದಲ್ಲಿ, ಶಾಲೆಗೆ ಹೋಗಿ ಬರುತ್ತಿದ್ದ ಸಾವಿತ್ರಿಬಾಯಿಯವರನ್ನು ಅಂದಿನ ಸಮಾಜ ಸಹಿಸಲು ಸಾಧ್ಯವೇ? ಸಮಾಜವು ಹೀಗಳೆದಾಗ, ನಿಂದಿಸಿದಾಗ, ಅವಮಾನಿಸಿದಾಗ, ಮೊದಮೊದಲು ಅಂಜಿದರೂ, 'ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದೇ?' ಎನ್ನುವಂತೆ, ಅವುಗಳನ್ನೆಲ್ಲಾ ಲೆಕ್ಕಿಸದೆ ಸಾಗಿದ ದಿಟ್ಟ ಸ್ತ್ರೀ. ಕೆಸರು ಎರಚಿ, ಕಲ್ಲು ತೂರುತ್ತಿದ್ದಾಗಲೂ ಧೃತಿಗೆಡದೆ, "ದೇವರ ಸೇವೆಯೆಂದು ಭಾವಿಸಿ ನಮ್ಮ ಸೋದರಿಯರ ಸೇವೆ ಮಾಡುತ್ತೇವೆ. ನಮ್ಮ ಮೇಲೆರಚುವ ಸಗಣಿ, ತೂರುವ ಕಲ್ಲುಗಳನ್ನು ನಾನು ಹೂವೆಂದು ಭಾವಿಸುತ್ತೇನೆ" ಎನ್ನುತ್ತಿದ್ದರು. ಕೊಲೆ ಮಾಡಲೆಂದು ಬಂದಿದ್ದ ಕೊಲೆಗಡುಕರೂ, ಅವರ ಮನೆಯ ಪ್ರಶಾಂತತೆಯನ್ನು, ಮಾತುಕತೆಗಳನ್ನು ಕೇಳಿ, ಪರಿವರ್ತನೆಗೊಂಡರು. ಅಷ್ಟೇ ಅಲ್ಲದೆ, ಕೊಲೆಗಡುಕರಲ್ಲೇ ಒಬ್ಬರು ಮುಂದೆ ಫುಲೆಯವರ ಮನೆಯ ಅಂಗರಕ್ಷಕನಾಗಿ, ಇನ್ನೊಬ್ಬರು ಕಾಶಿಗೆ ತೆರಳಿ ಸಂಸ್ಕೃತ ಕಲಿತು, "ವೇದಾಚಾರ" ಎನ್ನುವ ಗ್ರಂಥ ರಚಿಸಿದರೆಂದರೆ ಅಚ್ಚರಿಯೇ ಸರಿ!

ಜಾತಿವ್ಯವಸ್ಥೆ ತಾಂಡವವಾಡುತ್ತಿದ್ದ ೧೯ನೇ ಶತಮಾನದಲ್ಲಿ, ಅದನ್ನು ಕಿತ್ತೊಗೆಯಲು ಫುಲೆಯವರು ಪ್ರಯತ್ನಿಸಿದರು. ದಲಿತ ಸಮುದಾಯದ ಜನರಿಗೆ ತಮ್ಮ ಮನೆಯ ಬಾವಿಯನ್ನು ಉಪಯೋಗಿಸಲು ಕೊಟ್ಟು, ಸಮಾನತೆಯ ತತ್ವವನ್ನು ಸಾರಿದರು. ಕೆಳವರ್ಗದ ಮಹಿಳೆಯರ ಉನ್ನತಿಗಾಗಿ ಶ್ರಮಿಸಿದರು. ಸಾಮಾಜಿಕ ಸಂಘಟನೆಗಳ ಮೂಲಕ ನೂರಾರು ಮಹಿಳೆಯರಿಗೆ, ಮಕ್ಕಳಿಗೆ ನೆಲೆಯೊದಗಿಸಿದರು. ಥಾಮಸ್ ಕ್ಲಾರ್ಕ್ ಸನ್ ಅವರ ಜೀವನಚರಿತ್ರೆಯಿಂದ ಪ್ರೇರಣೆಗೊಂಡ ಸಾವಿತ್ರಿಬಾಯಿಫುಲೆಯವರು, ಕೇವಲ ಮೇಲ್ವರ್ಗದವರಿಗೆ ಸೀಮಿತವಾಗಿದ್ದ ಶಿಕ್ಷಣವನ್ನು, ಶೂದ್ರಾತಿಶೂದ್ರರಿಗೆ ಶಿಕ್ಷಣ ನೀಡಬೇಕೆಂಬ ನಿರ್ಣಯ ಮಾಡಿದರು. ಇದೇ ಕಾರಣಕ್ಕಾಗಿ ಅವರ ಪತಿಯ ತಂದೆ, ಗೋವಿಂದರಾಯರಿಗೆ ಬೆದರಿಕೆಗಳು ಬಂದವು. ಮೇಲ್ವರ್ಗದವರ ವಿರೋಧ ಕಟ್ಟಿಕೊಳ್ಳಲು ಇಚ್ಛಿಸದ ಗೋವಿಂದರಾಯರು, ತಮ್ಮ ಮಗ-ಸೊಸೆಯನ್ನು ನಿಯಂತ್ರಿಸಲೆತ್ನಿಸಿದರೂ ಆಗದಿದ್ದಾಗ, ಮನೆಯಿಂದ ಹೊರಹಾಕಿದರು. ಇದು ಸಾವಿತ್ರಿಬಾಯಿಯವರಿಗೆ ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿತ್ತು.

       ೧೮೪೮-೧೮೫೨ರ ಅವಧಿಯಲ್ಲಿ ಫುಲೆ ದಂಪತಿ ೧೮ ಪಾಠಶಾಲೆಗಳನ್ನು ತೆರೆದರು. ೧೮೪೮ರಲ್ಲಿ ಕೆಳ ಸಮುದಾಯದ ಮಕ್ಕಳಿಗಾಗಿ ಶಾಲೆ, ೧೮೫೫ರಲ್ಲಿ ಕೂಲಿಕಾರ್ಮಿಕರಿಗಾಗಿ ರಾತ್ರಿ ಪಾಳಯದ ಶಾಲೆ ತೆರೆದರು. ಶಾಲೆಗಳ ಆಡಳಿತ ಜವಾಬ್ದಾರಿಯೊಂದಿಗೆ, ಪಠ್ಯಕ್ರಮವನ್ನು ಸಿದ್ಧಗೊಳಿಸಿ, ಅನುಷ್ಠಾನಗೊಳಿಸುತ್ತಿದ್ದರು. ಸ್ತ್ರೀ ಶಿಕ್ಷಣವನ್ನು ಆರಂಭಿಸಿದ್ದು ಜ್ಯೋತಿ ಬಾ ಫುಲೆಯವರಾದರೂ, ಅದನ್ನು ಬೆಳೆಸಿದ ಕೀರ್ತಿ ಸಾವಿತ್ರಿಬಾಯಿಯವರದು. "ಮಹಿಳಾ ಸೇವಾ ಮಂಡಳಿ" ಆರಂಭಿಸಿದ ಸಾವಿತ್ರಿಬಾಯಿಫುಲೆಯವರಿಂದ, ಮಹಿಳಾ ಸುಧಾರಣೆ ಸಾಧ್ಯವಾಯಿತು. ಅದು ದೇಶದಲ್ಲೇ ಮೊಟ್ಟ ಮೊದಲ ಮಹಿಳಾ ಸಂಸ್ಥೆ ಎನ್ನುವುದು ಅವರಿಗೆ ಸಿಕ್ಕ ಖ್ಯಾತಿ. ಅನಾಥಾಲಯ, ಬಾಲಹತ್ಯಾ ನಿಷೇಧಕ ಪ್ರಸೂತಿ ಗೃಹಗಳನ್ನು ಫುಲೆ ದಂಪತಿಗಳು ಆರಂಭಿಸಿದರು.

ಆ ಕಾಲದಲ್ಲಿ ಆಂಗ್ಲಭಾಷೆಗೆ ಮನ್ನಣೆ ಇದ್ದುದರಿಂದ, ಸಾವಿತ್ರಿ ಬಾಯಿಫುಲೆಯವರು ಆಂಗ್ಲಭಾಷೆಯನ್ನು ಕಲಿತರು. ರೆವಿನ್ಯೂ ಕಮಿಷನರ್ ರೀವ್ಸ್ ಅವರೂ ಇವರ ಬೋಧನಾ ಕೌಶಲ್ಯವನ್ನು ಹೊಗಳಿದರು. ಸಾವಿತ್ರಿಬಾಯಿಯವರು ಬದುಕಿನುದ್ದಕ್ಕೂ ಧರಿಸಿದ್ದು ಖಾದಿಯ ಬಟ್ಟೆ.

           ಸತ್ಯಶೋಧಕ ಸಮಾಜದ ಕಾರ್ಯದಲ್ಲೂ ಪಾಲ್ಗೊಂಡಿದ್ದರು. ೧೮೭೫-೧೮೭೭ರಲ್ಲಿ ಬರಗಾಲ ಬಂದಾಗ, ಜನರಿಗೆ ಸಹಕರಿಸಲು ಸ್ವಯಂ ಸೇವಕರ ನೇತೃತ್ವ ವಹಿಸಿದರು. ೧೮೯೦ರಲ್ಲಿ ಜ್ಯೋತಿ ಬಾ ಫುಲೆಯವರು ಮರಣ ಹೊಂದಿದ್ದರಿಂದ, ಮುಂದೆ ತಮ್ಮ ಸತ್ಯಶೋಧಕ ಸಮಾಜದ ಅಧ್ಯಕ್ಷರಾದರು. ೧೮೯೬ರಲ್ಲಿ ಇನ್ನೊಮ್ಮೆ ಬರಗಾಲ ಬಂದಾಗಲೂ ಸಕ್ರಿಯವಾಗಿ ಸೇವೆಗೈದರು. ೧೮೯೭ರ ಸಂದರ್ಭದಲ್ಲಿ ಅಟ್ಟಹಾಸಗೈಯ್ಯುತ್ತಿದ್ದ ಮಹಾಮಾರಿ ಪ್ಲೇಗ್ ಜನರನ್ನು ಹಿಂಡಿ ಹಿಪ್ಪೆಯನ್ನಾಗಿಸಿತ್ತು. ಅಂತಹ ಸಂದರ್ಭದಲ್ಲೂ, ಪ್ಲೇಗ್ ಪೀಡಿತರ ಸೇವೆಯಲ್ಲಿ ತೊಡಗಿದ್ದ ಸಾವಿತ್ರಿಬಾಯಿಯವರು ಮಾರ್ಚ್ ೧೦ರಂದು ಮರಣ ಹೊಂದಿದರು.

       ಭಾಷಣಗಾರ್ತಿ, ಉತ್ತಮ ಲೇಖಕಿಯೂ ಆಗಿದ್ದ ಫುಲೆಯವರು ಕಾವ್ಯ ಫುಲೆ, ಬಾವನ್ ಕಶಿ ಸುಬೀದ್ ರತ್ನಾಕರ್ ಮುಂತಾದ ಕೃತಿಗಳನ್ನೂ ರಚಿಸಿದ್ದಾರೆ. ಸಾಮೂಹಿಕ ಮತ್ತು ಮಹಿಳಾ ಶಿಕ್ಷಣದ ಮೂಲ ಪ್ರತಿಪಾದಕಿ, ಪಿತೃಪ್ರಧಾನ ಬಲದ ವಿರುದ್ಧ ಹೋರಾಡಿದ ಧೈರ್ಯವಂತ ನಾಯಕಿ. ಸಮಾಜದಲ್ಲಿದ್ದಂತಹ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ, ಕೇಶ ಮುಂಡನೆಯ ವಿರುದ್ಧ ಸೆಣೆಸಿದ ಕೆಚ್ಟೆದೆಯ ಮಹಿಳೆ. ಅವರ ಸ್ವಯಂ ಮತ್ತು ಸಾಂಸ್ಥಿಕ ಶಿಸ್ತು, ಕರ್ತವ್ಯಪ್ರಜ್ಞೆ, ಮಾನವೀಯ ಅನುಕಂಪ, ಅರ್ಥ-ಸ್ವಾರ್ಥ, ಮತ್ತು ಅಧಿಕಾರ ದಾಹಗಳಿಂದ ದೂರವಾದ ನಾಯಕತ್ವ ಗುಣ ಅನುಕರಣೀಯ ಆದರ್ಶ. "ನಮ್ಮೆಲ್ಲರ ವೈರಿಯೊಂದೆ, ಒಗ್ಗೂಡಿ ನಾವು ಅದನ್ನು ನೂಕೋಣ. ಅದನ್ನು ಬಿಟ್ಟು ಬೇರೆ ಉಪಾಯವಿಲ್ಲ. ಹುಡುಕಿ, ಮನದಲ್ಲಿ ಯೋಚಿಸಿ, ಕಿವಿಯೊಡ್ಡಿ ಕೇಳಿ, ಅದರ ಹೆಸರು ಅಜ್ಞಾನ" ಎನ್ನುತ್ತಿದ್ದ ಸಾವಿತ್ರಿಬಾಯಿಯವರು, ನಿಜಕ್ಕೂ ಸ್ಫೂರ್ತಿಯ ಸೆಲೆ.

ಇಂದು ಮಹಿಳೆ, ಎಲ್ಲಾ ಕೆಲಸಗಳಲ್ಲೂ ಎತ್ತಿದ ಕೈ. ತಾನು ಅಬಲೆಯಲ್ಲ, ಸಬಲೆ ಎನ್ನುವುದನ್ನು ಸಾರಿ ಹೇಳಿದ್ದಾಳೆ. ತಲೆಯೆತ್ತಿ ನಿಲ್ಲುತ್ತಿದ್ದಾಳೆ ಎಂದರೆ ಇವುಗಳಿಗೆಲ್ಲಾ ಪ್ರೇರಕ ಶಕ್ತಿ ಬಹುಶಃ ಸಾವಿತ್ರಿಬಾಯಿಫುಲೆ.

ಸಾಮಾನ್ಯರೊಳ್ ಪುಟ್ಟಿ, ಸಾಮಾನ್ಯರೊಳ್ ಬೆಳೆದು ।

ಭೂಮಿಪತಿಪಟ್ಟವನು ಜನ ತನಗೆ ಕಟ್ಟಲ್ ॥

ಸಾಮರ್ಥ್ಯದಿಂದವರನಾಳ್ದ ಲಿಂಕನನಂತೆ ।

ಸ್ವಾಮಿ ಲೋಕಕೆ ಯೋಗಿ- ಮಂಕುತಿಮ್ಮ ॥

ಎನ್ನುವ ಡಿ.ವಿ.ಜಿ.ಯವರ ವಾಣಿ ಸಾವಿತ್ರಿಬಾಯಿಫುಲೆಯವರ ಜೀವನಕ್ಕೆ ಹಿಡಿದ ಕೈಗನ್ನಡಿ. ಮಾನವೀಯ ಮೌಲ್ಯಗಳ ಸ್ವರೂಪವಾದ, ಸಾಮಾಜಿಕ ಕಳಕಳಿಯಿಂದ ಪ್ರೇರಿತವಾದ ಸಾವಿತ್ರಿಬಾಯಿಫುಲೆಯವರ ಕೊಡುಗೆಗಳು ಭಾರತೀಯರಿಗೆ ಆದರ್ಶವಾಗಬೇಕು ಎಂಬ ಆಶಯದೊಂದಿಗೆ ಪೂರ್ಣವಿರಾಮ ಇಡುತ್ತಿದ್ದೇನೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..