ಬಾಲ್ಯದ ನೆನಪು..
ಬಾಲ್ಯಜೀವನ ಅತಿಸುಂದರ. ಬಾಲ್ಯಜೀವನದ ನೆನಪು ಅತಿ ಮಧುರ. ಅಮ್ಮನು ನೀಡುವ ಕೈತುತ್ತು, ಅಜ್ಜಿಯು ಹೇಳುವ ನೀತಿಕಥೆ, ಅಪ್ಪನು ತೋರುವ ಸಾಗರದಂತಹ ಮಮತೆ, ಕಾಳಜಿ, ಅಜ್ಜನ ಆಕಾಶದೆತ್ತರದ ಪ್ರೀತಿ, ನಮ್ಮ ನಗುವಿನೊಂದಿಗೆ ಮನೆಯವರ ನಗು, ಇವುಗಳೊಂದಿಗೆ ಕಳೆದ ಬಾಲ್ಯ ಅದೆಷ್ಟು ಚೆಂದ?! ಮಾನವನ ಬದುಕಿನ ಅತ್ಯಮೂಲ್ಯ ಕಾಲಘಟ್ಟವೇ ಬಾಲ್ಯಜೀವನ. ಬಾಲ್ಯದಲ್ಲಿ ಅತ್ತು ಅಳಿಸಿದ, ನಕ್ಕು ನಗಿಸಿದ ಪ್ರತಿಯೊಂದು ಕ್ಷಣವೂ ನೆನಪಿನ ಬುತ್ತಿಯ ಪ್ರಮುಖ ಭಾಗವಾಗುತ್ತದೆ. ಬಾಲ್ಯದಲ್ಲಿ ಅಳುವಿನ ಹಿಂದೆಯೂ ನಗುವಿದ್ದರೆ, ನಲಿವಿದ್ದರೆ , ಬೆಳೆಯುತ್ತಾ ಹೋದಂತೆ ಅದು ಬದಲಾಗಿ ನಗುವಿನ ಹಿಂದೆ ನೋವಡಗುತ್ತದೆ. ಒಂದು ಮಾತಿದೆ 'ಬಾಲ್ಯ ಸುಂದರವಾದರೆ, ಅದರ ನೆನಪುಗಳನ್ನು ಮೆಲುಕು ಹಾಕುತ್ತಾ ಕಳೆಯುವ ಮುಪ್ಪು ಸುಂದರವಾಗುತ್ತದೆ' ಎಂದು. ಖಂಡಿತವಾಗಿಯೂ! ಮಗುವನ್ನು ನೋಡಿ ನಗದವರಾರು? ಬಾಲ್ಯವನ್ನೆಣಿಸಿ, ಮತ್ತೆ ಬಾಲ್ಯಕ್ಕೆ ಮರಳಬೇಕು ಎಂದು ಬಯಸದ ಮಾನವರಾರು? ಬಾಲ್ಯದ ನೆನಪನ್ನು ನೆನಪಿಸಿಕೊಂಡು ನಗದವರಾರು? ಮತ್ತೆ ಆ ಕ್ಷಣ ಬಾರದೆಂದು ತಿಳಿದು ಬೇಸರಿಸದೇ ಇರುವವರಾರು? ಬಾಲ್ಯವೇ ಹಾಗೆ..., ಸ್ಮೃತಿಯೇ ಹಾಗೆ.....!
ಸುಂದರವಾದ ಪುಷ್ಪಗಳಲ್ಲಿ ಒಂದನ್ನು ಆರಿಸಬೇಕೆಂದರೆ, ನಾವು ಅದರಲ್ಲಿ ಅತಿಸುಂದರ ಪುಷ್ಪವನ್ನರಸಿ ಆರಿಸುತ್ತೇವೆ. ಹಾಗೆಯೇ ಬಾಲ್ಯದ ಸ್ಮೃತಿಗಳ ಬುತ್ತಿಯನ್ನು ಬಿಚ್ಚಿದರೆ, ಹಾರಾಡುವ ಲೆಕ್ಕವಿಲ್ಲದಷ್ಟು ಸುಂದರ ಚಿಟ್ಟೆಗಳಂತಹ ನೆನಪುಗಳಲ್ಲಿ ಒಂದು ಸುಂದರವಾದ ಸ್ಮೃತಿಯನ್ನು ಆರಿಸುತ್ತಿದ್ದೇನೆ.
ಈಗ ಬೇಸಿಗೆರಜೆ ಎಂದೊಡನೆ ಮಕ್ಕಳು ಕೋಚಿಂಗ್, ಟ್ಯೂಷನ್ ಎಂದು ನಲಿವಿರದ ಮನಸ್ಸನ್ನು ಹೊತ್ತು ಓಡಾಡುತ್ತಿರುತ್ತಾರೆ. ಮಕ್ಕಳ ತುಂಟಾಟ ತಡೆಯಲಾಗದ ಹೆತ್ತವರು ಆ ಶಿಬಿರ, ಈ ಶಿಬಿರ ಎಂದು ಕಳುಹಿಸಿ ಉಷ್! ಎಂದು ನಿಟ್ಟುಸಿರು ಬಿಡುತ್ತಾರೆ. ಆದರೆ ನನ್ನ ಬಾಲ್ಯ ಹೀಗಿರಲಿಲ್ಲ. ಅಪ್ಪ, ಅಮ್ಮ, ಅಕ್ಕನೊಡನೆ ಪ್ರವಾಸಿ ತಾಣಗಳನ್ನು ಸುತ್ತಿದ ಕ್ಷಣಗಳು ಸ್ಮರಣೀಯ. ಅವುಗಳ ನೆನಪು ಈಗಲೂ ಮೈನವಿರೇಳಿಸುತ್ತವೆ. ಆಗಿನ್ನೂ ನನಗೆ ೫ ವರ್ಷ. ಪ್ರತಿ ವರ್ಷದಂತೆ ಬೇಸಿಗೆರಜೆಯಲ್ಲಿ ಎಲ್ಲಿಗಾದರೂ ಪ್ರವಾಸಕ್ಕೆ ತೆರಳುವ ಆಲೋಚನೆ ತಂದೆಯಲ್ಲಿತ್ತು. ಅಪ್ಪ ಒಂದು ದಿನ ಅಮ್ಮನ ಬಳಿ ಬಂದು, "ಮುಂದಿನ ವಾರ ಮೈಸೂರಿಗೆ ಹೋಗೋಣ. ತಯಾರಿ ಮಾಡಿಕೋ. ಕೆಲವು ದಿನಗಳ ಕಾಲ ಅಲ್ಲಿ ಸಮಯವನ್ನು ಕಳೆಯೋಣ" ಎಂಬ ಮಾತು ಅಮ್ಮನ ಕಿವಿ ತಲುಪಿತ್ತೋ, ತಲುಪುವ ದಾರಿಯಲ್ಲಿತ್ತೋ... ಆದರೆ ಅದು ನನ್ನ ಕಿವಿಗೆ ಬಂದು ಅಪ್ಪಳಿಸಿದ್ದೇ ತಡ, ನಾನು ಏ...! ಹೋ...! ಎಂದು ಕುಣಿಯಲಾರಂಭಿಸಿದೆ. ಅಪ್ಪನ ಬಳಿ ಹೋಗಿ ಮೈಸೂರಿಗೆ ಏಕೆ? ಅಲ್ಲಿ ಏನಿದೆ? ಎಂದು ಕುತೂಹಲದಿಂದ ಕೇಳಿದೆ. ಆಗ ಅಪ್ಪ, "ಅಲ್ಲಿ ಅರಮನೆ, ದೊಡ್ಡ ಪ್ರಾಣಿಸಂಗ್ರಹಾಲಯ, ಕೆ.ಆರ್.ಎಸ್.ಅಣೆಕಟ್ಟು ಎಲ್ಲವೂ ಇದೆ" ಎಂದರು. ಅರಮನೇಲಿ ಯಾರ್ಯಾರು ಇರ್ತಾರೆ? ಅದೆಷ್ಟು ದೊಡ್ಡದಿದೆ? ನಮ್ಮನೆಗಿಂತಲೂ ದೊಡ್ಡದಿದೆಯಾ? ಪ್ರಾಣಿಸಂಗ್ರಹಾಲಯದಲ್ಲಿ ಯಾವ್ಯಾವ ಪ್ರಾಣಿಗಳಿರುತ್ತವೆ? ಹುಲಿ, ಸಿಂಹ ಎಲ್ಲಾ ಇರುತ್ತಾ? ಅಣೆಕಟ್ಟು ಅಂದರೆ ಏನು? ಅಲ್ಲಿ ಏನಿರುತ್ತೆ? ಎಂಬ ನನ್ನ ಸಾಲು ಸಾಲು ಪ್ರಶ್ನೆಗಳಿಗೆ, "ಅಲ್ಲಿ ಹೋದಾಗ ನೋಡುವಿಯಂತೆ, ಎಲ್ಲವನ್ನೂ ಅಲ್ಲಿಯೇ ಹೇಳುತ್ತೇನೆ" ಎಂದುತ್ತರಿಸಿ ಅಪ್ಪ ಹೊರಟೇಬಿಟ್ಟರು. ನನ್ನ ಪ್ರಶ್ನೆಗಳಿಗೆ ಉತ್ತರ ಸಿಗದಾಗ ಬೇಸರವಾದರೂ ಇನ್ನು ಒಂದು ವಾರದ ನಂತರ ಪ್ರವಾಸಕ್ಕೆ ಹೊರಡುವುದನ್ನು ನೆನಪಿಸಿಕೊಂಡು ನಲಿಯಲಾರಂಭಿಸಿದೆ. ಮನಸ್ಸಿನಲ್ಲೇ ನನ್ನ ಚಿಕ್ಕ ಪುಟ್ಟ ಆಸೆಗಳ ಪಟ್ಟಿಯನ್ನು ಬರೆದುಕೊಂಡೆ. ಪ್ರತಿದಿನ ಬೆಳಗಾದರೆ ಇನ್ನೂ ಎಷ್ಟು ದಿನವಿದೆ ಹೊರಡಲು? ಎಂಬ ಪ್ರಶ್ನೆಯನ್ನು ಅಪ್ಪ-ಅಮ್ಮನ ಮುಂದಿರಿಸುತ್ತಿದ್ದೆ. ಅಂತೂ ಇಂತೂ ಹೊರಡುವ ದಿನ ಬಂದೇ ಬಿಟ್ಟಿತು. ಉಡುಪಿಯಿಂದ ರೈಲಿನಲ್ಲಿ ಪ್ರಯಾಣ ಎಂದೊಡನೆ ಇನ್ನೂ ಖುಷಿ. ಎಲ್ಲೋ ಪತಂಗವಾಗಿ ಹಾರುತ್ತಿದ್ದ ಅನುಭವ! ರೈಲಿನ ಪ್ರಯಾಣದ ಆನಂದವನ್ನು ಅನುಭವಿಸುತ್ತಾ ನಿದ್ರಾದೇವಿಯ ಮಡಿಲಿಗೆ ಜಾರಿರಲು ಮೈಸೂರು ನಿಲ್ದಾಣ ಬಂದೇಬಿಟ್ಟಿತು. ರೈಲಿನಿಂದ ಇಳಿದು, ರೈಲಿಗೊಂದು ಟಾಟಾ ಹೇಳಿ ಅಲ್ಲೇ ಸ್ವಲ್ಪ ದೂರದಲ್ಲಿದ್ದ ಸಂಬಂಧಿಕರ ಮನೆಗೆ ತೆರಳಿದೆವು. ಅಲ್ಲಿ ಆ ದಿನದ ಕಾರ್ಯಗಳನ್ನು ಮುಗಿಸಿ, ಮಲಗಿ, ಮರುದಿನ ಬೆಳಿಗ್ಗೆಯ ಕಾರ್ಯಗಳ ನಂತರ ಅಪ್ಪನ ನಿರ್ಧಾರದಂತೆ ಪ್ರಾಣಿ ಸಂಗ್ರಹಾಲಯಕ್ಕೆ ತೆರಳಲು ಅಣಿಯಾಗಿ, ಅಪ್ಪ ಅಮ್ಮನ ಕೈಗಳ ಬಂಧನದಲ್ಲಿ ನಾನು, ಅಕ್ಕ ಬಂಧಿಯಾಗಿ ಹೊರಟೆವು. ಅಲ್ಲಿದ್ದ ಪ್ರಾಣಿಗಳನ್ನು, ಪಕ್ಷಿಗಳನ್ನು, ವಿಧ ವಿಧದ ಜೀವಿಗಳನ್ನು, ಅವುಗಳ ಆಟ, ನೋಟ, ನೋಡಿ ಆನಂದಿಸಿ, ಹುಲಿ, ಸಿಂಹ, ಹಾವು, ಮೊಸಳೆಗಳಂತಹ ಜೀವಿಗಳನ್ನು ನೋಡಿ, ಹೆದರಿ ಅಮ್ಮನ ಸೆರಗಿನ ಹಿಂದೆ ಅವಿತು, ಮತ್ತೆ ಇಣುಕಿ ನೋಡಿ, ಬಹಳ ಸಮಯವನ್ನು ಅಲ್ಲಿ ಕಳೆದು, ಅಲ್ಲಿಂದ ಮತ್ತೆ ಸಂಬಂಧಿಕರ ಮನೆಗೆ ತೆರಳಿದ್ದು ಕುದುರೆಗಾಡಿಯಲ್ಲಿ..! ಮತ್ತೊಂದು ಹೊಸ ಅನುಭವ...- ಮರುದಿನ ಅರಮನೆಯನ್ನು ನೋಡಲು ಹೋದೆವು. ಹೊರಗಿನಿಂದಲೇ ಅದರ ಆಕಾರ, ವಿಸ್ತಾರ, ವಿನ್ಯಾಸ ನಮ್ಮನ್ನು ಬೆರಗುಗೊಳಿಸಿತ್ತು. ಒಳಗೆ ಹೋದಾಗಲಂತೂ ಅಚ್ಚರಿಯ ಮೇಲೆ ಅಚ್ಚರಿ ಕಾದಿತ್ತು. ಎಲ್ಲವನ್ನೂ ನೋಡಿ, ಖುಷಿಯಲ್ಲಿ ಕುಪ್ಪಳಿಸುತ್ತಾ, ಸಾವಿರ ಪ್ರಶ್ನೆಗಳಿಗೆ ನೂರು ಉತ್ತರಗಳನ್ನು ಪಡೆದು, ಅರಮನೆಯನ್ನು ನೋಡಿ, ಸಂತಸಪಟ್ಟು, ಅಲ್ಲೇ ಇರಲಾಗದೆಂಬ ಬೇಸರದೊಂದಿಗೆ ಹೊರನಡೆದೆವು. ಹಸಿದಿದ್ದ ಕಾರಣ ಅಲ್ಲಿದ್ದ ಹೂದೋಟದ ನೆರಳಿನ ಪ್ರದೇಶದಲ್ಲಿ ಕುಳಿತು, ತಂದಿದ್ದ ಬುತ್ತಿಯನ್ನು ಬಿಚ್ಚಿ, ಅಮ್ಮ ನಮಗೆಲ್ಲಾ ಬಾಳೆಹಣ್ಣು, ಚಪಾತಿಯನ್ನು ಕೊಟ್ಟಳು. ಇನ್ನೇನು ನಾನು ತಿನ್ನಬೇಕೆನ್ನುವಷ್ಟರಲ್ಲಿ ನನಗಿಂತ ಚಿಕ್ಕ ಹುಡುಗಿ ಬಂದು, ನಾನು ಹಿಡಿದುಕೊಂಡಿದ್ದ ಬಾಳೆಹಣ್ಣನ್ನು ಕಸಿದು, ಸುಲಿದು ತಿಂದೇ ಬಿಟ್ಟಳು. ಅಳಬೇಕಾದ ನಾನು, ಅವಳನ್ನು, ಅವಳ ಉಡುಗೆಯನ್ನು, ಅವಳು ತಿಂದ ಬಗೆಯನ್ನು ನೋಡಿ ಸುಮ್ಮನೆ ನಿಂತುಬಿಟ್ಟೆ. ಅಪ್ಪ ಅಮ್ಮನ ಬಳಿ ಅವಳು ಯಾರು ಎಂದು ಕೇಳಬೇಕೆನ್ನುವಷ್ಟರಲ್ಲಿ ಅವಳ ತಾಯಿ ಬಂದು, "ಕ್ಷಮಿಸಿ. ಮಗು ನಿನ್ನೆ ರಾತ್ರಿಯಿಂದ ಏನನ್ನೂ ತಿಂದಿಲ್ಲವಾದಕಾರಣ ತಿಂಡಿಯನ್ನು ಕಸಿದು ತಿಂದಳು" ಎಂದಾಗ, "ಏಕೆ ಏನನ್ನೂ ತಿಂದಿಲ್ಲ? ಏಕೆ ನೀವು ಕೊಟ್ಟಿಲ್ಲ?" ಎಂಬ ಅಕ್ಕನ ಪ್ರಶ್ನೆ ನನಗೂ ಸರಿ ಎನ್ನಿಸಿತು. ಆದರೆ ಆ ತಾಯಿಯ ಕಣ್ಣಲ್ಲಿ ನೀರು ಸುರಿಯಿತು. ಆಗ ಆಕೆ ನನ್ನ ಅಪ್ಪ-ಅಮ್ಮನೊಡನೆ, "ಭಿಕ್ಷೆ ಬೇಡಿದ್ರೇನೆ ನಮ್ಮ ಹೊಟ್ಟೆ ತುಂಬುತ್ತೆ. ನಿನ್ನೆ ಜ್ವರವಿದ್ದ ಕಾರಣ ಭಿಕ್ಷೆ ಬೇಡಿಲ್ಲ. ನಮ್ಮ ಹೊಟ್ಟೆ ತುಂಬಿಲ್ಲ. ದಯಮಾಡಿ ಏನನ್ನಾದರೂ ನೀಡಿ ಸಹಾಯ ಮಾಡಿ" ಎಂದು ಅತ್ತು ಗೋಗರೆದಾಗ, ಎಂತಹವರ ಕರುಳೂ ಚುರುಕ್ ಎನ್ನುತ್ತದೆ. ನನ್ನ ಅಮ್ಮ ನಾವು ತಿನ್ನಬೇಕೆಂದಿದ್ದ ತಿಂಡಿಗಳನ್ನೆಲ್ಲಾ ನೀಡಿದರೆ, ಅಪ್ಪ ಹತ್ತೋ ಇಪ್ಪತ್ತೋ ರುಪಾಯಿ ನೀಡಿದಾಗ, ಆಕೆ ಕೈ ಮುಗಿದು ಹಿಂದಿರುಗಿದರೆ, ಏನನ್ನೂ ಅರಿಯದ ಆ ಪುಟ್ಟ ಹುಡುಗಿಯೂ ಕೈಮುಗಿದು ಹಿಂತಿರುಗಿದಳು. ಆಗ ಅಪ್ಪನ ಬಳಿ ಕೆಲವು ಪ್ರಶ್ನೆಗಳನ್ನು ಕೇಳಿದಾಗ, " ಇಂತಹವರು ಸುಮಾರು ಜನ ಇರುತ್ತಾರೆ. ಹಣವಿಲ್ಲದೆ ಹೊಟ್ಟೆ ತುಂಬಿಸಿಕೊಳ್ಳಲು ಭಿಕ್ಷೆ ಬೇಡುತ್ತಾರೆ. ಕೆಲವರು ಸೋಮಾರಿಗಳಾಗಿ, ಕೆಲಸ ಮಾಡದೆ ಭಿಕ್ಷೆ ಬೇಡಿದರೆ, ಇನ್ನು ಕೆಲವರು ಅಸಹಾಯಕರಾಗಿ ಭಿಕ್ಷೆ ಬೇಡುತ್ತಾರೆ. ಆದರೆ ಮಕ್ಕಳೇ, ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ" ಎಂದರು.
ನಾವೆಲ್ಲರೂ ಮತ್ತೆ ಸಂಬಂಧಿಕರ ಮನೆಗೆ ತೆರಳಿ ಮುಂದಿನ ದಿನ ಕೆ.ಆರ್.ಎಸ್ ನೋಡಿ, ಸ್ವಲ್ಪ ದಿನಗಳ ಕಾಲ ಅವರ ಮನೆಯಲ್ಲಿದ್ದು, ಮತ್ತೆ ರೈಲಿನಲ್ಲಿ ಪ್ರಯಾಣ ಬೆಳೆಸಿ, ಮನೆಗೆ ಬಂದೆವು. ಪ್ರವಾಸ ಮಜವಾಗಿತ್ತು. ಇನ್ನೂ ಅಲ್ಲಿಯೇ ಇರಬೇಕೆಂದೆನಿಸುತ್ತಿತ್ತು. ಅದರೊಡನೆ ಆ ಪುಟ್ಟ ಹುಡುಗಿಯ ನೆನಪಾಗುತ್ತಿತ್ತು.ಅಂದು ಅಪ್ಪ ಹೇಳಿದ, "ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ" ಎಂಬ ಮಾತು ಆ ಸಮಯದಲ್ಲಿ ಅರ್ಥವಾಗದಿದ್ದರೂ, ಇಂದು ಅದರ ಅರ್ಥ ತಿಳಿದಿದೆ. ಆ ಹುಡುಗಿಯ ನೆನಪಾದಾಗ "ಈಗ ಆಕೆ ಹೇಗಿರಬಹುದು? ಅಲ್ಲಿ ಹೋದರೆ ಮತ್ತೆ ಸಿಗಬಹುದೇ? ಅವಳೀಗ ನನ್ನಂತೆ ಓದುತ್ತಿರಬಹುದೇ? ಕೆಲಸ ಮಾಡುತ್ತಿರಬಹುದೇ? ಅಥವಾ ಇನ್ನೂ ಭಿಕ್ಷೆ ಬೇಡುತ್ತಿದ್ದಾಳೆಯೇ?" ಎನ್ನುವಂತಹ ನೂರಾರು ಪ್ರಶ್ನೆಗಳು ಮನಃಪಟಲದಲ್ಲಿ ಮೂಡಿ, ಉತ್ತರ ಸಿಗದೆ ಮಾಯವಾಗುತ್ತವೆ. ನಂತರದಲ್ಲಿ ಆಕೆಯಂತಹ ಎಷ್ಟೋ ಜನರನ್ನು ನೋಡಿದ್ದರೂ ಆಕೆಯ ನೆನಪು ಮಾತ್ರ ಅಚ್ಚಳಿಯದೆ ಉಳಿದಿದೆ.
ಹಣ, ಅಧಿಕಾರ, ಭ್ರಷ್ಟಾಚಾರ, ಅಧರ್ಮ, ಹಿಂಸೆಗಳ ನಡುವೆ ಸಿಲುಕಿ ಎಂತಹ ಬದುಕನ್ನು ನಾವು ಬದುಕುತ್ತಿದ್ದೇವೆ! ಮತ್ತೆ ಆ ದ್ವಾಪರಯುಗದ ಕೃಷ್ಣ ಈ ಕಲಿಯುಗದಲ್ಲಿ ಅವತರಿಸಲಿ ಎಂಬ ಆಶಯದೊಂದಿಗೆ, ವದನದಲಿ ನಗು ತರಿಸಿದ, ಮನಸ್ಸಿನಲ್ಲಿ ಪ್ರಶ್ನೆಗಳನ್ನು ಮೂಡಿಸಿದ ಆ ಸವಿಸುಂದರ ನೆನಪು ನೆನಪಾದ ಈ ಕ್ಷಣಕ್ಕೆ ಧನ್ಯವಾದವನ್ನು ತಿಳಿಸುತ್ತಾ, ಈ ಬರವಣಿಗೆಗೆ ಪೂರ್ಣವಿರಾಮ ಇಡುತ್ತಿದ್ದೇನೆ.
Wow... ನನ್ನ ಬಾಲ್ಯ ಜೀವನಕ್ಕೆ ಕರೆದು ಕೊಂಡು ಹೋಯಿತು ನಿಮ್ಮ ಈ ಬರಹ. ನೀವು ಹೇಳಿದ ಕೆಲವು ಸನ್ನಿವೇಶಗಳು ಮನವನ್ನು ಮುಟ್ಟಿದವು. ನಾವು ಮಕ್ಕಳಾಗಿ ಉಳಿದಿದ್ದರೆ ಎಸ್ಟು ಚೆನ್ನಾಗಿ ಇರ್ತಿತ್ತು ಅನ್ನಿಸುತ್ತದೆ. ಆದರೆ ಬದಲಾವಣೆ ಜಗದ ನಿಯಮ. ನಾವು ಬೆಳೆಯ ಬೇಕು ಬದಲಾಗಬೇಕು. ಎಷ್ಟೇ ಬೆಳೆದರು ಎಷ್ಟೇ ವಯಸ್ಸಾದರೂ ನಾವು ನಮ್ಮ ಬಾಲ್ಯದ ತುಂಟತನವನ್ನ, ಕುತೂಹಲವನ್ನು ಉಳಿಸಿಕೊಳ್ಳಬೇಕು.
ಪ್ರತ್ಯುತ್ತರಅಳಿಸಿಚೆನ್ನಾಗಿ ಬರೆದಿದ್ದೀರಿ.. ಬರೀತಾ ಇರಿ...
ಅನಂತ ವಂದನೆಗಳು, ನಿಮ್ಮ ಪ್ರೋತ್ಸಾಹ ಸದಾ ನಮ್ಮೊಂದಿಗಿರಲಿ
ಅಳಿಸಿತುಂಬಾ ಚೆನ್ನಾಗಿದೆ
ಅಳಿಸಿಧನ್ಯವಾದಗಳು
ಅಳಿಸಿ