ಕಲ್ಪನಾ ಲೋಕದಲ್ಲಿ ನಾನು..


ಹಸಿರು ಸೀರೆಯನ್ನುಟ್ಟ ನಾರಿಯಂತೆ

ಪ್ರಕೃತಿ ಮಾತೆ ಕಂಗೊಳಿಸುತಿಹಳು ನೀರೆಯಂತೆ

ಸೊಬಗಿನಿಂದ ಮಿಂಚುತ್ತಿದ್ದಳು ಕಣ್ಮನಸೆಳೆವಂತೆ

ಮೂಕಳಾದೆ ನಾ ಆಕೆಗೆ ಮನಸೋತಂತೆ..

ತಾಯಿಯ ಮಡಿಲಲಿ ಮಲಗುವ ಮಗುವಂತೆ

ಮಲಗಬೇಕು ನಾ ಆಕೆಯ ಮಡಿಲಲಿ ಕಂದಮ್ಮನಂತೆ

ಬೀಸಬೇಕು ಗಾಳಿಯು ಜೋಗುಳ ಹಾಡುವಂತೆ

ಸವಿಯಬೇಕು ತಂಗಾಳಿಯ ಮೈಮನ ಕುಣಿಯುವಂತೆ..

ಬೆಳದಿಂಗಳಿರಬೇಕು ಇರುಳಿನ ಸೌಂದರ್ಯ ಹೆಚ್ಚುವಂತೆ

ಇವುಗಳ ಮಧ್ಯೆ ಮಲಗಬೇಕು ಈ ಲೋಕವನ್ನೇ ಮರೆತಂತೆ

ಅನುಭವವಾಯಿತು ಹಕ್ಕಿಗಳ ಕಲರವ ಕೇಳಿದಂತೆ

ಕಣ್ತೆರೆದೆ ನಾನು ನನಗೇ ತಿಳಿಯದಂತೆ..

ಮೂಡಣ ನೋಡಿದರೆ ಕಣ್ಣು ಕುಕ್ಕುವಂತೆ

ಉದಯಿಸುತ್ತಿದ್ದ ಸೂರ್ಯ ಕೆಂಬಣ್ಣದ ದಾಸವಾಳದಂತೆ

ಮುಂಜಾನೆಯ ಆಗಮನಕೆ ನನ್ನ ಮೊಗವಾಯಿತು ಕಳೆಗುಂದಿದಂತೆ

ವಿಹರಿಸುತ್ತಿದ್ದೆ ಕಲ್ಪನಾ ಲೋಕದಲ್ಲಿ ನನಗೇ ಅರಿಯದಂತೆ... 






ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..