ಅನುರಾಗ (ಭಾಗ-೩)
ಕಥೆಯನ್ನು ಮುಂದುವರಿಸುತ್ತಾ...
ಆಗ ಪ್ರತಾಪನಿಗೆ ನೆನಪಿಗೆ ಬಂದದ್ದು ಮೀನಾ, ಅವರ ಆತ್ಮೀಯ ಸ್ನೇಹಿತನ ಮಗಳು. ಮನಃಶಾಸ್ತ್ರದಲ್ಲಿ ಎಮ್.ಎಸ್ ಮುಗಿಸಿ, ತನ್ನದೇ ಕ್ಲಿನಿಕ್ ತೆರೆದು ೨-೩ ವರ್ಷಗಳಲ್ಲೇ ಉತ್ತಮ ಸೇವೆಯಿಂದ ಒಳ್ಳೆಯ ಹೆಸರುಗಳಿಸಿದ್ದಳು. ಆದರೆ ಋತ್ವಿಕ್ ಮತ್ತು ಮೀನಾ ಹಾವು ಮುಂಗುಸಿಯಂತಿದ್ದರು. ಒಮ್ಮೆ ಅವಳನ್ನು ಭೇಟಿಯಾಗಿ ಮಾತನಾಡಬೇಕೆಂದು ಮರುದಿನವೇ ತನ್ನ ಸ್ನೇಹಿತನ ಮನೆಗೆ, ಎಲ್ಲವನ್ನೂ ತಿಳಿಸಿ ಮೀನಾಳ ಸಹಾಯವನ್ನು ಕೇಳಿದರು. ಖುಷಿಯಿಂದಲೇ ಒಪ್ಪಿದ ಮೀನಾ, "ಅಂಕಲ್, ಸಹಾಯ ಎನ್ನುವ ದೊಡ್ಡ ಮಾತನ್ನು ಏಕೆ ಹೇಳ್ತಿದೀರಾ? ಇದು ನನ್ನ ಕರ್ತವ್ಯ, ಅಲ್ಲದೇ, ನಿಮಗಿಲ್ಲ ಎನ್ನಲಾದೀತೇ" ಎಂದಳು.
ಹದಿನೈದು ದಿನಗಳಲ್ಲಿ ಋತ್ವಿಕ್ನನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದರು. ನಿಧಾನವಾಗಿ ಯಾರದ್ದಾದರೂ ಸಹಾಯದಿಂದ ಅಥವಾ ಅಥವಾ ಕೋಲಿನ ಸಹಾಯದಿಂದ ನಡೆಯಲು ಆರಂಭಿಸಿದ. ಇದರ ಮಧ್ಯೆ ವಾರಕ್ಕೆ ಮೂರು ದಿನಗಳು ಮೀನಾ ಋತ್ವಿಕ್ನ ಮಾನಸಿಕ ಆರೋಗ್ಯವನ್ನು ಪರಿಶೀಲಿಸಿ ಚಿಕಿತ್ಸೆ ನೀಡಲು ಸನಿಹವೇ ಇರುತ್ತಿದ್ದಳು.
ಒಂದು ತಿಂಗಳೊಳಗೆ ಆತನ ದೈಹಿಕ ಆರೋಗ್ಯ ತುಂಬಾ ಸುಧಾರಿಸಿತು. ಆದರೆ ವೈದ್ಯರು ಹೇಳಿದಂತೆ, ಋತ್ವಿಕ್ ಡೆಲಿರಿಯಮ್ನಿಂದ ಬಳಲುತ್ತಿದ್ದುದರಿಂದ ಪ್ರತಾಪ್ ಮತ್ತು ಮೀನಾಕ್ಷಿಯವರ ಚಿಂತೆ ಕಡಿಮೆಯಾಗಿರಲಿಲ್ಲ.
ಮಗುವಿನಂತೆ ಹಠ, ಅಳು, ಚೀರಾಟ. ಕೆಲವೊಮ್ಮೆ ಮಂಕಾಗಿ ಕುಳಿತಿರುತ್ತಿದ್ದ. ಒಮ್ಮೊಮ್ಮೆ ಹಠಾತ್ತನೆ ಏನನ್ನೋ ನೋಡಿದಂತೆ ಚೀರಾಡುತ್ತಿದ್ದ. ಯಾರೋ ಬಂದರೆನ್ನುವುದು, ಒಬ್ಬನೇ ಮಾತನಾಡುವುದು ಯಾರನ್ನಾದರೂ ಗಲಿಬಿಲಿಗೊಳಿಸೀತು.
ಆದರೆ ಆಗ ಋತ್ವಿಕ್ ಮೇಲೆ ಮುನಿಸಿಕೊಳ್ಳುವುದು, ಬೇಸರಗೊಳ್ಳುವುದರ ಬದಲು, ಅವನಿಗೆ ಪ್ರೀತಿಯ ಅಗತ್ಯವಿತ್ತು. ಅವನ ಹೆತ್ತವರಿಗೆ ದುಃಖವೇ ಅತಿಯಾಗಿತ್ತು. ಆಗ ಅವನಿಗೆ ಆಸರೆಯಾಗಿದ್ದು ಮೀನಾ!
ಅವಳ ಮಾತು, ನಡವಳಿಕೆ, ತಾಯಿಯಂತ ಮಮತೆ, ಪ್ರೀತಿ ಇಂತಹ ಸಮಯದಲ್ಲೂ ಋತ್ವಿಕ್ ಮನಸ್ಸನ್ನು ಸೆಳೆಯಿತು. ಅವಳನ್ನು ಅಪ್ಪ-ಅಮ್ಮನಿಗಿಂತಲೂ ಅಧಿಕವಾಗಿ ಹಚ್ಚಿಕೊಂಡ ಋತ್ವಿಕ್, ಅವಳಿರುವ ಸಮಯದಲ್ಲಿ ತುಂಬಾ ಖುಷಿಯಿಂದ, ಇಲ್ಲದಿರುವಾಗ ಮಂಕಾಗಿರುತ್ತಿದ್ದ. ಅವಳು ಮನೆಗೆ ಹೊರಡುವ ಸಮಯದಲ್ಲಿ, ಕೈಹಿಡಿದು ಎಳೆದಾಡಿ ಹೋಗಬೇಡವೆನ್ನುತ್ತಿದ್ದ. ಎಷ್ಟೋ ಬಾರಿ ಮೀನಾ ಕಣ್ಣಲ್ಲಿ ನೀರು ತುಂಬಿಸಿಕೊಂಡು ಹೋಗಿದ್ದೂ ಉಂಟು.
ಮೀನಾಳ ಮನಸ್ಸಲ್ಲೂ ಋತ್ವಿಕ್ಕಿಗೆ ವಿಶೇಷ ಸ್ಥಾನ ದೊರಕಿತ್ತು. ಅವನು ಅವಳಿಗೆ ರೋಗಿಯಾಗಿ ಉಳಿದಿರಲಿಲ್ಲ. ಮೊದಲಿನಿಂದಲೂ ಅಪ್ಪನ ಸ್ನೇಹಿತನ ಮಗ ಎಂಬ ಸಲುಗೆ ಇತ್ತು. ಆದರೆ ಮೊದಲಿನಂತೆ ಪ್ರತಿ ವಿಷಯಕ್ಕೆ ಋತ್ವಿಕ್ ಮಾತಿಗೊಂದು ವಿರುದ್ಧ ಮಾತನಾಡುವ ಮೀನಳಾಗಿ ಉಳಿದಿರಲಿಲ್ಲ. ಅವನ ಸ್ನೇಹಿತೆ, ಅವನ ವೈದ್ಯೆ, ಅವನ ನಗು, ಅವನ ಪ್ರೀತಿಯಾಗಿ ಮೀನಾ ಬದಲಾಗುತ್ತಿದ್ದಳು.
.. ಮುಂದುವರಿಯುವುದು
Supera💞
ಪ್ರತ್ಯುತ್ತರಅಳಿಸಿಧನ್ಯವಾದಗಳು 🥰
ಅಳಿಸಿVery nice
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿInteresting,very nice..
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏
ಪ್ರತ್ಯುತ್ತರಅಳಿಸಿ