ಪ್ರಾಚೀನ ಭಾರತದಲ್ಲಿ ವಿಜ್ಞಾನ

 ವಿಜ್ಞಾನವು ಪ್ರಾಚೀನ ಕಾಲದಿಂದಲೂ ಭಾರತದಲ್ಲಿತ್ತು. ಆದರೆ ನಮ್ಮ ಪೂರ್ವಜರ ಮುಖ್ಯ ಗುರಿಯಾಗಿದ್ದು ಆಧ್ಯಾತ್ಮಿಕತೆ. ಅವರು ಸತ್ಯತೆ ಮತ್ತು ಮಿಥ್ಯತೆಯ ಅಂತರವನ್ನು, ಆಧ್ಯಾತ್ಮಿಕತೆಯನ್ನು ಹುಡುಕಿ ಹೊರಟವರು. ಇವುಗಳ ಹುಡುಕಾಟದಲ್ಲಿ ಅದೆಷ್ಟೋ ವೈಜ್ಞಾನಿಕ ಅಂಶಗಳನ್ನು, ಸಾಧನಗಳನ್ನು, ಅವುಗಳ ವಿಶೇಷತೆಯನ್ನು ಕಂಡುಕೊಂಡರು. ತಮಗನಿಸಿದ್ದನ್ನು, ತಮ್ಮ ಶೋಧನೆಗಳನ್ನು ದಾಖಲಿಸಿದರು ಅಷ್ಟೇ! ಆದರೆ ಎಂದೂ ಅವುಗಳನ್ನು ಪ್ರಚಾರ ಮಾಡಲಿಲ್ಲ. ಅಥವಾ ಅಂದಿನ ಭಾರತೀಯರು ಅವುಗಳನ್ನು ಒಪ್ಪಿರಲಿಲ್ಲವೇನೋ! 

ಯಾವಾಗ ಬ್ರಿಟಿಷರು ಭಾರತದ ಮೇಲೆ ಆಕ್ರಮಣ ಮಾಡಿದರೋ, ಭಾರತೀಯರ ಶೋಧನೆಗಳನ್ನೆಲ್ಲಾ ಕದ್ದು, ತಮ್ಮ ಹೆಸರಿನಲ್ಲಿ ಸಂಶೋಧನೆಯ ಬಿರುದನ್ನು ದಾಖಲಿಸಿಕೊಂಡರು. ವಿಜ್ಞಾನದ ವಿವಿಧ ಶಾಖೆಗಳಾದ ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಖಗೋಲಶಾಸ್ತ್ರ, ಗಣಿತ, ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಪ್ರಾಚೀನ ಭಾರತೀಯರ ಕೊಡುಗೆ ಅಪಾರ. ಇಂದು ನಾವು ಪರಕೀಯರ ಹೆಸರಿನಲ್ಲಿರುವ ಭಾರತೀಯರ ಸಾಧನೆಗಳನ್ನು ಕಾಣುತ್ತೇವೆ. ಅವುಗಳಲ್ಲಿ ಕೆಲವು:


ಭಾರದ್ವಾಜ ಮುನಿಗಳು ವೈಮಾನಿಕ ತಂತ್ರಜ್ಞಾನದ ಕುರಿತು ತಮ್ಮ ಕೃತಿಯಲ್ಲಿ ದಾಖಲಿಸಿದ್ದರು. 1895ರಲ್ಲಿ ಶಿವಕರ್ ಬಾಪೂಜಿ ಎನ್ನುವವರು ಮುಂಬೈ ಕಡಲತೀರದಲ್ಲಿ ವಿಮಾನವನ್ನೂ ಹಾರಿಸಿದ್ದರು. 8 ವರ್ಷಗಳ ನಂತರ, ಅಂದರೆ 1903ರಲ್ಲಿ ರೈಟ್ ಸಹೋದರರು ಮೊದಲ ವಿಮಾನ ಹಾರಿಸಿದ್ದು! ದಾಖಲೆ ಉಳಿದದ್ದು ರೈಟ್ ಸಹೋದರರ ಹೆಸರಿನಲ್ಲಿ ಎನ್ನುವುದು ವಿಪರ್ಯಾಸ.

ಗಣಿತಶಾಸ್ತ್ರದಲ್ಲಿ ಭಾರತೀಯರ ಕೊಡುಗೆ ಎಣಿಕೆಗೆ ಮೀರಿದ್ದು. ಸೊನ್ನೆಯನ್ನು ಕಂಡುಹಿಡಿದವರು ಆರ್ಯಭಟ,ಇದರಿಂದ ಎಂತಹ ದೊಡ್ಡ ಸಂಖ್ಯೆಯನ್ನಾದರೂ ಸುಲಭವಾಗಿ ಬರೆಯಲು ಅನುಕೂಲವಾಯಿತು. 

ಭಾಸ್ಕರ-2 ಮತ್ತು ಬ್ರಹ್ಮಗುಪ್ತರು ಸಂಖ್ಯಾಪದ್ಧತಿಯಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದರು. ಇವರಿಬ್ಬರೂ ಸೇರಿ ಗಣಿತದ ಹಲವು ಸೂತ್ರಗಳನ್ನು ಬರೆದಿದ್ದರು, ಸೂತ್ರಗಳನ್ನು ಬಿಡಿಸಿದ್ದರು. 

ವರಾಹಮಿಹಿರ ಪಂಚಸಿದ್ಧಾಂತಿಕ ಎಂಬ ಪುಸ್ತಕದಲ್ಲಿದಲ್ಲಿ ಸೊನ್ನೆಯಿಂದ ಕೂಡುವುದು ಮತ್ತು ಕಳೆಯುವ ವಿಷಯಗಳನ್ನು, ಪ್ರತ್ಯಕ್ಷ, ಅನುಮಾನ ಮತ್ತು ಆಗಮ ಎಂಬ ಮೂರು‌ ರೀತಿಯ ಪ್ರಮಾಣಗಳ ಬಗ್ಗೆ ಬರೆದಿದ್ದರು.

ಫಿಬೊನಸ್ಸಿ ಸಂಖ್ಯೆಗಳನ್ನು (0,1,1,2,3,5,8...) ಹದಿಮೂರನೇ ಶತಮಾನದಲ್ಲಿ ಫಿಬೊನಸ್ಸಿ ಕಂಡುಹಿಡಿದ ಎಂದು ಓದಿದ್ದೇವೆ. ಆದರೆ ಎರಡನೇ ಶತಮಾನಕ್ಕಿಂತಲೂ ಮೊದಲೇ ಆಚಾರ್ಯ ಪಿಂಗಳರವರು ಇದನ್ನು ಕಂಡುಹಿಡಿದಿದ್ದಾರೆ. ಸಂಸ್ಕೃತ ಶ್ಲೋಕವೊಂದರ ಮೂಲಕ ಛಂದಸ್ ಶಾಸ್ತ್ರದ ಭಾಗವಾಗಿ ಸವಿಸ್ತಾರವಾಗಿ ವಿವರಿಸಿದ್ದಾರೆ. ಇದಲ್ಲದೇ ದ್ವಿಮಾಂಶ ಪದ್ಧತಿ, ದಶಮಾಂಶ ಪದ್ದತಿಯೂ ಎಂದೋ ನಮ್ಮ ಋಷಿಮುನಿಗಳು, ವಿದ್ವಾಂಸರು ಕಂಡುಹಿಡಿದಿದ್ದರು. 

ಇಂದು ಆಯುರ್ವೇದ ಪದ್ಧತಿಯು ಪ್ರಚಲಿತದಲ್ಲಿದೆ, ಆದರೆ, ಆಯುರ್ವೇದ ಪದ್ಧತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಒಪ್ಪಿಗೆ ಇಲ್ಲ. ಸುಮಾರು ಆರನೆಯ ಶತಮಾನದಲ್ಲಿ ಸುಶ್ರುತ ಮುನಿಗಳು ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಮಾಡಿದ ಉಲ್ಲೇಖವಿದೆ. ಅಲ್ಲದೇ ಇವರು ಸಂಪೂರ್ಣ ಜರ್ಜರಿತವಾದ ದೇಹದ ಭಾಗಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿದ ಕುರಿತು ಉಲ್ಲೇಖವಿದೆ, ಇವುಗಳನ್ನು ನಾವು ಅವರು ಬರೆದ ಸುಶ್ರುತಸಂಹಿತ ಪುಸ್ತಕದಲ್ಲಿ ಓದಬಹುದು. ಇದನ್ನೇ ಪಾಶ್ಚಾತ್ಯರು ಕಲಿತು, ಮತ್ತೆ ನಮಗೆ ಅವರ ರೀತಿಯಲ್ಲಿ ವಿವರಿಸಿದ್ದನ್ನು‌ ನಾವಿಂದು‌ ಒಪ್ಪಿಕೊಂಡಿದ್ದೇವೆ.

ಕಣಾದ ಮಹರ್ಷಿಗಳು ಅಣು, ಪರಮಾಣು, ಜೀವಕಣ, ಅವುಗಳ ರೂಪ, ಆಕಾರ, ಗುಣ, ಅಂಶ ಮತ್ತು ವರ್ತನೆಗಳನ್ನು ನಾಲ್ಕನೇ ಶತಮಾನದಲ್ಲೇ ಸವಿಸ್ತಾರವಾಗಿ ತಿಳಿಸಿದ್ದರು.

ಖಗೋಳಶಾಸ್ತ್ರದಲ್ಲೂ ಹಾಗೆ, ಭೂಮಿ ದುಂಡಗಿದೆ ಮತ್ತು ಅದು ಸೂರ್ಯನ ಸುತ್ತ ಸುತ್ತುತ್ತದೆ ಎಂಬುದನ್ನು ಪಾಶ್ಚಾತ್ಯರಿಗಿಂತ ಮೊದಲು ಭಾರತೀಯ ಋಷಿ ಯಾಜ್ಞವಲ್ಕ್ಯರು ಶಾ.ಶ.ಪೂ. ಎಂಟನೇ ಶತಮಾನದಲ್ಲಿ ತಿಳಿಸಿದ್ದರು. 

ವರಾಹಮಿಹಿರ ಆರನೇ‌ ಶತಮಾನದಲ್ಲೇ ಮಂಗಳಗ್ರಹದಲ್ಲಿ ನೀರಿರುವುದನ್ನು ಊಹಿಸಿದ್ದರು. ಇವರು ಬರೆದ ಪಂಚಸಿದ್ಧಾಂತಿಕದಲ್ಲಿ ಒಂದಾದ ಸೂರ್ಯ-ಸಿದ್ಧಾಂತಿಕದಲ್ಲಿ ಇದರ ಕುರಿತಾದ ವಿಶ್ಲೇಷಣೆ ಇದೆ. 

ಪಂಚಾಂಗವೊಂದನ್ನು ಆಧಾರವಾಗಿಟ್ಟುಕೊಂಡು ಖಗೋಳಶಾಸ್ತ್ರದಲ್ಲಿ ಭಾರತೀಯರಿಗಿದ್ದ ಜ್ಞಾನವನ್ನು ನಾವು‌ ತಿಳಿಯಬಹುದು. ಇಂದು ಖಗೋಳ ವಿಜ್ಞಾನಿಗಳು ಹೇಳುವಂತೆ, ಭಾರತೀಯರೂ ತಮ್ಮದೇ‌ ರೀತಿಯಲ್ಲಿ ಗ್ರಹಣಗಳು, ಚಂದ್ರ ಭೂಮಿಗೆ ಹತ್ತಿರ ಮತ್ತು ದೂರವಾಗುವ ಹಾಗೂ ಇನ್ನೂ‌ ಹಲವಾರು ಆಕಾಶದಲ್ಲಾಗುವ ವಿಸ್ಮಯಗಳನ್ನು ಎಂದೋ ಗ್ರಹಿಸಿ ಬರೆಯುತ್ತಿದ್ದರು.


ಭಾರತೀಯರ ಒಂದು ಮನಸ್ಥಿತಿ ಇದೆ, ನಮ್ಮಲ್ಲಿ ಇರುವುದು ಕಸ, ಹೊರಗಿನಿಂದ ಬಂದದ್ದು ಬಂಗಾರ ಎನ್ನುವುದು, ಅದು ಯಾವುದೇ ಆಗಲಿ, ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಎಲ್ಲದರಲ್ಲೂ ಅಷ್ಟೇ, ನಮ್ಮಲ್ಲಿರುವ ವಿಷಯಗಳನ್ನೇ ಕಲಿತು, ಅವರು ಅರಿತ ಭಾಗವನ್ನು ಹೇಳಿದಾಗ ನಾವದನ್ನು ಒಪ್ಪಿಕೊಳ್ಳುತ್ತೇವೆ. 

ಜನರಿಗೆ ಅರಿವು ಮೂಡಿಸಲು, ಸರಿ-ತಪ್ಪುಗಳನ್ನು ಹೇಳಲು ಹುಟ್ಟಿಕೊಂಡ ಕತೆಗಳಿಗೆ, ಮಾತುಗಳಿಗೆ ನಾವು ಮೂಢನಂಬಿಕೆ ಎನ್ನುತ್ತೇವೆ. ಆದರೆ ಅದರ ಹಿಂದಿರುವ ವೈಜ್ಞಾನಿಕ ವಿಷಯಗಳು ನಮ್ಮ ಅರಿವಿಗೇ ಬರುವುದಿಲ್ಲ, ಅರಿಯುವ ಗೋಜಿಗೂ ನಾವು ಹೋಗುವುದಿಲ್ಲ. 

ಸಂಸ್ಕೃತದಲ್ಲಿ ಮಹಾಭಾರತದ ಬಗ್ಗೆ ಒಂದು‌ ಮಾತಿದೆ. "ಯದಿಹಾಸ್ತಿ‌ ತದನ್ಯತ್ರ ಯನ್ನೇಹಾಸ್ತಿ ನ‌ ತತ್ ಕ್ವಚಿತ್" ಎಂದರೆ ಮಹಾಭಾರತಲ್ಲಿ ಏನಿದೆಯೋ ಅದು ಜಗತ್ತಿನೆಲ್ಲೆಡೆ ಇದೆ, ಮಹಾಭಾರತದಲ್ಲಿ ಏನಿಲ್ಲವೋ ಅದು ಜಗತ್ತಿನಲ್ಲಿರಲು ಸಾಧ್ಯವೇ‌ ಇಲ್ಲ ಎಂದು. ಅಂತೆಯೇ ಇಂದು ಪಾಶ್ಚಾತ್ಯರು ಕಂಡುಹಿಡಿದರು ಎನ್ನುವ ಎಲ್ಲಾ ವಿಷಯಗಳನ್ನು ನಮ್ಮ ಪೂರ್ವಜರು ಎಂದೋ ಕಂಡುಹಿಡಿದಿದ್ದರು. ನಮ್ಮ ಪೂರ್ವಜರು ಬಿಟ್ಟ ವಿಷಯಗಳೇ ಇಲ್ಲ ಎನ್ನಬಹುದು. ಅವುಗಳನ್ನು ಅರಿಯಲು ನಮಗೆ ವಿಶೇಷ ಸಂಸ್ಕೃತದ ಜ್ಞಾನ ಬೇಕು, ಅದರ ಕೊರತೆ ಇಂದು ಎದ್ದು ಕಾಣುತ್ತಿದೆ. 

ನಮ್ಮ ಸಂಸ್ಕೃತಿ, ಸಂಸ್ಕೃತವನ್ನು ಒಪ್ಪಿ, ಕಲಿತು ಭಾರತೀಯರ ಜ್ಞಾನವನ್ನು ಜಗತ್ತಿಗೇ ಸಾರುವ ಕೆಲಸವನ್ನು ನಾವು ನೀವು‌ ಮಾಡಬೇಕು. ಅದಕ್ಕೆ ಇದು ಚಿಕ್ಕ ಹೆಜ್ಜೆಯಾಗಲಿ.



ಕಾಮೆಂಟ್‌ಗಳು

  1. ಎಲ್ಲರೂ ತಿಳಿಯಲೇಬೇಕಾದ ವಿಚಾರ .

    ನಮ್ಮ ಪೂರ್ವಜರು ಭೌತಿಕ ಪದ್ಧತಿಗಳನ್ನು ಮೀರಿ ಮಾನಸಿಕ ತಾರ್ಕಿಕ ಪರಿಹಾರಗಳನ್ನು ಅನುಸರಿಸುವುದು ಅತ್ಯುತಮ್ಮವೆಂದು ಜ್ಯೋತಿ ಶಾಸ್ತ್ರ ಯೋಗ ಧ್ಯಾನ ಪದ್ಧತಿಗಳನ್ನು ಮಾಡಿದರು

    ಒಂದು ಸಣ್ಣ ಉದಾಹರಣೆ ಅಭಿಷೇಕ ಅಂದರೆ ಮನುಷ್ಯನ ಆಂತರ್ಯದ ಚಿತನೆಗಳನ್ನು ಹದ ಗೊಳಿಸುವುದು ತಿಳಿ ಮಾಡುವುದು

    ಇದನ್ನು ಪಾಶ್ಚಾತ್ಯರು psychological treatment ಎಂದು ಕರೆದರೂ .

    ನಾವು ಭಾರತೀಯರು ಪೂರ್ಣ ಜ್ಞಾನ ಪಡೆಯದೆ ತರ್ಕ ವಿತರ್ಕಗಳನ್ನು ಮಾಡದೆ ನಮ್ಮ ಸಿದ್ಧಾಂತಗಳನ್ನು ಅಲ್ಲಾಗಳೇವುದು ನಿಲ್ಲಿಸ ಬೇಕು.

    ಶನಿ ಎಂದರೆ ಮಂದ ವೇಗ ಎಂದು ಅರ್ಥ ಯಾವ ಗ್ರಹವು ಮಂದವಾಗಿ ಚಲಿಸುವುದು ಅದನ್ನೂ ಶನಿ ಎಂದರು ಇದನ್ನೇ ಪಾಶ್ಚಾತ್ಯರು ತಾವು ಜಗತ್ತಿಗೆ ಸಾರಿದಂತೆ ಬೊಬ್ಬೆ ಹೊಡೆದರೂ .

    ಏನೇ ಇರಲಿ ನಮ್ಮ ಪೂರ್ವಿಕರ ಅಪರಿಮಿತ ಜ್ಞಾನ ತಿಳುವಳಿಕೆಯನ್ನು ಪೂರ್ಣವಾಗಿ ಅರಿಯುವುದು ಉತ್ತಮ .

    ಒಳ್ಳೆಯ ಪ್ರಯತ್ನ . ನಿಮ್ಮ ಬರವಣಿಗೆ ಮುಂದುವರಿಯಲಿ .

    ಪ್ರತ್ಯುತ್ತರಅಳಿಸಿ
  2. ನಮ್ಮ ಸನಾತನ ಧರ್ಮದ ಅನೇಕ ಆಚರಣೆಗಳು ವೈಜ್ಞಾನಿಕವಾಗಿವೆ. ಋಷಿ ಮುನಿಗಳಿಂದ ಬ್ರಹ್ಮಾಂಡದ ಅನೇಕ ಸತ್ಯತೆಗಳು ಅನೇಕ ಸಹಸ್ರಾರು ವರುಷಗಳ ಹಿಂದೆಯೇ ಉಲ್ಲೆಕಿಸಲಾಗಿದೆ. ಆಂಗ್ಲರ ಪ್ರಭಾವದಿಂದ ಮತ್ತು ನಮ್ಮಲ್ಲಿನ ಒಗ್ಗಟಿನ ಅಭಾವದಿಂದ ನಮ್ಮವರ ಸಾಧನೆಗಳು ಹಿಂದೆ ಉಳಿದು ಬಿಟ್ಟಿದೆ. ನಿಮ್ಮ ಬರಹ ಉತ್ತಮವಾಗಿದೆ. ಅಭಿನಂದನೆಗಳು 🙏🙏🙏

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..