ಇಂದಿನ ಶಿಕ್ಷಣ ವ್ಯವಸ್ಥೆ ನಮ್ಮ ವಾಸ್ತವಿಕ ಜೀವನಕ್ಕೆ ಪೂರಕವೇ?

ಇಂದಿನ ಶಿಕ್ಷಣ ವ್ಯವಸ್ಥೆ ನಮ್ಮ ವಾಸ್ತವಿಕ ಜೀವನಕ್ಕೆ ಪೂರಕವೇ?



             "ನಹಿ ಜ್ಞಾನೇನ ಸದೃಶಂ" ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅಂತೆಯೇ,

ಜ್ಞಾನವುಳ್ಳವನೊಡಲು ಭಾನುವಿನ ತೆರನಹುದು
ಜ್ಞಾನವಿಲ್ಲದನ ಬರಿಕಾಯ । ಹಾಳೂರ
ಸ್ಥಾನದಂತಕ್ಕು ಸರ್ವಜ್ಞ ॥

ಎನ್ನುವಂತೆ, ಈ ಜ್ಞಾನ ದೈನಂದಿನ ಬದುಕಿನಲ್ಲಿ ದೊರೆಯುತ್ತದಾದರೂ ಒಂದು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯ.
ಈ ನಿಟ್ಟಿನಲ್ಲಿ ಆಯಾಯ ಕಾಲದ ಶಿಕ್ಷಣ ಪದ್ಧತಿಗಳನ್ನು ಮೆಲುಕು ಹಾಕಿದಾಗ ಪ್ರಾಚೀನ ಕಾಲದಲ್ಲಿ ಗುರುಕುಲ ಶಿಕ್ಷಣ ಪದ್ಧತಿ ರೂಢಿಯಲ್ಲಿತ್ತು. ಗುರುಕುಲದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಭಿಕ್ಷಾಟನೆಯ ಮೂಲಕ ಉದರ ಪೋಷಣೆ ಮಾಡಿಕೊಳ್ಳುತ್ತಾ ಶಿಕ್ಷಣ ಪಡೆಯುತ್ತಿದ್ದರು. ಬ್ರಿಟಿಷರು ಭಾರತಕ್ಕೆ ಬಂದ ನಂತರ ಆಂಗ್ಲಶಿಕ್ಷಣ ಪದ್ಧತಿ ರೂಢಿಗೆ ಬಂದಿತು. ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಗಾಂಧೀಜಿಯವರು 'ಮೂಲಶಿಕ್ಷಣ ಪದ್ಧತಿ' ಅಂದರೆ, ಸಾಮಾನ್ಯ ಶಿಕ್ಷಣದ ಜೊತೆ ನೂಲುವುದು, ನೇಯುವುದು, ಕುಂಬಾರಿಕೆ, ಬಡಗಿ ಕೆಲಸ ಮುಂತಾದ ಜೀವನಕ್ಕೆ ಪೂರಕವಾಗೋ ವೃತ್ತಿಪರ ಶಿಕ್ಷಣವನ್ನು ಜಾರಿಗೆ ತಂದರು.

           "ನಾಸ್ತಿ ವಿದ್ಯಾ ಸಮಂ ಚಕ್ಷುರ್ನಾಸ್ತಿ" ಎನ್ನುವಂತೆ, ವಿದ್ಯೆಯು ಒಂದು ಮಗುವನ್ನು ಸಮರ್ಥ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಆದರೆ ಇಂದು ಶಿಕ್ಷಣ, ಶಿಕ್ಷಣವಾಗಿರದೇ ಸ್ಪರ್ಧೆಯಾಗಿದೆ. ಇದು ನೈಜ ಶಿಕ್ಷಣವೇ? ಶಿಕ್ಷಣ ಒಂದು ಸ್ಪರ್ಧೆಯೇ? ಇಂದಿನ ಶಿಕ್ಷಣ ವ್ಯವಸ್ಥೆ, ನಮ್ಮ ವಾಸ್ತವಿಕ ಜೀವನಕ್ಕೆ ಪೂರಕವಾಗಿದೆಯೇ? ಇಂದಿನ ಶಿಕ್ಷಣ, ಒಂದು ಮಗುವನ್ನು ನಾಗರಿಕನನ್ನಾಗಿ ರೂಪಿಸುವಲ್ಲಿ ಸಫಲವಾಗುತ್ತಿದೆಯೇ? ಅಥವಾ ಕನಿಷ್ಟ , ಮಗುವನ್ನು ಮನುಷ್ಯನನ್ನಾಗಿ ಬೆಳೆಸುತ್ತಿದೆಯೇ? ಶಿಕ್ಷಣದ ಮಟ್ಟ ಎಂತಿದೆ..??

           ಇಂದಿನ ಶಿಕ್ಷಣ ವ್ಯವಸ್ಥೆ, ಮಗುವನ್ನು ಹಣ ಮಾಡುವ ಯಂತ್ರವನ್ನಾಗಿ ರೂಪಿಸುತ್ತಿದೆ. ಮಗುವನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿ, ಬಾವಿಯೊಳಗಿನ ಕಪ್ಪೆಯನ್ನಾಗಿ ಮಾಡುತ್ತಿದೆ. ಮಗುವಿನ ಜ್ಞಾನವನ್ನು ಮೂರು ಗಂಟೆಗಳ ನೆನಪಿನ ಪರೀಕ್ಷೆಯ ಮೂಲಕ ಅಳೆಯುತ್ತಿದೆ. ಈಗಿನ ಶಿಕ್ಷಣ, ಒಂದು ಮಗುವಿನ ಯೋಚನಾಶಕ್ತಿಯನ್ನು ಹೆಚ್ಚಿಸುವಲ್ಲಿ ಸೋಲುತ್ತಿದೆ, ಮಗುವಿನ ಕೌಶಲ್ಯವನ್ನು ವೃದ್ಧಿಸುವಲ್ಲಿ ಎಡವುತ್ತಿದೆ. ಪ್ರಶಂಸಾ, ಅರ್ಹತಾ ಪತ್ರಗಳನ್ನು ಕೊಡುವುದಕ್ಕೆ ಮೀಸಲಾಗಿದ್ದು, ಅನುಭವ ಶಿಕ್ಷಣ ನೀಡುವುದರಲ್ಲಿ ಸೋಲುತ್ತಿದೆ. ಭ್ರಷ್ಟಾಚಾರವನ್ನು ಹೆಚ್ಚಿಸುತ್ತಿದೆ, ಉತ್ತಮ ಶಿಕ್ಷಕರನ್ನು ನೇಮಿಸುವಲ್ಲಿ ಎಡವುತ್ತಿದೆ.
ಮಗುವಿಗೆ ಆಹಾರ ನೀಡಿ, ಆ ಕ್ಷಣದ ಹಸಿವು ನೀಗಿಸುತ್ತಿದೆ. ಆದರೆ ಅದೇ ಮಗುವಿಗೆ ಆಹಾರ ಬೆಳೆಸುವ ವಿಧಾನ ಕಲಿಸುತ್ತಿಲ್ಲ. ಅಂಕಗಳಿಗಿರುವ ಮೌಲ್ಯ, ಮಗುವಿನ ಕೌಶಲ್ಯಕ್ಕಿಲ್ಲ. ಹಣಕ್ಕಿರುವ ಮೌಲ್ಯ, ಮಗುವಿನ ಸಾಮರ್ಥ್ಯಕ್ಕಿಲ್ಲ. ಇಂದಿನ ಶಿಕ್ಷಣ ವ್ಯವಸ್ಥೆ ರೆಕ್ಕೆಯಿಲ್ಲದ ಹಕ್ಕಿಯಂತಾಗಿದೆ.
"ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ" ಎನ್ನುವ ಮಾತಿನಂತಹ ಗುರುಗಳು ಕಣ್ಮರೆಯಾಗಿ, ಮಕ್ಕಳು ಕಲಿತರೂ, ಕಲಿಯದಿದ್ದರೂ ತಮಗೆ ಸಂಬಳ ಬರುವುದು ಎಂಬ ಮನೋಭಾವ ಹೊಂದಿರುವ ಶಿಕ್ಷಕರು ಹೆಚ್ಚುತ್ತಿದ್ದಾರೆ. ಕುದುರೆಯ ದೃಷ್ಟಿ ನೇರವಾಗಲು ಕಣ್ಣುಪಟ್ಟಿ ಕಟ್ಟುತ್ತಾರಲ್ಲ, ಅಂತೆಯೇ ಹೆತ್ತವರು ಮಕ್ಕಳನ್ನು ಅಂಕಗಳಿಸುವುದಕ್ಕಷ್ಟೇ ಮೀಸಲಾಗಿಸುತ್ತಿದ್ದಾರೆ.

            ಇಂದು ನಾವು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿದಿದ್ದೇವೆ. ಆದರೆ ವಾಸ್ತವಿಕ ಜೀವನದಲ್ಲಿ ಹೊಂದಾಣಿಕೆಯ ಕೊರತೆ, ಒತ್ತಡ, ಅಸಹಕಾರ, ವೈರತ್ವ, ಸಮಯಪ್ರಜ್ಞೆಯ ಕೊರತೆ, ನಿರುದ್ಯೋಗ ಮುಂತಾದ ಗಂಭೀರ ಸಮಸ್ಯೆಗಳಿಂದ ಅಶಿಕ್ಷಿತ, ಶಿಕ್ಷಿತ ಎಂಬ ಭೇದವಿಲ್ಲದೆ ತೊಳಲಾಡುತ್ತಿದ್ದೇವೆ. ಅನೇಕ ಸಂದರ್ಭಗಳಲ್ಲಿ ಸಾಕಷ್ಟು ವಿದ್ಯಾರ್ಹತೆಯನ್ನು ಪಡೆದ ವ್ಯಕ್ತಿಯೂ ಜೀವನದ ಒಂದು ಸಣ್ಣ ಸಮಸ್ಯೆಯನ್ನು ಎದುರಿಸುವಲ್ಲಿ ವಿಫಲನಾಗುತ್ತಾನೆ.
ಜನರಲ್ಲಿ ನೈತಿಕತೆ ಮಾಯವಾಗುತ್ತಿದೆ. ಪ್ರೀತಿ, ಸ್ನೇಹ, ವಿಶ್ವಾಸಕ್ಕೆ ಬೆಲೆಯೇ ಇಲ್ಲದಂತಾಗಿದೆ. ನೆಮ್ಮದಿಯಿಲ್ಲದಂತಾಗಿದೆ. "ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾಃ" ಎಂಬ ನುಡಿಮುತ್ತುಗಳಿಂದ ಜನಜನಿತವಾಗಿದ್ದ ಭರತ ಖಂಡದಲ್ಲಿ ಸ್ತ್ರೀಯರ ಶೋಷಣೆ, ಅಸಮಾನತೆ ಹೆಚ್ಚುತ್ತಿದೆ. ವಿದ್ಯಾವಂತ ದಂಪತಿಗಳಲ್ಲಿ ಹೊಂದಾಣಿಕೆಯ ಕೊರತೆಯಿಂದಾಗಿ ಮದುವೆಯಾದ ಕೆಲವೇ ಸಮಯದಲ್ಲೇ ಸಂಸಾರದಲ್ಲಿ ಬಿರುಕು ಮೂಡುತ್ತಿದೆ. ಜನ್ಮ ಕೊಟ್ಟ ತಂದೆ-ತಾಯಿಯನ್ನು ಅವರ ಮುದಿಪ್ರಾಯದಲ್ಲಿ ಕಡೆಗಣಿಸುವ, ದೂರ ಮಾಡುವ, ನೋಯಿಸುವ ಮಕ್ಕಳು ಹೆಚ್ಚಾಗುತ್ತಿದ್ದಾರೆ ಎಂಬುದಕ್ಕೆ ಈಗ ಹೆಚ್ಚುತ್ತಿರುವ ವೃದ್ಧಾಶ್ರಮಗಳೇ ಸಾಕ್ಷಿಯಾಗುತ್ತಿವೆ. ಪರೀಕ್ಷೆಯನ್ನು ಮುಂದೂಡಬೇಕೆಂಬ ಏಕೈಕ ಉದ್ದೇಶದಿಂದ ವಿದ್ಯಾರ್ಥಿಯೊಬ್ಬ ಅದೇ ಶಾಲೆಯ ಎಳೆಯ ಕಂದನನ್ನು ಕೊಲೆ ಮಾಡಿದ ವಿಚಾರವು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಈ ಪೈಶಾಚಿಕ ಕೃತ್ಯಗಳ ನಿವಾರಣೆಯಾಗಿ, ಎಳೆಯ ಮಕ್ಕಳ ಮನಸ್ಸಿನಲ್ಲಿ ಉತ್ತಮ, ಆದರ್ಶ ವಿಚಾರಗಳನ್ನು ತುಂಬಲು ಇಂದಿನ ಶಿಕ್ಷಣ ಪದ್ಧತಿಯು ಸಹಕಾರಿಯಾಗಬೇಕಿದೆ.
ಪ್ರಸ್ತುತ ವಿದ್ಯಮಾನವನ್ನು ಗಮನಿಸಿದರೆ, ಆಂಗ್ಲ ಮಾಧ್ಯಮ ಶಾಲೆಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಮಗುವಿನ ಹೆತ್ತವರಿಗೆ, ಪಾಲಕರಿಗೆ ಮಾತೃಭಾಷಾ ಶಿಕ್ಷಣದ ಬಗ್ಗೆ ಕೀಳರಿಮೆ ಉಂಟಾಗುತ್ತಿದೆ. ಆಂಗ್ಲಭಾಷೆಯಲ್ಲಿ ಶಿಕ್ಷಣ ಪಡೆದರೆ ತಮ್ಮ ಮಗು ಸಾಕಷ್ಟು ಅಂಕಗಳನ್ನು ಗಳಿಸಿ ಉನ್ನತ ಹುದ್ದೆಯನ್ನು ಹೊಂದಬಲ್ಲ ಎಂಬ ಭಾವನೆ ಬೆಳೆಯುತ್ತಿದೆ. ಇದಕ್ಕೆ ಸರ್ಕಾರವೇ ನೇರ ಹೊಣೆ. ಯಾವುದೇ ಆಮಿಷಕ್ಕೊಳಗಾಗಿ ನಮ್ಮ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಅನುಮತಿ ನೀಡುತ್ತಿದ್ದಾರೆ. ಇದು ಖಂಡಿತವಾಗಿಯೂ ನಿಲ್ಲಬೇಕು.ಮಾಧ್ಯಮಿಕ ಹಂತದವರೆಗೆ ಅಂದರೆ ೧೦ನೇ ತರಗತಿಯವರೆಗೆ ಪ್ರತಿಯೊಂದು ಮಗುವೂ ಮಾತೃಭಾಷೆಯ ಮೂಲಕವೇ ಶಿಕ್ಷಣ ಪಡೆಯುವಂತಾಗಬೇಕು. ಮುಂದೆ ಆ ವಿದ್ಯಾರ್ಥಿ ಇತರ ಭಾಷೆಗಳನ್ನು ಕಲಿಯಬಲ್ಲ. ಮಾತೃಭಾಷೆಯ ಮೂಲಕ ಶಿಕ್ಷಣ ಪಡೆದ ಅದೆಷ್ಟೋ ವ್ಯಕ್ತಿಗಳು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಿದ ನಿದರ್ಶನಗಳು ಸಾಕಷ್ಟಿವೆ. ಮಾತೃಭಾಷಾ ಮಾಧ್ಯಮ ಶಾಲೆಗಳಲ್ಲಿ ೧ನೇ ತರಗತಿಯಿಂದಲೇ ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿಸಲು ಉತ್ತೇಜನ ನೀಡಬೇಕು. ಆಗ ಮಾತೃಭಾಷೆಯ ಬಗ್ಗೆ ಜನರಲ್ಲಿರುವ ಕೀಳರಿಮೆ ಹೊರಟು ಹೋಗಲು ಸಾಧ್ಯವಾಗುತ್ತದೆ.

         ಶಿಕ್ಷಣವೆಂದರೆ 'ವ್ಯಕ್ತಿತ್ವ ನಿರ್ಮಾಣ'. ಇದಕ್ಕೆ ಸುಭದ್ರವಾದ ಬೌದ್ಧಿಕ ಬುನಾದಿ ಬೇಕು. ಕೇವಲ ಜ್ಞಾನ ಸಂಗ್ರಹವಷ್ಟೇ ಶಿಕ್ಷಣವಲ್ಲ. ಜೊತೆಗೆ ಕ್ರಿಯಾಶೀಲತೆಯೂ ಬೇಕು. ಓದಿದ್ದನ್ನು, ಕಲಿತದ್ದನ್ನು ಬದುಕಿನಲ್ಲಿ ಅನುಸರಿಸಲು ಪ್ರಯತ್ನಿಸಿದಾಗ ಮಾತ್ರ ಶಿಕ್ಷಣದ ಸಫಲತೆ. ಆದರೆ ಇಂದಿನ ಶಿಕ್ಷಣ ಇದಕ್ಕೆ ಪೂರಕವಾಗಿಲ್ಲ.

ಆದರೂ ಧನಾತ್ಮಕವಾಗಿ ಯೋಚಿಸಿದಾಗ, ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಹೆಣ್ಣು ಮಕ್ಕಳಿಗೆ ಹೆಚ್ಚು ಅವಕಾಶ ದೊರೆತು ವಿವಿಧ ಸ್ಥರಗಳಲ್ಲಿ ಅದೆಷ್ಟೋ ಸ್ತ್ರೀಯರು ಉನ್ನತ ಹುದ್ದೆಯಲ್ಲಿದ್ದು, ಸ್ತ್ರೀ-ಪುರುಷ ಅಸಮಾನತೆ ಮಾಯವಾಗಿದೆ. ಭಾರತೀಯರು ಜಗತ್ತಿನೆಲ್ಲೆಡೆ ಗುರುತಿಸಿಕೊಂಡು, ಉನ್ನತ ಹುದ್ದೆಯಲ್ಲಿದ್ದಾರೆ. ವೃತ್ತಿಪರ ಶಿಕ್ಷಣವನ್ನು ಪಡೆದ ನಮ್ಮ ಯುವ ಭಾರತೀಯರು ಸ್ವಂತ ಉದ್ಯಮಗಳನ್ನು ಆರಂಭಿಸುವುದರ ಮೂಲಕ ಅನೇಕರಿಗೆ ಉದ್ಯೋಗಗಳನ್ನು ನೀಡುತ್ತಿದ್ದಾರೆ. ಈಗಿನ ಶಿಕ್ಷಣದ ಪರಿಣಾಮವಾಗಿ ಭಾರತದಲ್ಲಿ ಹಿಂದಿನಿಂದಲೂ ಬೇರೂರಿದ್ದ ಮೂಢನಂಬಿಕೆ, ದುಷ್ಟಪದ್ಧತಿಗಳು ಮಾಯವಾಗುತ್ತಿದೆ. ಇವುಗಳ ನಿರ್ಮೂಲನೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಉಂಟಾಗುತ್ತಿದೆ.

            ಪುಸ್ತಕದ ಜ್ಞಾನಕ್ಕಿಂತಲೂ ವ್ಯವಹಾರದಿಂದ, ಬದುಕಿನ ನೇರವಾದ ಸಂಪರ್ಕದಿಂದ ಸಿಗುವ ಜ್ಞಾನ ಬಾಳಬುತ್ತಿಯಾಗಲಿ. ದೇಹಕ್ಕೆ ಪೌಷ್ಟಿಕಾಂಶಗಳನ್ನು ಒದಗಿಸುವ ರೀತಿಯಲ್ಲಿ ಮಕ್ಕಳ ಬುದ್ಧಿಶಕ್ತಿಯ ವಿಸ್ತಾರಕ್ಕೆ ಸೂಕ್ತವಾದ ಚಿಂತನೆ ಹಾಗೂ ಮಾರ್ಗದರ್ಶನ ಮಗುವಿಗೆ ದೊರೆತು, ವ್ಯಕ್ತಿತ್ವ ನಿರ್ಮಾಣವಾಗುವಂತಹ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದು,
ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ ।
ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ ॥
ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು ।
ಇಳೆಯೊಳಗದೊಂದು ಸೊಗ- ಮಂಕುತಿಮ್ಮ ॥

ಎಂಬ ಕಗ್ಗದ ಆಶಯ ದಿಟವಾಗಲಿ.

ಕಾಮೆಂಟ್‌ಗಳು

  1. ಇಂದಿನ ಶಿಕ್ಷಣ ಮತ್ತು ಅದರಿಂದ ಕುಂಠಿತ ವಾಗಿ ಬೆಳೆ ಯುತ್ತಿರುವ ನವ ಪೀಳಿಗೆಯ ಬಗ್ಗೆ ಸವಿವರವಾಗಿ ತುಂಬಾ ಚೆನ್ನಾಗಿ ಹೇಳಿದ್ದೀರಿ.
    ಬಡತನ, ಆರೋಗ್ಯ ಮತ್ತು ಶಿಕ್ಷಣ ತ್ರಿವಳಿ ಸಮಸ್ಯೆಗಳು. ಶಿಕ್ಷಣ ವ್ಯಸ್ಥೆಯಲ್ಲಿ ಸುಧಾರಣೆ ತರಬೇಕಂದರೆ ಬಡತನ ನಿವಾರಣೆ ಮತ್ತು ಗುಣಮಟ್ಟದ ಆರೋಗ್ಯ ವ್ಯವಸ್ಥೆ ಅನಿವಾರ್ಯ.

    ಶಿಕ್ಷಣ ವ್ಯವಸ್ಥೆಯ ಇಂದಿನ ಹೀನಾಯ ಸ್ಥಿತಿಗೆ ರಾಜಕೀಯ ವು ಒಂದು ಮುಕ್ಯ ಕಾರಣ. ಜಾತಿ ರಾಜಕೀಯ, ನೇಪೋಟಿಸಂ, dynastic politics ನಿಂದಾಗಿ ಪ್ರಜಾಪ್ರಭುತ್ವಕ್ಕೆ ಕೊಡಲಿ ಏಟು ಬೀಳುತ್ತದೆ. ಗಮನಿಸಿ, ಅತ್ಯಧಿಕ ಖಾಸಗಿ ಶಾಲಾ ಕಾಲೇಜುಗಳು ರಾಜಕಾರಣಿಗಳ ಒಡೆತನದಲ್ಲಿ ಇವೆ.

    ಮೌಲ್ಯಾಧಾರಿತ ರಾಜಕೀಯದ ಅನುಪಸ್ಥಿತಿಯಲ್ಲಿ ಯಾವುದೇ ಸಕ್ಷಮ ಸುಧಾರಣೆ ಸಾಧ್ಯವಿಲ್ಲ.

    ಪ್ರತ್ಯುತ್ತರಅಳಿಸಿ
  2. ಖಂಡಿತ. ಎಲ್ಲಿಯವರೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯ ಮೂಗು ತೂರಿಸುತ್ತದೆಯೋ ಅಲ್ಲಿಯವರೆಗೆ ಪರಿಪೂರ್ಣ ಶಿಕ್ಷಣ ದೊರಕದು. ನಿಮ್ಮ ಅಭಿಪ್ರಾಯಕ್ಕೆ ತುಂಬು ಹೃದಯದ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  3. ಸೂಪರ್ ನಾನು ಕಿರು ಲೇಖನ ಬರ್ದಿರುವೆ ಸೇಮ್ ಟಾಪಿಕ್ ಹಿಂದಿನ ಶಿಕ್ಷಣ ಬಗ್ಗೆ ಹೇಳಿದ್ದೆ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..