ಅವಳು
ಅವಳು, ಅಲ್ಲೊಂದು ಮನೆಯ ಮಗುವಾಗಿ, ಮಗಳಾಗಿ ನಗು ತುಂಬಿದವಳು! ಬಾಲ್ಯದ ಆಟ-ಪಾಠಗಳ ಮಧ್ಯೆ ಅಳುತ್ತಾ, ತನ್ನದೇ ರಕ್ತ ತನ್ನಿಂದ ಹರಿಯುವುದ ನೋಡುತ್ತ ಕೂತವಳು! ಆಗಾಗ ಅಂಜಿದವಳು, ಮತ್ತೊಮ್ಮೆ ನಾಚುತ್ತ, ದೇಹದ-ಮನಸ್ಸಿನ ಭಾವಗಳ ಬದಲಾವಣೆಗೆ ಒಗ್ಗಿದವಳು! ಭುವಿಯಂತೆ ಜವಾಬ್ದಾರಿಗಳ ಭಾರಹೊತ್ತು, ಅವಳಂತೆ ಸಹನಾಮೂರ್ತಿಯಾದವಳು! ಲೋಕದ ಋಣಾತ್ಮಕ ವಿಷಯಗಳ ವಿಷದ ನಡುವಲ್ಲಿ, ಅಮೃತದ ಮಡುವಾದವಳು! ತನ್ನೆಡೆಗೆ ಬಿದ್ದ ಕಲ್ಲುಗಳ ಮೆಟ್ಟಿಲಾಗಿಸಿ, ಸಿಕ್ಕ ಸ್ವಾತಂತ್ರ್ಯದ ಬಾಗಿಲಿಗೆ ಹೊಸ್ತಿಲಾದವಳು! ಅಮ್ಮನಾಗಿ-ಅಜ್ಜಿಯಾಗಿ ಮನೆಯ ಕಟ್ಟಿದವಳು! ನಗುವಿಗೆ ತನ್ನನೇ ತೆರೆದು, ಅಳುವ ಮರೆತವಳು! ಅವಳು ಎಲ್ಲರಂತಲ್ಲ, ಅದ್ಯಾರ ಒತ್ತಡಕ್ಕೂ ಮಣಿಯದ ಮುತ್ತವಳು! ತನ್ನದೇ ಜಗದಲ್ಲೂ ಮೌಲ್ಯಗಳ ಹೊತ್ತವಳು! ಏನನ್ನೂ ಬಯಸದೇ, ಎಲ್ಲವನ್ನೂ ನೀಡಿದವಳು! ಅವಳು ಎಲ್ಲರಂತಲ್ಲ, ಎಲ್ಲರೊಳಗೂ ಇದ್ದೂ, ಎಲ್ಲರಿಂದ ದೂರ ಉಳಿದವಳು!