ಅನುರಾಗ (ಅಂತಿಮ ಭಾಗ)

 .. ಕಥೆಯನ್ನು ಮುಂದುವರಿಸುತ್ತಾ


ಹಾಂ, ಹೂಂ ಎನ್ನುತ್ತಾ ಮೂರು ತಿಂಗಳು ಕಳೆದು ಹೋದವು. ಋತ್ವಿಕ್ನಲ್ಲಿ ಬಹಳ ಬದಲಾವಣೆಯಾಗಿತ್ತು. ದೈಹಿಕ‌ ಹಾಗೂ ಮಾನಸಿಕ ಆರೋಗ್ಯ ತುಂಬಾನೇ ಸುಧಾರಿಸಿತ್ತು. ವೈದ್ಯರಿಗೂ ಇದು ಆಶ್ಚರ್ಯವೇ ಆಗಿತ್ತು. ಏಕೆಂದರೆ ಡೆಲಿರಿಯಮ್ ಹಲವು ವರ್ಷಗಳ ಕಾಲ ಉಳಿಯಬಹುದಾದ ಮಾನಸಿಕ ಖಾಯಿಲೆ. ಋತ್ವಿಕ್ ಬಳಿ ವೈದ್ಯರು "ನೀವು ಪುಣ್ಯವಂತರೇ ಹೌದು. ಎಷ್ಟು ಬೇಗ ಗುಣಮುಖರಾಗಿದ್ದೀರಾ! ಯಾವುದೇ ಔಷಧಿಗಳ ಅಗತ್ಯ ನಿಮಗಿನ್ನಿಲ್ಲ. ಋತ್ವಿಕ್, ಇನ್ನು ಒಳ್ಳೆಯ ಶುಭಸಮಾಚಾರ ಶೀಘ್ರದಲ್ಲೇ ನಮಗೆ ತಲುಪಿಸಿ" ಎನ್ನುತ್ತಾ ಮುಗುಳ್ನಕ್ಕರು. ಮೀನಾಳನ್ನು ನೆನೆದು ಋತ್ವಿಕ್ ಕೂಡ ಮುಗುಳ್ನಕ್ಕ. ಪ್ರತಾಪ್, ಮೀನಾಕ್ಷಿ ಹಾಗೂ ಋತ್ವಿಕ್ ವೈದ್ಯರಿಗೆ ಅಭಿನಂದನೆ ತಿಳಿಸಿ ಆಸ್ಪತ್ರೆಯಿಂದ ನೇರವಾಗಿ ಮೀನಾಳ ಮನೆಗೆ ತೆರಳಿದರು. 

"ನಿನಗೆ ಹೇಗೆ ಧನ್ಯವಾದ ಹೇಳ್ಬೇಕೋ ಗೊತ್ತಾಗ್ತಾ ಇಲ್ಲ. ನೀನೇ ಕಾರಣ ಋತ್ವಿಕ್ ಗುಣವಾಗುವುದಕ್ಕೆ. ಆಸ್ಪತ್ರೆಯಲ್ಲಿ ಅವನನ್ನು ನೋಡಿದಾಗ ನಮಗಿಬ್ಬರಿಗೂ ದಿಕ್ಕೇ ತೋಚದಂತಾಗಿತ್ತು" ಎಂದರು ಮೀನಾಕ್ಷಿ. "ಆಂಟೀ, ತುಂಬಾ ದೊಡ್ಡ ದೊಡ್ಡ ಮಾತಾಡ್ತಾ ಇದೀರಾ"‌ ಎಂದಳು. ಋತ್ವಿಕ್ ಏನೂ ಹೇಳದೇ ಸುಮ್ಮನೆ ಕೂತಿದ್ದನ್ನು ನೋಡಿ ಮೀನಾ "ನೋಡಿ, ನಿಮ್ಮ ಮಗ ಒಂದು ಬಾರಿ ಕೂಡ ಧನ್ಯವಾದ ತಿಳಿಸಿಲ್ಲ ನನಗೆ" ಎಂದಳು. ಋತ್ವಿಕ್ ಮಾತಿಗೆ ಧನ್ಯವಾದ ಎಂದ. ಅವಳಲ್ಲಿ, ಇವನ ನಿವೇದನೆ ಇನ್ನೊಂದಿತ್ತು. "ನಿನ್ನ ಬಳಿ ಸ್ವಲ್ಪ ಮಾತನಾಡುವುದಿದೆ" ಎಂದ ಋತ್ವಿಕ್. "ಹೇಳಿ", "ಇಲ್ಲಿ ಬೇಡ ಮೀನಾ". "ಸರಿ ಬಾ, ಮಹಡಿಯಲ್ಲಿ ನನ್ನ ಸುಂದರ ಉದ್ಯಾನವಿದೆ. ಅಲ್ಲೇ ಹೇಳು" ಎಂದು ಋತ್ವಿಕ್ನನ್ನು ಮಹಡಿಗೆ ಕರೆದೊಯ್ದುಳು.

"ನಿನಗೆ ಅರ್ಥವಾಗಿರಬಹುದು ಇಷ್ಟರಲ್ಲೇ. ನನ್ನನ್ನು ಗುಣಪಡಿಸಿದ ನೀನೇ‌ ನನ್ನ ಜೀವನ ಸಂಗಾತಿಯಾಗಬೇಕೆನ್ನುವುದು ನನ್ನ ಆಸೆ. ನಿನಗೆ ನಾನು ಸರಿ ಹೊಂದುತ್ತೇನೆ, ಇಷ್ಟವಾಗಿದ್ದೇನೆ‌ ಎಂದಲ್ಲಿ, ಹೇಳು. ಸಮಯ ತೆಗೆದುಕೋ. ಗಡಿಬಿಡಿಯ ನಿರ್ಧಾರ ಬೇಕೆಂದಿಲ್ಲ. ನಿನ್ನ ನಿರ್ಧಾರದ ನಂತರವೇ ನಾನು ಅಪ್ಪ-ಅಮ್ಮನ ಬಳಿ ಮಾತನಾಡುತ್ತೇನೆ" ಎಂದ ಋತ್ವಿಕ್. 

ಅದಾಗಲೇ ಋತ್ವಿಕ್ನನ್ನು ಇಷ್ಟಪಡುತ್ತಿದ್ದ ಮೀನಾ, ಹೂಂ, ಹಾಂ ಎನ್ನಲಿಲ್ಲ. ಬದಲಾಗಿ ತನಗೆ‌ ಇದು ಆಶ್ಚರ್ಯದ ವಿಷಯ ಎನ್ನುವಂತೆ ನೋಡಿ "ಸರಿ ನನಗೆ ಸ್ವಲ್ಪ ಸಮಯ ಕೊಡು" ಎಂದು ದಡಬಡನೆ ಖುಷಿಯಲ್ಲಿ ಕೆಳನಡೆದಳು. ಋತ್ವಿಕ್ಕಿಗೆ ಏನೂ ಅರ್ಥವಾಗದೇ, ಚಿಂತೆಯಲ್ಲಿ ಕೆಳನಡೆದು, ಅಪ್ಪ-ಅಮ್ಮನ ಜೊತೆ ಮನೆಗೆ ನಡೆದ.

ಇಡೀ ದಿನ ಋತ್ವಿಕ್ಕಿಗೆ, ಮೀನಾ ಏನೆನ್ನಬಹುದು ಎಂಬುದೇ ಕಾಡುತ್ತಿತ್ತು. ಮರುದಿನ ಬೆಳಿಗ್ಗೆಯೇ ತನ್ನ ತಂದೆಯಿಂದ ಋತ್ವಿಕ್ ತಂದೆ ಪ್ರತಾಪಿಗೆ ಕರೆ ಮಾಡಿಸಿ, ಎಲ್ಲಾ ವಿಷಯವನ್ನು ತಿಳಿಸಿ, ಅವಳ ಒಪ್ಪಿಗೆಯನ್ನೂ ತಿಳಿಸಿದಳು. ಪ್ರತಾಪ್ ಮತ್ತು ಮೀನಾಕ್ಷಿಯವರ ಆನಂದಕ್ಕೆ ಪಾರವೇ ಇರಲಿಲ್ಲ. ಮೀನಾ‌ ಹುಟ್ಟಿದಾಗಿನಿಂದ ಅವಳನ್ನು ‌ಸೊಸೆ ಮಾಡಿಕೊಳ್ಳುವ ಆಸೆಯನ್ನಿಟ್ಟುಕೊಂಡಿದ್ದವರಿಗೆ ಋತ್ವಿಕ್ ಮತ್ತು ಮೀನಾ ಮೊದಮೊದಲು ಹಾವು‌-ಮುಂಗುಸಿಯಂತಾಡುತ್ತಿದ್ದುದು ಚಿಂತೆಗೀಡುಮಾಡಿತ್ತು. ಈಗ ತಮ್ಮ ‌ಕನಸು ನಿಜವಾಗುತ್ತಿರುವುದನ್ನು, ತಮ್ಮ ಮಗನ ಬಾಳು ಹಳಿತಪ್ಪಿದರೂ ಮತ್ತೆ ಎಲ್ಲವೂ ಸರಿಹೋಗುತ್ತಿರುವುದನ್ನು ನೋಡಿ ಖುಷಿಯಿಂದ ಬೀಗಿದರು.

ಋತ್ವಿಕ್ಕಿಗೆ ವಿಷಯ ತಿಳಿದು ಖುಷಿಯಿಂದ ಕುಣಿದು ಕುಪ್ಪಳಿಸಿದ. ಕೂಡಲೇ ಮೀನಾಳಿಗೆ ಕರೆ ಮಾಡಿದ. ಎರಡು ಕಡೆಯಲ್ಲೂ, ಉಸಿರಿನ ತರಂಗ ಕೇಳುವಷ್ಟು ‌ಮೃದು ಮೌನ....ಅನುರಾಗದ ಸೋನೆ ಎರಡು ಹೃದಯಗಳನೂ ರೋಮಾಂಚನಗೊಳಿಸಿತು...


ಚಿತ್ರ: ವೈಷ್ಣವಿ ಕೆ 


.

  


ಕಾಮೆಂಟ್‌ಗಳು